ಇಪ್ಪತ್ತೆರಡು ಸಾವಿರ ಜನ ಜೀತಕ್ಕೆ ಬೀಳಿಸಿಕೊಂಡ ಚಿನ್ನದ ಗಣಿ ಮಾಲೀಕ. ಬರೋಬ್ಬರಿ ಒಂಭೈನೂರೈವತ್ತು ಅಡಿ ಆಳದಲ್ಲಿ ಜೀವದ ಹಂಗು ತೊರೆದು ಕ್ರೂರ ರಾಕ್ಷಸರ ಕಣ್ಗಾವಲಿನಲ್ಲಿ ದುಡಿಮೆಗೆ ನಿಂತ ಬಡ ಜೀವಗಳು. ಆ ಚಿನ್ನದ ಗಣಿಯ ಒಡೆತನಕ್ಕಾಗಿ ರಣಹದ್ದುಗಳಂತೆ ಕಾದು ಕುಂತ ಕೇಡಿಗರು. ತನ್ನ ಅಧಿಪತ್ಯವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗದಂತೆ ತನ್ನ ಸುತ್ತ ಭದ್ರ ಕೋಟೆ ನಿರ್ಮಿಸಿಕೊಂಡವನು ಒಬ್ಬ ಸೈತಾನ. ಗಣಿ ಕಾರ್ಮಿಕರು ಕೂಡಾ ಮನುಷ್ಯರು ಅನ್ನೋದನ್ನು ಮರೆತ ಆತನ ಪಿಶಾಚಿ ಪಡೆ. ಗೆರೆ ದಾಟಿ ಒಂದು ಹೆಜ್ಜೆ ಮುಂದಿಟ್ಟರೆ ಆಡುವ ಮಗುವಾದರೂ ಸರಿಯೇ, ರಾಕ್ಷಸರ ತುಪಾಕಿ ಗುಂಡು ಅದರ ಗುಂಡಿಗೆಯನ್ನು ಛಿತ್ರವಾಗಿಸುತ್ತದೆ. ಇಂಥ ನರಕಕ್ಕೆ ಗಣಿ ಧಣಿ ಇಟ್ಟ ಹೆಸಡರು ಅಕ್ಕಸಾಲಿಗನ ತಕ್ಕಡಿ (ನಾರಾಚಿ)!
ಅದೊಂದು ದಿನ ಕೆ.ಜಿ.ಎಫ್ ಎನ್ನುವ ಕಡುದಾರಿದ್ರ್ಯದ ನೆಲದಲ್ಲಿ ಚಿನ್ನದ ನಿಕ್ಷೇಪ ಸಿಗುತ್ತದೆ. ಅದೇ ಘಳಿಗೆಯಲ್ಲಿ ಮತ್ತೊಂದು ಜೀವ ಕೂಡಾ ಜನ್ಮವೆತ್ತುತ್ತದೆ. ಅವನು ಲೋಕಿ. ಅಪ್ಪ ಯಾರೋ ಗೊತ್ತಿಲ್ಲ. ಹತ್ತನ್ನೆರಡು ವರ್ಷದ ಹುಡುಗ ಜಗತ್ತು ನೋಡೋ ಹೊತ್ತಿಗೆ ಅನಾರೋಗ್ಯದಿಂದ ಅಮ್ಮ ಕೂಡಾ ಉಸಿರು ಚೆಲ್ಲುತ್ತಾಳೆ. ಕೆಟ್ಟ ಬಡತನದಲ್ಲಿ ಯಾರು ಬೇಕಾದರೂ ಹುಟ್ಟಬಹುದು. ಆದರೆ ಸಾಯುವಾಗ ಬಡತನವಿರಬಾರದು ಅನ್ನೋದು ತಾಯಿಯ ಬಯಕೆ. `ನಾನು ದೊಡ್ಡ ಶ್ರೀಮಂತನಾಗೇ ತೀರುತ್ತೇನೆಂದು’ ತಾಯಿಗೆ ಭಾಷೆ ಕೊಡೋ ಹುಡುಗ ಲೋಕಿ ಹೋಗಿ ಸೇರೋದು ಮುಂಬೈ ಅನ್ನೋ ಮಾಯೆಯ ಮಡಿಲನ್ನು. ಬೂಟ್ ಪಾಲೀಷ್ ಮಾಡಿ ಬದುಕು ಆರಂಭಿಸೋ ಹುಡುಗ ಒಂದು ಕಾಲಕ್ಕೆ ಇಡೀ ಬಾಂಬೆಯನ್ನು ಆಳುವಂತಾಗುತ್ತಾನೆ. ಲೋಕಿ ರಾಕಿಯಾಗಿ ಮಾರ್ಪಡುತ್ತಾನೆ. ಇಂತಾ ರಾಕಿ ಭಾಯ್ ಕೈಗೆ ಒಂದು ದೈತ್ಯ ಆನೆಯನ್ನು ಹೊಡೆಯೋ ಡೀಲು ಬರುತ್ತದೆ. ಅದು ಅದೇ ಚಿನ್ನದ ಗಣಿ ಮಾಲೀಕನ ಮಗ ಗರುಡನದ್ದು. ತಾನು ಎಲ್ಲಿಗೆ ಹೋಗುತ್ತಿದ್ದೇನೆ, ಹೊಡೆದುರುಳಿಸಬೇಕಿರೋ ಕೀಚಕನೆ ಚರಿತ್ರೆ ಏನು? ಆತ ರಕ್ತಹರಿಸುತ್ತಿರೋ ಮಣ್ಣಿಗೂ ಅಲ್ಲಿನ ಮಣ್ಣಿನ ಮಕ್ಕಳಿಗೂ ಇರುವ ನಂಟಿನ ಇತಿಹಾಸವೇನು? ಉಹೂಂ… ಯಾವುದೂ ಗೊತ್ತಿಲ್ಲದೇ ಹೊಡೆಯೋದಷ್ಟನ್ನೇ ಗುರಿಯಾಗಿಸಿಕೊಂಡು ನರಕದ ಗೇಟಿನೊಳಗೆ ಎಂಟ್ರಿ ಕೊಡೋ ರಾಕಿಯ ಮುಂದೆ ತೆರೆದುಕೊಳ್ಳುವ ದೃಶ್ಯಗಳು, ಆ ಕೋಟೆಯ ಒಂದೊಂದೇ ಬಾಗಿಲನ್ನು ಬೇಧಿಸುತ್ತಾ ಮುನ್ನುಗ್ಗುವ ರಾಕಿ ಕಡೆಗೆ ಆ ಕಿರಾತನಕ ಕೊರಳಿಗೆ ಕೊಡಲಿಯಿಡುತ್ತಾನಾ? ಅಥವಾ ಅವರ ಕಪಿಮುಷ್ಟಿಗೆ ಸಿಲುಕಿ ಕುತ್ತಿಗೆ ತಗ್ಗಿಸಿ ಮಣಿಯುತ್ತಾನಾ ಅನ್ನೋದು ಸಿನಿಮಾದ ಒಟ್ಟಾರೆ ಸಾರಾಂಶ.
`ಕೆ.ಜಿ.ಎಫ್’ ಕಾಲ್ಪನಿಕ ಕತೆಯಂತೆ ಕಂಡರೂ ಇದು ಚಿನ್ನದ ನೆಲದಲ್ಲಿ ಉಸಿರು ಚೆಲ್ಲಿದ ಜೀವದನಿಯಂತೆ ಕಾಣುತ್ತದೆ. ಹೊರ ಜಗತ್ತಿಗೆ ಅದು ತಮ್ಮ ಆಡಂಬರ ಹೆಚ್ಚಿಸೋ ಚಿನ್ನದ ಕೊಪ್ಪರಿಗೆ. ಆದರೆ ಆ ಚಿನ್ನದ ಗಣಿಯೊಳಗೆ ಅದೆಂತೆಂಥಾ ನಿಗೂಢಗಳಿವೆ, ಅದೆಷ್ಟು ಜೀವಗಳು ಸಾವಿರಾರು ಅಡಿ ಆಳದಲ್ಲಿ ನರಳಾಡಿ ಜೀವ ಬಿಟ್ಟಿವೆ ಮತ್ತು ಚಿನ್ನದ ಮಣ್ಣಾಳದಲ್ಲಿ ಅದೆಷ್ಟು ಬಡಪಾಯಿಗಳ ನೆತ್ತರು ಇಂಗಿದೆಯೆಂಬುದು ಜಗತ್ತಿಗೆ ಬೇಡವಾದ ಸತ್ಯ. ಕೆಜಿಎಫ್ ಒಂದು ಚಿತ್ರವಾದರೂ ಕೂಡಾ ನಮ್ಮದೇ ನಡುವಿನ ಭೀಕರ ಸತ್ಯವೊಂದನ್ನು ಮುಖ್ಯವಾಹಿನಿಗೆ ತೇಲಿಸಿ ಬಿಟ್ಟಂತೆ ಭಾಸವಾಗುತ್ತೆ. ನಾವೇ ಕೇಳಿಸಿಕೊಳ್ಳದ ನಮ್ಮವರದ್ದೇ ಆಕ್ರಂದನವೊಂದು ಎದೆಗೆ ನಾಟಿದಂಥಾ ತಲ್ಲಣವನ್ನು ಪ್ರತೀ ದೃಷ್ಯಗಳೂ ಹುಟ್ಟಿಸುತ್ತವೆ. ಅದು ಚಿತ್ರವೊಂದು ಪರಿಣಾಮಕಾರಿಯಾಗೋ ಸಂಕೇತ. ಅದು ಗೆಲುವಿನ ಸೂಚನೆಯೂ ಹೌದು.
ಸಾವಿರಾರು ಅಡಿ ಆಳದಲ್ಲಿ ನಡೆಯೋ ಚಿನ್ನದ ಗಣಿಗಾರಿಕೆಯಲ್ಲಿ ಮನುಷ್ಯರನ್ನೇ ಬಲಿ ಕೊಡುತ್ತಾರೆಂಬುದು ಯಾವ ಕಾಲದಿಂದಲೋ ಹಬ್ಬಿಕೊಂಡಿರುವ ಭೀಕರ ಸತ್ಯ. ಆದರೆ ಅಲ್ಲಿ ಅದಕ್ಕಿಂತಲೂ ಭರ್ಭರವಾದುದ್ದೇ ನಡೆಯುತ್ತದೆಂಬುದಕ್ಕೆ ಈ ಚಿತ್ರದಲ್ಲಿ ವಾಸ್ತವಕ್ಕೆ ಹತ್ತಿರಾದ ಅನೇಕ ವಿಚಾರಗಳಿದ್ದಾವೆ. ಡಾನ್ ರಾಕಿ ಆನೆಯನ್ನು ಹೊಡೆಯೋ ಡೀಲು ಪಡೆದು ಕೆಜಿಎಫ್ಗೆ ಎಂಟ್ರಿ ಕೊಡುವಾಗ ಆತನಿಗೂ ಆ ಬಗ್ಗೆ ಏನೆಂದರೆ ಏನೂ ಗೊತ್ತಿರೋದಿಲ್ಲ. ಆದರೆ ಆ ನಂತರ ತೆರೆದುಕೊಳ್ಳೋದು ಭೀಭತ್ಸ ಸನ್ನಿವೇಶ. ತಲೆ ಎತ್ತಿ ನೋಡಿದರೂ ಕಾರ್ಮಿಕರ ರುಂಡ ಚೆಂಡಾಡೋ ಚಂಡ ಪಡೆ, ದುಡಿಯೋ ಶಕ್ತಿ ಇಲ್ಲದವರನ್ನು ಕೊಂದು ಬಿಸಾಡೋ ಕ್ರೌರ್ಯ, ಹೆಣ್ಣು ಹುಟ್ಟಿದರೆ ಹೆತ್ತವರೇ ಕತ್ತು ಹಿಸುಕಿ ಸಾಯಿಸಬೇಕಾದ ಅನಿವಾರ್ಯತೆ. ಇದೆಲ್ಲದಕ್ಕೂ ಚಿನ್ನಕ್ಕೂ ನಂಟಿದೆ. ಅದನ್ನು ಯಾವ್ಯಾವುದಕ್ಕೋ ಅಂಟದಂತೆ ಜಾಗ್ರತೆ ವಹಿಸಿ ಇಡೀ ಚಿತ್ರವನ್ನು ಪಟಕ್ಕಿಟ್ಟ ಚಿನ್ನದಂತೆಯೇ ರೂಪಿಸಿರೋದು ಚಿತ್ರತಂಡದ ವರ್ಷಾಂತರಗಳ ಶ್ರಮದ ಫಲ.
ನಿಜದ ಇತಿಹಾಸವಿರುವ ಯಾವ ಕೃತಿಗೂ ಆಳುವ ಸರ್ಕಾರಗಳು ಉಳಿಗಾಲವಿರಿಸೋದಿಲ್ಲ ಎನ್ನುವ ಸೂಕ್ಷ್ಮತೆಯೊಂದಿಗೆ ಕೆಜಿಎಫ್ ಅನ್ನು ರೂಪಿಸಲಾಗಿದೆ. ಪತ್ರಕರ್ತನೊಬ್ಬ ಬರೆದ ನಿಷೇಧಿತ ಪುಸ್ತಕದ ಮೂಲಕ ಸಿನಿಮಾವನ್ನು ನಿರೂಪಿಸಲಾಗಿದೆ. ಕಥೆ ಕಟ್ಟುವ ಮತ್ತು ಅದನ್ನು ಎಳೆಎಳೆಯಾಗಿ ಹೇಳುತ್ತಾ ಸಾಗುವ ಕಲೆ ನಿರ್ದೇಶಕ ಪ್ರಶಾಂತ್ ನೀಲ್’ಗೆ ಸಿದ್ಧಿಸಿದೆ. ದೇಶಾಧ್ಯಂತ ಕೆಜಿಎಫ್ ಬಗ್ಗೆ ಹುಟ್ಟಿಕೊಂಡಿತ್ತಲ್ಲಾ ಕ್ರೇಜ್ ಅದಕ್ಕಿಂತಲೂ ಒಂದು ಮುಟಿಗೆ ಹೆಚ್ಚೇ ರೋಚಕವಾಗಿ ನೀಲ್ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಚಿನ್ನದ ಗಣಿಯ ಕ್ರೌರ್ಯ ಬಗೆಯುತ್ತಲೇ ಹೊಸಕಲ್ಪಟ್ಟ ಜೀವಗಳ ಕಥೆ ಹೇಳೋ ರಾಕಿ ಭಾಯ್ ಇಷ್ಟವಾಗದಿರಲು ಯಾವ ಕಾರಣಗಳೂ ಇಲ್ಲ!
ಇಷ್ಟೆಲ್ಲದರ ನಡುವೆಯೂ ಒಂದು ಕೊರಗಿದೆ. ಇನ್ನೊಂದಿಷ್ಟು ನಿಮಿಷಗಳನ್ನು ವೃದ್ಧಿಸಿ ಉಳಿದಿರೋ ಕಥೆಯನ್ನು ಒಂದೇ ಗುಕ್ಕಿನಲ್ಲಿ ಹೇಳಿಬಿಡಬೇಕಿತ್ತು. ಎಲ್ಲ ಮುಗಿದ ಮೇಲೂ ಇನ್ನೊಂಚೂರಿರಬಹುದಿತ್ತು ಎನ್ನುವ ಅತೃಪ್ತಿ ಪ್ರೇಕ್ಷಕರಿಗೆ ಉಳಿದೇ ಉಳಿಯುತ್ತದೆ. ಈ ಕಾರಣಕ್ಕಾದರೂ ಎರಡನೇ ಅಧ್ಯಾಯದ ಗೊಡವೆಗೆ ಹೋಗದೆ ಒಂದೇ ಚಾಪ್ಟರಿನಲ್ಲಿ ಹೇಳಿ ಮುಗಿಸಿಬಿಟ್ಟಿದ್ದರೆ ನೋಡುಗರ ಆತ್ಮಸಂತೃಪ್ತಿಯಾಗುತ್ತಿತ್ತು!!
#
No Comment! Be the first one.