ಕೋವಿಡ್-೧೯ ನ ಗೃಹಬಂಧನದ ಸಂದರ್ಭದಲ್ಲಿ ಕಲ್ಪಿಸಿಕೊಂಡ ಈ ಕಿರುಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ತಮ್ಮ ತಮ್ಮ ಮನೆಗಳಲ್ಲಿ ಕುಳಿತು ಮೊಬೈಲ್ ಮುಖಾಂತರ ಚಿತ್ರೀಕರಿಸಿರುವದೇ ಒಂದು ವಿಶೇಷ. ಈ ಕೊರೊನಾ ಎಂಬ ವೈರಸ್ಸಿಗೆ ಭಯಬಿದ್ದು ಬಳಲಿರುವ ಜನರ ಮುಖದಲ್ಲಿ ಅಲ್ಪ ಮಂದಹಾಸ ಹಾಗು ನಗುವನ್ನು ಮೂಡಿಸುವ ಒಂದು ಸಣ್ಣ ಪ್ರಯತ್ನವನ್ನು ನಟಿ, ನಿರ್ದೇಶಕಿ ಪದ್ಮಜಾ ರಾವ್ ಮಾಡಿದ್ದಾರೆ.
ಚಿತ್ರವೊಂದರಲ್ಲಿ ಅಮ್ಮನ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರನ್ನೂ ಭಾವುಕವಾಗಿ ಆವರಿಸಿಕೊಳ್ಳುವುದೆಂದರೆ ಸಣ್ಣ ವಿಚಾರವೇನಲ್ಲ. ಈ ನೆಲೆಯಲ್ಲಿ ನೋಡ ಹೋದರೆ ನಟಿ ಪದ್ಮಜಾ ರಾವ್ ತಮಗೆ ಸಿಕ್ಕ ಪ್ರತೀ ಪಾತ್ರದಲ್ಲೂ ತಮ್ಮನ್ನು ತಾವು ಅರ್ಪಿಸಿಕೊಂಡು ನಟಿಸುತ್ತಾ ಬಂದಿದ್ದಾರೆ.
ಬೇರೆ ಬೇರೆ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಅಡಿಯಿರಿಸಿದ್ದ ಪದ್ಮಜಾ ರಾವ್ ಅವರನ್ನು ಕನ್ನಡ ಪ್ರೇಕ್ಷಕರು ಪ್ರಮುಖವಾಗಿ ಗುರುತಿಸುವುದೇ ಅಮ್ಮನ ಪಾತ್ರದ ಮೂಲಕ. ಅದುವರೆಗೆ ನಾನಾ ಚಿತ್ರಗಳಲ್ಲಿ ನಟಿಸಿದ್ದರೂ ಅವರಿಗೆ ಭಾರೀ ಮನ್ನಣೆ ತಂದು ಕೊಟ್ಟಿದ್ದು ಮುಂಗಾರು ಮಳೆ ಚಿತ್ರದ ತಾಯಿ ಪಾತ್ರ. ಅಲ್ಲಿಂದೀಚೆಗೆ ಹತ್ತಾರು ಚಿತ್ರಗಳಲ್ಲಿ ಮನಸಲ್ಲುಳಿಯುವಂತೆ ಅಮ್ಮನ ಪಾತ್ರಕ್ಕೆ ಜೀವ ತುಂಬಿದ್ದು ಮತ್ತು ಪ್ರತೀ ಚಿತ್ರಗಳಲ್ಲಿಯೂ ತಮ್ಮ ಅಭಿನಯದ ಮೂಲಕವೇ ಗಮನ ಸೆಳೆಯುತ್ತಾ ಬಂದಿರುವುದು ಅವರ ನಿಜವಾದ ಹೆಚ್ಚುಗಾರಿಕೆ.
ಈ ಹಿಂದೆ ಲೀಲಾವತಿ, ಸಾವ್ಕಾರ್ ಜಾನಕಿ, ಸರೋಜಾ ದೇವಿ ಮುಂತಾದ ಹಿರಿಯ ನಟಿಯರು ಅಮ್ಮನ ಪಾತ್ರಕ್ಕೆ ಹೆಸರಾಗಿದ್ದರು. ಆ ನಂತರದಲ್ಲಿ ಲಕ್ಷ್ಮಿ, ಅರುಂಧತಿ ನಾಗ್, ಸುಮಲತಾ ಕೂಡಾ ಈ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ದಶಕದಿಂದೀಚೆಗೆ ಆ ಸ್ಥಾನ ತುಂಬಿಕೊಂಡಿರುವವರು ಪದ್ಮಜಾ ರಾವ್. ಮುಂಗಾರು ಮಳೆ ಚಿತ್ರದ ನಂತರ ಬಹುಶಃ ಪದ್ಮಜಾ ಅವರು ಅಮ್ಮನಾಗಿ ನಟಿಸಿದ ಚಿತ್ರ ತೆರೆ ಕಾಣದ ವರ್ಷಗಳು ಸಿಗೋದು ಡೌಟು. ಈ ಕ್ಷಣಕ್ಕೂ ಹತ್ತಾರು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಪದ್ಮಜಾ, ಯಾವ ಚಿತ್ರದ ತಾಯಿಯ ಪಾತ್ರಕ್ಕಾದರೂ ಮೊದಲು ನೆನಪಾಗೋವಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ. ಇದರ ಜೊತೆಗೆ ಕಿರುತೆರೆ ರಿಯಾಲಿಟಿ ಶೋ, ಸರ್ಕಾರಿ ಸಾಕ್ಷ್ಯಚಿತ್ರಗಳ ನಿರ್ದೇಶನ ಸೇರಿದಂತೆ ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಸದಾ ಬ್ಯುಸಿಯಾಗಿರುತ್ತಾರೆ.
ಇಂಥಾ ಪದ್ಮಜಾರಾವ್ ಈಗ ಕರೋನಾ ಲಾಕ್ ಡೌನ್ ಟೈಮಲ್ಲಿ ಸುಮ್ಮನೇ ಕೂರಲು ತಾನೆ ಹೇಗೆ ಸಾಧ್ಯ? ಇದ್ದಲ್ಲಿಂದಲೇ ‘ಒಂದು ಗಿಫ್ಟಿನ ಕಥೆ’ ಎನ್ನುವ ಮೂವತ್ತು ನಿಮಿಷದ ಶಾರ್ಟ್ ಸಿನೆಮಾವೊಂದನ್ನು ರೂಪಿಸಿದ್ದಾರೆ. ಅಮೆರಿಕಾ, ಕೆನಡಾ ಮತ್ತು ಕರ್ನಾಟಕ ಈ ಮೂರು ಸ್ಥಳಗಳಲ್ಲಿ ಈ ಕಿರುಚಿತ್ರ ಚಿತ್ರೀಕರಣಗೊಂಡಿದೆ. ಹನ್ನೊಂದು ಪಾತ್ರಗಳು, ಹತ್ತು ಜನ ಛಾಯಾಗ್ರಹಕರು ಇದರಲ್ಲಿದ್ದಾರೆ. ಸುಧಾ ಬೆಳವಾಡಿ, ಪ್ರವೀಣ್ ಡಿ. ರಾವ್, ಸುನೇತ್ರಾ-ರಮೇಶ್ ಪಂಡಿತ್, ಪದ್ಮಜಾ ರಾವ್, ಗಿರೀಶ್ ಜತ್ತಿ ಸೇರಿದಂತೆ ಪ್ರತಿಭಾವಂತ ಹೊಸ ಮುಖಗಳು ’ಒಂದು ಗಿಫ್ಟಿನ ಕಥೆ’ಯ ಭಾಗವಾಗಿದ್ದಾರೆ.
ಬೆಂಗಳೂರಿನ ಬಡಾವಣೆಯೊಂದರಲ್ಲಿ ಒಂದೇ ಬೀದಿಯಲ್ಲಿ ಶ್ರೀಮತಿ, ಶ್ರೀ ಜನಾರ್ಧನ ಮತ್ತು ಶ್ರೀ ಶರತ್ ಚಂದ್ರ ಎಂಬ ಎರಡು ಕುಟುಂಬವು ಎದುರು ಬದುರು ನೆಲೆಸಿರುತ್ತದೆ. ಆದರೆ ಇವರು ಮಧ್ಯೆ ಯಾವುದೆ ಹೊಂದಾಣಿಕೆ ಇಲ್ಲದೆ ಒಬ್ಬರನ್ನೊಬ್ಬರು ಯಾವಾಗಲೂ ದ್ವೇಷಿಸುತ್ತಾ ಪದೆ ಪದೆ ಜಗಳವಾಡುತ್ತಿರುತ್ತಾರೆ. ಆದರೆ ಇವರಿಬ್ಬರೂ ಕುಟುಂಬಕ್ಕೆ ವಯಸ್ಸಿಗೆ ಬಂದ ಮಕ್ಕಳಿದ್ದು, ಇವರ ಇಬ್ಬರು ಮಕ್ಕಳು ಪರಸ್ಪರ ಜೀವಕ್ಕಿಂತಾ ಹೆಚ್ಚಾಗಿ ಪ್ರೀತಿಸುತ್ತಿರುತ್ತಾರೆ. ಶರತ್ ಚಂದ್ರ ಅವರ ಮಗ ಅನಿರುದ್ಧನು ಅಮೆರಿಕಾದಿಂದ ಉಡುಗೊರೆಯುಳ್ಳ ಕವರ್ ಒಂದನ್ನು ಕೊರಿಯರ್ ಮುಖಾಂತರ ಕಳುಹಿಸಿರುತ್ತಾನೆ. ಅದು ತಪ್ಪಾಗಿ ಜನಾರ್ಧನ ಮನೆ ಸೇರುತ್ತದೆ. ಇದನ್ನರಿತ ಶರತ್ ಚಂದ್ರ ಸ್ನೇಹಿತ ಗಿರೀಶ್ ನಿಂದ ಜನಾರ್ಧನನ ಫೋನ್ ನಂಬರ್ ಪಡೆದು ಜನಾರ್ಧನ್ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾನೆ. ಅದು ತಪ್ಪಾಗಿ ರಕ್ಷಾ ಕೌಶಿಕ್ ಎಂಬುವ ಮಹಿಳೆಯ ನಂಬರ್ ಗೆ ಕರೆ ಹೊಗುತ್ತದೆ. ಇವರಿಬ್ಬರ ತಪ್ಪು ಗ್ರಹಿಕೆ ಮತ್ತು ವಾಗ್ವಾದದಿಂದ ಪ್ರಕರಣವು ಪೋಲಿಸ್ ಠಾಣೆ ಮೆಟ್ಟಿಲೇರುತ್ತದೆ. ನಂತರ ನಡೆಯುವ ಹಾಸ್ಯಭರಿತ ಗೊಂದಲಗಳಿಗೆ ಒಂದು ಗಿಫ್ಟಿನ ಕಥೆ ನೋಡಿ.