ಇದನ್ನು ಸೋಜಿಗವೆನ್ನಬೇಕೋ? ಕಾಕತಾಳೀಯವೆನ್ನಬೇಕೋ ಗೊತ್ತಿಲ್ಲ. 1981ರ ಸೆಪ್ಟೆಂಬರ್ 26ರಂದು ಶಂಕರ್ ನಾಗ್ ಅಭಿನಯದಲ್ಲಿ ಬಂದು ಇತಿಹಾಸ ನಿರ್ಮಿಸಿದ ‘ಗೀತಾ’ ಸಿನಿಮಾ ತೆರೆಗೆ ಬಂದಿತ್ತು. ಈಗ 2019ರ ಸೆಪ್ಟೆಂಬರ್ 27ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ತೆರೆಗೆ ಬರುತ್ತಿದೆ. ಒಂದೇ ಒಂದು ದಿನ ಹಿಂದು ಮುಂದಾಗಿರೋದು ಬಿಟ್ಟರೆ, ೩೮ವರ್ಷಗಳ ಅಂತರದಲ್ಲಿ ಅದೇ ಹೆಸರಿನ ಸಿನಿಮಾ ಪರದೆಗೆ ಅಪ್ಪಳಿಸುತ್ತಿದೆ.
ಇಳಯರಾಜಾ ಸಂಗೀತ ಸಂಯೋಜಿಸಿದ್ದ ‘ಗೀತಾ’ ಚಿತ್ರದ ಹಾಡುಗಳು ಇವತ್ತಿಗೂ, ಯಾವತ್ತಿಗೂ ಹಳತಾಗೋದೇ ಇಲ್ಲ. ಅಷ್ಟು ಫ್ರೆಶ್ ಎನಿಸುವ ಹಾಡುಗಳು ಆ ಚಿತ್ರದಲ್ಲಿದ್ದವು. ಈಗ ಬರುತ್ತಿರುವ ಗಣೇಶ್ ಅಭಿನಯದ ಗೀತಾ ಚಿತ್ರದ ಹಾಡುಗಳು ಕೂಡಾ ಅದೇ ರೀತಿ ಸೌಂಡು ಮಾಡುತ್ತಿವೆ. ಪುನೀತ್ ರಾಜ್ಕುಮಾರ್ ಹಾಡಿರುವ ಕನ್ನಡಿಗ ಹಾಡು ಪ್ರತಿಯೊಬ್ಬರ ನಾಲಿಗೆಯಲ್ಲಿ ನಲಿದಾಡುತ್ತಿದೆ. ಈಗಾಗಲೇ ಈ ಹಾಡು ಗಣೇಶೋತ್ಸವಗಳಲ್ಲಿ ಕಾಲರು ಎತ್ತಿಕೊಂಡು ಮೆರೀತಿದೆ.
ಇನ್ನು ಕನ್ನಡ ರಾಜ್ಯೋತ್ಸವ ಮುಂತಾದ ಯಾವುದೇ ನಾಡಹಬ್ಬಗಳು ಬಂದಾಗ, ಸಾರ್ವಜನಿಕ ಸಮಾರಂಭಗಳಲ್ಲಿ ರಾಜ್ಯಗೀತೆಯಂತೆ ಮೊಳಗುತ್ತಲೇ ಇರುತ್ತದೆ. ಜೊತೆಗೆ ‘ಹೇಳದೇ ಕೇಳದೇ’ ಹಾಡನ್ನು ಮೆಲೋಡಿ ಪ್ರಿಯರು ಮುದ್ದು ಮಾಡುತ್ತಿದ್ದಾರೆ. ‘ಪಾರ್ಟಿ ಮಾಡು’ ಸಾಂಗು ಪಾರ್ಟಿಗಳಲ್ಲಿ ನುಲಿದಾಡುತ್ತಿದೆ. ಈಗಾಗಲೇ ಹಾಡು, ಟ್ರೇಲರ್ಗಳ ಮೂಲ ಗೆದ್ದಿರುವ ಗೀತಾ, ತೆರೆಮೇಲೂ ಗೆದ್ದುಬೀಗಬೇಕಿದೆ. ಈ ಸಿನಿಮಾವನ್ನು ಕನ್ನಡಿಗರು ಕೈ ಹಿಡಿಯಲೇಬೇಕಿರುವುದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲೂ ಮುಖ್ಯವಾಗಿ ಇದು ನಮ್ಮ ನೆಲ, ಜಲ, ಭಾಷೆಯ ಉಳಿವಿಗಾಗಿ ತೊಡೆ ತಟ್ಟಿ ನಿಂತ ನಾಯಕನೊಬ್ಬನ ಕತೆ. ಕನ್ನಡ ಮತ್ತು ಕರ್ನಾಟಕ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗೋಕಾಕ್ ಚಳಚಳಿಯನ್ನಿಲ್ಲಿ ಮರು ಸೃಷ್ಟಿಸಲಾಗಿದೆ. ಈ ಸಿನಿಮಾದಲ್ಲಿ ನಾಯಕನಟ ಗಣೇಶ್ ಜೊತೆ ಡಾ.ರಾಜ್ಕುಮಾರ್ ಸೇರಿದಂತೆ ಅನೇಕ ಹೀರೋಗಳು ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡಿಗರ ಸ್ವಾಭಾಮಾನವನ್ನು ಎತ್ತಿಹಿಡಿಯುವ ಕಥಾಹಂದರ, ಗಣೇಶ್ರಂಥ ಸೂಕ್ಷ್ಮ ಕಲಾವಿದನ ನಟನೆ, ತಾಂತ್ರಿಕ ವೈಭವ… ಹೀಗೆ ಹಲವಾರು ಸಂಗತಿಗಳು ‘ಗೀತಾ’ ಚಿತ್ರದಲ್ಲಿ ಒಟ್ಟಾಗಿವೆ. ಈ ಎಲ್ಲವನ್ನೂ ನೋಡಿ ಅನುಭವಿಸಲು ಇದೇ ತಿಂಗಳ ೨೭ರಿಂದ ಜನ ಥಿಯೇಟರಿನ ಕಡೆ ಧಾವಿಸಲು ಸಿದ್ದರಾಗುತ್ತಿದ್ದಾರೆ!