ಕೇರಳದ ಕೊಯಂಬತ್ತೂರಿನಿಂದ ಶುರುವಾಗಿದ್ದ ಅಂಬಿಪುತ್ರನ ಅಮರ್ ಚಿತ್ರದ ಯಾತ್ರೆ ಕರ್ನಾಟಕದ ಭಾಗಗಳನ್ನು ಸುತ್ತಿ ಸಮಾಪ್ತಿಗೊಂಡಿದೆ. ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿರುವ ನಿರ್ದೇಶಕ ನಾಗಶೇಖರ್ ಇದೀಗ ಚಿತ್ರ ತಂಡದೊಂದಿಗೆ ಅಬ್ರಾಡ್ ನತ್ತ ಹಾರಲು ರೆಡಿಯಾಗಿದ್ದಾರೆ!
ಮೊದಲ ಹಂತದ ಚಿತ್ರೀಕರಣವನ್ನು ಅಂದುಕೊಂಡಂತೆಯೇ ಮಾಡಿ ಮುಗಿಸಿಕೊಂಡಿರೋ ನಾಗಶೇಖರ್, ಎರಡನೇ ಹಂತಕ್ಕೆ ಪಕ್ಕಾ ತಯಾರಿ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಇಡೀ ಚಿತ್ರ ತಂಡ ಸ್ವಿಟ್ಜರ್ಲ್ಯಾಂಡಿಗೆ ತೆರಳಲಿದೆ. ಆ ಬಳಿಕ ಒಂದು ದಿನದ ವಿರಾಮದ ನಂತರ ನಿರಂತರವಾಗಿ ಇಪ್ಪತ್ತು ದಿನಗಳ ಕಾಲ ಅಲ್ಲಿಯೇ ಚಿತ್ರೀಕರಣ ನಡೆಯಲಿದೆಯಂತೆ.
ಮೊದಲ ಹಂತದಲ್ಲಿ ಕೊಯಂಬತ್ತೂರಿನಿಂದ ಶುರುವಾಗಿದ್ದ ಚಿತ್ರೀಕರಣ ಬೆಳಗಾವಿಗೆ ಬಂದು ಅಲ್ಲಿಂದ ಮಡಿಕೇಡಿ, ಮಂಗಳೂರು ಮುಂತಾದೆಡೆಗಳಲ್ಲಿ ಯಶಸ್ವಿಯಾಗಿ ನಡೆದಿತ್ತು. ಬೈಕ್ ರೇಸಿನ ಪ್ರಧಾನ ಕಥಾ ಹಂದರ ಹೊಂದಿರೋ ಈ ಚಿತ್ರದ ಚಿತ್ರೀಕರಣಕ್ಕೆ ರಿಯಲ್ ಬೈಕರ್ಸ್ ಸಾಥ್ ಕೊಟ್ಟಿದ್ದರು. ಇದೀಗ ವಿದೇಶದ ಸುಂದರ ತಾಣಗಳಲ್ಲಿ ಈ ಚಿತ್ರೀಕರಣ ಮತ್ತಷ್ಟು ಬಿರುಸಿನಿಂದ ನಡೆಯಲಿದೆ.
ನಿರ್ದೇಶಕ ನಾಗಶೇಖರ್ ಈ ಚಿತ್ರದ ವಿಚಾರದಲ್ಲಿ ಪಾದರಸದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ನಾಗಶೇಖರ್ ಅವರನ್ನು ನಿರ್ದೇಶನಕ್ಕೆ ಆಯ್ಕೆ ಮಾಡಿದಾಗ ಹಲವರು ಅಪಸ್ವರ ಎತ್ತಿದ್ದರು. ಅಂಬಿ ಅಭಿಮಾನಿಗಳೂ ಕೂಡಾ ಇದು ತಪ್ಪು ನಿರ್ಧಾರ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಆದರೀಗ ನಾಗಣ್ಣನ ಸ್ಪೀಡು, ಕಾರ್ಯ ವೈಖರಿ ಕಂಡು ಖುದ್ದು ಅಂಬರೀಶ್ ಅವರೇ ಅಚ್ಚರಿಗೊಂಡಿದ್ದಾರಂತೆ!
#