ಕಪಟ ನಾಟಕ ಪಾತ್ರಧಾರಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಬುಕ್ ಮೈ ಶೋ ನಲ್ಲಿ ೯೪ ಪರ್ಸೆಂಟ್ ಪಡೆದಿರುವ ಕನ್ನಡ ಸಿನಿಮಾ ಇದಾಗಿದೆ. ಕ್ರಿಶ್ ನಿರ್ದೇಶನದ ಈ ಚಿತ್ರದಲ್ಲಿ ಬಾಲು ನಾಗೇಂದ್ರ, ಸಂಗೀತಾ ಭಟ್, ಜಯದೇವ್, ಕರಿಸುಬ್ಬು, ರೇಣು ಮುಂತಾದವರು ನಟಿಸಿದ್ದಾರೆ. ಮಾಮೂಲಿ ಸಿನಿಮಾಗಳಿಗಿಂತಾ ಭಿನ್ನವಾಗಿರುವ ಈ ಚಿತ್ರವನ್ನು ನಟ ರಕ್ಷಿತ್ ಶೆಟ್ಟಿ ಮೊನ್ನೆ ವೀಕ್ಷಿಸಿದ್ದಾರೆ. ‘ಈ ಸಿನಿಮಾದ ಹೀರೋ ಬಾಲು ನಾಗೇಂದ್ರ ನನಗೆ ಇವತ್ತಿನಿಂದ ಪರಿಚಯವಲ್ಲ. ಶಾರ್ಟ್ ಸಿನಿಮಾಗಳನ್ನು ಮಾಡುತ್ತಿದ್ದ ಕಾಲದಿಂದ ಒಟ್ಟಿಗೇ ಓಡಾಡಿದವರು. ಬಾಲು ಕನ್ನಡ ಚಿತ್ರರಂಗದ ಅದ್ಭುತ ನಟ. ಇವನನ್ನು ನಮ್ಮ ಇಂಡಸ್ಟ್ರಿ ಇನ್ನಷ್ಟು ಉತ್ತಮವಾಗಿ ಬಳಸಿಕೊಳ್ಳಬೇಕು. ಕಪಟ ನಾಟಕ ಪಾತ್ರಧಾರಿ ಸಿನಿಮಾ ತುಂಬಾ ಚನ್ನಾಗಿ ಮೂಡಿಬಂದಿದೆ. ಎಷ್ಟೋ ದೃಶ್ಯಗಳನ್ನು ನೋಡುವಾಗ ನನಗೇ ಮೈ ರೋಮಾಂಚನವಾಯಿತು. ಎಲ್ಲರೂ ಈ ಸಿನಿಮಾವನ್ನು ಥಿಯೇಟರಿಗೇ ಬಂದು ನೋಡಬೇಕು’ ಎಂದು ಹೇಳಿದ್ದಾರೆ.
ನಿಜ. ಬಾಲು ನಾಗೇಂದ್ರ ಕನ್ನಡದ ಅದ್ಭುತ ನಟ ಅನ್ನೋದರಲ್ಲಿ ಯಾವ ಡೌಟೂ ಇಲ್ಲ. ದುನಿಯಾ ಸೂರಿ ನಿರ್ದೇಶನದ ಸಾಕಷ್ಟು ಸಿನಿಮಾಗಳಲ್ಲಿ ಬಾಲು ಪಾತ್ರ ನಿರ್ವಹಿಸುತ್ತಾ ಬಂದವರು. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಇವರೇನಾ ಅನ್ನುವಷ್ಟರ ಮಟ್ಟಿಗೆ ನಟಿಸಿದವು, ಮ್ಯಾನರಿಸಂ ತೋರಿಸಿದವರು. ಕಡ್ಡಿ ಪುಡಿ ಸಿನಿಮಾದ ರೆಕ್ಕೆ ವೆಂಕಟೇಶ ಅನ್ನೋ ಕ್ಯಾರೆಕ್ಟರ್ರು ಎಂಥವರನ್ನೂ ಬೆಚ್ಚಿ ಬೀಳಿಸಿತ್ತು. ನಂತರ ಹುಲಿರಾಯ ಸಿನಿಮಾದ ಮೂಲಕ ಹೀರೋ ಆದ ಬಾಲು ಆ ಚಿತ್ರದಲ್ಲೂ ನೂರಕ್ಕೆ ನೂರು ಸ್ಕೋರು ಮಾಡಿದರು. ಇವತ್ತಿಗೂ ಹುಲಿರಾಯ ಸಿನಿಮಾ ಡಿಜಿಟಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ.
ಈಗ ಕಪಟ ನಾಟಕ ಪಾತ್ರಧಾರಿ ಸಿನಿಮಾದಲ್ಲೂ ಬಾಲು ಬೇರೆಯದ್ದೇ ರೀತಿಯಲ್ಲಿ ನಟಿಸಿದ್ದಾರೆ. ಒಂದು ಕಾಲಕ್ಕೆ ರಕ್ಷಿತ್, ಕಿಟ್ಟಿ ಮುಂತಾದ ನಟರೊಂದಿಗೆ ಸಾಹಚರ್ಯವಿರಿಸಿಕೊಂಡಿದ್ದ ಬಾಲು ರಂಗಭೂಮಿ ಹಿನ್ನೆಲೆಯ ನಟ. ತಳ ಸಮುದಾದ ಪ್ರತಿನಿಧಿಯಂತೆ ಕಾಣಿಸುವ ಬಾಲುಗಾಗಿ ಎಂಥಾ ಸ್ಕ್ರಿಪ್ಟನ್ನು ಬೇಕಾದರೂ ಮಾಡಿಕೊಳ್ಳಬಹುದು. ಹೊಸ ನಿರ್ದೇಶಕರು ಮತ್ತು ಹಳಬರಿಬ್ಬರೂ ಬೇಕಾದಂತೆ ಪ್ರಯೋಗ ಮಾಡಬಲ್ಲ ಹೀರೋ ಬಾಲು ನಾಗೇಂದ್ರ. ಇಂಥಾ ನಟ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅನ್ನೋದು ಎಲ್ಲರ ಆಶಯ!