ಇದು ರಾಜಗಾಂಭೀರ್ಯದ ಸಿದ್ಧಾರ್ಥ್ ಮತ್ತು ಪಕ್ಕಾ ಲೋಕಲ್ ಹುಡುಗ ಪ್ರಥಮ್ ಭೇಟಿಯ ಕ್ಷಣಗಳ ಸಣ್ಣ ಮೆಲುಕು.
ಅದು 2016. ಶಿವಣ್ಣ ಅವರ ಮಗಳು ನಿರುಪಮ-ದಿಲೀಪ್ ಮದುವೆ ದಿನ. ಅಂದು ನಟ ಪ್ರಥಮ್ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರೊಟ್ಟಿಗೆ ಮದುವೆ ಹೋಗಿದ್ದರಂತೆ. ಶ್ರೀಕಾಂತ್ ಅವರು ಟಪಕ್ಕಂತಾ ಒಬ್ಬರನ್ನು ಪ್ರಥಮ್ ಗೆ ತೋರಿಸಿ ‘ಯಾರು ಗೊತ್ತೇನೋ ಅವ್ರು ಅಂದಿದ್ದಾರೆ. ‘ಗೊತ್ತಿಲ್ಲ’ ಅಂದ ಪ್ರಥಮನಿಗೆ “ಅವ್ರು ಕಾಫಿ ಡೇ ಓನರ್ರು… ಎಸ್ಸೆಂ ಕೃಷ್ಣ ಅವ್ರ ಅಳಿಯ ಕಣೋ… ಹೋಗು ಪರಿಚಯ ಮಾಡ್ಕೋ” ಅಂದರಂತೆ. “ಅಲ್ಲ ಸರ್… ನಮ್ಮ ಕನ್ನಡದಲ್ಲಿ ಒಂದು ಸಿನಿಮಾಗೆ ಸಣ್ಣ ಚೂರು ದುಡ್ಡು ಹಾಕಿದವರೂ ದೊಡ್ಡ ದೊಡ್ಡ ಫೋಟೋ ಹಾಕೊಂಡು ಪೋಸ್ ಕೊಡ್ತಾರೆ. ಇವರ ಫೋಟೋನೇ ಎಲ್ಲೂ ಕಾಣ್ಸಲ್ಲ ನನಗೆ ಹೇಗೆ ಗೊತ್ತಾಗಬೇಕು ಸರ್” ಅಂದವರೇ, ಸಿದ್ಧಾರ್ಥ್ ಅವರ ಮುಂದೆ ನಿಂತು “ಸರ್ ನನಗೆ ನಿಮ್ಮ ಕಾಫಿಡೇಯವರು ನಾಲ್ಕು ರುಪಾಯಿ ಬಾಕಿ ಕೊಡ್ಬೇಕಿತ್ತು… ಅಯ್ಯೋ ನಾನ್ ನಿಮ್ಮನ್ನ ಕೇಳಲ್ಲ ಬಿಡಿ ಸರ್. ಆದರೆ ಒಂದೇ ಒಂದು ಸೆಲ್ಫಿ ಕೊಡಿ” ಅಂದರಂತೆ. ತಕ್ಷಣ ನಗುನಗುತ್ತಾ ಫೋಟೋಗೆ ಪೋಸು ಕೊಟ್ಟಿದ್ದರಂತೆ ಸಿದ್ಧಾರ್ಥ್!
ಅದಾಗಿ ಕೆಲವೇ ದಿನಗಳಲ್ಲಿ ಪ್ರಥಮ್ ಬಿಗ್ ಬಾಸ್ ಮನೆಗೆ ಹೋಗಿ ಗೆದ್ದು ಬಂದಿದ್ದರು. ಆಗ ಪುನೀತ್ ರಾಜ್ ಕುಮಾರ್ ಅವರನ್ನು ಮೀಟ್ ಮಾಡಿಬರಲು ಹೋದ ಪ್ರಥಮ್ಗೆ ಸದಾಶಿವನಗರದಲ್ಲಿ ಮತ್ತೆ ಎದುರಾದವರು ಇದೇ ಸಿದ್ಧಾರ್ಥ್. ಮತ್ತೆ ಅವರ ಮುಂದೆ ನಿಂತ ಪ್ರಥಮ ‘ಸರ್ ನನ್ನ ಹೆಸರು ಪ್ರಥಮ್…’ ಅಂತಾ ಶುರು ಮಾಡುತ್ತಿದ್ದಂತೇ, “ನೀವ್ ಯಾರಿಗ್ರೀ ಗೊತ್ತಿಲ್ಲ ಬಿಗ್ ಬಾಸ್! ನಿಮ್ಮ ಒಂದಿಷ್ಟು ಎಪಿಸೋಡುಗಳನ್ನು ನೋಡ್ತಿದ್ದೆ. ಖುಷಿಯಾಗಿತ್ತು. ಗೆದ್ದಾಗ ಶರ್ಟು ಬಿಚ್ಚಿಕೊಂಡು ಓಡಾಡಿದ್ರಲ್ಲ” ಎಂದು ನೆನಪು ಮಾಡಿಕೊಂಡರಂತೆ. “ಸರ್ ನಿಮ್ಮದೇ ಕಾಫಿ ಡೇ ಇದ್ರೂ ನೀವು ಮನೇಲಿ ಕಾಪ್ಲಾನು ಕುಡೀಬೋದು. ಅದಕ್ಕೇ ಇಷ್ಟುದ್ದ ಇದೀರ” ಅಂತಾ ಪ್ರಥಮ್ ಕಿಚಾಯಿಸುತ್ತಿದ್ದಂತೇ ದೊಡ್ಡ ನಗೆಯ ಮೂಲಕ ಕೈಕುಲುಕಿ, ಫೋನ್ ನಂಬರು ಕೊಟ್ಟು ಹೊರಟರಂತೆ.
ಸಿದ್ಧಾರ್ಥ್ ಅವರು ಸತ್ತ ದಿನ ಅವರ ಕಳೇಬರದ ಫೋಟೋವನ್ನು ಫೇಸ್ ಬುಕ್ಕಲ್ಲಿ ಹಾಕೋದು ಪ್ರಥಮ್ ಗೆ ಇಷ್ಟವಾಗಲಿಲ್ಲವಂತೆ. ಒಬ್ಬ ವ್ಯಕ್ತಿಯ ನಗುಮುಖವನ್ನು ಕೊನೆಯ ಬಾರಿಗೆ ನೋಡಿದ್ದೆ ಅದೇ ನನ್ನ ಮನಸ್ಸಿನಲ್ಲುಳಿಯಲಿ ಅಂತಾ ಸುಮ್ಮನಾದರಂತೆ. ಸದಾ ನಗುನಗುತ್ತಾ, ಎದುರಿಗಿದ್ದವರನ್ನೆಲ್ಲಾ ನಗಿಸುತ್ತಾ ಓಡಾಡುವ ಪ್ರಥಮ್ ಕಣ್ಣಲ್ಲೇ ಹನಿ ಜಿನುಗುವಂತೆ ಮಾಡಿದ ಕಾಫಿ ದೊರೆ ಸಿದ್ಧಾರ್ಥ್ ಅವರ ಸಾವು ನಿಜಕ್ಕೂ ದುಃಖದ ವಿಚಾರ…
No Comment! Be the first one.