ʻʻಮನುಷ್ಯ ಸತ್ತಾಗ ಅವನ ಕಥೆ ಮುಗೀತು ಅಂತಾರೆ… ಆದರೆ, ಅವನು ಮಾಡಿರುವ ಒಳ್ಳೇ ಕೆಲಸಗಳು ಮತ್ತು ಕೆಟ್ಟ ಕೆಲಸಗಳು ಅಧ್ಯಾಯವಾಗಿ ಮುಂದುವರೆಯುತ್ತದೆ. ಆ ಅಧ್ಯಾಯದಿಂದ ಕಥೆಗಳೂ ಹುಟ್ಟುತ್ತೆ, ಪಾತ್ರಗಳೂ ಹುಟ್ಟುತ್ತೆ…ʼʼ
ಇದು ಈ ವಾರ ತೆರೆಗೆ ಬರುತ್ತಿರುವ ಮುಂದುವರೆದ ಅಧ್ಯಾಯ ಸಿನಿಮಾದ ಟ್ರೇಲರಿನಲ್ಲಿರುವ ಆರಂಭಿಕ ನಿರೂಪಣೆ. ಯಾವ ಬಿಲ್ಡಪ್ಪು, ಅತಿಯಾದ ಹೈಪು ಇಲ್ಲದೆ ತಣ್ಣಗೆ ರಿಲೀಸಾದ ಎಷ್ಟೋ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಮುಂದುವರೆದ ಅಧ್ಯಾಯ ಚಿತ್ರದ ಟ್ರೇಲರನ್ನೊಮ್ಮೆ ನೋಡಿದರೆ, ಇದರಲ್ಲಿ ಗಾಢವಾದ ಕತೆಯಿದೆ. ಈವರೆಗೆ ಯಾರೂ ಹೇಳಿರದ ಘಟನೆಗಳಿವೆ ಎನ್ನುವ ಸೂಚನೆ ಸಿಗುತ್ತದೆ.
ಡೆಡ್ಲಿ ಆದಿತ್ಯ ಪಾಲಿಗೆ ಧಮ್ಮಿರುವ ಒಂದು ಸಿನಿಮಾದ ಅಗತ್ಯವಿದೆ. ʻಮುಂದುವರೆದ ಅಧ್ಯಾಯʼ ಆದಿತ್ಯ ಅವರ ಸಿನಿಮಾ ಬದುಕನ್ನು ಬೇರೆ ಲೆವೆಲ್ಲಿಗೆ ಮುಂದುವರೆಸಲಿದೆ ಅನ್ನೋ ಮಾತುಗಳು ದಶ ದಿಕ್ಕುಗಳಿಂದಲೂ ಕೇಳಿಬರುತ್ತಿವೆ. ಡೆಡ್ಲಿ ಸೋಮ, ಎದೆಗಾರಿಕೆಯಂಥಾ ಸಿನಿಮಾದಲ್ಲಿ ಆದಿತ್ಯ ಮಿಂಚಿದ್ದರು. ಅದಾದ ನಂತರ ಬಹುತೇಕ ಬೇರೆ ಹೀರೋಗಳ ಜೊತೆಗೆ ಕಾಂಬಿನೇಷನ್ ನಲ್ಲಷ್ಟೇ ಹೆಚ್ಚು ಕಾಣಿಸಿಕೊಂಡರು. ಹೆಚ್ಚು ಮಾತಿಲ್ಲದೆ, ಕಣ್ಣುಗಳಲ್ಲೇ ಭಾವನೆಗಳನ್ನು ವ್ಯಕ್ತಪಡಿಸಬಲ್ಲ ಅಪರೂಪದ ನಟರಲ್ಲಿ ಆದಿತ್ಯ ಒಬ್ಬರು. ಇಂಥ ಆದಿತ್ಯ ಎರಡನೇ ಇನ್ನಿಂಗ್ಸ್ ಶುರು ಮಾಡಬೇಕಿರುವ ಜರೂರತ್ತಿದೆ.
ಈ ಸಿನಿಮಾಗೆ ನಿರ್ದೇಶಕ ಬಾಲು ಚಂದ್ರಶೇಖರ್ ಕೆಲಸ ಮಾಡಿರುವ ರೀತಿಯನ್ನು ಮೇಲ್ನೋಟಕ್ಕೆ ಗಮನಿಸಿ. ಕನ್ನಡದ ಮಟ್ಟಿಗೆ ಕಥೆಯನ್ನಿಟ್ಟುಕೊಂಡು, ಅದನ್ನು ಅಷ್ಟೇ ಗಂಭೀರವಾಗಿ ನಿರೂಪಿಸಬಲ್ಲ ನಿರ್ದೇಶಕರಾಗುತ್ತಾರೆ ಅಂತನ್ನಿಸುತ್ತದೆ. ಕೊಲೆಯೊಂದರ ಜಾಡು ಹಿಡಿದು ಹೊರಡುವ ಪೊಲೀಸ್ ಅಧಿಕಾರಿ, ಮತ್ತಿತರ ಪಾತ್ರಗಳ ಮೂಲಕ ರೋಚಕ ಕತೆಯೊಂದು ʻಮುಂದುವರೆದ ಅಧ್ಯಾಯʼದಲ್ಲಿ ಅಡಕವಾದಂತಿದೆ.
ಕೊರೋನಾ ಹುಟ್ಟಿಸಿದ್ದ ಬಣಬಣದಿಂದ ಬೇಸತ್ತಿದ್ದ ಸಿನಿಮಾ ಪ್ರೇಮಿಗಳು ಬಿಡುಗಡೆಯಾಗಿ, ಗುಣಮಟ್ಟ ಉಳಿಸಿಕೊಂಡಿರುವ ಚಿತ್ರಗಳನ್ನು ಬಾಚಿ ತಬ್ಬಿಕೊಳ್ಳುತ್ತಿದ್ದಾರೆ. ಈ ವರ್ಷ ತೆರೆ ಕಂಡಿರುವ ಕೆಲವಾರು ಚೆಂದದ ಸಿನಿಮಾಗಳು ಅದಕ್ಕೆ ನಿದರ್ಶನವಾಗಿವೆ. ʻಮುಂದುವರೆದ ಅಧ್ಯಾಯʼ ಕೂಡಾ ಆ ಲಿಸ್ಟಿಗೆ ಸೇರುವ ಕುರುಹು ಕಾಣುತ್ತಿದೆ.. ಅದು ನಿಜವಾಗಲಿ..
‘ಮುಂದುವರೆದ ಅಧ್ಯಾಯ’ದ ಬಗ್ಗೆ : ಕಣಜ ಎಂಟರ್ ಪ್ರೈಸಸ್ ಲಾಂಛನ ದಡಿಯಲ್ಲಿ ನಿರ್ಮಾಣವಾಗಿರುವ, ಬಾಲು ಚಂದ್ರಶೇಖರ್ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ ‘ಮುಂದುವರೆದ ಅಧ್ಯಾಯ’ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಜಾನಿ – ನಿತಿನ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಆದಿತ್ಯ, ಆಶಿಕ ಸೋಮಶೇಖರ್, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಅಜಯ್ ರಾಜ್, ವಿನಯ್ ಕೃಷ್ಣಸ್ವಾಮಿ, ಸಂದೀಪ್ ಕುಮಾರ್, ಚಂದನ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.