ಝೈದ್ ಖಾನ್ ಸಾಗುತ್ತಿರುವ ಹಾದಿಯನ್ನೊಮ್ಮೆ ಗಮನಿಸಿ. ನಿಜಕ್ಕೂ ಈ ಹುಡುಗ ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲುವ ಸಾಧ್ಯತೆ ಎದ್ದು ಕಾಣುತ್ತಿದೆ. ಅಪ್ಪನ ಪ್ರಭಾವಳಿಯನ್ನು ಬಳಸಿಕೊಳ್ಳದೆ ಝೈದ್ ಎಲ್ಲರೊಂದಿಗೂ ಬೆರೆಯುವ, ಸಹಜ, ಸರಳತೆಯನ್ನೆಲ್ಲಾ ನೋಡಿದರೆ ಯಾರಿಗಾದರೂ ಖುಷಿಯಾಗದೇ ಇರೋದಿಲ್ಲ. ಇವರ ತಂದೆ ಜಮೀರ್ ಅವರ ಕಾರಣಕ್ಕಾಗಿ ಝೈದ್ ಸಿನಿಮಾ ವಿರುದ್ಧ ಕೆಲವರು ಕುತಂತ್ರ ರೂಪಿಸಿದ್ದು ಸುಳ್ಳಲ್ಲ. ಆದರೆ, ಅದ್ಯಾವುದಕ್ಕೂ ಪ್ರತಿಕ್ರಿಯಿಸದ ಇವರು ತಮ್ಮ ಪಾಡಿಗೆ ತಾವು ಮುಂದೆ ಸಾಗುತ್ತಿದ್ದಾರೆ. ಹೇಳಿಕೆಗಳಿಗೆ ಪ್ರತಿ ಹೇಳಿಕೆ ಕೊಡದೇ, ಬೇಡದ ವಿವಾದಗಳಿಗೆ ದಾರಿ ಮಾಡಿಕೊಡದೇ ಸ್ಥಿತಪ್ರಜ್ಞತೆ ಕಾಯ್ದುಕೊಂಡಿದ್ದಾರೆ. ವಿರೋಧಿಸುವವರೂ ಸುಮ್ಮನಾಗುವಂತೆ ವರ್ತಿಸುವ ಝೈದ್ ಗುಣ ನಿಜಕ್ಕೂ ದೊಡ್ಡದು.
ಬರಲಿರುವ ನವೆಂಬರ್ 4ರಂದು ಝೈದ್ ಖಾನ್ ಅಭಿನಯದ ಮೊದಲ ಸಿನಿಮಾ ಬನಾರಸ್ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಹೊರಬಂದಿರುವ ಎರಡು ಹಾಡುಗಳು ಝೈದ್ ಖಾನ್ ಅವರೊಳಗೊಬ್ಬ ಅಪ್ಪಟ ಕಲಾವಿದನಿದ್ದಾನೆ ಅನ್ನೋದನ್ನು ಋಜುವಾತು ಮಾಡಿವೆ. ಒಂದು ಸಿನಿಮಾ ಬಿಡುಗಡೆಗೆ ಮುನ್ನವೇ ಝೈದ್ ಮತ್ತೊಂದಿಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಇತ್ತೀಗೆಗಷ್ಟೇ ಈ ಬನಾರಸ್ ಹುಡುಗ ಗಣೇಶೋತ್ಸವದಲ್ಲಿ ಪಾಲ್ಗೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇವತ್ತು ಬೆಳಿಗ್ಗೆ ಝೈದ್ ಖಾನ್ ಕೆಂಪೇಗೌಡನಗರದಲ್ಲಿರುವ ಬಂಡಿ ಮಹಾಂಕಾಳಿ ದೇವಸ್ಥಾನಕ್ಕೆ ತೆರಳಿ ಮಹಾಲಯ ಅಮವಾಸ್ಯೆ ನಿಮಿತ್ತ ಪೂಜೆ ಸಲ್ಲಿಸಿದ್ದಾರೆ. ಬಂಡಿ ಮಾಂಕಾಳಮ್ಮ ಗವೀಪುರ, ಗುಟ್ಟಹಳ್ಳಿಯ ಊರ ದೇವತೆ. ಪುರಾತನ ಕಾಲದ ಈ ದೇವಾಲಯ ಸಿನಿಮಾ ಮಂದಿಯ ಕಾರಣಕ್ಕೆ ಈಗ ಜಗತ್ ಪ್ರಸಿದ್ಧಿ ಪಡೆದಿದೆ. ದರ್ಶನ್, ದುನಿಯಾ ವಿಜಯ್ ಸೇರಿದಂತೆ ಹಲವರು ಈ ದೇವಿಯ ಪರಮ ಭಕ್ತರಾಗಿದ್ದಾರೆ.
ಇಲ್ಲಿ ಮುಹೂರ್ತ ನೆರವೇರಿಸಿದರೆ ಸಿನಿಮಾ ಹಿಟ್ ಆಗುತ್ತದೆ ಎನ್ನುವ ನಂಬಿಕೆ ಕೂಡಾ ಗಾಂಧೀನಗರದ ಮಂದಿಗಿದೆ. ಝೈದ್ ಅವರನ್ನು ದೇವಸ್ಥಾನದ ಮುಖ್ಯಸ್ಥ ಶಿವಣ್ಣನವರ ಮಗ ಶಶಿಕುಮಾರ್ ಅದ್ಧೂರಿಯಾಗಿ ಸ್ವಾಗತಿಸಿ, ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ವಿಶೇಷ ಪೂಜೆಯಲ್ಲಿಯೂ ಝೈದ್ ಭಾಗಿಯಾಗಿದ್ದರು. ಈ ಭಕ್ತಿಪೂರ್ವಕ ವಾತಾವರಣದ ನಡುವೆಯೇ ಅಭಿಮಾನಿಗಳು ಬನಾರಸ್ ಹೀರೋ ಜೊತೆಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಬನಾರಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಲೆಂದು ಮನದುಂಬಿ ಹಾರೈಸಿದರು… ಇವೆಲ್ಲ ಏನೇ ಆಗಲಿ, ಸದ್ಯ ಝೈದ್ ಬಂಡಿ ಮಾಂಕಾಳಮ್ಮನ ದರ್ಶನ ಪಡೆದು ಬಂದಿದ್ದಾರೆ. ತಾಯಿ ಬಂಡಿ ಮಾಂಕಾಳಿ ಬನಾರಸ್ ಸಿನಿಮಾ ಬಾರೀ ಗೆಲುವು ಕಾಣುವಂತೆ ವರ ನೀಡಲಿ…
No Comment! Be the first one.