ಎ.ಆರ್. ಮುರುಗದಾಸ್ ಭಾರತೀಯ ಚಿತ್ರರಂಗದ ದೊಡ್ಡ ನಿರ್ದೇಶಕ. 2001ರಲ್ಲಿ ತೆರೆಕಂಡ ತಮಿಳಿನ ದೀನ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಕಾಲಿಟ್ಟವರು ಮುರುಗದಾಸ್. ಆ ನಂತರ ರಮಣ, ಗಜಿನಿ, ಸ್ಟಾಲಿನ್, ಏಳಾಮ್ ಅರಿವು, ತುಪಾಕಿ,ಕತ್ತಿ, ಸ್ಪೈಡರ್, ಸರ್ಕಾರ್, ದರ್ಬಾರ್ ತನಕ ನಿರ್ದೇಶಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಈ ಹೊತ್ತಿಗೆ ವಿಜಯ್ ಜೊತೆಗೆ ನಾಲ್ಕನೇ ಸಿನಿಮಾ ಸೆಟ್ಟೇರಬೇಕಿತ್ತು. ಈ ಚಿತ್ರದ ಕೆಲಸಗಳೂ ಆರಂಭವಾಗಿದ್ದವು. ಅಷ್ಟರಲ್ಲಿ ಹೀರೋ ವಿಜಯ್ ಜೊತೆಗೆ ಕಥೆ ವಿಚಾರದಲ್ಲಾದ ಮನಸ್ತಾಪದಿಂದ ಈ ಪ್ರಾಜೆಕ್ಟಿನಿಂದ ಮುರುಗದಾಸ್ ಹೊರಬಂದರು. ಎರಡು ಮೂರು ಬಾರಿ ಫೈನಲ್ ಸ್ಕ್ರಿಪ್ಟ್ ರೀಡಿಂಗ್ ಕೊಟ್ಟ ನಂತರವೂ ಸ್ಕ್ರೀನ್ ಪ್ಲೇನಲ್ಲಿ ಪದೇ ಪದೇ ಬದಲಾವಣೆ ಮಾಡಲು ವಿಜಯ್ ಸೂಚಿಸುತ್ತಿದ್ದರಂತೆ. ಅದಾಗಲೇ ವಿಜಯ್ ಜೊತೆ ಕೆಲಸ ಮಾಡಿ ಮೂರು ಹಿಟ್ ಸಿನಿಮಾ ಕೊಟ್ಟಿದ್ದ ಮುರುಗದಾಸ್ʼಗೆ ಇದು ಸರಿಕಂಡಿರಲಿಲ್ಲ. ಇಷ್ಟೊಂದು ಬದಲಾವಣೆ ಮಾಡಿಕೊಂಡು ನಿಮಗಾಗಿ ಸಿನಿಮಾ ಮಾಡುವ ಅಗತ್ಯವಿಲ್ಲ ಅಂತಾ ತಿರಸ್ಕರಿಸಿ ಬಂದಿದ್ದರು.
ಅಜಿತ್, ವಿಜಯ್, ಅಮೀರ್ ಖಾನ್, ಚಿರಂಜೀವಿ, ಮಹೇಶ್ ಬಾಬು, ರಜನೀಕಾಂತ್ ತನಕ ಇಂಡಿಯಾದ ಸಾಕಷ್ಟು ಸೂಪರ್ ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿರುವ ಮುರುಗದಾಸ್ ಈ ಬಾರಿ ಯಾವ ಹೀರೋ ಇಲ್ಲದ ಅನಿಮೇಷನ್ ಸಿನಿಮಾ ಮಾಡುವ ಮನಸು ಮಾಡಿದ್ದಾರೆ. ಬಹುಶಃ ವಿಜಯ್ ಜೊತೆಗೆ ತಕಾರುಗಳಾಗಿದ್ದೇ ಇದಕ್ಕೆ ಕಾರಣವಿರಬಹುದು. ಹೀರೋಗಳ ಜೊತೆ ಹೆಣಗಾಡುವುದು ಬೇಡ ಎಂದು ತೀರ್ಮಾನಿಸಿರುವ ಮುರುಗದಾಸ್ ಅನಿಮೇಷನ್ ಮೂಲಕ ಕೋತಿಯನ್ನು ಸೃಷ್ಟಿಸಿ ಅದನ್ನೇ ಹೀರೋ ಮಾಡಲಿದ್ದಾರಂತೆ. ರಾಜಮೌಳಿ ನೊಣವನ್ನಿಟ್ಟುಕೊಂಡು ಸಿನಿಮಾ ಮಾಡಿ ಗೆದ್ದರಲ್ಲಾ? ಹಾಗಿರಬಹುದು!
ಮುರುಗದಾಸ್ ಹಾಲಿವುಡ್ಡಿನ ಲಯನ್ ಕಿಂಗ್ ಮಾದರಿಯ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಎಲ್ಲ ಭಾಷೆಗಳಿಗೂ ಹೊಂದುವಂತೆ ತಯಾರಿ ಮಾಡಲಿದ್ದಾರೆ ಅನ್ನೋದು ನಿಜ. ಈ ಚಿತ್ರವನ್ನು ನಿರ್ಮಿಸಲು ಡಿಸ್ನಿ ಸಂಸ್ಥೆ ಜೊತೆ ಮಾತುಕತೆಗಳಾಗಿವೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಇವೆಲ್ಲದರ ನಡುವೆ ಮೊನ್ನೆ ಡಿಸೆಂಬರ್ 14ರ ಸೋಮವಾರ ಕೆ.ಜಿ. ಎಫ್ ಚಿತ್ರದ ನಿರ್ಮಾಪಕ, ಹೊಂಬಾಳೆ ಪ್ರೊಡಕ್ಷನ್ ವಿಜಯ್ ಕಿರಗಂದೂರು ಅವರೊಂದಿಗೆ ಚೆನ್ನೈನ ಸ್ಟಾರ್ ಹೊಟೇಲ್ ವೊಂದರಲ್ಲಿ ಮುರುಗದಾಸ್ ಭೇಟಿ ಮಾಡಿದ್ದಾರೆ.
ಹಲವು ತಾಸುಗಳ ಈ ಸುದೀರ್ಘ ಮೀಟಿಂಗಿನಲ್ಲಿ ಮಹತ್ತರವಾದ ಪ್ರಾಜೆಕ್ಟ್ ಬಗ್ಗೆ ಇವರಿಬ್ಬರೂ ಚರ್ಚಿಸಿದ್ದಾರಂತೆ. ಮುರುಗದಾಸ್ ಪ್ಲಾನ್ ಮಾಡಿರುವ ಅನಿಮೇಷನ್ ಸಿನಿಮಾಗೆ ನೂರಾರು ಕೋಟಿ ಖರ್ಚಾಗಲಿದ್ದು ವಿಜಯ್ ಕಿರಗಂದೂರು ಇದರಲ್ಲಿ ಹೂಡಿಕೆ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಈಗಷ್ಟೇ ಪ್ರಭಾಸ್ ಜೊತೆಗೊಂದು ಸಿನಿಮಾ ಅನೌನ್ಸ್ ಮಾಡಿರುವ ಕಿರಗಂದೂರು ಮುರುಗದಾಸ್ ಜೊತೆ ಸಿನಿಮಾ ಮಾಡೋದು ಪಕ್ಕಾ ಎನ್ನುವ ಮಾಹಿತಿ ಇದೆ. ಹೊಂಬಾಳೆ ಅನೌನ್ಸ್ ಮಾಡಲಿರುವ ಹೊಸ ಪ್ರಾಜೆಕ್ಟು ಇದೇ ಆಗಿರಲಿದೆಯಾ ಅಥವಾ ಬೇರೊಂದಾ ಅನ್ನೋದು ದಿನದೊಪ್ಪತ್ತಿನಲ್ಲಿ ಗೊತ್ತಾಗಲಿದೆ.
No Comment! Be the first one.