ಮೋಷನ್ ಪೋಸ್ಟರ್ ಮೂಲಕವೇ ಸಿನಿಮಾಸಕ್ತರ ಗಮನ ಸೆಳೆದಿರುವ ಕನ್ನಡದ ಅಸಂಗತ ಚಿತ್ರ ಎಂದು ಕರೆಸಿಕೊಳ್ಳುತ್ತಿರುವ ಮನರೂಪ ಚಿತ್ರತಂಡ ಮತ್ತೊಂದು ರೋಚಕ ಪೋಸ್ಟರ್ಅನ್ನು ಬಿಡುಗಡೆ ಮಾಡಿದೆ. ನಿಗೂಢವಾಗಿರುವ ಕರಡಿ ಗುಹೆಯ ಅನ್ವೇಷಣೆಗೆ ಹೊರಟಿರುವ ಸ್ನೇಹಿತರ ಕತೆ ಹೇಳುವ ಮನರೂಪ ಸಿನಿಮಾ ಈ ಪೊಸ್ಟರ್ ಮೂಲಕ ಇನ್ನಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
ಗುಹೆಯೊಂದರಲ್ಲಿ ಹೆಡ್ಲೈಟ್ ಕಟ್ಟಿಕೊಂಡ ವ್ಯಕ್ತಿಯೊಬ್ಬ ಕೊಡಲಿಯನ್ನು ಎತ್ತಿಕೊಂಡು ಮುಂದೆ ತೆವಳುವಂತೆ ಕಾಣುವ ಪೋಸ್ಟರ್ ಇದಾಗಿದ್ದು, ಕರಡಿ ಗುಹೆಯಲ್ಲಿ ಅದೆಂತಹ ಸವಾಲನ್ನು ಆತ ಎದುರಿಸುತ್ತಿದ್ದಾನೆ ಎಂಬ ಕುತೂಹಲವನ್ನು ಕಟ್ಟಿಕೊಡುವಂತಿದೆ. ಕಾಲೇಜು ದಿನಗಳ ನಂತರ ತಮ್ಮದೇ ಬದುಕಿನಲ್ಲಿ ವ್ಯಸ್ತರಾಗಿ ಬೇರೆ ಬೇರೆ ಕಡೆ ಹಂಚಿಹೋಗಿದ್ದ ಸ್ನೇಹಿತರು ಹಳೆಯ ನೆನಪುಗಳನ್ನು ಮೆಲುಕು ಹಾಕಲು ಮತ್ತೆ ಒಂದೆಡೆ ಕಲೆಯುತ್ತಾರೆ. ಪಶ್ಚಿಮ ಘಟ್ಟದ ದಟ್ಟ ಕಾಡಿಗೆ ಚಾರಣ ಹೋಗುವುದು ಅವರ ಪ್ಲಾನ್. ಹೀಗೆ ಐವರು ಸ್ನೇಹಿತರು ಕರಡಿ ಗುಹೆ ಹುಡುಕಲು ಹೋಗುವಾಗ ಹಳೆಯ ನೆನಪು, ಸ್ನೇಹ, ಪ್ರೀತಿ, ಕೀಟಲೆ, ದ್ವೇಷ ಇತ್ಯಾದಿಗಳ ಜೊತೆಗೇ ಭವಿಷ್ಯದ ಕನಸುಗಳನ್ನೂ ಹಂಚಿಕೊಳ್ಳುತ್ತಾರೆ.
ಅಭೇದ್ಯ ಕಾಡಿನಲ್ಲಿರುವ ಗುಹೆಯಲ್ಲಿ ಕಳೆದು ಹೋಗಿರುವ ವ್ಯಕ್ತಿ ಈತ ಎಂಬಂತೆ ಬಿಂಬಿತವಾಗಿರುವ ಈ ಪೋಸ್ಟರ್ ಸಂರಚನೆ ಕೂಡಾ ಆಕರ್ಷಕವಾಗಿದೆ. ಕೇರಳದ ಸುಫುಶಾ ಸುಧಾಕರನ್ ಎಂಬ ಡಿಸೈನರ್ ಈ ಪೋಸ್ಟರ್ಅನ್ನು ರಚಿಸಿದ್ದಾರೆ. ಮನರೂಪದ ಮುಖ್ಯ ಪಾತ್ರದಾರಿ ದಿಲೀಪ್ ಕುಮಾರ್ ಅವರನ್ನು ಹೊಂದಿರುವ ಪೋಸ್ಟರ್ ಸಿನಿ ಪ್ರಿಯರು ಮನರೂಪ ಚಿತ್ರವನ್ನು ನೋಡಲು ಪ್ರೇರೇಪಿಸುವಂತಿದೆ.
ಕಿರಣ್ ಹೆಗಡೆ ನಿರ್ದೇಶನದ ಚೊಚ್ಚಲ ಚಿತ್ರ ಮನರೂಪ. ೧೯೮೦ ರಿಂದ ೨೦೦೦ ನೇ ಅವಧಿಯಲ್ಲಿ ಹುಟ್ಟಿರುವ ಯುವ ಪೀಳಿಗೆಯ ಕಥೆ ಈ ಚಿತ್ರದಲ್ಲಿದೆ. ಆಧುನಿಕ ಕಾಲದ ಹಿಂಸೆ, ಅವುಗಳ ಹಿನ್ನೆಲೆಯನ್ನು ಕಾಡಿನ ಬ್ಯಾಕ್ಡ್ರಾಪ್ನಲ್ಲಿ ಹೇಳಲಾಗಿದೆ ಎಂದು ನಿರ್ದೇಶಕ ಕಿರಣ್ ಹೆಗಡೆ ಹೇಳಿದರು. ಮನರೂಪ ಚಿತ್ರವನ್ನು ಸಂಪೂರ್ಣವಾಗಿ ಕಾಡಿನಲ್ಲಿ ಚಿತ್ರಿಸಲಾಗಿದೆ. ದಿಲೀಪ್ ಕುಮಾರ್, ಅನೂಷಾ ರಾವ್, ಆರ್ಯನ್, ನಿಶಾ ಬಿ. ಆರ್. ಶಿವ ಪ್ರಸಾದ್, ಅಮೋಘ್ ಸಿದ್ಧಾರ್ಥ್, ಪ್ರಜ್ವಲ್ ಗೌಡ, ಗಜಾ ನೀನಾಸಂ, ರಮಾನಂದ ಐನಕೈ, ಯಶೋದಾ ಹೊಸಕಟ್ಟ, ಪವನ್ ಕಲ್ಮನೆ ಮುಂತಾದವರು ಅಭಿನಯಿಸಿದ್ದಾರೆ. ಗೋವಿಂದ ರಾಜ್ ಛಾಯಾಗ್ರಹಣ, ಸೂರಿ ಮತ್ತು ಲೋಕಿ ಸಂಕಲನ, ಸರ್ವಣ ಅವರ ಸಂಗೀತ, ಹುಲಿವಾನ್ ನಾಗರಾಜ್ ಅವರ ಸೌಂಡ್, ಮಹಾಬಲ ಸೀತಾಳಭಾವಿ ಅವರ ಸಂಭಾಷಣೆ ಚಿತ್ರಕ್ಕಿದೆ. ನವೆಂಬರ್ ತಿಂಗಳಿನಲ್ಲಿ ಥ್ರಿಲ್ಲರ್ ಜಾನರ್ನ ಮನರೂಪ ಚಿತ್ರವನ್ನು ಕಣ್ತುಂಬಿಸಿಕೊಳ್ಳಬಹುದು.
No Comment! Be the first one.