ಯಾವ ಊರಿನವರಾದರೇನು? ಯಾವ ದೇಶದವರಾದರೇನು? ಹೆಣ್ಣುಮಕ್ಕಳು ಅಂದಮೇಲೆ ಗೌರವಿಸಲೇಬೇಕು. ತೀರಾ ಅವರನ್ನು ಶೋಕೇಸ್ ಗೊಂಬೆಗಳಂತೆ ಬಳಸಿಕೊಳ್ಳೋದು ಅಮಾನವೀಯ.
ನೆನ್ನೆ ದಿನ ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಟಿ ಕೂಡಾ ಅದಾಗಿತ್ತು. ಧ್ರುವ ಸರ್ಜಾ ಕೂಡಾ ಈಗ ಇಂಡಿಯಾದ ಟಾಪ್ ಹೀರೋಗಳ ಸಾಲಿಗೆ ಬಂದು ನಿಲ್ಲುವ ಪ್ರಯತ್ನದಲ್ಲಿದ್ದಾರೆ. ಅದು ಬಹುತೇಕ ಯಶಸ್ವಿಯಾಗೋದು ನಿಜ. ಸ್ವಂತ ಸೋದರ ಮಾವ ಅರ್ಜುನ್ ಸರ್ಜಾ ಕತೆ ಕೊಟ್ಟು, ʻಮಾರ್ಟಿನ್ʼಗೆ ಬೆಂಬಲವಾಗಿ ನಿಂತಿದ್ದಾರೆ. ಹಾಗೆ ನೋಡಿದರೆ ಮೂರು ದಶಕಗಳ ಹಿಂದೆಯೇ ಕನ್ನಡದಿಂದ ಹೋಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆದವರು ಅರ್ಜುನ್ ಸರ್ಜಾ. ಉದಯ್ ಮೆಹ್ತಾ ಈ ಬಾರಿ ತಮ್ಮ ಲಿಮಿಟ್ಟು, ಶಕ್ತಿಗಳನ್ನೆಲ್ಲಾ ಮೀರಿ ದೊಡ್ಡ ಮಟ್ಟದಲ್ಲಿ ಹಣ ಹೂಡಿಗೆ ಮಾಡಿ ಸಿನಿಮಾ ರೂಪಿಸಿದ್ದಾರೆ. ಮಾರ್ಟಿನ್ ಸಿನಿಮಾದ ಟೀಸರನ್ನು ನೋಡುತ್ತಿದ್ದರೆ, ಇದೇನು ಹಾಲಿವುಡ್ ಸಿನಿಮಾನಾ ಅನ್ನಿಸುವಂತೆ ಮೂಡಿಬಂದಿದೆ. ಇವೆಲ್ಲಾ ಖುಷಿಯ ವಿಚಾರಗಳೇ.
ಇದರ ಜೊತೆಗೆ ಬೇಸರದ ಸಂಗತಿಯೂ ಇದೆ. ʻಮಾರ್ಟಿನ್ʼ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಡಜನ್‌ಗೆ ನಾಲ್ಕು ಜನ ಕಡಿಮೆ ರಷ್ಯನ್ ಹುಡುಗಿಯರನ್ನು ತಂದು ನಿಲ್ಲಿಸಿದ್ದರು. ಕೆಂಪು ಬಣ್ಣದ ತುಂಡು ತುಂಡು ಬಟ್ಟೆ ಹಾಕಿಕೊಂಡು, ಕೈಲಿ ಗನ್ನು ಹಿಡಿದು ಆ ಹೆಣ್ಣುಮಕ್ಕಳು ಅತ್ತಿತ್ತ ಕದಲದಂತೆ ನಿಂತಿದ್ದವು. ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಆ ಕಾರ್ಯಕ್ರಮದಲ್ಲಿ ಆ ಹುಡುಗಿಯರು ಅಲುಗಾಡದಂತೆ ನಿಂತಿದ್ದನ್ನು ನೋಡಿದರೆ ಆಕರ್ಷಣೆಯ ಬದಲಿಗೆ ಅನುಕಂಪ ಹುಟ್ಟುವಂತಿತ್ತು.
ಈ ಲೇಡಿ ಕಮಾಂಡೋಗಳನ್ನು ತಂದು ನಿಲ್ಲಿಸುವ ಕಾನ್ಸೆಪ್ಟು ನಿರ್ದೇಶಕ ಎ.ಪಿ. ಅರ್ಜುನ್ ಅವರದ್ದಂತೆ. ಧ್ರುವಾ ಮತ್ತು ಅವರ ಮಾವ ಅರ್ಜುನ್ ಸರ್ಜಾ ಹೇಳಿ ಕೇಳಿ ಎದೆ ಬಗೆದು ತೋರಿದ ಹನುಮಂತನ ಪರಮ ಭಕ್ತರು. `ದೇಶಭಕ್ತಿ’ಯ ಸಿನಿಮಾಗಳಿಗೇ ಹೆಸರಾದವರು. ಅವರ ಹಿಂದೆ ಎಂಟು ಜನ ಹುಡುಗಿಯರು ಎದೆ ಕಾಣುವ ಬಟ್ಟೆ ಹಾಕಿಕೊಂಡು ನಿಂತರೆ ಇಮೇಜು ಏನಾಗಬಹುದು ಅಂತಾ ಯೋಚಿಸಬೇಕಿತ್ತು. ಯಾವ ಊರಿನವರಾದರೇನು? ಯಾವ ದೇಶದವರಾದರೇನು? ಹೆಣ್ಣುಮಕ್ಕಳು ಅಂದಮೇಲೆ ಗೌರವಿಸಲೇಬೇಕು. ತೀರಾ ಅವರನ್ನು ಶೋಕೇಸ್ ಗೊಂಬೆಗಳಂತೆ ಬಳಸಿಕೊಳ್ಳೋದು ಅಮಾನವೀಯ. ಅಲ್ಲವಾ?
No Comment! Be the first one.