ಟಿವಿ 9 ವಾಹಿನಿಯಲ್ಲಿ ಸ್ಫುಟವಾದ ಕನ್ನಡದ ಮೂಲಕವೇ ಮನೆ ಮಾತಾದವರು ಶೀತಲ್ ಶೆಟ್ಟಿ. ನಿರೂಪಕಿಯಾಗಿ ಖ್ಯಾತಿ ಉತ್ತುಂಗದಲ್ಲಿರುವಾಗಲೇ ಕೆಲಸ ಬಿಟ್ಟು ನಟನೆಯತ್ತ ಹೊರಳಿಕೊಂಡಿದ್ದ ಅವರೀಗ ಪೂರ್ಣಪ್ರಮಾಣದ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ. ರಾಕೇಶ್ ನಿರ್ದೇಶನದ ಪತಿಬೇಕು ಡಾಟ್ ಕಾಮ್ ಚಿತ್ರದಲ್ಲಿ ಅವರೇ ನಾಯಕಿ ಕಮ್ ನಾಯಕ. ಆದರೆ ತಾನು ಈ ಚಿತ್ರದ ಮೂಲಕ ನಾಯಕಿಯೂ ಆಗಿಲ್ಲ, ಅಂಥಾ ಉದ್ದೇಶವಿಟ್ಟುಕೊಂಡೂ ತಾನು ಬಂದಿಲ್ಲ ಅನ್ನುವ ಶೀತಲ್ ಶೆಟ್ಟಿಯವರ ದೃಷ್ಟಿಯಲ್ಲಿ ಈ ಚಿತ್ರದ ಭಾಗ್ಯ ಎಂಬ ಕ್ಯಾರೆಕ್ಟರೇ ನಿಜವಾದ ನಾಯಕಿ. ಆ ಪಾತ್ರಕ್ಕೆ ಶಕ್ತಿ ಮೀರಿ ಜೀವ ತುಂಬಿದ ಸಮಾಧಾನ, ಒಂದೊಳ್ಳೆ ಕಥಾ ಹಂದರ ಹೊಂದಿರೋ ಚಿತ್ರದಲ್ಲಿ ನಟಿಸಿದ ತೃಪ್ತಿ ಮತ್ತು ಆ ಚಿತ್ರ ದಿನದೊಪ್ಪತ್ತಿನಲ್ಲಿ ಬಿಡುಗಡೆಯಾಯಾಗುತ್ತಿರೋ ಸಂಭ್ರಮ ಶೀತಲ್ ಶೆಟ್ಟಿಯವರದ್ದು!
ಟಿವಿ, ಸಿನಿಮಾ ಜಗತ್ತನ್ನು ದೂರದಲ್ಲೆಲ್ಲೋ ಮಿರುಗುವ ಮಾಯೆಯಂತೆ ಬೆರಗುಗಣ್ಣಿನಿಂದ ನೋಡೋ ಕೆಳಮಧ್ಯಮವರ್ಗದ ಜನರಿದ್ದಾರಲ್ಲಾ? ಆ ಜಗತ್ತಿನಿಂದಲೇ ಬದುಕಿನ ಅಲೆ ನೂಕಿದತ್ತ ಸಾಗಿದಂತೆ ಟಿವಿ ಲೋಕಕ್ಕೆ ನಡೆದು ಬಂದಿದ್ದ ಸಾಮಾನ್ಯ ಹುಡುಗಿ ಶೀತಲ್ ಶೆಟ್ಟಿ. ಹುಟ್ಟಿ ಬೆಳೆದಿದ್ದೆಲ್ಲ ಶಿವಮೊಗ್ಗ ಸೀಮೆಯ ಅಪ್ಪಟ ಮಲೆನಾಡಿನಲ್ಲಿ. ಅಪ್ಪ ಶ್ರೀಧರ್ ಶೆಟ್ಟಿ ಎಲ್ಐಸಿಯಲ್ಲಿ ಅಧಿಕಾರಿಯಾಗಿದ್ದವರು. ಆದರೆ ಬೆನ್ನ ಹಿಂದೆ ಹುಟ್ಟಿದ ತಮ್ಮನ ಜೊತೆಗೆ ಅಮ್ಮ ಶಾಂತಾ ಶೆಟ್ಟಿಯವರೇ ಶೀತಲ್ ಪಾಲಿಗೆ ಪ್ರಪಂಚ.
ಶಿವಮೊಗ್ಗದಲ್ಲಿ ಬಿಎಸ್ಸಿ ಬಯೋ ಟೆಕ್ನಿಕ್ನಲ್ಲಿ ಪದವಿ ಪಡೆದಿದ್ದ ಶೀತಲ್ ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದವರು. ಆ ನಂತರದಲ್ಲಿ ಭವಿಷ್ಯದ ಬಗ್ಗೆ ಕನಸು ಕಾಣಲೂ ನಿತ್ರಾಣವಾಗುವಂಥಾ ಸ್ಥಿತಿ. ಆದರೆ ಚುರುಕು ಸ್ವಭಾವದ ಶೀತಲ್ಗೆ ಒಂದು ಕೆಲಸ ಸಿಕ್ಕಿ, ಸಂಬಳ ಅಂತ ಬಂದರೆ ಅದರಲ್ಲಿ ಅಮ್ಮ ಮತ್ತು ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸೊಂದರ ಹೊರತಾಗಿ ಮಹತ್ತರವಾದ ಯಾವ ಕನಸೂ ಅವದ್ದಾಗಿರಲಿಲ್ಲ. ಆದರೆ ಮನೆಯತ್ತಲಿನ ಸ್ಥಿತಿಗತಿಗಳು ಡಿಗ್ರಿ ಪೂರೈಸಲು ಅವಕಾಶ ಕೊಟ್ಟಿದ್ದೇ ಹೆಚ್ಚು. ಅಂಥಾದ್ದರ ನಡುವೆಯೂ ಪದವಿ ಪೂರೈಸಿಕೊಂಡ ತಕ್ಷಣವೇ ಟಿವಿ೯ ನಲ್ಲಿ ನಿರೂಪಕಿಯರಿಗೆ ಅವಕಾಶವಿದ್ದದ್ದನ್ನು ಕಂಡ ಅಲ್ಲಿಗೂ ಅಪ್ರಜ್ಞಾಪೂರ್ವಕವಾಗಿಯೇ ಹೊರಟು ನಿಂತಿದ್ದರು. ಆ ಕ್ಷಣದಲ್ಲಿಯೂ ಈ ಹುಡುಗಿಗೆ ತಾನು ವಾಹಿನಿಯಲ್ಲಿ ನಿರೂಪಕಿಯಾಗಿ ಪ್ರಸಿದ್ಧಿ ಪಡೆಯಬೇಕು ಖ್ಯಾತಳಾಗಬೇಕೆಂಬ ಕನಸೇನೂ ಇರಲಿಲ್ಲ. ಮುಖ್ಯವಾಗಿದ್ದದ್ದು ಬದುಕುವ ದರ್ದಷ್ಟೆ!
ಹಾಗೆ ಅಚಾನಕ್ಕಾಗಿ ಆ ಕಾಲಕ್ಕೆ ನಂಬರ್ ಒನ್ ಆಗಿದ್ದ ವಾಹಿನಿಗೆ ನಿರೂಪಕಿಯಾಗಿ ಕಾಲಿಟ್ಟ ಶೀತಲ್ ಶೆಟ್ಟಿ ನೆಲೆ ನಿಂತರು. ತಮ್ಮ ಸ್ಪಷ್ಟವಾದ ಕನ್ನಡ ಉಚ್ಛಾರ ಮತ್ತು ನಿರೂಪಣೆಯ ಶೈಲಿಯಿಂದ ಮನೆ ಮಾತಾದರು. ನೋಡ ನೋಡುತ್ತಲೇ ಬೆಳೆದು ನಿಂತ ಶೀತಲ್ಗೆ ಕೈತುಂಬಾ ಸಂಬಳ, ಅಪಾದಮಸ್ತಕ ಕೀರ್ತಿಯೂ ಸಿಕ್ಕಿತ್ತು. ಆದರೆ ವರ್ಷಾಂತರಗಳ ಕಾಲ ದಿನಬೆಳಿಗ್ಗೆಯಾದರೆ ಮೇಕಪ್ ಹಚ್ಚಿಕೊಂಡು, ಒಳ್ಳೊಳ್ಳೆ ಸೀರೆಯುಟ್ಟು ಅದೇ ಕದನ, ಕಲಹ, ಕೊಲೆ ದರೋಡೆಗಳ ನ್ಯೂಸು ಓದೋದು.. ಅದೇ ಕೆಲಸ ಮಾಡಿದ್ದರಿಂದ ಒಂದು ಥರ ಏಕತಾನತೆ ಕಾಡಲಾರಂಭಿಸಿತ್ತಲ್ಲಾ? ಅದೇ ಹೊತ್ತಿನಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಉಳಿದವರು ಕಂಡಂತೆ ಚಿತ್ರದಲ್ಲಿ ನಟಿಸುವಂತೆ ಆಫರೊಂದು ಬಂದಿತ್ತು. ತಾನು ನಟಿಯಾಗಬೇಕೆಂಬ ಕನಸಿಲ್ಲದಿದ್ದರೂ ಏನೋ ಬದಲಾವಣೆ ಬೇಕಿದ್ದ ಕಾರಣಕ್ಕೆ ನಟಿಸಲು ಮನಸು ಮಾಡಿದ ಶೀತಲ್ಗೆ ವಾಹಿನಿ ಮುಖ್ಯಸ್ಥರಿಂದ ಒಪ್ಪಿಗೆ ಮಾತ್ರ ಸಿಕ್ಕಿರಲಿಲ್ಲ. ಇಪ್ಪತ್ತು ದಿನಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬರುವುದಾಗಿ ಹೇಳಿದರೂ ವಾಹಿನಿಯ ನೀತಿ ನಿಯಮಾವಳಿಗಳ ಪ್ರಕಾರ ಅದು ಸಾಧ್ಯವಿಲ್ಲವೆಂಬ ಮಾತೇ ಕೇಳಿ ಬಂದಿತ್ತು. ಆದರೆ ಬೇರೊಬ್ಬರು ನಿರೂಪಕರಿಗೆ ಇಂಥಾದ್ದೊಂದು ಅವಕಾಶ ಕಲ್ಪಿಸಿದ್ದನ್ನು ಪ್ರಸ್ತಾಪಿಸಿ ತನಗೇಕೆ ಆ ಅವಕಾಶವಿಲ್ಲ ಅಂತ ಶೀತಲ್ ಕೇಳಿದರೂ ಪ್ರಯೋಜನವಾಗಿರಲಿಲ್ಲ.
ಆ ಕ್ಷಣದಲ್ಲಿ ಶೀತಲ್ ತೆಗೆದುಕೊಂಡಿದ್ದು ಗಟ್ಟಿಯಾದೊಂದು ನಿರ್ಧಾರವನ್ನು. ಯಾವಾಗ ತಾನು ಬಯಸಿದ ಸಣ್ಣ ಬದಲಾವಣೆಯೊಂದಕ್ಕೆ ಅವಕಾಶವಿಲ್ಲ ಅನ್ನೋದು ಖಾತರಿಯಾಯಿತೋ ಆ ಘಳಿಗೆಯಲ್ಲಿಯೇ ಕೆಲಸ ಬಿಟ್ಟು ಆ ತಿಂಗಳ ಸಂಬಳವನ್ನೂ ಪಡೆಯದೆ ಹೊರ ಬಂದ ಶೀತಲ್ ಶೆಟ್ಟಿ ನಿರ್ಧಾರ ಕಂಡು ಆ ಕಾಲಕ್ಕೆ ಮಾಧ್ಯಮ ಲೋಕದಲ್ಲಿ ಸಂಚಲನವೇ ಸೃಷ್ಟಿಯಾಗಿದ್ದದ್ದು ಸುಳ್ಳಲ್ಲ. ಅತ್ತ ಆ ತಿಂಗಳ ಸಂಬಳವಿರಲಿಲ್ಲ. ಇತ್ತ ಉಳಿದವರು ಕಂಡಂತೆ ಚಿತ್ರದಲ್ಲಿ ಅವಕಾಶವಿದೆ ಎಂಬುದರ ಹೊರತಾಗಿ ಬೇರ್ಯಾವ ಯೋಚನೆಯನ್ನೂ ಮಾಡಿರಲಿಲ್ಲ. ಕಡೆಗೂ ಶೀತಲ್ ಉದ್ದೇಶಗಳೇ ಇಲ್ಲದೆ ಉಳಿದವರು ಕಂಡಂತೆ ಚಿತ್ರದಲ್ಲಿ ನಟಿಸಿದ್ದರು. ಆ ಪಾತ್ರ ಪ್ರೇಕ್ಷಕರನ್ನೂ ಸೆಳೆದುಕೊಂಡಿತ್ತು. ಆ ನಂತರದಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದ ಶೀತಲ್ ನಟಿಯಾಗಿಯೂ ಗಮನ ಸೆಳೆದಿದ್ದರು. ಇಷ್ಟಾದರೂ ತಾನು ಹೀರೋಯಿನ್ ಆಗಬೇಕು ಅನ್ನೋದಕ್ಕಿಂತಾ ಭಿನ್ನವಾದೊಂದು ಪಾತ್ರದಲ್ಲಿ ನಟಿಸಬೇಕೆಂಬ ಕನಸು ಸದಾ ಜಾರಿಯಲ್ಲಿತ್ತು. ಅದು ಸಾಕಾರಗೊಂಡಿದ್ದು ನಿರ್ದೇಶಕ ರಾಕೇಶ್ ಹೇಳಿದ ಕಥೆಯಿಂದ!
ಪತಿಬೇಕು ಡಾಟ್ ಕಾಮ್ ಚಿತ್ರದ ಆರಂಭಿಕ ಮಾತುಕತೆ ನಡೆದಾಗ ಶೀತಲ್ ಅವರಲ್ಲಿ ಮಾಮೂಲಿಯಂತೆ ಯಾವ ನಿರೀಕ್ಷೆಗಳೂ ಇರಲಿಲ್ಲ. ಆದರೆ ರಾಕೇಶ್ ಇಡೀ ಕಥೆ ಹೇಳಿದಾಕ್ಷಣ ಅವರನ್ನು ಆವರಿಸಿಕೊಂಡಿದ್ದದ್ದು ಕನ್ನಡ ಚಿತ್ರರಂಗದಲ್ಲಿ ಹೀಗೆ ಯೋಚಿಸಿ ಕಥೆ ಹೊಸೆಯುವವರೂ ಇದ್ದಾರಲ್ಲಾ ಎಂಬಂಥಾ ಅಚ್ಚರಿ. ಯಾಕೆಂದರೆ ಅದು ಹೆಣ್ತನದ ಎಲ್ಲ ಭಾವಗಳನ್ನೂ ಆವಾಹಿಸಿಕೊಂಡಂಥಾ ಕಥೆ. ಶೀತಲ್ ಯಾವ ಥರದ ಚಿತ್ರವೊಂದನ್ನು ಬಯಸುತ್ತಿದ್ದರೋ ಅಂಥಾದ್ದೇ ಕಥೆಯನ್ನು ರಾಕೇಶ್ ಹೇಳಿದಾಗ ಒಪ್ಪಿಕೊಳ್ಳದಿರಲು ಹೇಗೆ ಸಾಧ್ಯ? ಕಡೆಗೆ ಈ ಚಿತ್ರಕ್ಕೆ ಪತಿಬೇಕು ಡಾಟ್ ಕಾಮ್ ಎಂಬ ಟೈಟಲ್ಲನ್ನೂ ತಾವೇ ಸೂಚಿಸಿ ನಟಿಸಲು ಶುರುವಿಟ್ಟ ಶೀತಲ್ ಅವರನ್ನು ಕಥಾ ನಾಯಕಿ ಭಾಗ್ಯಾಳೇ ಆವರಿಸಿಕೊಂಡಿದ್ದಳಂತೆ. ಅದಾಗದಿದ್ದರೆ ಬಹುಶಃ ಟ್ರೈಲರ್, ಹಾಡುಗಳು ಈ ಪಾಟಿ ಸಕ್ಸಸ್ ಕಂಡು ಸಿನಿಮಾದ ಬಗ್ಗೆ ಪ್ರೇಕ್ಷಕರೆಲ್ಲ ಈ ಮಟ್ಟಕ್ಕೆ ಕುತೂಹಲದಿಂದ ಕಾಯಲು ಸಾಧ್ಯವೇ ಇರುತ್ತಿರಲಿಲ್ಲ.
ಈವತ್ತಿಗೂ ಹೆಣ್ಣನ್ನು ಪ್ರತಿಯೊಂದರಲ್ಲಿಯೂ ಸೀಮಿತವಾಗಿ ಬದುಕುವಂತೆ ಮಾಡೋ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಅದರಲ್ಲಿಯೂ ಮದುವೆ ಎಂಬುದು ಪ್ರತೀ ಹೆಣ್ಣಿನ ಬದುಕಿನಲ್ಲಿಯೂ ಮಹತ್ವದ ಘಟ್ಟ. ಆದರೆ ಇದರಲ್ಲಿಯೂ ಹೆಣ್ಣಿನ ಭಾವನೆಗಿಂತಲೂ ಅವರಿವರ ಮರ್ಜಿಗಳೇ ಪ್ರಧಾನ ಪಾತ್ರ ವಹಿಸುತ್ತವೆ. ಹೆಣ್ಣನ್ನು ಭಾರವೆಂದೇ ಭಾವಿಸುವ ಪರಂಪರಾಗತ ಮನಸ್ಥಿತಿ ಹಾಸುಹೊಕ್ಕಾಗಿರುವ ಈ ಸಮಾಜದಲ್ಲಿ ಆಕೆಗೆ ಮದುವೆ ಮಾಡೋದೆಂದರೆ ಭಾರವಿಳಿಸಿಕೊಂಡು ನಿರಾಳವಾಗೋ ಪ್ರಕ್ರಿಯೆ. ಅಂಥಾ ಮದುವೆ ವಿಚಾರದಲ್ಲಿಯೂ ಯಡವಟ್ಟುಗಳಾದರಂತೂ ಅಂಥಾ ಹೆಣ್ಣುಮಗಳ ಪಡಿಪಾಟಲುಗಳನ್ನು ಕಲ್ಪಿಸಿಕೊಳ್ಳೋದೂ ಕಷ್ಟ. ಅಂಥಾದ್ದೊಂದು ಕಥೆಯ ನಾಯಕಿಯಾಗಿರುವವಳು ಈ ಚಿತ್ರದ ಪ್ರಧಾನ ಪಾತ್ರ ಭಾಗ್ಯ. ಈ ಇಡೀ ಕಥೆಯಲ್ಲಿ ನೋವಿದೆ. ಆದರೆ ಅದನ್ನು ವ್ಯಕ್ತಪಡಿಸೋ ರೀತಿಯೇ ಬೇರೆಯದ್ದಿದೆ. ನಾಯಕಿ ಅದೆಲ್ಲವನ್ನೂ ನಗುತ್ತಾ, ನಗಿಸುತ್ತಾ ಬೋಲ್ಡ್ ಆಗಿಯೇ ಎದುರಿಸೋ ಈ ಪಾತ್ರ ಶೀತಲ್ ಅವರ ವಾಸ್ತವದ ಮನಸ್ಥಿತಿಗೂ ತುಸು ಹತ್ತಿರಾಗಿದ್ದಿರಬಹುದು!
ಹೀಗೆ ಶೀತಲ್ ಪತಿಬೇಕು ಡಾಟ್ ಕಾಮ್ ಚಿತ್ರದ ಮೂಲಕ ಹೀರೋಯಿನ್ ಆಗಿದ್ದರೂ ಅವರ ಅಮ್ಮನಿಗೆ ಸಿನಿಮಾ ಎಲ್ಲ ಇಷ್ಟವಿಲ್ಲವಂತೆ. ಅವರ ಪಾಲಿಗೆ ಮಗಳು ಯಾವುದಾದರೂ ವಾಹಿನಿಯಲ್ಲಿ ನಿರೂಪಕಿಯಾಗಿಯೇ ಮುಂದುವರೆಯಲೆಂಬ ಬಯಕೆ. ಕಾಲೇಜು ಮುಗಿದಾಕ್ಷಣ ಶೀತಲ್ ಪ್ರಸಿದ್ಧ ವಾಹಿನಿಯಲ್ಲಿ ನಿರೂಪಕಿಯಾಗಿದ್ದಾಗಲೂ ಮಡಿವಂತಿಕೆಯ ಮಾತಾಡಿದ್ದ ಸಂಬಂಧಿಕರಿಗೂ ಸಿನಿಮಾ ಇಷ್ಟವಿಲ್ಲ. ಆದರೆ ಪತಿಬೇಕು ಡಾಟ್ ಕಾಮ್ ಚಿತ್ರದ ಯಾಕಪ್ಪ ದೇವರೆ ಆಡಿಸ್ತಿ ಕ್ಯಾಬರೆ ಹಾಡು ನೋಡಿ ಶೀತಲ್ ಅಮ್ಮ ಭಾವುಕರಾಗಿದ್ದರಂತೆ. ಚಿತ್ರದ ಬಗ್ಗೆ ಕುತೂಹಲವನ್ನೂ ಇಟ್ಟುಕೊಂಡಿದ್ದಾರಂತೆ. ಬಹುಶಃ ಇದು ಈ ಚಿತ್ರದ ಗೆಲುವಿನ ಸೂಚನೆ ಆಗಿದ್ದರೂ ಇದ್ದೀತು!
ನಿರುದ್ದಿಶ್ಯವಾಗಿಯೇ ನಿರೂಪಕಿಯಾಗಿ ಪ್ರಸಿದ್ಧರಾದ ಶೀತಲ್ ಇದೀಗ ಅದೇ ಮನಸ್ಥಿತಿ ಹೊಂದಿದ್ದರೂ ನಾಯಕಿಯಾಗಿ ನೆಲೆ ನಿಲ್ಲುವ ಲಕ್ಷಣಗಳೂ ಇವೆ. ಆದರೆ ಅವರದ್ದು ಮಾತ್ರ ಮಾಡೋ ಕೆಲಸವನ್ನು ಆತ್ಮತೃಪ್ತಿಯಾಗುವಂತೆ, ಬಯಸಿದ್ದನ್ನೇ ಮಾಡಬೇಕೆಂಬ ವ್ಯಕ್ತಿತ್ವ. ಕಥೆ ಕಾದಂಬರಿ ಓದೋ ಮೂಲಕವೇ ಕನ್ನಡವನ್ನು ಸ್ಪಷ್ಟವಾಗಿಸಿಕೊಂಡ ಅವರದ್ದು ಪ್ರತೀ ಕನ್ನಡಿಗರೂ ಸ್ಪಷ್ಟವಾಗಿಯೇ ಕನ್ನಡ ಮಾತಾಡಬೇಕು, ತನ್ನ ಸ್ಪಷ್ಟವಾದ ಕನ್ನಡ ಭಾಷಾ ಜ್ಞಾನದಲ್ಲಿ ವಿಶೇಷವಾದದ್ದೇನೂ ಇಲ್ಲ ಎಂಬ ವಿನಮ್ರತೆ. ಈಗಲೂ ಓದೋದನ್ನು ಇಷ್ಟ ಪಡೋ ಶೀತಲ್ ಕಡು ಕಷ್ಟದಿಂದಲೇ ಮೇಲೆದ್ದು ಬಂದಿದ್ದಾರೆ. ಶ್ರದ್ಧೆಯಿಂದಲೇ ಪ್ರಸಿದ್ಧಿಯನ್ನೂ ಸಂಪಾದಿಸಿಕೊಂಡಿದ್ದಾರೆ. ಅವರ ಮಾತುಗಳನ್ನೇ ಗಮನಿಸಿದರೆ ಮತ್ತೆ ನಿರೂಪಕಿಯಾಗೋದು ಅವರಿಗಿಷ್ಟವಿಲ್ಲ. ಪತಿಬೇಕು ಡಾಟ್ ಕಾಮ್ ಚಿತ್ರ ಈಗ ಹೊಂದಿರೋ ಅಬ್ಬರ ನೋಡಿದರೆ ಅವರೇನಾದರೂ ನಿರೂಪಕಿಯಾಗ ಹೊರಟರೂ ಅದಕ್ಕೆ ಚಿತ್ರರಂಗ ಆಸ್ಪದ ಕೊಡುವ ಲಕ್ಷಣಗಳು ಕಾಣಿಸುತ್ತಿಲ್ಲ!
#
No Comment! Be the first one.