ಇದೇ ಅಕ್ಟೋಬರ್ ೫ರಂದು ಆದಿಪುರಾಣ ಚಿತ್ರ ಬಿಡುಗಡೆಗೆ ಅಣಿಗೊಂಡಿದೆ. ಈಗಾಗಲೇ ನಾನಾ ರೀತಿಯಲ್ಲಿ ಸಂಚಲನ ಸೃಷ್ಟಿಸುತ್ತಲೇ ಬಹು ನಿರೀಕ್ಷಿತ ಚಿತ್ರವಾಗಿ ಬಿಂಬಿಸಿಕೊಂಡಿರೋ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಮೋಹನ್ ಕಾಮಾಕ್ಷಿ. ಕನ್ನಡ ಚಿತ್ರರಂಗದಲ್ಲಿ ಸಂಕಲನಕಾರರಾಗಿ ಗುರುತಿಸಿಕೊಂಡಿದ್ದ ಮೋಹನ್ ಆದಿಪುರಾಣ ಚಿತ್ರದ ಮೂಲಕ ನಿರ್ದೇಶಕರಾಗಿದ್ದರ ಹಿಂದೆ ಅಖಂಡ ಹದಿನಾಲಕ್ಕು ವರ್ಷಗಳ ತಪಸ್ಸಿದೆ!
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಮೋಹನ್ ಬಿಎ, ಬಿಎಲ್ಐಎಸ್ ಪದವೀಧರ. ಆದರೆ ಹದಿನೆಂಟನೇ ವಯಸ್ಸಿನ ಹೊತ್ತಿಗೆಲ್ಲ ನಿರ್ದೇಶಕನಾಗೋ ಕನಸು ಕಟ್ಟಿಕೊಂಡಿದ್ದ ಅವರಿಗೆ ಅದರ ಆಚೀಚೆಗೆ ಕಳೆದು ಹೋಗುವ ಯಾವ ಇರಾದೆಯೂ ಇರಲಿಲ್ಲ. ಜೊತೆಗೆ ಜಯನಗರದ ಬಿಇಎಸ್ ಕಾಲೇಜಿನಲ್ಲಿ ಓದುವಾಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಇವರಿಗೆ ಪಾಠ ಮಾಡುತ್ತಿದ್ದರು. ಅವರ ಪ್ರಭಾವವೂ ತನ್ನ ಕನಸಿನ ಸುತ್ತಲೇ ಮೋಹನ್ ಅವರನ್ನು ಕಟ್ಟಿ ನಿಲ್ಲಿಸಿತ್ತು. ಹಾಗಂತ ಮನೆಯ ಜವಾಬ್ದಾರಿಗಳ ಭಾರ ಹೊರದೆ ಬೇರೆ ವಿಧಿಯೂ ಇರಲಿಲ್ಲ. ಹೇಗಾದರೂ ಸರಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಆಮೇಲೆ ಮಿಕ್ಕಿದ್ದರ ಬಗ್ಗೆ ಯೋಚಿಸಿದರಾಯ್ತು ಅಂದುಕೊಂಡ ಮೋಹನ್ಗೆ ನೇರವಾಗಿ ತನ್ನ ಕನಸಿನ ನಿರ್ದೇಶನ ವಿಭಾಗಕ್ಕೆ ಎಂಟ್ರಿ ಕೊಡಲು ಜವಾಬ್ದಾರಿಗಳ ಭಾರ ಅಡ್ಡಗಾಲಾಗಿತ್ತು.
ಆದ್ದರಿಂದಲೇ ಈಗ್ಗೆ ಹದಿನಾಲಕ್ಕು ವರ್ಷಗಳ ಹಿಂದೆ ಅವರು ಸಂಕಲನಕಾರರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದರಲ್ಲಿ ಒಂದಷ್ಟು ಕಾಸು ಸಂಪಾದಿಸಿ ಮನೆಯ ಜವಾಬ್ದಾರಿ ನಿಭಾಯಿಸುತ್ತಲೇ ನಿರ್ದೇಶನದ ಪಟ್ಟುಗಳನ್ನೂ ಕಲಿಯಬೇಕೆಂಬುದು ಮೋಹನ್ ಅವರ ಇರಾದೆ. ಹಾಗೆ ಹಲವಾರು ಚಿತ್ರಗಳ ಸಂಕಲನಕಾರರಾಗಿ ಕೆಲಸ ಮಾಡುತ್ತಲೇ ನಿರ್ದೇಶನ ವಿಭಾಗದತ್ತಲೇ ಗಂಭೀರವಾಗಿ ಗಮನ ಕೇಂದ್ರೀಕರಿಸಿದ್ದ ಮೋಹನ್ ಏಕಲವ್ಯನಂತೆ ಎಲ್ಲ ಪಟ್ಟುಗಳನ್ನೂ ಅರಗಿಸಿಕೊಳ್ಳಲಾರಂಭಿಸಿದ್ದರು. ಗಿರೀಶ್ ಕಾಸರವಳ್ಳಿ ಚಿತ್ರಗಳ ಸಂಕಲನ ಮೂಲಕ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದರು. ಅಪೂರ್ವ ಕಾಸರವಳ್ಳಿಯವರ ನಿರುತ್ತರ ಮತ್ತು ಅನನ್ಯಾ ಕಾಸರವಳ್ಳಿ ನಿರ್ದೇಶನದ ಚಿತ್ರಗಳ ಆನ್ಲೈನ್ ಎಡಿಟಿಂಗ್ ಮಾಡುತ್ತಾ ಸೆಟ್ಟಿನಲ್ಲಿಯೇ ಇದ್ದುಕೊಂಡು ಮತ್ತಷ್ಟು ಕಲಿತುಕೊಂಡಿದ್ದರು.
ಹೀಗೆ ಸಂಕಲನಕಾರರಾಗಿದ್ದೇ ನಿರ್ದೇಶಕನಾಗೋ ತಯಾರಿ ಆರಂಭಿಸಿದ್ದ ಮೋಹನ್ ಮೊದಲ ಸಲ ಮುಸ್ಸಂಜೆ ಮಾತು ಚಿತ್ರಕ್ಕೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಆ ಬಳಿಕ ಗುರುಪ್ರಸಾದ್ ನಿರ್ದೇಶನದ ಡೈರೆಕ್ಟರ್ ಸ್ಪೆಷಲ್ ಚಿತ್ರದಲ್ಲಿ ಅಸೋಸಿಯೇಟ್ ಆಗೋ ಅವಕಾಶವೂ ಕೂಡಿ ಬಂದಿತ್ತು. ಪುನೀತ್ ರಾಜ್ ಕುಮಾರ್ ಅಭಿನಯದ ಹುಡುಗರು ಮತ್ತು ಯಾರೇ ಕೂಗಾಡಲಿ ಚಿತ್ರಕ್ಕೆ ಮಠ ಗುರುಪ್ರಸಾದ್ ಸಂಭಾಷಣೆ ಬರೆದಿದ್ದರಲ್ಲಾ? ಅದರ ಯಶಸ್ಸಿನಲ್ಲಿ ಮೋಹನ್ ಕಾಮಾಕ್ಷಿ ಪಾಲೂ ಇದೆ. ತಮಿಳು ಚಿತ್ರದಿಂದ ಈ ಕಥೆಯನ್ನು ಕನ್ನಡೀಕರಿಸಿಕೊಟ್ಟಿದ್ದು ಇವರೇ. ಅದಕ್ಕೆ ಗುರುಪ್ರಸಾದ್ ತಮ್ಮ ಫ್ಲೇವರು ಸೇರಿಸಿ ಚೆಂದಗಾಣಿಸಿದ್ದರು.
ಹೀಗೆ ಹದಿನಾಲಕ್ಕು ವರ್ಷಗಳ ಕಾಲ ನಿರ್ದೇಶಕನಾಗೋ ಕನಸನ್ನು ಸಾಕಿಕೊಂಡು ಬಂದ ಮೋಹನ್ ಇದೀಗ ಅದನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಈ ಹಿಂದೆ ಪ್ರೀತಿ ಕಿತಾಬು ಎಂಬ ಚಿತ್ರಕ್ಕೆ ಮೋಹನ್ ಸಂಕಲನಕಾರರಾಗಿದ್ದರು. ಆ ಚಿತ್ರವನ್ನು ನಿರ್ಮಾಣ ಮಾಡಿದ್ದವರು ಶಮಂತ್ ಕೆ. ಅವರೂ ಕೂಡಾ ಒಳ್ಳೆ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದವರು. ಮೋಹನ್ ಅವರಲ್ಲಿನ ನಿರ್ದೇಶಕನಾಗೋ ಕನಸನ್ನು ಗುರುತಿಸಿ ಮೆಚ್ಚಿಕೊಂಡಿದ್ದ ಶಮಂತ್ ಆ ಬಳಿಕ ಆದಿಪುರಾಣ ಚಿತ್ರ ನಿರ್ಮಾಣ ಮಾಡಲು ಹಸಿರು ನಿಶಾನೆ ತೋರಿಸಿದ್ದಾರೆ. ಒಂದಿಷ್ಟೂ ಕೊರತೆಯಾಗದಂತೆ ಹೆಜ್ಜೆ ಹೆಜ್ಜೆಗೂ ಇಡೀ ಚಿತ್ರವನ್ನು ಪೊರೆದಿದ್ದಾರೆ.
ಮೋಹನ್ ಆದಿಪುರಾಣ ಚಿತ್ರವನ್ನು ಉತ್ಕಟ ಪ್ರೀತಿಯಿಂದ, ಶ್ರದ್ಧೆಯಿಂದಲೇ ಶ್ರಮವನ್ನೆಲ್ಲ ಧಾರೆ ಎರೆದಿದ್ದಾರೆ. ಈ ಚಿತ್ರ ಅನೌನ್ಸ್ ಆಗಿದ್ದು ೨೦೧೬ರ ಅಕ್ಟೋಬರ್ ೫ರಂದು. ಇದು ಬಿಗಡೆಯಾಗುತ್ತಿರೋದು ಈ ಅಕ್ಟೋಬರ್ ಐದರಂದು. ಅಂದರೆ ಒಟ್ಟಾರೆ ಚಿತ್ರ ತಯಾರಾಗಲು ಭರ್ತಿ ಎರಡು ವರ್ಷ ಹಿಡಿದಿದೆ. ಅದರಲ್ಲಿ ಹೆಚ್ಚಿನ ಕಾಲವನ್ನು ಮೋಹನ್ ಸ್ಕ್ರಿಫ್ಟ್ಗಾಗಿಯೇ ಮೀಸಲಾಗಿಸಿದ್ದರಂತೆ. ಸಂಕಲನಕಾರರಾಗಿ ಇಷ್ಟು ವರ್ಷ ಕಾರ್ಯ ನಿರ್ವಹಿಸಿರುವ ಮೋಹನ್ಗೆ ಒಂದಿಡೀ ಚಿತ್ರದಲ್ಲಿ ಏನೇನು ವ್ಯರ್ಥವಾಗುತ್ತದೆಂಬುದು ಸ್ಪಷ್ಟವಾಗಿ ಗೊತ್ತಿದೆ. ಆದ್ದರಿಂದಲೇ ಸ್ಕ್ರಿಫ್ಟ್ ಹಂತದಲ್ಲಿಯೇ ಎಲ್ಲವನ್ನೂ ಪಕ್ಕಾ ಮಾಡಿಕೊಂಡು ಅಂದುಕೊಂಡಂತೆಯೇ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಆದಿಪುರಾಣವನ್ನು ಬಿಡುಗಡೆಯ ಹಂತಕ್ಕೂ ತಂದಿದ್ದಾರೆ.
ಹೀಗೆ ನಿರ್ದೇಶನವನ್ನು ತಪಸ್ಸಿನಂತೆ ಸ್ವೀಕರಿಸಿರುವ ಮೋಹನ್ ಕಾಮಾಕ್ಷಿಯವರಿಗೆ ಇಡೀ ಚಿತ್ರವನ್ನು ಅಂದುಕೊಂಡಂತೆಯೇ ಅಚ್ಚುಕಟ್ಟಾಗಿ ಮಾಡಿರುವ ತೃಪ್ತಿಯಿದೆ. ಹದಿನಾಲಕ್ಕು ವರ್ಷಗಳ ತಮ್ಮ ಕನಸನ್ನು ಪ್ರೇಕ್ಷಕರು ಮೆಚ್ಚಿ ಗೆಲ್ಲಿಸುತ್ತಾರೆಂಬ ಭರವಸೆಯೂ ಇದೆ. ಜೊತೆಗೆ ಆದಿಪುರಾಣ ಎಲ್ಲ ವರ್ಗಗಳ ಪ್ರೇಕ್ಷಕರನ್ನೂ ಸೆಳೆದುಕೊಂಡು ದೊಡ್ಡ ಗೆಲುವು ದಾಖಲಿಸುತ್ತದೆ ಎಂಬ ನಿರೀಕ್ಷೆಯೂ ಅವರಲ್ಲಿದೆ.
#