ಮೂಲತಃ ಮೈಸೂರಿನವರಾದರೂ, ಬದುಕು ಕಂಡುಕೊಂಡಿರುವುದು ಬೆಂಗಳೂರಿನಲ್ಲಿ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಓದಿ, ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ ಮತ್ತೆ ತಮ್ಮ ಮೂಲ ಕ್ಷೇತ್ರವಾದ ಕಲಾಪ್ರಪಂಚಕ್ಕೆ ಕಾಲಿರಿಸಿದ್ದಾರೆ. ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಕೊರತೆ ಯಾವತ್ತಿಗೂ ಇದ್ದೇ ಇದೆ. ಈ ಕೊರತೆಯನ್ನು ಮೀನ ನೀಗಿಸುವುದರಲ್ಲಿ ಯಾವ ಡೌಟೂ ಇಲ್ಲ!
ಸರಿ ಸುಮಾರು ಮೂರು ದಶಕಗಳ ಹಿಂದೆ ಪ್ರಸಾರಗೊಂಡು ಇವತ್ತಿಗೂ ಜನರ ಮನಸ್ಸಿನಲ್ಲುಳಿದಿರುವ ಕೆಲವು ಧಾರಾವಾಹಿಗಳಿವೆ. ರೀ ಮರೀಬೇಡಿ ಮತ್ತು ಮೆಕಾನಿಕ್ ಮುದ್ದ ಧಾರಾವಾಹಿಗಳು ಆ ಪಟ್ಟಿಯಲ್ಲಿವೆ. ಮಾಸ್ಟರ್ ಮಂಜುನಾಥ್ ನಟನೆಯ ಮೆಕಾನಿಕ್ ಮುದ್ದ ಸೀರಿಯಲ್ಲನ್ನು ಜನ ಯಾವತ್ತಿಗೂ ಮರೆಯುವುದಿಲ್ಲ. ಈ ಎರಡು ಧಾರಾವಾಹಿಗಳಲ್ಲಿ ನಟಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದವರು ಮೀನಾ ಸೂರ್ಯನಾರಾಯಣ್.
ಮೂಲತಃ ಮೈಸೂರಿನವರಾದ ಮೀನಾ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟವರು. ಆ ನಂತರ ಕಾರ್ಪೊರೇಟ್ ಜಗತ್ತಿನತ್ತ ಮುಖ ಮಾಡಿದರು. ಐಟಿ ಕಂಪೆನಿಗಳಲ್ಲಿ ಫೆಸಿಲಿಟಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದರು. ಈ ನಡುವೆ ಅನಾರೋಗ್ಯ ಬಾಧಿಸಿ, ಮರುಜೀವ ಪಡೆದರು. ಸತತ ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಕಾರ್ಪೋರೇಟ್ ಯುಗದಲ್ಲಿ ಕಳೆದು ಹೋಗಿದ್ದ ಮೀನಾರಿಗೆ ಆ ಜಗತ್ತು ಏಕತಾನತೆಯನ್ನು ಮೂಡಿಸಿತ್ತು. ಬಹಳ ಹಿಂದಿನ ಬಣ್ಣದ ನಂಟು ಮತ್ತೆ ಸೆಳೆಯುತ್ತಿತ್ತು. ಚಿತ್ರ ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರಂತ ಯುವ ನಿರ್ದೇಶಕರು ಮತ್ತೆ ಮೀನಾ ಕ್ಯಾಮೆರಾ ಮುಂದೆ ನಿಲ್ಲುವಂತೆ ಮಾಡಿದ್ದರು. ಕೆ.ಜಿ.ಎಫ್ ಚಿತ್ರದಲ್ಲಿ ಕಥೆಹೇಳುವ ಪಾತ್ರ ಮಾಡಿದ್ದ ಲಕ್ಷ್ಮೀಪತಿ ಮೀನಾರಿಗೆ ನಟನೆಯ ಪಾಠ ಮಾಡಿದರು. ರಾಜಶೇಖರ್ ಶಾಸ್ರ್ತಿ ಮಾರ್ಗದರ್ಶಕರಾದರು. ಈ ಎಲ್ಲ ಕಾರಣಗಳಿಂದ 2016ರ ಕೊನೆಯ ವೇಳೆಗೆ ಮೀನಾ ಸೂರ್ಯನಾರಾಯಣ್ ಕಿರುತೆರೆ ಮತ್ತು ಹಿರಿತೆರೆಗೆ ಮರುಪ್ರವೇಶಿಸುವಂತಾಯಿತು.
ಕಿನ್ನರಿ, ಅವಳು, ಶಾಂತಂ ಪಾಪಂ, ಕುಲವಧು, ಪತ್ತೇದಾರಿ ಪ್ರತಿಭಾ, ಮಾಂಗಲ್ಯಂ ತಂತು ನಾನೇನ, ಏಟು ಎದಿರೇಟು, ಯಾರೇ ನೀ ಮೋಹಿನಿ, ಅಗ್ನಿಸಾಕ್ಷಿ ಹೀಗೆ ಒಂದಾದಮೇಲೊಂದು ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳು ಸೇರಿದಂತೆ ಜನ ಗುರುತಿಸುವ ರೋಲುಗಳೂ ದೊರೆತವು. ಅದರ ಜೊತೆಗೆ ಚಿತ್ರರಂಗದಲ್ಲೂ ಕೆಲವಾರು ಛಾನ್ಸುಗಳು ಕೈಗೆಟುಕಲಾರಂಭಿಸಿದವು. ಈಗಾಗಲೇ ಬಿಡುಗಡೆಯಾಗಿರುವ ಗಡಿಯಾರ, ವಜ್ರಮುಖಿ, ಜಗತ್ ಕಿಲಾಡಿ, ಗೌಡ್ರು ಸೈಕಲ್ ಮತ್ತು ಸದ್ಯ ನಿರ್ಮಾಣ ಹಂತದಲ್ಲಿರುವ ಕಟ್ಟ ಕಡೆಯ ನಿಮಿಷ, ಕೃಷ್ಣನ್ ಕಿಸ್ ಕಹಾನಿ, ಜ಼ೀ(ಹೀ)ರೋ, ಬಡವ ರಾಸ್ಕಲ್, ಕ್ಯಾಡ್ ಬರೀಸ್ ಮತ್ತು ಐದು ಭಾಷೆಗಳಲ್ಲಿ ತಯಾರತಾಗುತ್ತಿರುವ ಜಿಷ್ಣು ಸಿನಿಮಾದಲ್ಲಿ ಮೀನಾ ನಟಿಸಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಮೀನಾ ಅವರಿಗೆ ದೊರೆತಿರುವುದು ಮದರ್ ಕ್ಯಾರೆಕ್ಟರುಗಳೇ ದೊರೆತಿವೆ. ಜಿಷ್ಣು ಸಿನಿಮಾದಲ್ಲಂತೂ ಯಂಗ್, ಮಿಡಲ್ ಅಂಡ್ ಓಲ್ಡ್ ಏಜ್ ಮದರ್ ಪಾತ್ರದಲ್ಲಿ ಮೀನಾ ನಟಿಸಿದ್ದಾರಂತೆ. ರಾಜು ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಕೂಡಾ ಬಹುಮುಖ್ಯ ಪಾತ್ರ ಇವರದ್ದಂತೆ.
ಒಟ್ಟಾರೆ ಅಮ್ಮನ ಪಾತ್ರಗಳು ಮೀನಾರನ್ನು ಹುಡುಕಿಕೊಂಡು ಬರುತ್ತಿವೆ. ಬಂದ ಅವಕಾಶಗಳನ್ನು ಕಣ್ಣಿಗೊತ್ತಿಕೊಂಡು, ತನ್ಮಯತೆಯಿಂದ ನಟಿಸುವುದನ್ನಷ್ಟೇ ಮೀನಾ ಪಾಲಿಸುತ್ತಿದ್ದಾರೆ. ʻʻಇತ್ತೀಚೆಗೆ ಒಳ್ಳೊಳ್ಳೆಯ ಕ್ಯಾರೆಕ್ಟರುಗಳು ಸಿಗುತ್ತಿವೆ. ನಟಿಸಲು ಶುರು ಮಾಡಿದ ಮೇಲೆ ಖಾಸಗಿ ಬದುಕಿನ ನೋವುಗಳೆಲ್ಲಾ ಮರೆಯಾಗುತ್ತಿವೆ. ಇನ್ನು ಹಲವು ಬಗೆಯ, ಉತ್ತಮ ಪಾತ್ರಗಳಲ್ಲಿ ನಟಿಸಬೇಕೆನ್ನುವ ಬಯಕೆ ಇದೆ. ನನ್ನ ಆ ಕನಸು ಈಡೇರುತ್ತದೆ ಎನ್ನುವ ನಂಬಿಕೆ ಕೂಡಾ ಇದೆʼ ಎನ್ನುವ ಮೀನಾ ನಿಜಕ್ಕೂ ಛಲವಿರುವ ಹೆಣ್ಣುಮಗಳು.
ಮೂಲತಃ ಮೈಸೂರಿನವರಾದರೂ, ಬದುಕು ಕಂಡುಕೊಂಡಿರುವುದು ಬೆಂಗಳೂರಿನಲ್ಲಿ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಓದಿ, ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ ಮತ್ತೆ ತಮ್ಮ ಮೂಲ ಕ್ಷೇತ್ರವಾದ ಕಲಾಪ್ರಪಂಚಕ್ಕೆ ಕಾಲಿರಿಸಿದ್ದಾರೆ. ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಕೊರತೆ ಯಾವತ್ತಿಗೂ ಇದ್ದೇ ಇದೆ. ಈ ಕೊರತೆಯನ್ನು ಮೀನ ನೀಗಿಸುವುದರಲ್ಲಿ ಯಾವ ಡೌಟೂ ಇಲ್ಲ!
Leave a Reply
You must be logged in to post a comment.