ಪಿ. ವಾಸು ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ನಿನಲ್ಲಿ ಶಿವಲಿಂಗ ಚಿತ್ರ ಬಿಡುಗಡೆಯಾಗಿ ಅದ್ಭುತವಾದ ಯಶಸ್ಸನ್ನೂ ದಾಖಲಿಸಿತ್ತು. ಈಗ ಮತ್ತದೇ ವಾಸು ಮತ್ತು ಶಿವಣ್ಣ ಒಂದಾಗಿ ಆಯುಷ್ಮಾನ್ಭವ ಎಂದಿದ್ದಾರೆ. ಈ ವರೆಗೂ ಪಿ. ವಾಸು ನಿರ್ದೇಶಿಸಿರುವ ಎಲ್ಲ ಚಿತ್ರಗಳೂ ಬಾಕ್ಸಾಫೀಸಿನಲ್ಲಿ ದಾಖಲೆ ನಿರ್ಮಿಸಿವೆ. ಅದಕ್ಕೆ ಆಪ್ತ ಮಿತ್ರ ಮತ್ತು ಆಪ್ತ ರಕ್ಷಕ ಸಿನಿಮಾಗಳಿಗಿಂತಾ ಬೇರೆ ಉದಾಹರಣೆ ಬೇಕಿಲ್ಲ.
ಪಿ. ವಾಸು ಪಕ್ಕಾ ವೃತ್ತಿಪರ ನಿರ್ದೇಶಕ ಯಾವುದೇ ಭಾಷೆಯ ಸಿನಿಮಾವನ್ನು ಮಾಡಿದರೂ ಅದರಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ತಾವು ಆಯ್ಕೆ ಮಾಡಿಕೊಂಡ ಹೀರೋ ಮತ್ತವರ ಅಭಿಮಾನಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆ ಕಟ್ಟುತ್ತಾರೆ, ದೃಶ್ಯಗಳನ್ನು ರೂಪಿಸುತ್ತಾರೆ. ಹೀಗಾಗಿ ವಾಸು ನಿರ್ದೇಶನದ ಸಿನಿಮಾಗಳನ್ನು ನೋಡಲು ಯಾವುದೇ ಹೀರೋಗಳ ಅಭಿಮಾನಿಗಳು ಕಾತರಿಸುತ್ತಾರೆ. ಅದಲ್ಲದೆ, ಪಿ. ವಾಸು ಸಿನಿಮಾಗಳಲ್ಲಿ ಕೌಟುಂಬಿಕ ಕಥಾವಸ್ತು ಪ್ರಧಾನವಾಗಿರುತ್ತದೆ. ಸಂಬಂಧಗಳ ಸೂಕ್ಷ್ಮತೆಯನ್ನು ದೃಶ್ಯಕ್ಕಿಳಿಸುವಲ್ಲಿ ಪಿ. ವಾಸು ಹೆಸರು ವಾಸಿ.
ಈ ವಾರ ತೆರೆಗೆ ಬರುತ್ತಿರುವ ಆಯುಷ್ಮಾನ್ಭವ ಸಿನಿಮಾ ಕೂಡಾ ಕೌಟುಂಬಿಕ ಕಥಾಹಂದರದ ಜೊತೆಗೆ ಕಮರ್ಷಿಯಲ್ ಸಿನಿಮಾದ ಎಲ್ಲ ಎಲಿಮೆಂಟುಗಳೊಂದಿಗೆ ರೂಪುಗೊಂಡಿದೆ. ಇದು ಶಿವಣ್ಣನ ಅಭಿಮಾನಿಗಳು ಮಾತ್ರವಲ್ಲದೆ ಮಹಿಳೆ ಮಕ್ಕಳು ಕೂಡಾ ನೋಡಲೇಬೇಕಾದ ಸಿನಿಮಾವಾಗಿರುವುದರಿಂದ ಫ್ಯಾಮಿಲಿ ಆಡಿಯೆನ್ಸು ಥಿಯೇಟರಿಗೆ ಬರೋದು ಗ್ಯಾರೆಂಟಿ. ಎಲ್ಲರಿಗೂ ಗೊತ್ತಿರುವಂತೆ ಯಾವ ಸಿನಿಮಾಗೆ ಜನ ಕುಟುಂಬಸಮೇತರಾಗಿ ಬರುತ್ತಾರೋ ಅಂಥಾ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತವೆ. ಆಯುಷ್ಮಾನ್ಭವ ಸಿನಿಮಾ ಕೂಡಾ ಅದೇ ಹಾದಿಲ್ಲಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಆಯುಷ್ಮಾನ್ಭವ ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸೋದು ಖಚಿತ!
ಪಿ.ವಾಸು ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರು, ಗೌರಿಬಿದನೂರು, ಅಲೇಪಿ, ಚಾಲ್ಕುಡಿ, ಮಂಗಳೂರು, ಮಡಿಕೇರಿ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಇದು ಗುರುಕಿರಣ್ ಸಂಗೀತ ನಿರ್ದೇಶನದ ೧೦೦ನೇ ಚಿತ್ರ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗೌತಮ್ರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಎ.ಹರ್ಷ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶಿವರಾಜಕುಮಾರ್, ಅನಂತನಾಗ್, ರಚಿತಾರಾಂ, ನಿಧಿಸುಬ್ಬಯ್ಯ, ಸುಹಾಸಿನಿ, ಶಿವಾಜಿಪ್ರಭು, ಸಾಧುಕೋಕಿಲ, ರಂಗಾಯಣ ರಘು, ಯಶ್ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.