ನಟ, ನಿರ್ದೇಶಕ ವಿಕಾಸ್ ಅಭಿನಯದಲ್ಲಿ ಮೂಡಿಬಂದಿರುವ ಕಾಣದಂತೆ ಮಾಯವಾದನು ಚಿತ್ರ ಜನವರಿಯಲ್ಲಿ ತೆರೆಗೆ ಬಂದಿತ್ತು. ಕೋವಿಡ್ ಕಾರಣದಿಂದ ಪ್ರದರ್ಶನ ನಿಂತಿತ್ತು. ಈಗ ಮತ್ತೆ ಮುಂದುವರೆಯುತ್ತಿದೆ… ಹೇಳಿ ಕೇಳಿ ಇದು ಪುನೀತ್ ರಾಜ್ ಕುಮಾರ್ ಹಾಡಿ, ಅಭಿನಯಿಸಿದ್ದ ‘ಕಾಣದಂತೆ ಮಾಯವಾದನು’ ಹಾಡಿನ ಸಾಲನ್ನೇ ಶೀರ್ಷಿಕೆಯನ್ನಾಗಿಸಿಕೊಂಡಿರುವ ಸಿನಿಮಾ. ವಿಕಾಸ್ ಮತ್ತು ಪುನೀತ್ ನಡುವೆ ಯಾವುದೋ ಹೇಳಲಾಗದಂಥ ನಂಟಿದೆ. ಅದೇನೆನ್ನೋದನ್ನು ಸ್ವತಃ ವಿಕಾಸ್ ಹೇಳಿದ್ದಾರೆ. ನೀವು ನೋಡಲೇಬೇಕು…
– ಸಂಕಲನ ಕಾರರಾಗಿ, ಧಾರಾವಾಹಿ ನಟರಾಗಿ ನಟನೆ ಆರಂಭಿಸಿ, ಕಮರ್ಷಿಯಲ್ ಸಿನಿಮಾ ನಿರ್ದೇಶಿಸಿ ಈಗ ಹೀರೋ ಆಗಿ ಕೂಡಾ ಎಂಟ್ರಿ ಕೊಡುತ್ತಿದ್ದೀರ… ನೀವು ಸಾಗಿ ಬಂದ ಹಾದಿಯನ್ನು ತಿಳಿಸಿ…
ನಾನು ಇಂಜಿನಿಯರಿಂಗ್ ಮಾಡುವಾಗ ಓದು ತಲೆಗೆ ಹತ್ತದೆ ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸಕ್ಕೆ ಸೇರಿದೆ. ಏಷ್ಯನ್ ಫಿಲ್ಮ್ ಅಕಾಡೆಮಿ & ಟೆಲಿವಿಷನ್ನಲ್ಲಿ ಎಡಿಟಿಂಗ್ ಕೋರ್ಸ್ ಮುಗಿಸಿ, ಸಾಧನೆ ಎಂಬ ಧಾರಾವಾಹಿಯ ಎಡಿಟಿಂಗ್ ಕಾರ್ಯ ನಿರ್ವಹಿಸಿದೆ. ಸೂರಿ ಆಗ ಕಲಾ ನಿರ್ದೇಶಕರಾಗಿ ಹಾಗೂ ಯೋಗರಾಜ್ ಭಟ್ ಅವರು ಎಪಿಸೋಡ್ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಸೂರಿ ಕಲಾ ನಿರ್ದೇಶಕರಿಂದ ನಿರ್ದೇಶಕರಾಗಿ ಹಾಗೂ ನಾನು ಎಡಿಟಿಂಗ್ನಿಂದ ಕಾದಂಬರಿ ಎಂಬ ಧಾರಾವಾಹಿಯಲ್ಲಿ ನಟಿಸತೊಡಗಿದೆ. ಧಾರಾವಾಹಿಗಳಲ್ಲದೆ ಇನ್ನೂ ಏನಾದರೂ ಸಾಧಿಸಬೇಕೆಂಬ ಹಂಬಲ ಇತ್ತು. ಇದೇ ಸಮಯದಲ್ಲಿ ಸೂರಿ ನಿರ್ದೇಶನ ಮಾಡುವಂತೆ ಸೂಚಿಸಿದರು. ಇದರಿಂದ ’ಜಾಕಿ’ ಸಿನಿಮಾದಲ್ಲಿ ಸೂರಿ ಅವರೊಂದಿಗೆ ನಿರ್ದೇಶನದಲ್ಲಿ ಸಹಾಯ ಮಾಡಿದೆ. ಡ್ರಾಮಾ ಚಿತ್ರದಲ್ಲೂ ಕಾರ್ಯನಿರ್ವಹಿಸಿದೆ. ನಂತರ ಜಯಮ್ಮನ ಮಗ ಚಿತ್ರಗಳು ನಿರ್ದೇಶನ ಮಾಡುವ ಅವಕಾಶ ಸಿಕ್ಕಿತು. ನಂತರ ಕಾಣದಂತೆ ಮಾಯವಾದನು ಮಾಡಿದ್ದೇನೆ. ಕಡ್ಡಿಪುಡಿ, ಕಿಚ್ಚಹುಚ್ಚ ಹೀಗೆ ಸುಮಾರು ಸಿನಿಮಾಗಳಲ್ಲಿ ನಟಿಸಿದ್ದೇನೆ.
– ಕಾಣದಂತೆ ಮಾಯವಾದನು ಶೀರ್ಷಿಕೆಗೂ ನಿಮ್ಮ ಪರ್ಸನಲ್ ಲೈಫಿಗೂ ಏನಾದರೂ ಸಂಬಂಧವಿದೆಯಾ? ಚಿತ್ರಕ್ಕೆ ಇದೇ ಹೆಸರಿಟ್ಟಿದ್ದರ ಹಿಂದಿನ ಕಾರಣವೇನು?
ನಾನು ಟಿವಿ ಸೀರಿಯಲ್ಲುಗಳಿಗೆ ಎಡಿಟರ್ ಆಗಿದ್ದೆ. ಚೆನ್ನಾಗಿ ಕಾಣ್ತೀನಿ ಅಂತ ನಟನೆ ಅವಕಾಶ ಸಿಕ್ಕಿತು. ಆದರೆ ಎಡಿಟಿಂಗ್ ನಲ್ಲಿ ಹೆಚ್ಚು ಹಣ ಗಳಿಸುತ್ತಿದ್ದೆ.. ಹೀಗಾಗಿ ನಟನೆ ಬೇಡ ಅಂತ ನಿರ್ಧಾರ ಮಾಡಿದ್ದೆ. ನನ್ನ ಸ್ನೇಹಿತ ಮತ್ತು ಖ್ಯಾತ ಕಿರುತೆರೆ ನಿರ್ದೇಶಕ ಎ.ಜಿ ಶೇಷಾದ್ರಿ ಆಗ “ಬೆಳದಿಂಗಳಾಗಿ ಬಾ” ಎನ್ನುವ ಧಾರಾವಾಹಿ ನಿರ್ದೇಶಿಸುತ್ತಿದ್ದರು. ಆ ಧಾರಾವಾಹಿಯನ್ನು ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿತ್ತು. ಅದೊಂದು ದಿನ ನಾನು ಅವನ ಜೊತೆ ಸುಮ್ಮನೇ ವಜ್ರೇಶ್ವರಿ ಸಂಸ್ಥೆಗೆ ಹೋಗಿದ್ದೆ. ಅಲ್ಲಿ ಅಪ್ಪು ಸರ್ ನನ್ನ ನೋಡಿ. ‘ಆ ರೋಲ್ಗೆ ಯಾಕ್ ಹುಡ್ಕಾಡ್ತೀರ. ಇವರಿಗೆ ಗ್ಲಾಸಸ್ ಹಾಕಿಸ್ಬಿಡಿ. ಸಾಫ್ಟ್ವೇರ್ ಇಂಜಿನಿಯರ್ ಥರ ಕಾಣ್ತಾರೆ’ ಅಂದ್ರು. ಅಪ್ಪು ಸರ್ ಹೇಳಿದ್ದರಿಂದ ಮತ್ತೆ ಬಣ್ಣ ಹಚ್ಚಿದೆ.
ನಂತರ ಜಾಕಿ ಸಿನಿಮಾ ನಾನು ಮೊದಲು ಸ್ಕ್ರಿಪ್ಟ್ ಕೆಲಸ ಮಾಡಿದ ಸಿನಿಮಾ. ಅಲ್ಲೂ ಅಪ್ಪು ಸರ್ ಹೀರೋ. ಅದರಲ್ಲಿ ಜಾಕಿ ತಾಯಿಯ ಹೆಸರು ಜಯಮ್ಮ. ನನ್ನ ಮೊದಲ ನಿರ್ದೇಶನದ ಸಿನಿಮಾ ಜಯಮ್ಮನ ಮಗ. ಪ್ರಸ್ತುತ ಕಾಣದಂತೆ ಮಾಯವಾದನು ಸಿನಿಮಾಗೆ ‘ರಮ್ಮಿ’ ಅಂತ ಶೀರ್ಷಿಕೆ ಇಡಬೇಕಿತ್ತು. ಆದರೆ ಬೇರೊಬ್ಬರು ನೋಂದಾಯಿಸಿದ್ದರು. ಎಪ್ಪತ್ತು ಟೈಟಲ್ ಪ್ರಯತ್ನಿಸಿದರು ಒಂದೂ ಸಿಗಲಿಲ್ಲ. ಎಲ್ಲವೂ ರಿಜಿಸ್ಟರ್ ಆಗಿದ್ದವು. ತಲೆ ಮೇಲೆ ಕೈ ಹೊತ್ತು ಕೂತಿದ್ದಾಗ ನಿರ್ದೇಶಕ ರಾಜ್ ‘ಕಾಣದಂತೆ ಮಾಯವಾದನು’ ಅನ್ನೋದು ಹೇಗಿರುತ್ತೆ ಅಂತ ಕೇಳಿದ. ನನಗೆ ಅಲ್ಲೇ ೧೦೦% ಗ್ಯಾರೆಂಟಿ ಆಗೋಯ್ತು. ಈ ಟೈಟಲ್ಲೇ ನಮಗೆ ಸಿಗೋದು ಅಂತ. ಯಾಕೆಂದರೆ ಅಪ್ಪು ಸರ್ಗೂ ನನಗೂ ಒಂದು ಬಗೆಯ ಅಗೋಚರ ನಂಟಿದೆ. ಅಂದುಕೊಂಡಂತೇ ಟೈಟಲ್ ಓಕೆ ಆಯ್ತು. ಈ ಚಿತ್ರದಲ್ಲಿ ಅವರ ಭಾಗೀದಾರಿಕೆ ಇದ್ದರೆ ಇನ್ನೂ ಚೆನ್ನ ಎಂದು ಅವರ ಧ್ವನಿಯಲ್ಲಿ ಒಂದು ಹಾಡನ್ನಾದರೂ ಹೇಳಿಸುವ ಪ್ಲಾನು ಮಾಡಿದ್ವಿ. ಹಾಗೆ ರೂಪುಗೊಂಡಿದ್ದೇ ‘ಕಳೆದೋದ ಕಾಳಿದಾಸ’.
– ಕಾಣದಂತೆ ಮಾಯವಾದನು ಸಿನಿಮಾದ ಪೋಸ್ಟರಿನಲ್ಲಿ ನಾಯಿಯೊಂದು ಕಾಣಿಸಿಕೊಂಡಿದೆಯಲ್ಲಾ? ಅದರ ಬಗ್ಗೆ ವಿವರ ನೀಡಬಹುದಾ?
ಕಾಣದಂತೆ ಮಾಯವಾದನು ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನಟನಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಒಂದು ಆತ್ಮದ ಪಾತ್ರದಲ್ಲಿ ನಟಿಸಿದ್ದೇನೆ. ಆರು ವರ್ಷಗಳು ಶ್ರಮ ವಹಿಸಿ ಮಾಡಿರುವಂತಹ ಚಿತ್ರ ಇದು. ಒಬ್ಬ ಪ್ರೇಕ್ಷಕನನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದೇವೆ. ಅದು ಯಶಸ್ವಿಯೂ ಆಗಿದೆ.
– ಯಾವ ಕಾರಣಕ್ಕಾಗಿ ಈ ಸಿನಿಮಾವನ್ನು ಜನ ನೋಡಲೇಬೇಕು ಅನ್ನೋದು ನಿಮ್ಮ ಅಭಿಪ್ರಾಯ?
ಸಿನಿಮಾ ನೋಡಿದವರಿಗೆ ೨ ದಿನ ಆದರೂ ಕಾಡುತ್ತೆ. ಎಲ್ಲೂ ಬೇಸರ ಎನಿಸುವುದಿಲ್ಲ. ಕ್ಯಾರೆಕ್ಟರ್ಗಳು ಮನಸ್ಸಿನಲ್ಲಿ ಉಳಿಯುತ್ತೆ. ಬದುಕು ಹೀಗೂ ಕೂಡ ಆಗಬಹುದು ಅನಿಸುತ್ತೆ. ಚಿತ್ರ ನೋಡಿದಾಗ ಪಾಸಿಟೀವ್ ಫೀಲ್ ಕೊಡುತ್ತೆ. ಆಕ್ಷನ್, ಕಾಮಿಡಿ, ಒಂದೊಳ್ಳೆ ಮೆಸೇಜ್ ಕೊಡುವಂತಹ ಹಾಗೂ ಕುಟುಂಬ ಸಮೇತ ನೋಡುವಂತ ಸಿನಿಮಾ. ಉತ್ತಮ ಸಿನಿಮಾಗಳನ್ನ ಪ್ರೇಕ್ಷಕ ಗೆಲ್ಲಿಸುತ್ತಾನೆ ಅನ್ನೋ ನಂಬಿಕೆ ಇದೆ.
No Comment! Be the first one.