ಕಾರ್ ರೇಸಿನ ಹಿಂದಿದೆ ಮಾಡರ್ನ್ ಆಧ್ಯಾತ್ಮ!

ಚಾಲೆಂಜಿಂಗ್ ಸ್ಟಾರ್ ಕಾರ್ ರೇಸಿಗೆ ಅಣಿಯಾಗುತ್ತಿರೋದರ ಬಗ್ಗೆ ಮೊದಲ ಸಲ ಸವಿವರವಾದ ಮಾಹಿತಿ ಬಿಚ್ಚಿಟ್ಟದ್ದು ಸಿನಿಬಜ಼್. ಬಳಿಕ ದೃಷ್ಯ ಮಾಧ್ಯಮಗಳಲ್ಲಿಯೂ ದರ್ಶನ್ ಅವರ ರೇಸಿನ ಕಾರು ಓಡಾಡಿತು. ಇದರಿಂದ ಅಭಿಮಾನಿಗಳೂ ಕೂಡಾ ಥ್ರಿಲ್ ಆಗಿದ್ದರು. ಆದರೆ ಈ ಕಾರ್ ಕ್ರೇಜ್ ವಿಚಾರದಲ್ಲಿ, ರೇಸಿಂಗ್ ಖದರಿನಲ್ಲಿ ದರ್ಶನ್ ಅವರೂ ಕೂಡಾ ತಮಿಳು ನಟ ಅಜಿತ್‌ರನ್ನೇ ಸರಿಗಟ್ಟುವಂತಿದ್ದಾರೆಂಬುದು ಅಸಲೀ ವಿಶೇಷ!

ಬಾಲಿವುಡ್‌ನಿಂದ ಮೊದಲ್ಗೊಂಡು ಎಲ್ಲ ಭಾಷೆಗಳ ಸ್ಟಾರ್ ನಟರಿಗೂ ದುಬಾರಿ ಕಾರುಗಳ ಬಗ್ಗೆ ಮೋಹವಿದೆ. ಇಂಥಾ ನಟರ ಶೆಡ್ಡುಗಳಲ್ಲಿ ಕೋಟಿ ಕೋಟಿ ಬೆಲೆಯ ಕಾರುಗಳು ಲಡ್ಡು ಹಿಡಿಯುತ್ತಲೂ ಇವೆ. ಆದರೆ ಕಾರಿನ ಮೇಲೆ ಅಗಾಧವಾದ ಮೋಹವಿರೋದು, ಅವುಗಳನ್ನು ಬಣ್ಣದ ಬದುಕಿನಷ್ಟೇ ತೀವ್ರವಾಗಿ ಪ್ರೀತಿಸೋ ಮನಸ್ಥಿತಿ ಇರೋದು ಕೆಲವೇ ಕೆಲ ನಟರಿಗೆ ಮಾತ್ರ. ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಎತ್ತಲಿಂದ ಕಣ್ಣು ಹಾಯಿಸಿದರೂ ಈ ನಿಟ್ಟಿನಲ್ಲಿ ಕಾಣಿಸೋದು ತಮಿಳು ನಟ ಅಜಿತ್ ಮತ್ತು ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ!

ತಮಿಳು ಸೂಪರ್ ಸ್ಟಾರ್ ಅಜಿತ್ ಅವರ ಕಾರು ಕ್ರೇಜ್‌ಗೂ ಚಾಲೆಂಜಿಂಗ್ ಸ್ಟಾರ್ ಅವರಿಗೂ ಸಾಮ್ಯತೆಗಳಿವೆ. ಅಜಿತ್ ಅಂತೂ ವಿಕ್ಷಿಪ್ತ ನಟನೆಂದೇ ಗುರುತಾಗಿರುವವರು. ನಿರ್ಮಾಪಕರು ಮನೆ ಮುಂದೆ ಸಾಲುಗಟ್ಟಿ ನಿಂತಿದ್ದರೂ ಅದೆಷ್ಟೋ ಸಲ ಅಜಿತ್ ನಾಪತ್ತೆಯಾದದ್ದಿದೆ. ವರ್ಷಗಟ್ಟಲೆ ಅವರು ಒಂದೂ ಚಿತ್ರದಲ್ಲಿಯೂ ನಟಿಸದೆ ಕಣ್ಮರೆಯಾದದ್ದೂ ಇದೆ. ಈ ಅವಧಿಯಲ್ಲಿ ಅಜಿತ್ ಕಳೆದು ಹೋಗುತ್ತಿದ್ದದ್ದು ಕಾರ್ ರೇಸಿಂಗ್‌ನಲ್ಲಿ!

ಬಹುಶಃ ಬಾಲಿವುಡ್ಡೂ ಸೇರಿದಂತೆ ಎಲ್ಲ ನಟರನ್ನು ಅಳೆದೂ ತೂಗಿದರೂ ಬೆರಗಾಗಿಸುವಂಥಾ ಕಾರು ಮತ್ತು ಅಪರೂಪದ ಬೈಕುಗಳ ಕಲೆಕ್ಷನ್ನಿರೋದು ಅಜಿತ್ ಅವರ ಬಳಿಯಲ್ಲಿ ಮಾತ್ರ. ಮೋಟೋ ರೇಸಿಂಗ್‌ನಲ್ಲಿ ವಿಪರೀತ ಆಸಕ್ತಿ ಹೊಂದಿರೋ ಅಜಿತ್ ಅವರ ಬಳಿ ದುಬಾರಿ ರೇಸಿಂಗ್ ವೆಹಿಕಲ್ಲುಗಳದ್ದೊಂದು ದೊಡ್ಡ ಸಂಗ್ರಹವೇ ಇದೆ. ಈ ಆಸಕ್ತಿ ಒಂದು ಜಾಲಿ ರೈಡಿಗೆ ಮಾತ್ರವೇ ಸೀಮಿತವಾದುದಲ್ಲ. ಅವೊರೊಬ್ಬ ಪಳಗಿದ ರೇಸರ್. ಅಂತಾರಾಷ್ಟ್ರೀಯ ಮಟ್ಟದ ಕಾರ್, ಮೋಟೋ ಬೈಕ್ ರೇಸರ್!

ಇಂಟರೆಸ್ಟಿಂಗ್ ವಿಚಾರವೆಂದರೆ, ಯಶಸ್ಸೆಂಬುದು ಶಿಖರವೇರಿಸಿ ಕೂರಿಸಿದರೂ ಅಲ್ಲಿಂದ ಇಳಿದು ಬಂದು ಬೇರ‍್ಯಾವುದೋ ಮಾಯೆಯ ತೆಕ್ಕೆಯಲ್ಲಿ ಕಳೆದು ಹೋಗೋ ಮನಸ್ಥಿತಿ ಅಜಿತ್ ಅವರದ್ದು. ಅದಕ್ಕಾಗಿ ಅವರು ಆರಿಸಿಕೊಂಡಿರೋ ಮಾರ್ಗ ಈ ಕಾರ್ ರೇಸಿಂಗ್. ಒಂದಷ್ಟು ಪ್ರೌಢಿಮೆ, ತಿಳಿವಳಿಕೆ ಇರೋ ಮನಸು ಒಂದು ಗೆಲುವಿನ ಬಿಂದುವನ್ನು ನಿಲ್ದಾಣ ಅಂದುಕೊಳ್ಳೋದಿಲ್ಲ. ಅಲ್ಲಿ ನಿಂತು ಮೆರೆಯೋದೂ ಇಲ್ಲ. ಯಾವ ಚಪ್ಪಾಳೆ, ಕೇಕೆ, ಅಭಿಮಾನ ಉದ್ರೇಕಗೊಳಿಸುತ್ತೋ ಅದೆಲ್ಲವೂ ಕಿರಿಕಿರಿ ಹುಟ್ಟಿಸಲಾರಂಭಿಸುತ್ತೆ. ಇಂಥಾದ್ದೆಲ್ಲ ಕಾಡಿದಾಕ್ಷಣ ಎಲ್ಲರೂ ರಜನೀಕಾತ್‌ರಂತೆ ಹಿಮಾಲಯದ ಶೀತಲ ಭೂಮಿಗೆ ಬೆತ್ತಲೆ ಪಾದ ಊರಬೇಕೆಂದೇನೂ ಇಲ್ಲ. ಕಾರು ಹತ್ತಿ ಮತ್ತೊಂದು ಮಾಯೆಯ ಬೆಂಬಿದ್ದು ಎಲ್ಲ ಒಳತೋಟಿಗಳನ್ನೂ ಮೀರಿಕೊಳ್ಳಬಹುದೆಂಬುದಕ್ಕೆ ಅಜಿತ್ ತಾಜಾ ಉದಾಹರಣೆ.

ಅಜಿತ್ ಪಾಲಿಗೆ ಕಾರ್ ರೇಸೆಂದರೆ ಬಿಡುಗಡೆ. ಅದುವೇ ಅವರು ನೆಚ್ಚಿಕೊಂಡ ಆಧುನಿಕ ಆಧ್ಯಾತ್ಮ. ಮುತ್ತಿಕೊಳ್ಳೋ ಆಲೋಚನೆಗಳನ್ನೆಲ್ಲ ಹಿಂದಿಕ್ಕುವ ಇರಾದೆ ಅವರ ಕಾರ್ ರೇಸಿಂಗ್ ಹುಚ್ಚಿನ ಹಿಂದಿದ್ದರೂ ಅಚ್ಚರಿಯೇನಿಲ್ಲ. ಅದು ಭೈರಾಗಿ ಮನಸೊಂದು ದುಬಾರಿ ಕಾರು ಹತ್ತಿ ಎಲ್ಲದರಿಂದಲೂ ಕಳಚಿಕೊಂಡು ಸಾಗುವ ವಿಚಿತ್ರ ಪ್ರಕ್ರಿಯೆಯಾಗಿರಲೂ ಬಹುದು!

ಹೀಗೆ ನಿಗೂಢ ಕಾರಣಗಳಿಂದಲೇ ಕಾರು ಮೋಹ ಬೆಳೆಸಿಕೊಂಡಿರೋ ಅಜಿತ್ ಅವರ ಕಾರು ಮತ್ತು ದುಬಾರಿ ಬೈಕುಗಳ ಸಂಗ್ರಹವೇ ಒಂದು ಅದ್ಭುತ. ರೇಸಿಂಗ್ ಕ್ವಾಲಿಟಿಯನ್ನೇ ಮುಖ್ಯವಾಗಿಟ್ಟುಕೊಂಡು ದುಬಾರಿ ಕಾರು ಖರೀದಿಸೋ ಅಜಿತ್ ಬಳಿ ಅದ್ಭುತ ಮೋಟೋ ರೇಸಿಂಗ್ ವಾಹನಗಳೂ ಇವೆ. ವಿಶ್ವಾಧ್ಯಂತ ಜನಪ್ರಿಯವಾಗಿರೋ ಜಪಾನಿನ ಅತ್ಯಂತ ದುಬಾರಿ ಹೋಂಡಾ ಅಕಾಲರ್ಡ್ ವಿ೬, ಬೆನ್ಜ್ ಸೀರೀಸ್ ೭೪೦ ಎಲ್‌ಐ ಮುಂತಾದ ಲೆಕ್ಕವಿರದಷ್ಟು ಕಾರುಗಳ ಜೊತೆಗೆ, ಎಪ್ರಿಲಿಯಾ ಪಾಫೋನಾರ್ಕ್, ಬಿಎಂಡಬ್ಲು ೫೧೦೦೦ ಆರ್ ಆರ್, ಬಿಎಂಡಬ್ಲ್ಯು ೧೩೦೦೫, ಕವಾಸಾಕಿ ನಿಂಜಾ ಝಡೆಕ್ಸ್ ೧೪ ಆರ್ ಸೇರಿದಂತೆ ಕನಸಿನಂಥಾ ದುಬಾರಿ ಬೈಕುಗಳೂ ಇವೆ!

ಹೀಗೆ ದುಬಾರಿಯಾದ, ಅಪರೂಪದ ಕಾರು ಮತ್ತು ಬೈಕುಗಳ ಕ್ರೇಜ್ ಹೊಂದಿರೋ ಅಜಿತ್ ಪ್ರತೀ ವರ್ಷ ಚಿತ್ರಗಳಲ್ಲಿ ನಟಿಸದೇ ಇದ್ದರೂ ರೇಸ್ ಅನ್ನು ಮಾತ್ರ ಮಿಸ್ ಮಾಡಿಕೊಳ್ಳೋದಿಲ್ಲ. ಪ್ರತೀ ವರ್ಷ ಏನಿಲ್ಲವೆಂದರೂ ನಾಲಕೈದು ಇಂಟರ್‌ನ್ಯಾಷನಲ್ ರೇಸಿಂಗ್ ಛಾಂಪಿಯನ್‌ಶಿಪ್ಪುಗಳಲ್ಲಾದರೂ ಅಜಿತ್ ಸ್ಪರ್ಧಿಯಾಗಿರುತ್ತಾರೆ. ಕೆಲ ವರ್ಷಗಳಲ್ಲಂತೂ ಹತ್ತಕ್ಕೂ ಹೆಚ್ಚು ರೇಸ್‌ಗಳಲ್ಲಿ ಪಾಲ್ಗೊಂಡ ರೆಕಾರ್ಡ್ ಕೂಡಾ ಅಜಿತ್ ಬತ್ತಳಿಕೆಯಲ್ಲಿದೆ. ಪಿಎಫ್‌ಎ ಫಾರ್ಮುಲಾ ಟೂ ಛಾಂಪಿಯನ್‌ಶಿಪ್, ಫಾರ್ಮುಲಾ 3 ಬ್ರಿಟನ್ ನ್ಯಾಷನಲ್ ಕ್ಲಾಸ್, ಫಾರ್ಮುಲಾ ಬಿಎಂಡಬ್ಲ್ಯು ಏಶಿಯಾ ಮುಂತಾದ ಅಂತಾರಾಷ್ಟ್ರೀಯ ಪ್ರತಿಷ್ಠೆಯ ರೇಸಿಂಗ್ ಚಾಂಪಿಯನ್‌ಶಿಪ್ ಗಳಲ್ಲಿಯೂ ಅಜಿತ್ ಭಾಗಿಯಾಗಿದ್ದರು.

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೂ ಕೂಡಾ ಅದೇ ಹಾದಿಯಲ್ಲಿದ್ದಾರೆ. ಈಗಾಗಲೇ ತಯಾರಿ ಮಾಡಿಕೊಂಡು ಅಂತಾರಾಷ್ಟ್ರೀಯ ರೇಸಿಂಗ್ ಸ್ಪರ್ಧೆಗೆ ರೆಡಿಯಾಗುತ್ತಿರೋ ದರ್ಶನ್ ಅವರು ವಿಶ್ವದ ಕಾರ್ ರೇಸಿಂಗ್ ಕ್ರೇಜಿನ ವಿರಳ ನಟರ ಸಾಲಿನಲ್ಲಿ ದರ್ಶನ್ ಅವರೂ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳೂ ಇವೆ. ಕಾರ್ ರೇಸಿಂಗ್‌ಪಟುಗಳಾಗಿರೋ ನಟರ ಸಾಲಿನಲ್ಲಿ ಹಾಲಿವುಡ್‌ನದ್ದೇ ಮೇಲುಗೈ. ಬಾಲಿವುಡ್‌ನಲ್ಲಿ ಯಾರೂ ಇಲ್ಲವೇ ಇಲ್ಲ. ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರೋ ಏಕೈಕ ನಟ ಅಜಿತ್. ಸರ್ವೆಯೊಂದರ ಪ್ರಕಾರ ವಿಶ್ವದ ಕಾರು ಕ್ರೇಜಿನ ನಟರ ಆರು ಮಂದಿಯ ಪಟ್ಟಿ ತಯಾರಿಸಲಾಗಿದೆ. ಅದರಲ್ಲಿ ಪ್ಯಾಟ್ರಿಕ್ ಡಿಮ್ಸಿ, ಮಿಸ್ಟರ್ ಬೀನ್ ಖ್ಯಾತಿಯ ನಟ ರೋವನ್ ಆಟ್ಕಿನ್ಸನ್, ಎರಿಕ್ ಬನಾ, ಫ್ರಾಂಕಿ ಮ್ಯೂನಿಜ಼್, ಜಾರ್ಜ್ ಲ್ಯೂಕಸ್ ಮತ್ತು ಅಜಿತ್ ಆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಈ ವರ್ಷ ರೇಸಿಂಗ್ ಅಖಾಡಕ್ಕಿಳಿಯೋ ಮನಸು ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೇಲ್ಕಂಡ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋದೇನೂ ಕಷ್ಟದ ಸಂಗತಿಯಲ್ಲ. ಅಜಿತ್ ಅವರಂತೆಯೇ ತೀವ್ರವಾದ ಕಾರಿನ ಮೋಹ ಹೊಂದಿರೋ ದರ್ಶನ್ ಇಷ್ಟರಲ್ಲಿಯೇ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಲಿರೋದಂತೂ ಖಂಡಿತ!

#


Posted

in

by

Tags:

Comments

Leave a Reply