ಸಿಟಿ ಲೈಫಿನೊಟ್ಟಿಗೆ ಕನೆಕ್ಷನ್ನೇ ಇಲ್ಲದ ತಂದೆ ತಾಯಿ. ಪ್ರೀತಿಸೋ ತಂದೆ ತಾಯಿಯನ್ನು ಬಿಟ್ಟು ನಗರ ಸೇರಿ ದುಡಿಮೆಯೇ ಜೀವನ ಅಂತಾ ನಂಬಿದ ಮಗಳು. ಕಾರ್ಪೊರೇಟು ಬದುಕಿಗೆ ಹೊಂದಿಕೊಂಡು, ದಿನೇದಿನೆ ಉದ್ಯೋಗದಲ್ಲಿ ಉನ್ನತಿ ಪಡೆಯೋದೇ ಆಕೆಯ ಗುರಿ. ಈ ಮಧ್ಯೆ ಜೊತೆಯಾಗುವ ಗಂಡು ಜೀವ. ಇವರಿಬ್ಬರೂ ಇರುವ ಸೌಕರ್ಯಗಳನ್ನು ಬಳಸಿಕೊಂಡು ರಾಯಲ್ಲಾಗಿ ಜೀವಿಸುವ ಪ್ರಕ್ರಿಯೆಗೆ ಇಟ್ಟುಕೊಂಡ ಹೆಸರು ಲಿವಿನ್ ರಿಲೇಷನ್ಶಿಪ್ಪು. ಹಾಗೆ ಜೀವ ಜೀವಗಳು ಬೆಸೆದುಕೊಂಡಾಗ ಮರಿಹಾಕುವ ಮತ್ತೊಂದು ಜೀವ. ಲವ್ವು, ಪ್ರಪೋಸು, ಕೂಡಿಕೆ, ಬ್ರೇಕಪ್ಪು… ಹೀಗೆ ಇಲ್ಲಿ ಎಲ್ಲವೂ ಫಾಸ್ಟು!
ಇಷ್ಟೇ ಲೈಫು ಅಂತಾ ಅಂದುಕೊಂಡವಳು ಬದುಕು ಮುಗಿಸಿಕೊಳ್ಳುವ ನಿರ್ಧಾರಕ್ಕೆ ಬಂದಮೇಲಷ್ಟೇ ಅಸಲೀ ಜೀವನ ಆರಂಭವಾಗುತ್ತದೆ. ಇರುವುದೆಲ್ಲವನ್ನೂ ಬಿಟ್ಟು ಇರದುದರೆಡೆಗೆ ತುಡಿಯುವ ಮನಸ್ಸು ಅನಾವರಣಗೊಳ್ಳುತ್ತದೆ. ಒದ್ದು ಬಂದ ಹೆಜ್ಜೆಗಳೆಲ್ಲವೂ ಮತ್ತೆ ಬಾ ಎನ್ನಲು ಶುರು ಮಾಡುತ್ತದೆ. ವಿಷ ತುಂಬಿದ ಮನುಷ್ಯರ ನಡುವೆ ಬದುಕೋದಕ್ಕಿಂತಾ ಪ್ರೀತಿ ಕೊಡೋ ಬೊಂಬೆಗಳ ಜೊತೆಗೆ ಜೀವಂತಿಕೆ ಹುಡುಕಿಕೊಂಡ ಹುಡುಗನೊಬ್ಬ ಜೊತೆಯಾಗುತ್ತಾನೆ. ತಾನು ಬಯಸಿದ ಹೊಸ ನೆಲೆಯೊಂದು ಸಿಕ್ಕಿತು ಅನ್ನುವಷ್ಟರಲ್ಲಿ ಮತ್ತೇನೋ ಘಟಿಸುತ್ತೆ.
ಕಾಂತ ಕನ್ನಲ್ಲಿ ನಿರ್ದೇಶಕ ಶಶಾಂಕ್ ಗರಡಿಯಲ್ಲಿ ಬೆಳೆದುಬಂದವರಾದ್ದರಿಂದಲೋ ಏನೋ ಮನುಷ್ಯ ಸಂಬಂಧಗಳು, ಅದರೊಂದಿಗೆ ಬೆಸೆದುಕೊಂಡ ಭಾವುಕತೆಯನ್ನು ತಣ್ಣಗೆ ತೆರೆದಿಡುವ ಕಲೆ ಅವರಿಗೆ ಒಲಿದಿದೆ. ದೃಶ್ಯಕ್ಕೆ ಬೇಕಾದಷ್ಟೇ ಮಾತು, ಮಿಕ್ಕಂತೆ ಸ್ವಗತದಲ್ಲಿ ಹರಟೆ, ತುಂಬಾ ಮಾತಾಡಿಸಿಬಿಡಬಹುದಾದ್ದ ದೃಶ್ಯಗಳನ್ನು ಅಂಥಾ ಅಪಾಯದಿಂದ ಪಾರು ಮಾಡಿ ನಿಶಬ್ಧದಲ್ಲೇ ಹೇಳಿಬಿಡುವ ನಾಜೂಕುತನ… ಇವೆಲ್ಲವೂ ನಿರ್ದೇಶಕರ ಜಾಣತನವನ್ನೂ ಮತ್ತವರ ಕಸುಬುದಾರಿಕೆಯನ್ನೂ ತೋರಿಸಿದೆ. ಇನ್ನು ನಿರ್ದೇಶಕ ಕಾಂತಾ ಅವರ ಕನಸಿಗೆ ಕಣ್ಣಾದವರು ಛಾಯಾಗ್ರಾಹಕ ವಿಲಿಯಮ್ ಡೇವಿಡ್. ಒಂದೊಂದು ದೃಶ್ಯಕ್ಕೂ ಅಳೆದೂ ತೂಗಿ ಇಷ್ಟಿದ್ದರೆ ಸಾಕು ಅಂತಾ ತೀರ್ಮಾನಿಸಿ ಅವರಿಟ್ಟಿರುವ ಒಂದೊಂದು ಫ್ರೇಮೂ ಮುದ್ದುಮುದ್ದಾಗಿವೆ. ಬಳಸಿರುವ ಲೈಟು ಮತ್ತು ಹದವಾದ ಬಣ್ಣ ಕೂಡಾ ಸಿನಿಮಾದ ಒಟ್ಟಂದವನ್ನು ಹೆಚ್ಚಿಸಿದೆ.
ಬಹುಶಃ ಇದು ನಾಯಕನಟಿ ಮೇಘನಾರಾಜ್ ವೃತ್ತಿಬದುಕಿನ ಬಹುಮುಖ್ಯ ಚಿತ್ರವಾಗುವುದರಲ್ಲಿ ಸಂಶಯವಿಲ್ಲ. ಕಾರ್ಪೊರೇಟ್ ಬದುಕಿಗೆ ಒಗ್ಗಿಕೊಂಡು ಒಳ್ಳೆ ಸ್ಥಾನ, ದುಡಿಮೆಯಷ್ಟೇ ಮುಖ್ಯ ಅಂತಾ ತೀರ್ಮಾನಿಸಿ ಖಾಸಗೀ ಬದುಕನ್ನು ನರಕವಾಗಿಸಿಕೊಳ್ಳುವ, ಆತುರದ ನಿರ್ಧಾರಗಳಿಂದ ಸುಖ ಶಾಂತಿಗೆ ಭಂಗ ಸೃಷ್ಟಿಸಿಕೊಳ್ಳುವ ಹೆಣ್ಣುಮಕ್ಕಳ ಪ್ರತಿನಿಧಿಯಂತಾ ಪಾತ್ರದಲ್ಲಿ ಮೇಘನಾ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಬೊಂಬೆ ಹುಡುಗ ಶ್ರೀಮಹದೇವ್ ಇಷ್ಟವಾಗುತ್ತಾನೆ. ಚಿತ್ರದ ನಾಯಕನಂತೆ ಪ್ರೇಕ್ಷಕರೂ ಕೂಡಾ ನಿರೀಕ್ಷಿಸದೇ ಎಂಟ್ರಿ ಕೊಡುವ ಪುಟಾಣಿ ಹುಡುಗ ಅಭಿಷೇಕ್ ರಾಯಣ್ಣ ದ್ವಿತೀಯಾರ್ಧವನ್ನು ಮಾತ್ರವಲ್ಲ ನೋಡುಗರ ಮನಸ್ಸನ್ನೂ ಆವರಿಸಿಕೊಂಡುಬಿಡುತ್ತಾನೆ. ಅಪರೂಪಕ್ಕೆನ್ನುವಂತೆ ತಿಲಕ್ ಶೇಖರ್ಗೆ ಸೊಗಸಾದ ಪಾತ್ರವೊಂದು ಇಲ್ಲಿ ದಕ್ಕಿದೆ. ಅಚ್ಯುತ್ ಕುಮಾರ್ ಬರೀ ನಟನಲ್ಲ ಪಾತ್ರವನ್ನೇ ಜೀವಿಸುವ ಪ್ರತಿಭೆ ಅನ್ನೋದು ಇಲ್ಲೂ ಸಹ ಮುಂದುವರೆದಿದೆ. ಮಹೇಶ್ ಮಳವಳ್ಳಿ ಅವರ ಸೊಗಸಾದ ಸಂಭಾಷಣೆ, ಶ್ರೀಧರ್ ಸಂಭ್ರಮ್ ಅವರ ಮ್ಯೂಸಿಕ್ಕು, ಇರುವೆ ಬಿಟ್ಟು ಥಕಥೈ ಕುಣಿಸುವ ಸಿಂಬು ಹಾಡು, ಕಣ್ತಂಪು ಮಾಡೋ ಲೊಕೇಷನ್ನುಗಳು… ಹೀಗೆ ಎಲ್ಲವೂ ಚೆಂದ ಎನಿಸುವ, ಎಲ್ಲರೂ ಒಮ್ಮೆ ನೋಡಲೇ ಬೇಕಾದ ಸಿನಿಮಾ `ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ’
#