ಮೂರೂವರೆ ದಶಕಗಳ ಹಿಂದೆ ವಿಷ್ಣುವರ್ಧನ್ ಅಭಿನಯದ ಕಥಾನಾಯಕ ಚಿತ್ರ ತೆರೆಗೆ ಬಂದಿತ್ತು. ಅದಾದಮೇಲೆ ಈಗ ಮತ್ತೊಮ್ಮೆ ಅದೇ ಹೆಸರಿನ ಚಿತ್ರ ನಿರ್ಮಾಣವಾಗುತ್ತಿದೆ. ಯುವ ನಿರ್ದೇಶಕ ವಿನಾಯಕ ಜ್ಯೋತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಥಾನಾಯಕ ಎನ್ನುವ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಕಾರ್ಯಕ್ರಮ ಮುದ್ದನಪಾಳ್ಯದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಟೈಟಲ್ ಬಿಡುಗಡೆ ಮಾಡಿ ಮುಹೂರ್ತ ದೃಷ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವಿನಾಯಕ ಜ್ಯೋತಿ ನಾನು ಈ ಹಿಂದೆ ಕಾಲ್ಗೆಜ್ಜೆ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಅಲ್ಲದೆ ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಈ ಚಿತ್ರದಲ್ಲಿ ನಂ ಗಣಿ ಬಿಕಾಂ ಪಾಸ್ ಖ್ಯಾತಿಯ ಅಭಿಷೇಕ್ ಶೆಟ್ಟಿ ಹಾಗೂ ಪ್ರವೀಣ್ತೇಜ್ ನಾಯಕರಾಗಿ ನಟಿಸುತ್ತಿದ್ದಾರೆ. ಅರ್ಜುನ್ ಕಾಪಿಕಾಡ್ ಮತ್ತೊಂದು ಲೀಡ್ ರೋಲ್ನಲ್ಲಿದ್ದಾರೆ. ಸೆಂಟಿಮೆಂಟ್, ಆ್ಯಕ್ಷನ್ ಎಲಿಮೆಂಟ್ಸ್ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಿರುವ ಚಿತ್ರ ಇದಾಗಿದ್ದು, ನಾಯಕಿಯನ್ನು ಹುಡುಕುವುದರಲ್ಲೇ ಚಿತ್ರದ ಕಥಾಹಂದರ ಸಾಗುತ್ತದೆ.
ಪ್ರೇಕ್ಷಕರಲ್ಲಿ ಕುತೂಹಲ ಇರಲಿ ಎಂದು ನಾಯಕಿಯ ಪಾತ್ರವನ್ನು ರಹಸ್ಯವಾಗಿಟ್ಟಿದ್ದೇವೆ, ಅದನ್ನು ಪ್ರೇಕ್ಷಕರು ತೆರೆಯಮೇಲೇ ನೋಡಬೇಕು. ಅಲ್ಲಿವರೆಗೆ ಆ ಪಾತ್ರ ಕುತೂಹಲವಾಗೇ ಉಳಿದಿರುತ್ತದೆ, ಇದೇ ತಿಂಗಳ 12ರಿಂದ ಆರಂಭಿಸಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಬಹುತೇಕ ಚಿತ್ರೀಕರಣ ನಡೆಸುವ ಯೋಜನೆಯಿದೆ ಎಂದು ಹೇಳಿದರು.
ನಂತರ ನಾಯಕ ಪ್ರವೀಣ್ತೇಜ್ ಮಾತನಾಡಿ ಮುಂದಿನ ನಿಲ್ದಾಣ ಚಿತ್ರದ ನಂತರ ತುಂಬಾ ಗ್ಯಾಪ್ ತೆಗೆದುಕೊಂಡು ಒಪ್ಪಿರುವ ಚಿತ್ರವಿದು. ಈ ಕಥೆ ಕೇಳಿ ತುಂಬಾ ಇಷ್ಟವಾಯ್ತು. ಸಸ್ಪೆನ್ಸ್, ಥ್ರಿಲ್ಲರ್ ಸ್ಟೋರಿ. ದೆಹಲಿಯಿಂದ ಬರುವ ಸಿಬಿಐ ಆಫೀಸರ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದರು. ನಂತರ ಅರ್ಜುನ್ ಕಾಪಿಕಾಡ್ ಮಾತನಾಡಿ ನಿರ್ದೇಶಕ ವಿನಾಯಕ್ ಈ ಕಥೆ ಹೇಳಿದಾಗಲೇ ನನಗೆ ಇಂಪ್ರೆಸ್ ಆಯ್ತು. ಚಿತ್ರದಲ್ಲಿ ನನ್ನದು ಪೋಲೀಸ್ ಪಾತ್ರ ಎಂದು ಹೇಳಿದರು. ಚಿತ್ರದ ಮತ್ತೊಬ್ಬ ಪಾತ್ರದಾರಿ ಅಭಿಷೇಕ್ ಶೆಟ್ಟಿ ಮಾತನಾಡುತ್ತ ಇದು ನನ್ನ ಮೂರನೇ ಚಿತ್ರ. ಪರಮ್ ಹೆಸರಿನ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡರು.
2005ರಿಂದ ಈಗಿನ ಕಾಲಘಟ್ಟದವರೆಗೆ ನಡೆಯುವ ಕಥೆ ಇದಾಗಿದ್ದು, ಇಲ್ಲಿ ನಾಯಕ ಪ್ರವೀಣ್ ಅವರ ಯಂಗರ್ ಪಾತ್ರವನ್ನು ಧನುಷ್ ಪ್ರಣವ್ ನಿರ್ವಹಿಸುತ್ತಿದ್ದಾರೆ, ಈಗಾಗಲೇ ಸಿತಾರ, ಗಾಂಧಿ ಜಯಂತಿ, ಲವ್ ಮಾಕ್ಟೇಲ್ ಚಿತ್ರಗಳಲ್ಲಿ ನಟಿಸಿರುವ ಧನುಷ್ಗೆ ಇದು ಆರನೇ ಚಿತ್ರ. ಅಜನೀಶ್ ಲೋಕನಾಥ್ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, ಹೊಸ ತಂಡದ ಜೊತೆ ಸೇರಿ ಕೆಲಸ ಮಾಡುತ್ತಿರುವ ಖುಷಿಯಿದೆ. ಒನ್ಲೈನ್ ಕಥೆ ಕೇಳಿ ಮ್ಯೂಸಿಕ್ ಮಾಡಲು ಒಪ್ಪಿಕೊಂಡೆ ಎಂದರು. ಛಾಯಾಗ್ರಾಹಕ ಕಾರ್ತೀಕ್ ಮಾತನಾಡುತ್ತ ಈ ಹಿಂದೆ ನವೀನ್ಕುಮಾರ್ ಜೊತೆ ಕೆಲಸ ಮಾಡಿದ್ದೆ, ಇದು ಎರಡನೇ ಚಿತ್ರ ಎಂದು ಹೇಳಿದರು. ನಿರ್ದೇಶಕರ ಸ್ನೇಹಿತರಾದ ರಾಜೇಗೌಡ ಮತ್ತು ಶ್ರೀನಾಥ್ ಹಾಗೂ ನಾಗ್ಭೂಷಣ್ ಕಾರ್ಯಕಾರಿ ನಿರ್ಮಾಪಕರಾಗಿ ವಿನಾಯಕ್ ಜೊತೆ ಕೈಜೋಡಿಸಿದ್ದಾರೆ. ಜೊತೆಗೆ ಮತ್ತೊಬ್ಬ ಸ್ನೇಹಿತ ನವೀನ್ ಶಂಕರ್ ಚಿತ್ರದ ಎಲ್ಲಾ ಕೆಲಸಗಳಲ್ಲಿ ಜೊತೆ ನಿಂತಿದ್ದಾರೆ. ಉಗ್ರಂ ಶ್ರೀಕಾಂತ್ ಅವರೊಂದಿಗೆ ಕೆಲಸ ಮಾಡಿದ್ದ ಉಜ್ವಲ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ.
No Comment! Be the first one.