ನೂರಕ್ಕೆ ನೂರು ಪರ್ಸೆಂಟ್ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಈ ಸಿನಿಮಾ  ಈ ಮಟ್ಟಕ್ಕೆ ಮೂಡಿಬರುತ್ತದೆ ಅಂತಾ. ಆದರೆ ಅದು ಸಾಧ್ಯವಾಗಿದೆ!

ನಿಜ…. ಡಾರ್ಲಿಂಗ್ ಕೃಷ್ಣ ಮೊದಲ ಬಾರಿ ನಿರ್ದೇಶಿಸಿ ನಟಿಸಿರುವ ಸಿನಿಮಾ ಲವ್ ಮಾಕ್ಟೇಲ್ ಇಷ್ಟು ಚೆಂದದ ಕತೆ, ನಿರೂಪಣೆ, ಹೃದಯಕ್ಕೆ ಹತ್ತಿರವಾಗುವ ಸನ್ನಿವೇಶಗಳನ್ನು ಹೊತ್ತುಬರಲಿದೆ ಅನ್ನೋ ಅಂದಾಜಿರಲಿಲ್ಲ. ಈ ವರೆಗೆ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಕೃಷ್ಣ ಈ ಬಾರಿ ತಾವೇ ನಿರ್ದೇಶನ ಮಾಡುವ ಪ್ರಯತ್ನಕ್ಕಿಳಿದಿದ್ದರು. ಶೀರ್ಷಿಕೆಗೆ ತಕ್ಕಂತೆ ಏನೋ ಲವ್ ಸ್ಟೋರಿ ಇರಬಹುದು ಅಂತಷ್ಟೇ ಸಾಕಷ್ಟು ಜನ ಅಭಿಪ್ರಾಯ ಪಟ್ಟಿದ್ದರು. ಆದರೆ ಸಿನಿಮಾ ನೋಡಿದ ಯಾರಿಗಾದರೂ ಇದು ಮಾಮೂಲಿ ಸಿನಿಮಾ ಅಲ್ಲ. ಕನ್ನಡದ ಮಟ್ಟಿಗೆ ವಿಶೇಷ ಕಥೆ, ಭಿನ್ನ ನಿರೂಪಣೆಯನ್ನು ಹೊತ್ತು ತಂದಿರುವ ಲವ್ಲಿ ಮೂವಿ ಅಂತಾ ಅನ್ನಿಸುತ್ತದೆ.

ಸುತ್ತ ಕಾಡು, ನಡುವೆ ರಸ್ತೆ, ಅದರ ಮೇಲೆ ಚಲಿಸುವ ಕಾರು, ದಾರಿಯಲ್ಲಿ ಸಿಗುವ ಹುಡುಗಿ, ಅವಳ ಮೇಲೆ ಕಣ್ಣಿಡುವ ಕೇಡಿಗಳು, ಬಚಾವು ಮಾಡುವ ಹುಡು… ಹೀಗೆ ಆರಂಭವಾದಾಗ ಯಥಾಪ್ರಕಾರ ಲವ್ ಟ್ರ್ಯಾಕು ಓಪನ್ ಆಗುತ್ತದೆ ಅನ್ನೋ ಭಾವನೆ ಮೂಡುತ್ತದೆ. ಅಂದುಕೊಂಡಂತೇ ಲವ್ ಸ್ಟೋರಿಯೇನೋ ಶುರುವಾಗುತ್ತದೆ. ಆದರೆ ದಾರಿಯಲ್ಲಿ ಸಿಕ್ಕ ಹುಡುಗಿಯ ಜೊತೆಯಲ್ಲಲ್ಲ. ಬದಲಿಗೆ ತನ್ನ ಹಳೇ ಹುಡುಗಿಯರ ಕುರಿತಾಗಿ ಹೀರೋ ಹೇಳುತ್ತಾ ಸಾಗುತ್ತಾನೆ. ಸುದೀರ್ಘ ಪ್ರಯಾಣದಲ್ಲಿ ಒಂದೊಂದು ಫ್ಲಾಶ್ ಬ್ಯಾಕು, ನಡುನಡುವೆ ನಿರೂಪಣೆ ಸಾಗುತ್ತದೆ.

ಈ ಚಿತ್ರದ ಕಥೆ ತೆರೆದುಕೊಳ್ಳುವುದು ೧೯೯೮ರ ಆಜುಬಾಜಿನಲ್ಲಿ. ಆವತ್ತಿನ ಕಾಲಕ್ಕೆ ವಯಸ್ಸಿಗೆ ಬಂದ ಹುಡುಗ ಹುಡುಗಿಯರಿಂದ ಶುರುವಾಗಿ ಇವತ್ತಿನ ತನಕ ಹಂತ ಹಂತವಾಗಿ ಕಥೆ ಚಲಿಸುತ್ತದೆ. ಜೊತೆ ಜೊತೆಗೆ ನೋಡುಗರನ್ನು ಆಯಾ ಕಾಲಘಟ್ಟಕ್ಕೆ ಕೊಂಡೊಯ್ದು ನಿಲ್ಲಿಸುತ್ತದೆ. ಹೀರೋ ಬದುಕಿನಲ್ಲಿ ಮೂವರು ಹುಡುಗಿಯರು ಬಂದು ಹೋಗಿರುತ್ತಾರೆ. ಬದುಕು ಏನೆಂಬುದೇ ಗೊತ್ತಿಲ್ಲದ ವಯಸ್ಸಲ್ಲಿ ಬಾಯಿ ತುಂಬಾ ತಂತಿ ಬೇಲಿ ಥರಾ ಕ್ಲಿಪ್ಪು ಹಾಕಿಸಿಕೊಂಡ ಹುಡುಗಿ ಮೇಲೆ ಲವ್ವಾಗಿರುತ್ತದೆ. ಆದರದು ಕೈಗೂಡಿರೋದಿಲ್ಲ.

ಜೊತೆಗಾತಿ ಇಲ್ಲವಲ್ಲಾ ಅಂತಾ ಕೊರಗುವ ಕಾಲಕ್ಕೆ ಬಯಸದೇ ಬಂದ ಭಾಗ್ಯದಂತೆ ಲೈಫಿಗೆ ಎಂಟ್ರಿ ಕೊಡುವ ಮತ್ತೊಬ್ಬಳು. ಅವಳೊಟ್ಟಿಗೆ ಮೆಸೇಜು, ಮಾತು, ಚುಂಬನ, ರೋಮಾಂಚನ. ಇವಳೊಟ್ಟಿಗೇ ಜೀವನ ಅನ್ನೋವಷ್ಟರಲ್ಲಿ ದಿಡೀರನೆ ಎಕ್ಸಿಟ್ಟು.

ಬೇಕಾಬಿಟ್ಟಿಯಾಗಿ ಶುರುವಾಗುವ ಮತ್ತೊಂದು ಪ್ರೀತಿ. ಅವಳೊಟ್ಟಿಗೇ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ, ಆಗ ಶುರುವಾಗುವ ನಿಜವಾದ ಪ್ರೇಮ, ಸೆಳೆತ. ಲೈಫ್ ಈಸ್ ಬ್ಯೂಟಿಫುಲ್ ಎಂದು ನಿರಾಳವಾಗುವ ಸಂದರ್ಭದಲ್ಲೇ ಎದುರಾಗುವ ವಿಪರ್ಯಾಸ… ಹೀಗೆ ಒಬ್ಬ ಹುಡುಗನ ಬದುಕಿನ ಪ್ರಮುಖ ಘಟ್ಟಗಳನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಲವ್ ಮಾಕ್ಟೇಲ್ ಮಾಡಲಾಗಿದೆ!

ಇಷ್ಟು ದಿನ ಸಂಕಲನಕಾರರಾಗಿ ಹೆಸರು ಮಾಡಿದ್ದ ಮತ್ತು ಡ್ರೋನ್ ಕ್ಯಾಮೆರಾವನ್ನಷ್ಟೇ ಆಪರೇಟ್ ಮಾಡುತ್ತಿದ್ದ ಶ್ರೀ ಕ್ರೇಜ಼ಿ ಮೈಂಡ್ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಛಾಯಾಗ್ರಹಣ ಮಾಡಿದ್ದಾರೆ. ಹೀಗಾಗಿ ಎಲ್ಲೂ ಬೇಡದ ದೃಶ್ಯವಾಗಲಿ, ಒಂದೇಒಂದು ಶಾಟ್ ಕೂಡಾ ಇಟ್ಟಿಲ್ಲ. ಡ್ರೋನ್ ಕ್ಯಾಮೆರಾವನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಿರೋದರಿಂದ ಅದೂ ಸಿನಿಮಾದ ಒಟ್ಟಂದವನ್ನು ಹೆಚ್ಚಿಸಿದೆ. ಸಂಭಾಷಣೆ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ರಘು ದೀಕ್ಷಿತ್ ಸಂಗೀತ ಇಂಪೆನಿಸುತ್ತದೆ.

ನಾಯಕಿಯರಾದ ಅಮೃತಾ ಅಯ್ಯಂಗಾರ್ ಮತ್ತು ಮಿಲನ ನಾಗರಾಜ್ ತುಂಬಾ ಚೆಂದಗೆ ನಟಿಸಿದ್ದಾರೆ. ಸ್ನೇಹಿತರ ಪಾತ್ರಧಾರಿಗಳೂ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಅಂತೂ ತಮ್ಮೆಲ್ಲಾ ಪ್ರತಿಭೆಯನ್ನು ಇಲ್ಲಿ ಬಸಿದಿದ್ದಾರೆ. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಭಿನ್ನವಾಗಿ ನಟಿಸಿದ್ದಾರೆ. ಇದುವರೆಗೂ ಬರದೇ ಇರುವ ಸಿನಿಮಾ ಇದಲ್ಲದಿದ್ದರೂ, ಬರುತ್ತಿರುವ ಸಿನಿಮಾಗಳಲ್ಲಿ ಬೇರೆ ಬಗೆಯ ಕಂಟೆಂಟ್ ಹೊಂದಿದೆ. ಲವಲವಿಕೆಯ ನಿರೂಪಣೆಯ ಕಾರಣಕ್ಕೆ ಗಮನ ಸೆಳೆಯುತ್ತದೆ.

ಒಟ್ಟಾರೆಯಾಗಿ ಲವ್ ಮಾಕ್ಟೇಲ್ ಪ್ರತಿಯೊಬ್ಬರ ಬದುಕಿಗೂ ಹತ್ತಿರವಾಗುವ, ಎಲ್ಲರ ಮನಸ್ಸಿಗೂ ಇಷ್ಟವಾಗುವ ಸುಂದರ ಪ್ರೇಮ ಕಾವ್ಯ ಅನ್ನಬಹುದು.

CG ARUN

ಲವಲವಿಕೆಯ ಲವ್ ಮಾಕ್ಟೇಲ್!

Previous article

ಪ್ರೇಕ್ಷಕರಿಗೆ ಪ್ರೇತದ ಮೇಲೂ ಪ್ರೀತಿ ಹುಟ್ಟುತ್ತದೆ!

Next article

You may also like

Comments

Leave a reply

Your email address will not be published. Required fields are marked *