ಸುಮಲತಾ ಅಂಬರೀಶ್ ಚುನಾವಣಾ ಕಣಕ್ಕಿಳಿಯೋದು ಪಕ್ಕಾ ಆಗುತ್ತಲೇ ಸಿನಿ ತಾರೆಯರಲ್ಲಿ ಯಾರ್ಯಾರು ಅವರ ಪರವಾಗಿ ಪ್ರಚಾರಕ್ಕೆ ಹೋಗ್ತಾರೆಂಬ ಚರ್ಚೆ ಆರಂಭವಾಗಿತ್ತು. ಆ ಸಾಲಿನಲ್ಲಿ ಪ್ರಧಾನವಾಗಿ ಕೇಳಿ ಬಂದಿದ್ದದ್ದು ಕಿಚ್ಚ ಸುದೀಪ್ ಹೆಸರು. ಆದರೆ ಅಚ್ಚರಿದಾಯಕವೆಂಬಂತೆ ಕಿಚ್ಚ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಮಂಡ್ಯ ಕಣಕ್ಕೆ ದರ್ಶನ್ ಇಳಿದಿರೋದರಿಂದ ತನ್ನ ಅಗತ್ಯ ಇಲ್ಲ. ನಾನು ಹೋಗೋದಿಲ್ಲ ಎಂಬರ್ಥದಲ್ಲಿ ಮಾತಾಡಿದ್ದರು.
ಆದರೀಗ ಕಿಚ್ಚ ಅಳೆದುತೂಗಿ ಬೇರೆ ದಾರಿಯಿಲ್ಲದೇ ಸುಮಲತಾ ಪರವಾಗಿ ಪ್ರಚಾರ ಮಾಡಲಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಈ ಪ್ರಕಾರವಾಗಿ ಹೇಳೋದಾದರೆ, ಸುದೀಪ್ ಏಪ್ರಿಲ್ ತಿಂಗಳಿನಲ್ಲಿ ಎರಡು ದಿನಗಳ ಕಾಲ ಸುಮಲತಾ ಪರವಾಗಿ ಪ್ರಚಾರ ಮಾಡಲಿದ್ದಾರಂತೆ.
ಹಾಗಾದರೆ ಸುದೀಪ್ ನಿರ್ಧಾರ ಬದಲಾಗಲು, ಆರಂಭದಲ್ಲಿ ಅಂಥಾ ಖಡಕ್ ನಿರ್ಧಾರ ಕೈಗೊಳ್ಳಲು ಕಾರಣವೇನು ಅನ್ನೋ ಪ್ರಶ್ನೆ ಕಾಡೋದು ಸಹಜವೇ. ಸುದೀಪ್ ಪ್ರಚಾರಕ್ಕೆ ಹೋಗೋದಿಲ್ಲ ಅಂದಾಗ ಕೆಲ ಮಂದಿ ಇದನ್ನು ಬೇರೆಯದ್ದೇ ಬಗೆಯಲ್ಲಿ ಅರ್ಥೈಸಿದ್ದರು. ಅಖಾಡದಲ್ಲಿ ದರ್ಶನ್ ಇರೋದರಿಂದಲೇ ಸುದೀಪ್ ಹೋಗುತ್ತಿಲ್ಲ ಎಂದೂ ಸುದ್ದಿ ಹರಡಿತ್ತು. ಆದರೆ ಅಸಲೀ ವಿಚಾರ ಕಿಚ್ಚನ ಪ್ರಾಣಸಂಕಟದ ಕಥೆಯೊಂದನ್ನು ಬಯಲಾಗಿಸುತ್ತೆ!
ಒಂದು ಮೂಲದ ಪ್ರಕಾರ ಸುದೀಪ್ ಈ ಕಣದಿಂದ ದೂರವಿದ್ದದ್ದು ಸ್ನೇಹದ ಕಾರಣಕ್ಕೆ. ಅಂಬರೀಶ್ ಆಪ್ತ ವಲಯದಲ್ಲಿದ್ದವರು ಸುದೀಪ್. ಅವರೆಂದರೆ ಸುಮಲತಾಗೂ ಅಚ್ಚುಮೆಚ್ಚು. ಬೇರೆ ವಾತಾವರಣವಿದ್ದಿದ್ದರೆ ಸುದೀಪ್ ಹಿಂದೆ ಮುಂದೆ ನೋಡದೇ ಸುಮಲತಾ ಪರವಾಗಿ ಪ್ರಚಾರಕ್ಕೆ ಧುಮುಕಿ ಬಿಡುತ್ತಿದ್ದರು. ಆದರೆ ಎದುರಾಳಿಯಾಗಿ ಕಣಕ್ಕಿಳಿದಿದ್ದು ನಿಖಿಲ್ ಅನ್ನೋದೇ ಅವರನ್ನು ಪ್ರಾಣ ಸಂಕಟಕ್ಕೀಡು ಮಾಡಿತ್ತು!
ಮುಖ್ಯಮಂತ್ರಿ ಕುಮಾರಸ್ವಾಮಿ ಸುದೀಪ್ ಆಪ್ತರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುದೀಪ್ ಜೆಡಿಎಸ್ ನಿಂದ ಕಣಕ್ಕಿಳಿಯುತ್ತಾರೆಂಬ ಸುದ್ದಿ ಹರಡಿದ್ದೂ ಕೂಡಾ ಈ ಸ್ನೇಹದ ಕಾರಣದಿಂದಲೇ. ಇದೀಗ ಅವರ ಮಗ ನಿಖಿಲ್ ಮಂಡ್ಯದಲ್ಲಿ ಕಣಕ್ಕಿಳಿದಿರುವಾಗ ಆತನ ವಿರುದ್ಧ ಸುಮಲತಾ ಪರವಾಗಿ ಹೇಗೆ ಪ್ರಚಾರ ಮಾಡೋದೆಂಬ ಮುಲಾಜು ಸುದೀಪ್ರನ್ನು ಬಾಧಿಸಿತ್ತು. ಕಡೆಗೂ ಅಂಬರೀಶ್ ಅವರ ಮೇಲಿನ ಪ್ರೀತಿಯಿಂದಾಗಿ ಗೆಳೆತನವನ್ನೂ ಮೀರಿ ಅಂಬಿ ಮೇಲಿನ ಅಭಿಮಾನಕ್ಕೆ ಗೌರವ ಕೊಡಲು ಸುದೀಪ್ ನಿರ್ಧರಿಸಿದಂತಿದೆ.
No Comment! Be the first one.