ಅದೇನು ದುರಂತವೋ? ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ, ಸಿನಿಮಾರಂಗದಲ್ಲಿ ನಿಯತ್ತು ಅನ್ನೋದು ತೀರಾ ಅಪರೂಪ. ಕೈಹಿಡಿದು ನಡೆಸಿ, ದಾರಿ ತೋರಿದವರನ್ನು ನೆನೆಯುವುದು, ಕಷ್ಟದಲ್ಲಿದ್ದವರಿಗೆ ಆಸರೆ ನೀಡುವ ಮನಸ್ಸು ಇಲ್ಲಿ ಯಾರಿಗೂ ಇರೋದಿಲ್ಲ!
ಡಾ. ರಾಜ್ ಕುಮಾರ್ ನಟನೆಯ ಸಿನಿಮಾಗಳು ಸೇರಿದಂತೆ ನೂರಾರು ಚಿತ್ರಗಳಿಗೆ ಬೆಳಕು ನೀಡಿದವರು ಷಣ್ಮುಖಪ್ಪ. ದಾವಣಗೆರೆ ಕಡೆಯಿಂದ ಬಂದು ಬೆಂಗಳೂರು ಸೇರಿದ ಇವರು ಲೈಟ್ ಮನ್ ಆಗಿ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದರು. ಜೊತೆಗೆ ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ನಿರ್ವಹಿಸಿದ್ದರು.
ನಿರ್ಮಾಪಕ ಅಣಜಿ ನಾಗರಾಜ್ ಮತ್ತವರ ಸಹೋದರ ಸೇಫ್ಟಿ ಪ್ರಕಾಶ್ ಸೇರಿದಂತೆ ಹತ್ತು ಹಲವು ಜನರನ್ನು ಚಿತ್ರರಂಗಕ್ಕೆ ಕರೆದಂದವರು ಷಣ್ಮುಖಪ್ಪ. ಅಣಜಿ ನಾಗರಾಜ್ ಷಣ್ಮುಖಪ್ಪನವರ ಸ್ವಂತ ದೊಡ್ಡಪ್ಪನ ಮಗ ಕೂಡಾ ಹೌದು. ಷಣ್ಮುಖಪ್ಪ ಕಳೆದೊಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮಾಗಡಿರಸ್ತೆಯ ಭಾರತ್ ನಗರದಲ್ಲಿ ಪುಟ್ಟ ಬಾಡಿಗೆ ಮನೆಯಲ್ಲಿ ಮಡದಿ ಮತ್ತು ಮಗನೊಂದಿಗೆ ಜೀವನ ನಡೆಸುತ್ತಿದ್ದ ಇವರಿಂದು ನರಳಾಡುತ್ತಲೇ ಜೀವ ತೊರೆದಿದ್ದಾರೆ.
ನಟ ಸುಚೇಂದ್ರ ಪ್ರಸಾದ್ ಒಂದಿಷ್ಟು ಹಣ ಸಹಾಯ ಮಾಡಿದ್ದರು. ನಿರ್ದೇಶಕ ಬಿ ಸುರೇಶ ತಮ್ಮ ಸಂಸ್ಥೆಯ ಮೂಲಕ ಷಣ್ಮುಖಪ್ಪನ ಔಷಧಕ್ಕಾಗಿ ಕಾಸು ನೀಡಿದ್ದು ಬಿಟ್ಟರೆ ಚಿತ್ರರಂಗದ ಬೇರೆ ಯಾರೂ ಕೈ ಹಿಡಿಯುವ ಮನಸ್ಸು ಮಾಡಲಿಲ್ಲ. ಸಂಬಂಧಿಕ ಅನ್ನಿಸಿಕೊಂಡ ಅಣಜಿ ನಾಗರಾಜ್ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಎನ್ನುವ ನಿಯತ್ತಿಗಾದರೂ ನಯಾ ಪೈಸೆ ನೀಡಲಿಲ್ಲ. ಆರೋಗ್ಯ ವಿಚಾರಿಸಲು ಕೂಡಾ ಯಾವತ್ತೂ ಇಣುಕಿ ನೋಡಲಿಲ್ಲ.
ಈ ಜಗತ್ತಿನ ಸಾವಾಸವೇ ಸಾಕು ಅನ್ನಿಸಿತೋ ಏನೋ? ಇಂದು ಬೆಳಿಗ್ಗೆ ಷಣ್ಮುಖಪ್ಪ ಜೀವ ತೊರೆದು ಎದ್ದು ನಡೆದಿದ್ದಾರೆ. ಕಡೇಪಕ್ಷ ಮಂಚವೂ ಇಲ್ಲದೆ, ನಾಲ್ಕಾರು ಇಟ್ಟಿಗೆ ಜೋಡಿಸಿ ಅದರ ಮೇಲೆ ಹಲಗೆ ಇಟ್ಟು ಷಣ್ಮುಖಪ್ಪನ ಹೆಣವನ್ನು ಮಲಗಿಸಿದ್ದ ಸನ್ನಿವೇಷ ನೋಡಿದವರ ಮನಸ್ಸು ಹಿಂಡುವಂತಿತ್ತು.
ಸಿನಿಮಾಗಳಿಗೆ ಬೆಳಕು ನೀಡುತ್ತಿದ್ದ ಷಣ್ಮುಖಪ್ಪನ ಬದುಕಂತೂ ಕತ್ತಲಲ್ಲೇ ಕರಗಿಹೋಗಿದೆ. ಅವರ ಹೆಂಡತಿಯ ಮುಂದಿನ ಬದುಕಿಗೆ ಯಾರಾದರೂ ಆಸರೆಯಾಗಬೇಕಿದೆ. ಡಿಪ್ಲೊಮಾ ಮುಗಿಸಿರುವ ಅವರ ಮಗನಿಗೆ ಕೆಲಸ ಕೊಟ್ಟು ಪೊರೆಯಲಿ.
ಸಂಪರ್ಕ : 9353476552
No Comment! Be the first one.