ನಟ, ನಿರ್ದೇಶಕರಾಗಿ ಹೆಸರು ಮಾಡಿದ್ದ ವಿಕಾಸ್ ಈಗ ಹೀರೋ ಆಗಿ ಲಾಂಚ್ ಆಗಿದ್ದಾರೆ. ಸದ್ಯ ಅವರ ಕಾಣದಂತೆ ಮಾಯವಾದವನು ಸಿನಿಮಾ ತೆರೆಗೆ ಬಂದಿದೆ. ದುಷ್ಟಕೂಟದಲ್ಲಿ ಒಬ್ಬನಾಗಿ ಕಾರ್ಯ ನಿರ್ವಹಿಸುತ್ತಿದ್ದವನ ಮನಸ್ಸು ಗೆಲ್ಲುವ ಹುಡುಗಿ. ಆಕೆಯ ಸಹಾಯಕ್ಕೆ ನಿಲ್ಲುವ ಹೀರೋ. ಆ ಕಾರಣಕ್ಕೆ ಕ್ರೂರಿಗಳ ಕೆಂಗಣ್ಣಿಗೆ ಗುರಿಯಾಗಿ ಮಣ್ಣುಪಾಲಾಗುತ್ತಾನೆ. ಸಾಮಾನ್ಯಕ್ಕೆ ಇದು ಸಿನಿಮಾದ ಅಂತ್ಯಕ್ಕೆ ಬರುವ ದೃಶ್ಯ. ಆದರಿಲ್ಲಿ ಕತೆ ಶುರುವಾಗೋದೇ ಇಲ್ಲಿಂದ!
ದೇಹ ಸತ್ತರೂ ಆತ್ಮ ಮಾತ್ರ ಪ್ರೀತಿಸಿದವಳ ಸುತ್ತಲೇ ತಿರುಗುತ್ತದೆ. ಅವಳ ಹಿತ ಕಾಯಲು ನಿಲ್ಲುತ್ತದೆ. ತನ್ನನ್ನು ಬಲಿ ಪಡೆದವರನ್ನು ಮಟ್ಟ ಹಾಕಲು ಮುಂದಾಗುತ್ತದೆ. ಇಂಥಾ ಆತ್ಮಕ್ಕೆ ನಾಯಿ ಮತ್ತು ಮುಗ್ದನೊಬ್ಬ ಜೊತೆಯಾಗುತ್ತಾರೆ. ಶೀರ್ಷಿಕೆಗೂ ಕಥೆಗೂ ಸಂಬಂಧವೇ ಇಲ್ಲದ ಸಿನಿಮಾಗಳು ಬರುವ ಈ ಹೊತ್ತಿನಲ್ಲಿ ಈ ಟೈಟಲ್ ಬಿಟ್ಟು ಬೇರೆ ಯಾವುದೂ ಹೊಂದಿಕೆಯಾಗದಂತೆ ಕಾಣದಂತೆ ಮಾಯವಾದನು ರೂಪುಗೊಂಡಿದೆ. ಮೇಲ್ನೋಟಕ್ಕೆ ಇದು ಹಾರರ್ ಸಿನಿಮಾದಂತೆ ಕಂಡುಬಂದರೂ ಯಾರನ್ನೂ ಬೆಚ್ಚಿಬೀಳಿಸುವುದಿಲ್ಲ. ಬದಲಿಗೆ, ಆತ್ಮವೇ ಆಪ್ತವೆನಿಸುತ್ತದೆ. ಪ್ರೇತದ ಪರವಾಗಿ ಪ್ರೇಕ್ಷಕರ ಮನಸ್ಸು ಮಿಡಿಯುತ್ತದೆ. ಸಿನಿಮಾ ಟೇಕಾಫ್ ಆಗುತ್ತಿದ್ದಂತೇ ವಿಕಾಸ್ ನಟನೆ ನೋಡುಗರನ್ನು ಸೆಳೆಯುತ್ತದೆ.
ಕಾಮಿಡಿ ನಟ ಧರ್ಮಣ್ಣ ನಗಿಸುತ್ತಲೇ ಎಲ್ಲರನ್ನೂ ಗೆಲ್ಲುತ್ತಾರೆ. ಧರ್ಮಣ್ಣನ ನಟನೆ ಸಿನಿಮಾದ ಶಕ್ತಿಯನ್ನು ಬೇರೆಯದ್ದೇ ಲೆವೆಲ್ಲಿಗೆ ಹೆಚ್ಚಿಸುತ್ತದೆ. ನಾಯಕಿ ಸಿಂಧೂ ಲೋಕನಾಥ್ ಅಂತೂ ಪಾತ್ರವೇ ತಾವಾಗಿ ನಟಿಸಿದ್ದಾರೆ. ನಿಜಕ್ಕೂ ಭಯ ಹುಟ್ಟಿಸುವಂತೆ ನಟಿಸಿರೋದು ದಿವಂಗತ ನಟ ಉದಯ್. ದ್ವಿತೀಯಾರ್ದದಲ್ಲಿ ಉದಯ್ ಪಾತ್ರವನ್ನು ಭಜರಂಗಿ ಲೋಕಿ ಮುಂದುವರೆಸಿದ್ದಾರೆ. ಮೊದಲ ಭಾಗದಲ್ಲಿ ಉದಯ್ ಇದ್ದ ಪಾತ್ರ ಅನ್ನೋದನ್ನು ಮರೆತು ನೋಡುವಷ್ಟು ಸಲೀಸಾಗಿ ಲೋಕಿ ಆವರಿಸಿಕೊಂಡಿದ್ದಾರೆ. ತೀರಾ ಅಚ್ಚುಕಟ್ಟು ಎನ್ನಿಸುವಷ್ಟರ ಮಟ್ಟಿಗೆ ಸಿನಿಮಾಟೋಗ್ರಫಿ ಕೆಲಸವನ್ನು ನಿಭಾಯಿಸಿದ್ದಾರೆ ಛಾಯಾಗ್ರಾಹಕ ಸುಜ್ಞಾನ್. ಚಿತ್ರದಲ್ಲಿ ಗ್ರಾಫಿಕ್ಸ್ ಅಂಶ ಹೆಚ್ಚಾಗಿದೆ. ಗ್ರಾಫಿಕ್ಸ್’ಗೆ ಸರಿ ಹೊಂದುವ ಗುಣಮಟ್ಟದ ಕಲಾನಿರ್ದೇಶನವೂ ಇದೆ. ಸಂಗೀತ ಮತ್ತು ಹಿನ್ನೆಲೆ ಸಂಗೀತದಲ್ಲಿ ರಾಜ್ ಒಳ್ಳೇ ಸ್ಕೋರು ಮಾಡಿದ್ದಾರೆ. ಮೊದಲ ಸಿನಿಮಾಗೇ ಫ್ಯಾಂಟಸಿ ಸಬ್ಜೆಕ್ಟನ್ನು ಆಯ್ಕೆ ಮಾಡಿಕೊಂಡು ಅದನ್ನು ತೆರೆಮೇಲೆ ಕಟ್ಟಿಕೊಡುವುದು ಕಷ್ಟದ ಕೆಲಸ. ಆದರೆ, ಅದನ್ನು ನಿರ್ದೇಶಕ ರಾಜ್ ಪತ್ತಿಪಾಟಿ ಶ್ರದ್ಧೆಯಿಂದ ರೂಪಿಸಿದ್ದಾರೆ. ಎಂಥಾ ಅದ್ಭುತ ಭ್ರಮಾ ಲೋಕವನ್ನು ಬೇಕಾದರೂ ಸೃಷ್ಟಿಸಿ, ಅದನ್ನು ಪ್ರೇಕ್ಷಕರೆದುರು ಮೂಡಿಸುವ ಮ್ಯಾಜಿಕ್ಕು, ತಂತ್ರಗಾರಿಕೆ ನಿರ್ದೇಶಕ ರಾಜ್ ಅವರಿಗೆ ಸಿದ್ಧಿಸಿದೆ. ಈ ಮೂಲಕ ಕನ್ನಡ ಸಿನಿಮಾಗೆ ದೊರೆತ ಭವಿಷ್ಯದ ನಿರ್ದೇಶಕನಾಗಿಯೂ ರಾಜ್ ಹೊರಹೊಮ್ಮಿದ್ದಾರೆ.
ಎಂಥಾ ವಯೋಮಾನದವರೂ ಹೋಗಿ ನೋಡಬಹುದಾದ ಸಿನಿಮಾ ಕಾಣದಂತೆ ಮಾಯವಾದನು. ಥಿಯೇಟರಿನಲ್ಲಿ ಕೂತು ಈ ಚಿತ್ರವನ್ನು ನೋಡುವ ಮಜಾನೇ ಬೇರೆಯಾಗಿದೆ. ಮನೆಮಂದಿಯೆಲ್ಲಾ ಒಟ್ಟೊಟ್ಟಿಗೇ ಬಂದು ಧಾರಾಳವಾಗಿ ನೋಡಿಬರಬಹುದಾದ ಚಿತ್ರ ಕೂಡಾ ಇದಾಗಿದೆ. ಮಿಸ್ ಮಾಡಿಕೊಳ್ಳಬೇಡಿ.