ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ತಡವಾಗುತ್ತಿರೋದಕ್ಕೆ ಅಸಲೀ ಕಾರಣವನ್ನು ಸಿನಿಬಜ಼್ ನಿಮ್ಮ ಮುಂದೆ ತೆರೆದಿಟ್ಟಿತ್ತು. ಇದೀಗ ಧ್ರುವ ಅಮ್ಮ ಒಂದಷ್ಟು ಚೇತರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಹೊಸಾ ಹುರುಪಿನೊಂದಿಗೆ ಧ್ರುವ ಪೊಗರು ಚಿತ್ರದ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಈ ಸುದ್ದಿ ಕೇಳಿ ಖುಷಿಯಾಗಿರೋ ಅಭಿಮಾನಿಗಳಿಗೆ ಚಿತ್ರತಂಡ ಮತ್ತೊಂದು ಸರ್ಪ್ರೈಸನ್ನೂ ಕೊಟ್ಟಿದೆ!
ಪೊಗರು ಚಿತ್ರದಲ್ಲಿನ ಧ್ರುವ ಸರ್ಜಾರ ಫಸ್ಟ್ ಲುಕ್ ಫೋಟೋವೊಂದು ಹೊರ ಬಿದ್ದಿದೆ. ಇದನ್ನು ಕಂಡು ಅಭಿಮಾನಿಗಳೆಲ್ಲ ನಿಜಕ್ಕೂ ಥ್ರಿಲ್ ಆಗಿದ್ದಾರೆ. ಈವರೆಗೆ ನಟಿಸಿರೋ ಚಿತ್ರಗಳಲ್ಲೆಲ್ಲ ಬೇರೆ ಬೇರೆ ಗೆಟಪ್ಪುಗಳಲ್ಲಿಯೇ ಮಿಂಚಿದ್ದ ಧ್ರುವ ಸರ್ಜಾ ಲುಕ್ಕು ಈ ಚಿತ್ರದಲ್ಲಿ ಪೂರ್ತಿ ಬದಲಾಗಿದೆ. ಆ ರಗಡ್ ಲುಕ್ಕೇ ಪೊಗರು ಚಿತ್ರದ ನಿಜವಾದ ಖದರ್ ಅನ್ನೂ ಜಾಹೀರುಗೊಳಿಸಿದೆ!
ನೀಳ ಗಡ್ಡದೊಂದಿಗೆ ಸ್ಪರ್ಧೆಗೆ ಬಿದ್ದು ಬೆಳೆದಂತಿರೋ ಉದ್ದ ಕೂದಲಿನ ಅವತಾರದಲ್ಲಿ ಧ್ರುವ ಪೊಗರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ಕು ಅವಚರ ಅಭಿಮಾನಿಗಳಿಗೆಲ್ಲ ಇಷ್ಟವಾಗಿದೆ. ಇದುವರೆಗೂ ಈ ಚಿತ್ರದ ಚಿತ್ರೀಕರಣ ಆರಂಭಕ್ಕೆ ನಾನಾ ಅಡ್ಡಿ ಆತಂಕಗಳು ಎದುರಾಗುತ್ತಿದ್ದವು. ಆದರೆ ಈ ಬಾರಿ ಧ್ರುವ ಅಮ್ಮ ಕೂಡಾ ಚೇತರಿಸಿಕೊಂಡಿದ್ದಾರೆ. ಆದ್ದರಿಂದಲೇ ಒಂದೇ ಸಲಕ್ಕೆ ಇಪ್ಪತ್ತು ದಿನಗಳ ಚಿತ್ರೀಕರಣ ಮುಗಿಸಿಕೊಂಡು ಮೊದಲ ಹಂತವನ್ನು ಸಮಾಪ್ತಿಗೊಳಿಸಲು ಚಿತ್ರ ತಂಡ ನಿರ್ಧರಿಸಿದೆ.
ಈ ಚಿತ್ರವನ್ನು ಘೋಷಣೆ ಮಾಡಿ ಅದು ಪದೇ ಪದೆ ಡಿಲೇ ಆಗುತ್ತಾ ಬಂದಿದ್ದರಿಂದ ಧ್ರುವ ಸರ್ಜಾರಷ್ಟೇ ಕಂಗಾಲಾಗಿದ್ದವರು ನಿರ್ದೇಶಕ ನಂದಕಿಶೋರ್. ಕಡೆಗೂ ಕಂಟಕಗಳನ್ನೆಲ್ಲ ಕಳೆದುಕೊಂಡ ಧ್ರುವ ಮತ್ತೆ ಚಿತ್ರೀಕರಣಕ್ಕೆ ಆಗಮಿಸಿದ್ದರಿಂದ ನಂದಕಿಶೋರ್ ಖುಷಿಗೊಂಡಿರಬಹುದು!
#