ನಮ್ಮ ಚಿತ್ರರಂಗ ಇರೋದೇ ಹೀಗೆ- ಆರಂಭದಲ್ಲಿ ಯಾರೂ ಕೈ ಹಿಡಿಯೋದಿಲ್ಲ. ಗೆದ್ದೆತ್ತಿನ ಬಾಲ ಹಿಡಿಯುವ ಚಾಳಿ ಇಲ್ಲಿನವರಿಗೆ ಹೊಸದೂ ಅಲ್ಲ. ನಟ ಅಭಿಷೇಕ್, ನಿರ್ಮಾಪಕ ನಾಗೇಶ್ ಕುಮಾರ್ ಆದಿಯಾಗಿ ಗಣಿ ತಂಡ ದೊಡ್ಡದೊಂದು ಗೆಲುವನ್ನು ದಕ್ಕಿಸಿಕೊಳ್ಳಲಿ.
ಸಿನಿಮಾವೊಂದು ಬಿಡುಗಡೆಯಾಗುತ್ತದೆ. ವಿಮರ್ಶಕರು ಮೆಚ್ಚಿ ಬರೆಯುತ್ತಾರೆ. ನೋಡಿದ ಪ್ರೇಕ್ಷಕರೂ ಅಪಾರವಾಗಿ ಇಷ್ಟಪಡುತ್ತಾರೆ. ಆದರೆ ಅಂದುಕೊಂಡಂತೆ ಜನ ಥೇಟರಿಗೆ ಬರೋದಿಲ್ಲ… ಇನ್ನು ಸುಮ್ಮನಿದ್ದರೆ ಸಿನಿಮಾವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಅಂತಾ, ವಿತರಕರಿಂದ ಚಿತ್ರವನ್ನು ವಾಪಾಸು ಪಡೆದು ತಾವೇ ಮುಂದುವರೆಸುತ್ತಾರೆ. ಬೆಂಗಳೂರಿನ ಮೇನಕಾ ಥಿಯೇಟರಿನಲ್ಲಿ ಐವತ್ತು ದಿನವನ್ನೂ ಪೂರೈಸುತ್ತದೆ… ಹಾಗೆ ಪ್ರದರ್ಶನಗೊಂಡ ಸಿನಿಮಾ ‘ನಮ್ ಗಣಿ ಬಿಕಾಂ ಪಾಸ್’. ಈಗ ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾವನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಪ್ರತಿಫಲವಾಗಿ ಬಿ.ಕಾಂ. ಗಣಿ ಹತ್ತನೇ ಪ್ಲೇಸಿಗೆ ಬಂದು ಕೂತಿದ್ದಾನೆ!
ಅಮೆಜ಼ಾನ್ ನಲ್ಲಿ ಚಿತ್ರಾಸಕ್ತರು ಇಷ್ಟಪಟ್ಟು ನೋಡುತ್ತಿದ್ದಾರೆ ಅನ್ನೋದು ಒಂದು ಕಡೆಯಾದರೆ, ಫೇಸ್ ಬುಕ್ಕು, ಯೂಟ್ಯೂಬ್, ಟೆಲಿಗ್ರಾಮುಗಳಲ್ಲಿ ಯಾರೋ ಪೈರಸಿ ಮಾಡಿ ಅಪ್ಲೋಡ್ ಮಾಡಿಬಿಟ್ಟಿದ್ದಾರೆ. ಎಷ್ಟೇ ಡಿಲೀಟ್ ಮಾಡಿದರೂ ಅದನ್ನು ತಡೆಯಲು ಸಾಧ್ಯವೇ ಆಗುತ್ತಿಲ್ಲ. ಟೆಲಿಗ್ರಾಮ್ ನಲ್ಲಿ ಹದಿನೈದು ಲಕ್ಷಕ್ಕೂ ಹೆಚ್ಚು ಶೇರ್ ಆಗಿದೆಯೆಂದರೆ, ‘ನಮ್ ಗಣಿ’ಯನ್ನು ಸಿನಿಮಾಪ್ರಿಯರು ಯಾವ ಮಟ್ಟಕ್ಕೆ ಮೆಚ್ಚಿದ್ದಾರೆ ಲೆಕ್ಕ ಹಾಕಿ. ಹೀಗೆ ಡಿಜಿಟಲ್ ಪ್ಲಾಟ್ಫಾರ್ಮಿನಲ್ಲಿ ಲಕ್ಷಗಟ್ಟಲೆ ಜನ ಸಿನಿಮಾ ನೋಡಿ ಮಜಾ ಮಾಡುತ್ತಿದ್ದಾರೆ. ಅಮೆಜ಼ಾನಿನಲ್ಲೇ ದಿನಕ್ಕೆ ಕಡಿಮೆ ಎಂದರೂ ಹತ್ತು ಸಾವಿರ ಮಂದಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಒಳ್ಳೇ ಮೆಸೇಜು, ಮನರಂಜನೆ, ಎಲ್ಲವೂ ಇರುವಂತಾ ಅಚ್ಚುಕಟ್ಟು ಚಿತ್ರ ಅಂತಾ ನೋಡಿದವರು ರಿವ್ಯೂ ಮಾಡುತ್ತಿದ್ದಾರೆ. ಆದರೆ ಚಿತ್ರೋದ್ಯಮದ ಒಬ್ಬೇ ಒಬ್ಬ ಸೆಲಿಬ್ರಿಟಿಗಳೂ ನಮ್ಮ ಸಿನಿಮಾದ ಬಗ್ಗೆ ಒಂದೊಳ್ಳೆ ಮಾತಾಡುವ ಮನಸ್ಸು ಮಾಡಿಲ್ಲ. ಹಾಗಾದರೆ ಸಿನಿಮಾ ರಂಗಕ್ಕೆ ಸಂಬಂಧಿಸಿದವರು ಯಾರೂ ನಮ್ಮ ಚಿತ್ರವನ್ನು ನೋಡೇ ಇಲ್ಲವಾ? ಥ್ರಿಲ್ಲರ್ ಮಂಜು ಒಬ್ಬರು ಮಾತ್ರ ‘ಎಷ್ಟು ಚೆಂದದ ಸಿನಿಮಾ ಮಾಡಿದ್ದೀರಿ’ ಅಂತಾ ಕರೆ ಮಾಡಿ ತಿಳಿಸಿದರು. ತಮ್ಮ ಆಪ್ತರಿಗೆಲ್ಲಾ ಚಿತ್ರವನ್ನು ನೋಡುವಂತೆ ತಿಳಿಸಿದ್ದಾರೆ. ಅದು ಬಿಟ್ಟು ಇಂಡಸ್ಟ್ರಿಗೆ ಸಂಬಂಧಿಸಿದವರು ಯಾರೂ ನಮ್ಮ ಕೈ ಹಿಡಿಯಲಿಲ್ಲ” ಎನ್ನುವ ಕೊರಗು ನಿರ್ಮಾಪಕ ನಾಗೇಶ್ ಕುಮಾರ್ ಅವರದ್ದು.
ನಿಜ. ನಾಗೇಶ್ ಕುಮಾರ್ ಅವರ ಅಭಿಪ್ರಾಯ ಸರಿಯಾಗೇ ಇದೆ. ನಮ್ಮ ಸಿನಿಮಾ ಸ್ಟಾರ್ಗಳು ಪ್ರಭಾವಿಗಳಿಗೆ ಮಾತ್ರ ಕೈ ಹಿಡಿಯೋದಾ? ‘ನಮ್ ಗಣಿ ಬಿಕಾಂ ಪಾಸ್ ಸಿನಿಮಾ ಚೆನ್ನಾಗಿದೆ ನೋಡಿ’ ಅಂತಾ ಒಂದೇ ಒಂದು ಟ್ವೀಟ್ ಮಾಡಬಹುದಿತ್ತಲ್ವಾ? ಎರಡು ಸಾಲು ಬರೆದು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಬಹುದಿತ್ತು. ಕಡೇ ಪಕ್ಷ ವಾಟ್ಸಾಪಿನಲ್ಲಾದರೂ ಒಂದು ಮೆಸೇಜು ಬಿಡಬಹುದಿತ್ತು. ಸಾಮಾನ್ಯ ಜನರು ಅಷ್ಟು ಇಷ್ಟ ಪಡುತ್ತಿರುವ ಚಿತ್ರವನ್ನು ಸಿನಿಮಾ ಮಂದಿ ಯಾಕೆ ಪ್ರಮೋಟ್ ಮಾಡುತ್ತಿಲ್ಲ? – ಇಂಥವೆಲ್ಲಾ ಯೋಚನೆ ಬರುವುದು ಸಹಜ. ಆದರೆ ಈ ಚಿತ್ರದ ನಿರ್ದೇಶಕ ಕಂ ಹೀರೋ ಅಭಿಷೇಕ್ ‘ನಮ್ ಗಣಿ’ಯನ್ನು ಮೀರಿಸುವಂತಾ, ಇದಕ್ಕಿಂತಾ ದೊಡ್ಡ ಹಿಟ್ ಸಿನಿಮಾಗಳನ್ನು ನೀಡುವಂತಾ ತಾಕತ್ತಿರುವ ಹುಡುಗ. ನಮ್ಮ ಚಿತ್ರರಂಗ ಇರೋದೇ ಹೀಗೆ- ಆರಂಭದಲ್ಲಿ ಯಾರೂ ಕೈ ಹಿಡಿಯೋದಿಲ್ಲ. ಗೆದ್ದೆತ್ತಿನ ಬಾಲ ಹಿಡಿಯುವ ಚಾಳಿ ಇಲ್ಲಿನವರಿಗೆ ಹೊಸದೂ ಅಲ್ಲ. ನಟ ಅಭಿಷೇಕ್, ನಿರ್ಮಾಪಕ ನಾಗೇಶ್ ಕುಮಾರ್ ಆದಿಯಾಗಿ ಗಣಿ ತಂಡ ದೊಡ್ಡದೊಂದು ಗೆಲುವನ್ನು ದಕ್ಕಿಸಿಕೊಳ್ಳಲಿ. ಜನಮೆಚ್ಚುವ ಸಿನಿಮಾಗಳನ್ನು ನಿರಂತರವಾಗಿ ಕೊಡುತ್ತಾ ಸಾಗಲಿ. ಆಗ ಎಲ್ಲರೂ ಜೊತೆಯಾಗುತ್ತಾರೆ! ಸದ್ಯಕ್ಕೆ ಪ್ರೈಮ್ ವಿಡಿಯೋದಲ್ಲಿರುವ ಚಿತ್ರವನ್ನು ಇನ್ನೂ ಯಾರ್ಯಾರು ನೋಡಿಲ್ಲವೋ? ತಕ್ಷಣ ನೋಡಲು ಶುರುಮಾಡಿ. ಖಂಡಿತಾ ನೀವು ಎಂಜಾಯ್ ಮಾಡ್ತೀರ…