‘ಮೇಲೊಬ್ಬ ಮಾಯಾವಿ?’ ಅನ್ನುವ ಕುತೂಹಲ ಮೂಡಿಸುವ ಟೈಟಲ್ ಇಟ್ಟುಕೊಂಡು ಚಿತ್ರೀಕರಣಕ್ಕೆ ತೊಡಗಿದ್ದ ಚಿತ್ರತಂಡ ಇದೀಗ ನಲ್ವತ್ತೆರೆಡು ದಿನಗಳ ಚಿತ್ರೀಕರಣ ಮುಗಿಸಿ, ಪೋಸ್ಟ್ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಒಂದೂವರೆ ದಶಕಗಳಿಂದ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಕರಾವಳಿ ಮೂಲದ ರಂಗಪ್ರತಿಭೆ ನವೀನ್ಕೃಷ್ಣ.ಬಿ ಚಿತ್ರದ ನಿರ್ದೇಶಕರು. ಕರಾವಳಿ ಮಂದಿಯ ನಿದ್ದೆಗೆಡಿಸಿದ್ದ ಮಾಫಿಯಾ ಒಂದರ ಎಳೆ ಹೊಂದಿರುವ ‘ಮೆಲೊಬ್ಬ ಮಾಯಾವಿ?’ ಚಿತ್ರ ರೊಮ್ಯಾಂಟಿಂಕ್ ಸಸ್ಪೆನ್ಸ್ ಜಾನರ್ಗೆ ಸೇರಿದ ಚಿತ್ರ ಎಂಬುದು ಚಿತ್ರದ ಪೋಸ್ಟರ್ ನೋಡಿದರೆ ಭಾಸವಾಗುತ್ತದೆ. ಚಿತ್ರದ ನಿರ್ದೇಶಕರ ಮಾತಿನಲ್ಲಿ ಹೇಳುವುದಾದರೆ.. ‘ಚಿತ್ರದಲ್ಲಿ ಬರುವ ಸ್ವರ್ಗ ಅನ್ನುವ ಊರಿನಲ್ಲಿ ಎಲ್ಲವೂ ಇದೆ ಆದರೆ ಏನೂ ಇಲ್ಲ ಅನ್ನುವ ಪರಿಸ್ಥಿತಿ. ಕರೆಂಟ್ ಕಂಬಗಳಿವೆ ಆದರೆ ವಿದ್ಯುತ್ ಪೂರೈಕೆಯಿಲ್ಲ.. ಓವರ್ಹೆಡ್ ಟ್ಯಾಂಕ್ಗಳಿವೆ ಆದರೆ ಅದರಲ್ಲಿ ನೀರೇ ಇಲ್ಲ.. ಅಲ್ಲಿನ ಬೆಳೆಯನ್ನು ಕೊಳ್ಳುವವರಿಲ್ಲ.. ಹೀಗೆ ಒಂದಷ್ಟು ಮಂದಿಯ ಸ್ವಾರ್ಥಕ್ಕಾಗಿ ಇಡೀ ಸ್ವರ್ಗವನ್ನೇ ನರಕಸದೃಶವಾಗಿಸ ಹೊರಟ ರಾಜಕೀಯ ಅಟ್ಟಹಾಸವನ್ನು ಚಿತ್ರ ಹೇಳುತ್ತಲೇ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯವ ಪ್ರಯತ್ನ ಮಾಡಲಾಗಿದೆ. ಪೃಕೃತಿ ಮುನಿಸಿಕೊಂಡರೆ ಏನಾಗಬಹುದು ಎಂಬುದು ನಮ್ಮ ಕಣ್ಣೆದುರೇ ಇದೆ. ಜನ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮನೆ-ಮಠ ಕಳೆದಕೊಂಡಿದ್ದಾರೆ. ಈ ರೀತಿಯ ಪ್ರಕೃತಿಯ ಮೇಲಿನ ದೌರ್ಜನ್ಯದ ಬಗ್ಗೆಯೂ ಚಿತ್ರ ಧ್ವನಿ ಎತ್ತುತ್ತದೆ’.
ಇನ್ನು, ಈ ಚಿತ್ರಕ್ಕಾಗಿ ಸತತ ಒಂದೂವರೆ ವರ್ಷಗಳಿಂದ ತನ್ನ ಪಾತ್ರಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ಸಂಚಾರಿ ವಿಜಯ್ ಅವರು ಚಿತ್ರದಲ್ಲಿ ವಿಶೇಷ ಗೆಟ್ಅಪ್ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರತಂಡ ಅವರ ಹೊಸ ನೋಟವನ್ನು ಇನ್ನೂ ಗೌಪ್ಯವಾಗಿರಿಸಿದೆ. ಚಿತ್ರಕ್ಕೆ ಚಿತ್ರಕಥೆ-ಸಾಹಿತ್ಯ-ಸಂಭಾಷಣೆ ಒದಗಿಸಿರುವ ಚಕ್ರವರ್ತಿ ಚಂದ್ರಚೂಡ್ ಅವರದ್ದು ಸಂಚಾರಿ ವಿಜಯ್ ಅವರ ಪಾತ್ರಕ್ಕೆ ತದ್ವಿರುದ್ದವಾದ ಮುಖ್ಯ ಖಳನಾಯಕನ ಪಾತ್ರ. ಚಿತ್ರದ ನಾಯಕಿಯಾಗಿ ‘ಮಯಾವಿ’ಯ ಮೂಲಕ ಎಂಟ್ರಿಕೊಡುತ್ತಿರುವ ಅನನ್ಯಶೆಟ್ಟಿ ಕರಾವಳಿಯ ರಂಗಪ್ರತಿಭೆ. ಇನ್ನು, ಚಿತ್ರದಲ್ಲಿ ಸಾಕಷ್ಟು ವರ್ಷ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ನಟರ ದಂಡೇ ಇದೆ. ಕೃಷ್ಣಮೂರ್ತಿ ಕವತ್ತಾರ್, ಎಮ್.ಕೆ.ಮಠ, ಬೆನಕ ನಂಜಪ್ಪ, ಕುಮಾರ್ ನವೀನ್, ಪವಿತ್ರಾ ಜಯರಾಮ್, ಮಾಸ್ಟರ್ ಲಕ್ಷ್ಮೀಅರ್ಪಣ್, ಎನ್.ಟಿ.ಬೋಳಾರ್, ವಿಟ್ಲ ಮಂಗೇಶ್ಭಟ್ ಮತ್ತು ಮುಖೇಶ್.. ಇವರೆಲ್ಲಾ ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಕಥೆ ನಡೆಯುವ ಭಾಗದಲ್ಲಿನ ಪ್ರತಿಭೆಗಳಿಗೇ ಅವಕಾಶ ಕಲ್ಪಿಸಿರುವ ನಿರ್ದೇಶಕರು, ಚಿತ್ರದ ಮೂಲಕ ಸುಮಾರು ಇಪ್ಪತೈದು ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದಾರೆ. ಒಂದು ಅಪರೂಪದ ಕಥೆ ಹೇಳಲು ಹೊರಟಿರುವ ಕ್ಲೂ ಕೊಟ್ಟಿರುವ ಚಿತ್ರವನ್ನು ಶ್ರೀಕಟೀಲ್ ಸಿನಮಾಸ್ ಬ್ಯಾನರ್ ಅಡಿಯಲ್ಲಿ ಪುತ್ತೂರು ಭರತ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪುತ್ತೂರು ಭರತ್ ಅವರಿಗೆ ಸಹನಿರ್ಮಾಪಕರಾಗಿ ತನ್ವಿ ಅಮಿನ್ ಕೋಲ್ಯ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ದಿವಂಗತ ಎಲ್.ಎನ್.ಶಾಸ್ರೀಯವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಶಾಸ್ರೀಯವರ ಕೊನೆಯ ಚಿತ್ರವಾದ ‘ಮೇಲೊಬ್ಬ ಮಾಯಾವಿ?’ ಹಾಡನ್ನು ಕೇಳಿಸಿಕೊಂಡ ಕನ್ನಡ ಸಂಗೀತ ದಿಗ್ಗಜರು ಅವರ ಪ್ರತಿಭೆಗೆ ತಲೆಬಾಗಿದ್ದಾರೆ. ತಮ್ಮ ಒಡನಾಡಿಯ ಕೊನೆಯ ಚಿತ್ರಕ್ಕಾಗಿ ಸುಮಾ ಶಾಸ್ರೀಯವರು ಸಂಗೀತ ನಿರ್ದೇಶಕ ಹರಿಕೃಷ್ಣ ಅವರೊಡಗೂಡಿ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಲಿದ್ದಾರೆ. ಚಿತ್ರದ ಛಾಯಾಗ್ರಹಣ ‘ಉಳಿದವರು ಕಂಡಂತೆ’ ಚಿತ್ರದ ಛಾಯಾಗ್ರಹಣ ತಂಡದಲ್ಲಿ ಒಬ್ಬರಾಗಿ ದುಡಿದಿದ್ದ ದೀಪಿತ್ ಬಿಜೈ ರತ್ನಾಕರ್ ಅವರದ್ದಾದರೆ, ಸಂಕಲನ ಗಿರೀಶ್ ಅವರದ್ದು. ಸುಳ್ಯದ ಬಳಿ ಇರುವ ಮಾಡಾವು ಅನ್ನುವ ಹಳ್ಳಿಯಲ್ಲಿ ಇಡೀ ಚಿತ್ರ ಚಿತ್ರೀಕರಣಗೊಂಡಿದ್ದು ಕರಾವಳಿಯ ಬದುಕಿನ ಸಂಕಷ್ಟಗಳನ್ನು ಮನೋರಂಜನೆಯ ಮೂಲಕ ಹೇಳುವ ಪ್ರಯತ್ನವನ್ನು ಚಿತ್ರ ಮಾಡಲಿದೆ. ಇನ್ನು, ಸುಳ್ಯದ ಸಮೀಪದ ಅಡ್ಕಾರ್ನ ಬಳಿ ಇರುವ ಸುಮಾರು ಇಪ್ಪತ್ತು ಅಡಿ ಆಳವಿರುವ ನದಿ ನೀರಿನಲ್ಲಿ ಸಾಕಷ್ಟು ಅಪಾಯವಿದ್ದರೂ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ವರ್ಷದ ಕೊನೆಯಲ್ಲಿ ರಿಲೀಸ್ಗೆ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ ಮುಂದಿನ ತಿಂಗಳ ಕೊನೆಯ ವಾರದಲ್ಲಿ ಮೂರು ಹಾಡುಗಳು ಮತ್ತು ಟ್ರೈಲರ್ ಅನ್ನು ಬಿಡುಗಡೆಮಾಡುವುದರ ಮೂಲಕ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ.
#
No Comment! Be the first one.