ಕಳೆದ ವರ್ಷ ನಟಿ ಕೀರ್ತಿ ಸುರೇಶ್ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದವು. ‘ನಾಡಿಗಯಾರ್ ತಿಲಗಂ’, ‘ಥಾನಾ ಸೆರಂದಾ ಕೂಟಂ’, ‘ಸಾಮಿ 2’ ಮತ್ತು ‘ಸಂಡಕೋಝಿ 2’ ತಮಿಳು ಚಿತ್ರಗಳಲ್ಲಿ ಅವರು ನಾಯಕಿಯಾಗಿದ್ದರು. ‘ಮಹಾನಟಿ’ ತೆಲುಗು ಬಯೋಪಿಕ್ ಚಿತ್ರದಲ್ಲಿ ದೊಡ್ಡ ಹೆಸರು ಮಾಡಿದ ನಟಿ ಇದೀಗ ಬಾಲಿವುಡ್ ಪ್ರವೇಶಿಸುವ ಹಾದಿಯಲ್ಲಿದ್ದಾರೆ. ಅಮಿತ್ ಶರ್ಮಾ ನಿರ್ದೇಶನದ ‘ಬಧಾಯಿ ಹೋ’ ಹಿಂದಿ ಚಿತ್ರದೊಂದಿಗೆ ಅವರು ಬಾಲಿವುಡ್ಗೆ ಹಾರುವ ಸುದ್ದಿಯಿದೆ. ಬೋನಿ ಕಪೂರ್ ನಿರ್ಮಾಣದ ಚಿತ್ರದ ಕುರಿತಾಗಿ ಸದ್ಯದಲ್ಲೇ ಅಧಿಕೃತ ಸುದ್ದಿ ಹೊರಬೀಳಲಿದೆ.
ಇನ್ನು ಕೀರ್ತಿ ಸುರೇಶ್ ಅವರಿಗೆ ರಜನೀಕಾಂತ್ ಜೋಡಿಯಾಗಿ ನಟಿಸುವ ಅವಕಾಶವೂ ಸಿಗುತ್ತಿದೆ. ಎ.ಆರ್.ಮುರುಗದಾಸ್ ನಿರ್ದೇಶನದ ಹೊಸ ಚಿತ್ರದ ಇಬ್ಬರು ನಾಯಕಿಯರಲ್ಲಿ ಅವರೂ ಒಬ್ಬರಾಗಿ ನಟಿಸಲಿದ್ದಾರೆ. ಈ ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಯನತಾರಾ ಇರಲಿದ್ದಾರೆ. ಕೀರ್ತಿ ಸುರೇಶ್ ಈ ಹಿಂದೆ ಎ.ಆರ್.ಮುರುಗದಾಸ್ ನಿರ್ದೇಶನದ ‘ಸರ್ಕಾರ್’ ಚಿತ್ರದಲ್ಲಿ ನಟಿಸಿದ್ದರು. ಇನ್ನು ಈ ಚಿತ್ರದಲ್ಲಿ ರಜನೀಕಾಂತ್ ದ್ವಿಪಾತ್ರದಲ್ಲಿ (ಪೊಲೀಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 2019ರಲ್ಲಿ ಕೀರ್ತಿ ಸುರೇಶ್ ಅವರ ತಮಿಳು ಚಿತ್ರಗಳಲ್ಲದೆ ಹಿಂದಿ ಸಿನಿಮಾ ಕೂಡ ತೆರೆಕಾಣಲಿದೆ.