‘ಫಣಿಯಮ್ಮ’ ಸಿನಿಮಾ ಖ್ಯಾತಿಯ ನಟಿ ಎಲ್.ವಿ.ಶಾರದಾ (78 ವರ್ಷ) ಇಂದು ಬೆಳಗ್ಗೆ ಅಗಲಿದ್ದಾರೆ. ‘ವಂಶವೃಕ್ಷ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಚೊಚ್ಚಲ ಚಿತ್ರಕ್ಕೇ ರಾಜ್ಯ ಸರ್ಕಾರದ ಶ್ರೇಷ್ಠನಟಿ ಪ್ರಶಸ್ತಿ ಪಡೆದರು. ನಂತರ ಪ್ರೇಮಾಕಾರಂತ ನಿರ್ದೇಶನದ ‘ಫಣಿಯಮ್ಮ’ ಚಿತ್ರದ ಪಾತ್ರ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಅವರ ಮತ್ತೊಂದು ಪ್ರಮುಖ ಸಿನಿಮಾ. ವ್ಯಾಪಾರಿ ಚಿತ್ರಗಳ ಬಗ್ಗೆ ಆಸಕ್ತಿ ತೋರದ ಅವರು ಕಲಾತ್ಮಕ ಚಿತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದರು. ‘ವಾತ್ಸಲ್ಯ’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಂದಿದೆ. ‘ಆದಿ ಶಂಕರಾಚಾರ್ಯ’, ‘ಮಧ್ವಾಚಾರ್ಯ’, ‘ನಕ್ಕಳಾ ರಾಜಕುಮಾರಿ’, ‘ಒಂದು ಪ್ರೇಮದ ಕಥೆ’ ಅವರ ಇತರೆ ಕೆಲವು ಸಿನಿಮಾಗಳು.
ನಟನೆಯಿಂದ ವಿಮುಖರಾದ ನಂತರ ಶಾರದಾ ಸಾಕ್ಷ್ಯಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು ಕೆರೆಗಳ ಬಗ್ಗೆ ಅವರು ತಯಾರಿಸಿದ ‘ಕೆರೆ ಹಾಡು’ ವಿಶೇಷ ಮನ್ನಣೆಗೆ ಪಾತ್ರವಾಗಿತ್ತು. ‘ಮೈಸೂರು ವೀಣೆ’ ಕುರಿತ ಸಾಕ್ಷ್ಯಚಿತ್ರವೂ ಸೇರಿದಂತೆ ದೂರದರ್ಶನಕ್ಕಾಗಿ ಅವರು ಕೆಲವು ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದರು. ದಶಕಗಳ ಹಿಂದೆ ತ್ರಿವೆಂಡ್ರಮ್ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವರು ಜ್ಯೂರಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯರಾಜಕಾರಣದಲ್ಲಿ ಹೆಸರು ಮಾಡಿದ್ದ ಎಲ್.ಎಸ್.ವೆಂಕಾಜಿರಾಯರ ಪುತ್ರಿ ಎಲ್.ವಿ.ಶಾರದಾ.
(ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ)
No Comment! Be the first one.