ನಿಂತೋಗಿರೋ ಗಡಿಯಾರ, ನಿಂತಿರೋ ಆಟಗಾರ ಯಾವ ಪ್ರಯೋಜನಕ್ಕೂ ಬರಲ್ಲ – ಇದು ಗುರು ಶಿಷ್ಯರು ಸಿನಿಮಾದ ಪಾತ್ರವೊಂದರ ಸಂಭಾಷಣೆ. ನಿಜ ಅಲ್ಲವಾ? ಆಟಗಾರ ಮಾತ್ರವಲ್ಲ ನಿರಂತರ ಚಲನೆಯಿಲ್ಲದ, ಜಡವಾಗಿ ಇರುವ ಯಾರೇ ಆಗಲಿ, ಏನನ್ನೂ ಸಾಧಿಸಲು ಆಗೋದಿಲ್ಲ.
ನಮ್ಮದಲ್ಲದ, ಯಾವುದೋ ದೇಶಗಳಿಂದ ಬಂದ ಕ್ರೀಡೆಗಳನ್ನು ಜೀವಕ್ಕಂಟಿಸಿಕೊಂಡು ಪ್ರೀತಿಸುತ್ತೇವೆ. ನಮ್ಮದೇ ನೆಲದ, ಶತಮಾನಗಳಿಂದ ಸಂಸ್ಕೃತಿಯಲ್ಲಿ ಬೆರೆತ ಆಟಗಳನ್ನು ನಾವೇ ಕಡೆಗಣಿಸಿರುತ್ತೇವೆ. ಅಂಥದ್ದೇ ಆಟಗಳಲ್ಲಿ ಖೊಖೊ ಕೂಡಾ ಒಂದು. ಖೊಖೋ ಭಾರತದ ಪ್ರಮುಖ ಕ್ರೀಡೆಗಳಲ್ಲೊಂದು. ಆದರೆ, ಆಳುವವರು ಮತ್ತು ಬಂಡವಾಳಶಾಹಿಗಳ ಕಾರಣಕ್ಕೆ ಈ ಆಟ ಮತ್ತು ಆಟಗಾರರು ಸತತವಾಗಿ ತುಳಿತಕ್ಕೊಳಗಾಗುತ್ತಲೇ ಬಂದಿದ್ದಾರೆ. ಕ್ರಿಕೆಟ್ ಸೇರಿದಂತೆ ಬೇರೆ ದೇಶಗಳ ಮೂಲದಿಂದ ಬಂದ ಆಟಗಳನ್ನಾಡುವ ಕ್ರೀಡಾಪಟುಗಳಿಗೆ ಥರಹೇವಾರಿ ಮಾನ್ಯತೆಗಳು, ಬದುಕಿನ ಭದ್ರತೆ, ಐಶಾರಾಮಿ ಜೀವನಕ್ಕೆ ಬೇಕಾದ ಸವಲತ್ತುಗಳೆಲ್ಲ ಸಿಗುತ್ತವೆ. ಆದರೆ ಖೊಖೊ ಆಡಿದರೆ ಏನು ಪ್ರಯೋಜನ? ಬರಿಯ ಮನರಂಜನೆಗೆ ಈ ಆಟ ಸೀಮಿತವಾಗಿದೆಯಾ? ಖೊಖೊಗಾಗಿ ಜೀವನ ಮುಡಿಪಾಗಿಟ್ಟ ಆಟಗಾರರ ಜೀವನ ಹೇಗಿದೆ? ಇದನ್ನು ಯಾರೆಂದರೆ ಯಾರೂ ಕೇಳುವುದಿಲ್ಲ. ಸ್ವತಃ ಖೊಖೊ ಚಾಂಪಿಯನ್ನುಗಳೇ ತಮ್ಮ ಮಕ್ಕಳಿಗೆ ಈ ಆಟ ಹೇಳಿಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಹೀಗೇ ಮುಂದುವರೆದರೆ ಖೊಖೊ ಕ್ರೀಡೆ ಮುಂದೊಂದು ದಿನ ಸಂಪೂರ್ಣ ನಶಿಸಿಹೋದರೂ ಆಶ್ಚರ್ಯವಿಲ್ಲ.
ಇಂಥದ್ದೊಂದು ನೆಲದ ಆಟದ ಸುತ್ತ ಕಥೆಯೊಂದನ್ನು ಕಟ್ಟಿ, ಚೆಂದನೆಯ ಸಿನಿಮಾವೊಂದು ರೂಪುಗೊಂಡಿದೆ. ಅದು ಗುರು ಶಿಷ್ಯರು. ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರದಲ್ಲಿ ಶರಣ್ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ತಾವೊಬ್ಬ ಅಪ್ರತಿಮ ಖೊಖೊ ಆಟಗಾರನಾಗಿದ್ದರೂ ಅಭದ್ರತೆಯಲ್ಲಿ ಜೀವನ ದೂಡಬೇಕಾದ ಸನ್ನಿವೇಶ ಎದುರಾಗಿರುತ್ತದೆ. ಇದರಿಂದ ವಂಚನೆ ಉಡಾಫೆಯ ಗುಣವನ್ನು ಅಂಟಿಸಿಕೊಂಡು ಆತ್ಮಸಾಕ್ಷಿಯನ್ನು ಮರೆತ ಶಿಕ್ಷಕ ಇವರಾಗಿರುತ್ತಾರೆ. ಯಾವ ಆಟವನ್ನು ತಾನು ಅಪಾರವಾಗಿ ಪ್ರೀತಿಸಿ ಅಷ್ಟೇ ತಿರಸ್ಕಾರವನ್ನೂ ಮಾಡಿರುತ್ತಾನೋ ಅದೇ ಆಟ ಮುಂದೊಂದು ದಿನ ಒಂದು ಊರಿನ ಅಳಿವು ಉಳಿವನ್ನು ನಿರ್ಧರಿಸುವಂತಾಗುತ್ತದೆ. ಆಗ ಖೊಖೊ ಕೋಚ್ ಹೇಗೆ ತನ್ನ ಶಿಷ್ಯಂದಿರನ್ನು ತಯಾರುಮಾಡುತ್ತಾನೆ? ಆಟದಲ್ಲಿ ಗೆಲುವುವಾಗುತ್ತದಾ? ಊರು ಉಳಿಯುತ್ತಾ? ಪ್ರೀತಿ ಒಲಿಯುತ್ತಾ? ಎಂಬಿತ್ಯಾದಿ ವಿಚಾರಗಳ ಸುತ್ತ ಸುತ್ತಿಕೊಂಡ ಸಿನಿಮಾ ಗುರು ಶಿಷ್ಯರು.
ಮೊದಲ ಭಾಗ ತೆಳು ಹಾಸ್ಯ, ಪ್ರೀತಿ, ಶಾಲೆ, ಹಳ್ಳಿಯ ಹಿಂದೆ ಮುಂದೆ ತಿರುಗುತ್ತದೆ. ಎರಡನೇ ಭಾಗವಿಡೀ ಪಂದ್ಯದ ರೋಚಕತೆಯನ್ನು ತೆರೆದಿಡುತ್ತದೆ. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತದೆ. ಕಣ್ಣು ತೇವವಾಗುವಂತೆ ಮಾಡುತ್ತದೆ.
ನಿಜಕ್ಕೂ ಇದು ಶರಣ್ ವೃತ್ತಿ ಬದುಕಿನ ಬಹು ಮುಖ್ಯ ಚಿತ್ರ. ಸಾಕಷ್ಟು ಜನ ಕನ್ನಡ ಕಲಾವಿದರ ಮಕ್ಕಳು ಇಲ್ಲಿ ಪಾತ್ರ ನಿರ್ವಹಿಸಿದ್ದಾರೆ. ರವಿಶಂಕರ್, ನೆನಪಿರಲಿ ಪ್ರೇಮ್, ಬುಲೆಟ್ ಪ್ರಕಾಶ್, ಶರಣ್ – ಹೀಗೆ ಎಲ್ಲರ ಮಕ್ಕಳೂ ತುಂಬಾ ಚೆಂದದ ಅಭಿನಯ ನೀಡಿದ್ದಾರೆ. ಸಮಾಜದ ತಳಸಮುದಾಯದ ಮಕ್ಕಳು ಜಾತಿಯ ಕಾರಣಕ್ಕೆ ತಮ್ಮೊಳಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವೇ ಆಗದ ಪರಿಸ್ಥಿತಿ ಇವತ್ತಿಗೂ ಇದೆ. ಈ ಹಿನ್ನೆಲೆಯಲ್ಲಿ, ಹಂದಿ ಹಿಡಿಯುವ ಯುವಕನನ್ನು ಕರೆತಂದು ಖೊಖೊ ಆಡಿಸುವ ಕಾನ್ಸೆಪ್ಟು ಅದ್ಭುತ.
ಅಪೂರ್ವ ಕಾಸರವಳ್ಳಿ ಇಲ್ಲಿ ಊರ ಗೌಡನ ಗತ್ತು ತೋರುವ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಛರಿ ಮೂಡಿಸಿದ್ದಾರೆ. ನಿಶ್ವಿಕಾ ನಾಯ್ಡು ಹಳ್ಳಿ ಹುಡುಗಿಯೇ ಆಗಿ ಅವತಾರವೆತ್ತಿದ್ದಾರೆ. ದತ್ತಣ್ಣ ಇಷ್ಟವಾಗುತ್ತಾರೆ. ಇಂಗ್ಲಿಷ್ ಕಲಿಸುವ ಮೇಡಮ್ಮು ಸಿಕ್ಕಾಪಟ್ಟೆ ನಗಿಸುತ್ತಾರೆ. ಶರಣ್ ಅಂದರೆ ಕಾಮಿಡಿ ಸಿನಿಮಾ ಅನ್ನೋದು ನಂಬಿಕೆ. ಆದರೆ ಶರಣ್ ಇಲ್ಲಿ ಮನಮಿಡಿಯುವ ಕಥೆಯೊಂದಿಗೆ, ಹುಡುಗರನ್ನು ಆಟವಾಡಿಸುತ್ತಲೇ ಮನಸ್ಸಿಗೂ ಹತ್ತಿರವಾಗುತ್ತಾರೆ. ಆರೂರು ಸುಧಾಕರ ಶೆಟ್ಟಿ ಅವರ ಛಾಯಾಗ್ರಹಣ, ಅವರು ಬಳಸಿರುವ ಟೋನ್ ಬ್ಯೂಟಿಫುಲ್. ಮಾಸ್ತಿ ಮುತ್ತಿನಂತಾ ಮಾತುಗಳನ್ನು ಪೋಣಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಶಕ್ತಿಯಾಗಿದೆ ಅನ್ನೋದನ್ನು ಆಣೆ ಮಾಡಿ ಹೇಳಲೇಬೇಕು.
ಖಂಡಿತವವಾಗಿ ಪ್ರತಿಯೊಬ್ಬರೂ ತನ್ನ ಮನೆಯವರನ್ನೆಲ್ಲಾ ಕರೆದುಕೊಂಡು ಹೋಗಿ ಥೇಟರಿನಲ್ಲೇ ನೋಡಬೇಕಾದ ಸಿನಿಮಾ ಗುರು ಶಿಷ್ಯರು…!
No Comment! Be the first one.