ಭೋಳೇತನವನ್ನು ಗಂಭೀರವಾದುದೇನನ್ನೋ ದಾಟಿಸುವ ವಾಹಕದಂತೆ ಬಳಸಿಕೊಂಡು ಬಂದಿರುವವರು ಯೋಗರಾಜ ಭಟ್. ನಿರ್ದೇಶಕರಾಗಿ ಜನಮಾನಸದಲ್ಲಿ ನೆಲೆಯೂರಿರುವ ಭಟ್ಟರನ್ನು ಗೀತರಚನೆಕಾರರಾಗಿ ಇಷ್ಟಪಡುವವರ ಸಂಖ್ಯೆಯೂ ದೊಡ್ಡದಿದೆ. ಅವರದ್ದೊಂದು ಚಿತ್ರ ಘೋಷಣೆಯಾದೇಟಿಗೆ ಮೊದಲು ಗಮನ ನೆಡುವುದು ಹಾಡುಗಳ ಮೇಲೆ!
ಸದ್ಯ ಅವರು ನಿರ್ದೇಶನ ಮಾಡಿರೋ ಪಂಚತಂತ್ರ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಯಥಾ ಪ್ರಕಾರವಾಗಿ ಈ ಚಿತ್ರದ ಹಾಡುಗಳ ಬಗೆಗೂ ಜನರಲ್ಲೊಂದು ಕತೂಹಲವಿದೆ. ಇದೀಗ ಯೋಗರಾಜ ಭಟ್ಟರು ಪಂಚತಂತ್ರದ ಐಟಂ ಸಾಂಗ್ ಒಂದನ್ನು ಚಿತ್ರೀಕರಿಸಿಕೊಂಡಿದ್ದಾರೆ!
ಶೃಂಗಾರದ ಹೊಂಗೇಮರ ಹೂ ಬಿಟ್ಟಿದೆ ಎಂಬ ಈ ಹಾಡನ್ನು ಯೋಗರಾಜ ಭಟ್ಟರು ಭಾರೀ ತಯಾರಿ ಮಾಡಿಕೊಂಡೇ ಚಿತ್ರೀಕರಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ನಾಯಕ ವಿಹಾನ್ ಮತ್ತು ನಾಯಕಿ ಸೋನಲ್ ಮೊಂತೇರೋ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಮೊದಲ ಸಾಲುಗಳಲ್ಲಿಯೇ ಮೋಹಕವಾಗಿ ಕಾಣಿಸೋ ಈ ಹಾಡು ಪಂಚತಂತ್ರದ ಪ್ರಧಾನ ಆಕರ್ಷಣೆಗಳಲ್ಲೊಂದು ಎಂಬ ಅಭಿಪ್ರಾಯವನ್ನೂ ಭಟ್ಟರು ಹೊರ ಹಾಕಿದ್ದಾರೆ.
ಐಟಂ ಸಾಂಗ್ ಎಂದರೆ ರಿದಂ ಅನ್ನೇ ಕೆರಳಿಸುವಂತೆ ಪದಗಳನ್ನು ಪೋಣಿಸೋದು ಎಂಬ ಟ್ರೆಂಡ್ ಒಂದಿದೆ. ಆದರೆ ಅದರಾಚೆಗೆ ಐಟಂ ಸಾಂಗಿಗೂ ಆರ್ದ್ರ ಕಂಪನಗಳನ್ನು ಕಟ್ಟಿದ ಕೀರ್ತಿ ಭಟ್ಟರಿಗೇ ಸಲ್ಲಬೇಕು. ಅದಕ್ಕೆ ಕಡ್ಡಿಪುಡಿ ಚಿತ್ರದ ಸೌಂದರ್ಯ ಸಮರ ಸೋತವನೆ ಅಮರ ಹಾಡಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಭಟ್ಟರು ಈ ಹಾಡನ್ನೂ ಕೂಡಾ ಅಂಥಾದ್ದೇ ಮೂಡಿನಲ್ಲಿ ಕಟ್ಟಿ ಕೊಟ್ಟಂತಿದೆ.
ಆರಂಭದಿಂದ ಒಂದೇ ಸಮನೆ ಚಿತ್ರೀಕರಣ ನಡೆಸಿಕೊಳ್ಳುತ್ತಿರೋ ಪಂಚತಂತ್ರ ಚಿತ್ರ ಈ ಹಾಡಿನ ಮೂಲಕ ನಿರ್ಣಾಯಕ ಹಂತ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಸಮಾಪ್ತಿಯಾಗಲಿದೆ.
#
No Comment! Be the first one.