ಗೊಂಬೆಗಳ ಲವ್ ಮತ್ತು ದಾದಾ ಇಸ್ ಬ್ಯಾಕ್ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದವರು ನಟ ಅರುಣ್. ಮೊದಲ ಸಿನಿಮಾದಲ್ಲೇ ಸಹಜ ನಟ ಅಂತಾ ಹೆಸರು ಮಾಡಿದ ಅರುಣ್ಗೆ ಅಡಿಗಡಿಗೆ ಅಡಚಣೆಗಳು ಎದುರಾಗದಿದ್ದರೆ ಕನ್ನಡದ ಪ್ರಮುಖ ಹೀರೋಗಳಲ್ಲಿ ಒಬ್ಬರಾಗಬಹುದಿತ್ತೇನೋ? ಬಿಗಿ ದೇಹ, ಬಿಲ್ಡಪ್ಪುಗಳ ಹೊರತಾಗಿ ಸಿಂಪಲ್ಲಾಗಿ ನಟಿಸುವ ಹೀರೋಗಳ ಸಂಖ್ಯೆ ಕನ್ನಡದಲ್ಲಿ ವಿರಳ. ಈ ನಿಟ್ಟಿನಲ್ಲಿ ನಮ್ಮ ನಡುವಿನ ಹುಡುಗನಂತೆ ಕಾಣುವ ಅರುಣ್ಗೆ ಗೊಂಬೆಗಳ ಲವ್ ನಂತರ ಅದೇ ತಂಡ ರೂಪಿಸಿದ ದಾದಾ ಈಸ್ ಬ್ಯಾಕ್ ಸಿನಿಮಾ ಕೈ ಹಿಡಿಯಲಿಲ್ಲ. ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆದರೂ ಹೇಳಿಕೊಳ್ಳುವಂತಾ ಸೌಂಡು ಮಾಡಲಿಲ್ಲ.
ಸರಿಸುಮಾರು ಐದು ವರ್ಷಗಳ ಹಿಂದೆ ಶುರುವಾದ ʼಹಾದಿಬೀದಿ ಲವ್ ಸ್ಟೋರಿʼ ಸಿನಿಮಾ ಅರುಣ್ ಬದುಕಿಗೆ ತಿರುವು ನೀಡುತ್ತದೆ ಅನ್ನೋ ಮಾತಿತ್ತು. ಈ ಚಿತ್ರವನ್ನು ನಿರ್ಮಿಸಿದ ಸುಧೀರ್ ಗೌಡ ಸಿನಿಮಾದ ಜೊತೆಗೆ ಅದರೊಳಗಿನ ʻಪ್ರತಿಭೆʼಗಳಿಗೂ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದರು. ಅದ್ದೂರಿಯಾಗಿ ಆಡಿಯೋ ರಿಲೀಸು ಕೂಡಾ ನೆರವೇರಿತ್ತು. ಆದರೆ ಸಿನಿಮಾ ಮಾತ್ರ ರಿಲೀಸಾಗಲೇ ಇಲ್ಲ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ಹಾದಿಬೀದಿಯ ತುಂಬಾ ಭಯಾನಕ ಸ್ಟೋರಿಗಳು ಇಟ್ಟಾಡುತ್ತಿವೆ!
ಅದೇನೇ ಆಗಲಿ, ಹಾದಿಬೀದಿ ಲವ್ ಸ್ಟೋರಿಯನ್ನು ಸ್ವತಃ ತಾವೇ ರಿಲೀಸು ಮಾಡುವುದಾಗಿ ನಿರ್ದೇಶಕ ಚಂದ್ರಶೇಖರ ಮಾವಿನ ಕುಂಟೆ ಅನೌನ್ಸು ಮಾಡಿದ್ದಾರೆ. ಲಾಕ್ ಡೌನ್ ಮುಗಿಯುತ್ತಿದ್ದಂತೇ ಚಿತ್ರದ ರಿಲೀಸ್ ಡೇಟು ತಿಳಿಸುತ್ತಾರಂತೆ. ಈಗಲಾದರೂ ಹಾದಿಬೀದಿಗೆ ವಕ್ಕರಿಸಿಕೊಂಡಿರುವ ತೊಡಕು ಕೊನೆಗೊಳ್ಳಲಿ. ಯಾರೋ ʻರೂಪಿಸಿದʼ ತಂತ್ರಗಳಿಗೆ ಇನ್ಯಾರದ್ದೋ ಬದುಕು ಬಲಿಯಾಗಬಾರದು. ಈ ಸಿನಿಮಾ ನಿರ್ದೇಶಕ ಚಂದ್ರಶೇಖರ್ ಮತ್ತು ನಟ ಅರುಣ್ಗೆ ಇನ್ನಾದರೂ ಒಳಿತು ಮಾಡಲಿ…