ಕೌತುಕತೆ, ಕುತೂಹಲ, ಪ್ರತಿ ಸೀನಿಗೊಂದು ಹುಟ್ಟುವ ಪ್ರಶ್ನೆ, ಗೊಂದಲದ ಪಾತ್ರಗಳು, ಊಹೆಗೂ ನಿಲುಕದ ಟ್ವಿಸ್ಟುಗಳ ಸುತ್ತಲೇ ನನ್ನ ಪ್ರಕಾರದ ಕಥೆ ಸಾಗುತ್ತದೆ. ಕ್ರೈಂ ಡೈರಿ ಕಾರ್ಯಕ್ರಮದ ನಮಿತಾ ಜೈನ್ ನಿರೂಪಣೆಯ ಮೂಲಕ ತೆರೆದುಕೊಳ್ಳುವ ನನ್ನ ಪ್ರಕಾರದ ಕಥೆ ಅವರಿಂದಲೇ ಅಂತ್ಯವನ್ನು ಕಾಣುತ್ತದೆ.

ವಿಸ್ಮಯ ಎನ್ನುವ ಹುಡುಗಿಯ ಕೊಲೆ ಕೇಸಿನ ಜಾಡು ಹಿಡಿದ ಇನ್ಸ್‌ಪೆಕ್ಟರ್ ಅಶೋಕ್ (ಕಿಶೋರ್) ಕೇಸನ್ನು ಕೆದಕುತ್ತಾ ಸಾಗುತ್ತಿದ್ದಂತೆ ಉಂಟಾಗುವ ಗೊಂದಲಗಳು, ದಾರಿತಪ್ಪಿಸುವ ಸನ್ನಿವೇಶಗಳು ಪ್ರೇಕ್ಷಕರಿಗೆ ಅಚ್ಛರಿ ಮೂಡಿಸುತ್ತಾ ಸಾಗುತ್ತದೆ. ಪ್ರಮುಖ ಪಾತ್ರದಲ್ಲಿರುವ ಡ್ರಗ್ ಡೀಲರ್ ವಿಶಾಲ್ (ನಿರಂಜನ್ ದೇಶಪಾಂಡೆ) ನ ಆರಂಭದ ಸೀನುಗಳು, ಪೊಲೀಸರೊಂದಿಗಿನ ಮಾತುಕತೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಎಷ್ಟೇ ಸರ್ಕಸ್ ಮಾಡಿದರೂ ಸಹ ಕೊಲೆ ಕೇಸಿನ ವಿಚಾರವಾಗಿ ಕ್ಲೂ ಸಿಗದೇ ಹೆಣಗಾಡುವ ಅಶೋಕ್ ಗೆ ಹೆಂಡತಿ ಪಾತ್ರಧಾರಿಯ ಮೂಲಕ ಜಾಹೀರಾಗುವ ಮತ್ತೊಂದು ಸುಳಿವು ಹೊಸ ಕಥೆಯನ್ನು ತೆರೆದುಕೊಳ್ಳುವಂತೆ, ಅಲ್ಲೊಂದು ಲವ್ ಸ್ಟೋರಿಗೆ ದಾರಿ ಮಾಡಿಕೊಡುತ್ತದೆ. ಇನ್ನೇನು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಬಹುದೆನ್ನುವಷ್ಟರಲ್ಲಿ ಘಟಿಸುವ ಘಟನೆ ನನ್ನ ಪ್ರಕಾರವನ್ನು ದಡ ಮುಟ್ಟಿಸುತ್ತದೆ.

ಇನ್ಸ್‌ಪೆಕ್ಟರ್ ಪಾತ್ರಧಾರಿಯಾಗಿ ಕಿಶೋರ್ ಕುಮಾರ್ ನಟನೆಯಲ್ಲಿ ಹೊಸತನವಿದೆ. ಗತ್ತು, ಗಮ್ಮತ್ತಿನಲ್ಲಿಯೇ ಆರಂಭದಿಂದ ಅಂತ್ಯದವರೆಗೂ ಕಿಶೋರ್ ಸಂಯಮವನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೇ ಎಲ್ಲಿಯೂ ಪಾತ್ರದಿಂದ ಹೊರಬಂದಿಲ್ಲ. ಕೆಲವೇ ಸೀನುಗಳಲ್ಲಿ ಕಾಣಿಸಿಕೊಳ್ಳುವ ಪ್ರಿಯಾಮಣಿ ಇದ್ದಷ್ಟು ಘಳಿಗೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ನಿರಂಜನ್ ದೇಶಪಾಂಡೆ ಪಾತ್ರ ಚಿತ್ರದ ಮೊದಲಾರ್ಧದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ವಿಸ್ಮಯ ಪಾತ್ರಧಾರಿ ಲೀಲಾ ಮಯೂರಿ ಚಿತ್ರದಲ್ಲಿ ರಗಡ್ಡಾಗಿಯೇ ಮಿಂಚಿದ್ದಾರೆ. ಪ್ರಮೋದ್ ಶೆಟ್ಟಿ ಕ್ಲೈಮ್ಯಾಕ್ಸ್ ನಲ್ಲಿ ಕೊಡುವ ಶಾಕ್ ಥಿಯೇಟರ್ ನಲ್ಲಿದ್ದವರನ್ನು ನಿಬ್ಬೆರಗಾಗಿಸುತ್ತದೆ. ಸಿನಿಮಾ 85% ತಲುಪುವವರೆಗೂ ನನ್ನ ಪ್ರಕಾರ ಥ್ರಿಲ್ಲರ್ ಸಂಗತಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಸೀನಿಗೆ ತಕ್ಕಂತೆ ಅಲ್ಲಲ್ಲಿ ಕೇಳಿಸುವ ಹಿನ್ಮೆಲೆ ಸಂಗೀತ ಮತ್ತು ಸ್ಪೆಷಲ್ ಎಫೆಕ್ಟು ನನ್ನ ಪ್ರಕಾರಕ್ಕೆ ಪ್ಲಸ್ಸು. ಆದರೆ ಕೊಲೆಯನ್ನು ಭೇದಿಸಲು ಅಷ್ಟೆಲ್ಲಾ ಸರ್ಕಸ್ ಮಾಡುವ ಕಿಶೋರ್ ಕೇವಲ ಫುಟ್ ಪ್ರಿಂಟ್ ನಿಂದ ಸಸ್ಪೆಕ್ಟ್ ನ್ನು ಕಂಡು ಹಿಡಿಯೋದು ಕಾಮನ್ನು ಅನ್ನಿಸುತ್ತದೆ. ಅದನ್ನು ಹೊರತುಪಡಿಸಿ ಮೊದಲ ಪ್ರಯತ್ನದಲ್ಲಿಯೇ ನಿರ್ದೇಶಕ ವಿನಯ್ ಬಾಲಾಜಿ ಚೊಚ್ಚಲ ಚಿತ್ರವೆಂಬ ಸೀಕ್ರೆಟ್ ಬಿಟ್ಟುಕೊಡದೇ ಪ್ರೇಕ್ಷಕರು ನಿರೀಕ್ಷಿಸುವ ಮಟ್ಟಿಗೆ ಸಿನಿಮಾವನ್ನು ಕೌತುಕವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ವಿನಯ್ ಬಾಲಾಜಿ ಕಲ್ಪನೆಗೆ ತಕ್ಕಂತೆ ಕ್ಯಾಮೆರಾ ವರ್ಕು ಕೆಲಸ ಮಾಡಿದೆ. ಕಿಶೋರ್ ಹಾಗೂ ಪ್ರಿಯಾಮಣಿಯ ಹೂ ನಗೆ ಆಮಂತ್ರಿಸಿ ಹಾಡು ಪ್ರೇಮಿಗಳಿಗೆ ಹಾಗೂ ಜೋಡಿ ಜೀವಗಳಿಗೆ ಇಷ್ಟವಾಗುತ್ತದೆ. ಒಟ್ಟಾರೆ ಕ್ರೈಂ ಥ್ರಿಲ್ಲರ್ ಹೆಸರಿನಲ್ಲಿ ಅಲ್ಲಲ್ಲಿ ಬಂದು ಹೋಗುವ ಸಿನಿಮಾಗಳ ಮಧ್ಯೆ ನನ್ನ ಪ್ರಕಾರ  ಹೊಸ ಆಯಾಮ ಹಾಗೂ ಕ್ಷಣ ಕ್ಷಣಕ್ಕೂ ಮಜ ನೀಡುತ್ತದೆ. ಆ ಮೂಲಕ ಒಮ್ಮೆ ನೋಡಲೇಬೇಕಾದ ಸಿನಿಮಾ ಇದಾಗಿದೆ.

CG ARUN

ಬಿರಿಯಾನಿ ತಿನ್ನುತ್ತಾ ಐಂದ್ರಿ ಜೊತೆ ಮೂವಿ ನೋಡುತ್ತಿದ್ದ ದಿಗಂತನ ಬಗ್ಗೆ ಹೀಗೆಲ್ಲಾ…

Previous article

ಎಡವಬ್ಯಾಡ ಚಿಟ್ಟೆ!

Next article

You may also like

Comments

Leave a reply

Your email address will not be published. Required fields are marked *