ಅನ್ಯಾಯಕ್ಕೊಳಗಾದವರ ಮಾನ ಪ್ರಾಣ ಕಾಪಾಡಲು ಇರುವ ಕಾನೂನು, ವ್ಯವಸ್ಥೆಯನ್ನು ಜನ ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಈಗ ನಮ್ಮ ಕಣ್ಮುಂದೆಯೇ ಇದೆ.
ತಿಂಗಳುಗಳ ಹಿಂದೆ ಕನ್ನಡದ ಕೆಲವು ಟೀವಿ ವಾಹಿನಿಗಳಲ್ಲಿ ʻಅವಕಾಶ ಕೊಡಿಸುವ ನೆಪದಲ್ಲಿ ಮಹಿಳೆಯ ಅತ್ಯಾಚಾರ ಮಾಡಿದ ನಿರ್ಮಾಪಕʼ ಎನ್ನುವ ಸುದ್ದಿಯೊಂದು ಪ್ರಕಟವಾಗಿತ್ತು. ಅದು ೫ಡಿ ಮತ್ತು ಕಲರ್ ಆಫ್ ಟೆಮೇಟೋ ಚಿತ್ರದ ನಿರ್ಮಾಪಕಿ ಸ್ವಾತಿ ಅವರ ಪತಿ ಕುಮಾರ್ ವಿರುದ್ಧ ದಾಖಲಾಗಿದ್ದ ಕೇಸು. ಅವಕಾಶದ ಹೆಸರಿನಲ್ಲಿ ನಿರ್ಮಾಪಕಿಯ ಪತಿ ಹೀಗೆ ಮಾಡಿದ್ದಾರೆ ಅಂದಿದ್ದರೆ ನಂಬಬಹುದಿತ್ತೇನೋ? ಆದರೆ, ಇದೇ ಮಹಿಳೆಯಿಂದ ಕುಮಾರ್ ಎಪ್ಪತ್ತೈದು ಲಕ್ಷ ರೂಪಾಯಿ ಹಣ ಪಡೆದಿದ್ದರು ಅಂತಲೂ ಮಾಹಿತಿ ಬಂದಿತ್ತು. ಆ ಕ್ಷಣವೇ ಬಹುತೇಕರಿಗೆ ಇದು ಹಣದ ವ್ಯವಹಾರದ ಸುತ್ತ ಹರಡಿಕೊಂಡಿರುವ ಫೇಕ್ ಸ್ಟೋರಿ ಅನ್ನೋದು ಮನದಟ್ಟಾಗಿಹೋಗಿತ್ತು. ಈಗ ಈ ಪ್ರಕರಣ ಹಲವು ಆಯಾಮಗಳನ್ನು ಪಡೆದಿದೆ. ನಿಜಕ್ಕೂ ಕುಮಾರ್ ಮಾಡಿದ್ದು ಅತ್ಯಾಚಾರವಾ? ಅನ್ನೋದನ್ನು ನ್ಯಾಯಾಲಯ ತೀರ್ಮಾನ ಮಾಡಲಿದೆ.
ಆಗಿದ್ದೇನು?
ಕುಮಾರ್ ತಮ್ಮ ಪತ್ನಿಯ ಹೆಸರಿನಲ್ಲಿ ಸಿನಿಮಾ ನಿರ್ಮಿಸುವುದರ ಜೊತೆಗೆ ಲ್ಯಾಂಡ್ ಡೆವಲಪ್ ಕೆಲಸವನ್ನೂ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ಮನೆ ತುಂಬಾ ಬರೀ ಜಂಭ ಎನ್ನುವ ಚಿತ್ರವನ್ನು ಇದೇ ಕುಮಾರ್ ನಿರ್ಮಿಸಿದ್ದರು. ಆ ನಂತರ ಎಸ್ ನಾರಾಯಣ್ ನಿರ್ದೇಶನದ ಫೈವ್ ಡಿ ಮತ್ತು ಯುವ ನಿರ್ದೇಶಕ ತಾಯಿ ಲೋಕೇಶ್ ನಿರ್ದೇಶನದ ಕಲರ್ ಆಫ್ ಟಮೆಟೋ ಎನ್ನುವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಫೈವ್ ಡಿ ಇನ್ನೇನು ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರವೊಂದಕ್ಕೇ ಕುಮಾರ್ ಮತ್ತು ಸ್ವಾತಿ ಬರೋಬ್ಬರಿ ಮೂರೂವರೆ ಕೋಟಿಗೂ ಅಧಿಕ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಕೋವಿಡ್ ಕೊಟ್ಟ ಏಟಿಕೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಕಾಗಿತ್ತು. ಅಷ್ಟೊತ್ತಿಗೇ ಸೆಟ್ಟೇರಿದ್ದ ಸಿನಿಮಾಗಳು ಇದ್ದ ಬದ್ದ ಹಣವನ್ನು ತಿಂದಿದ್ದವು. ಆ ಸಮಯದಲ್ಲಿ ಆರ್ಥಿಕ ಹೊರೆ ತಾಳಲಾರದೆ, ಪ್ರೇಮಾ ಕುಮಾರಿ ಎನ್ನುವ ಮಹಿಳೆಯಿಂದ ಕುಮಾರ್ ಸರಿಸುಮಾರು ಅರವತ್ತು ಲಕ್ಷದಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರು. ಅದೂ ಒಂದೇ ಸಲ ಪಡೆದಿದ್ದಲ್ಲ. ಅಗತ್ಯಬಿದ್ದಾಗೆಲ್ಲಾ ಈಕೆ ಕುಮಾರ್ ಅವರಿಗೆ ದುಡ್ಡು ಕೊಟ್ಟಿದ್ದಳು ಅನ್ನೋದೇನೋ ನಿಜ. ಅದಕ್ಕೆ ಪ್ರತಿಯಾಗಿ ನಿರ್ಮಾಪಕ ಕುಮಾರ್ ಕೂಡ ಕಾಲಕಾಲಕ್ಕೆ ಬಡ್ಡಿ ಕಟ್ಟುತ್ತಾ ಹೋಗಿದ್ದರು. ಆರಂಭದಲ್ಲಿ ಎರಡು ಮೂರು ಪರ್ಸೆಂಟ್ ಅಂತಾ ಹೇಳಿದ್ದ ಪ್ರೇಮಾ ದಿನ ಕಳೆದಂತೆ, ಹತ್ತು ಹದಿನೈದು ಪರ್ಸೆಂಟ್ ಬಡ್ಡಿ ವಸೂಲಿ ಮಾಡಲು ನಿಂತಳು. ಬಡ್ಡಿ, ಚಕ್ರಬಡ್ಡಿಗಳೇ ಬೆಟ್ಟದಂತೆ ಏರಿಕೊಂಡು ಹೋಗುತ್ತಿದ್ದ ಹೊತ್ತಲ್ಲಿ, ಪಡೆದಿದ್ದ ಸಾಲವನ್ನು ತೀರಿಸೋದು ಕುಮಾರ್ ಅವರಿಗೆ ಕಷ್ಟ ಸಾಧ್ಯವಾಗಿತ್ತು. ಅಷ್ಟರಲ್ಲಾಗಲೇ ಪಡೆದಿದ್ದ ಅರವತ್ತು ಲಕ್ಷ ಹಣಕ್ಕೆ ಎರಡು ಪಟ್ಟು ಬಡ್ಡಿ ಕಟ್ಟಿದ್ದರಂತೆ. ʻಇನ್ನು ನನ್ನಿಂದ ಬಡ್ಡಿ ಹಣ ಕೊಡಲು ಸಾಧ್ಯವಿಲ್ಲ. ಮೊದಲು ಪಡೆದ ಅಸಲನ್ನು ತೀರಿಸುತ್ತಾ, ಕಂತಿನ ರೂಪದಲ್ಲಿ ಸಾಲ ಮರು ಪಾವತಿ ಮಾಡುತ್ತೀನಿ ಅಂತಾ ಹೇಳಿದ್ದರು. ಅಲ್ಲಿಂದೀಚೆಗೆ ಪ್ರೇಮಾ ಕುಮಾರಿ ತನ್ನ ಉಪಟಳವನ್ನು ಆರಂಭಿಸಿದ್ದಳು.
ಇದೆಲ್ಲದರ ಜೊತೆಗೇ ಕುಮಾರ್ ಮೇಲೆ ಪ್ರೇಮಾ ಕುಮಾರಿಗೆ ಅದೇನು ಮೋಹ ಬೆಳೆದಿತ್ತೋ ಗೊತ್ತಿಲ್ಲ. ಪ್ರೇಮಾ ಕುಮಾರಿಗೆ ಅದಾಗಲೇ ಅಫಿಷಿಯಲ್ಲಾಗಿ ಎರಡು ಮದುವೆಯಾಗಿತ್ತು. ಮೊದಲ ಗಂಡ ಬಿಟ್ಟುಹೋಗಿದ್ದಾನಂತೆ. ಈಕೆಯ ಎರಡನೇ ಗಂಡ ಅದ್ಯಾವ ಕಾರಣಕ್ಕೆ ಪ್ರಾಣ ಬಿಟ್ಟ ಅನ್ನೋ ಕಾರಣ ನಿಖರವಾಗಿ ಗೊತ್ತಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಪರಿಚಯವಾಗಿ, ಸಲುಗೆ ಬೆಳೆಸಿಕೊಂಡಿದ್ದ ಕುಮಾರ್ ಮೇಲೆ ಪ್ರೇಮಾ ಕುಮಾರಿ ವಿಪರೀತ ಬಯಕೆ ಇರಿಸಿಕೊಂಡಿದ್ದಳಂತೆ. ಖುದ್ದು ಕುಮಾರ್ ಪತ್ನಿಗೆ ಕಾಲ್ ಮಾಡಿ ನಿನ್ನ ಗಂಡನ್ನ ನನ್ನ ಮನೆಗೆ ಕಳಿಸು ಅಂತಾ ಕೇಳುತ್ತಿದ್ದಳಂತೆ. ಮೆಸೇಜು ಮಾಡಿ ಪೀಡಿಸುತ್ತಿದ್ದಕ್ಕೂ ಆಧಾರಗಳಿವೆ.
ಹಣದ ವ್ಯವಹಾರದಲ್ಲಿ ಆರಂಭಗೊಂಡು ಇನ್ಯಾವುದೋ ದಿಕ್ಕಿಗೆ ನಡೆದ ಈ ಪ್ರಕರಣ ಕೊನೆಗೆ ಅತ್ಯಾಚಾರದ ಕೇಸಿನ ತನಕ ಬಂದು ನಿಂತಿದೆ.
ಒಂದು ಕಡೆ ವಿಪರೀತ ಬಡ್ಡಿ ದಾಹದ ಜೊತೆಗೆ ಕುಮಾರ್ ಮೇಲೇ ಕಣ್ಣಿಟ್ಟಿದ್ದ ಪ್ರೇಮಾ ಕುಮಾರಿ ಮಾಡಿದ ಅನಾಹುತದ ಕೆಲಸ ಒಂದೆರಡಲ್ಲ. ಅದೊಂದು ದಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ಹೇಳಿಕೆ ಪಡೆಯುವ ನೆಪದಲ್ಲಿ ಕುಮಾರ್ ಅವರನ್ನು ಕರೆಸಿದ್ದರು. ಮಂಜುನಾಥ್ ಎನ್ನುವ ಇನ್ಸ್ ಪೆಕ್ಟರ್ ಆಗ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿದ್ದರು. ಪ್ರೇಮಾ ಕುಮಾರಿ ಸಾಹೇಬರ ಹತ್ತಿರ ಅದೇನು ನೋವು ತೋಡಿಕೊಂಡಿದ್ದಳೋ ಗೊತ್ತಿಲ್ಲ. ಇನ್ಸ್ಪೆಕ್ಟರ್ ಮಂಜುನಾಥ್ ಅಂದು ಕರೆಸಿಕೊಂಡು ಏಕಾಏಕಿ ಅತ್ಯಾಚಾರದ ಆರೋಪ ಫಿಕ್ಸ್ ಮಾಡಿ ಜೈಲಿಗೆ ಕಳಿಸಿಬಿಟ್ಟಿದ್ದರು. ಬರೋಬ್ಬರಿ ಇಪ್ಪತ್ತಮೂರು ದಿನಗಳಷ್ಟು ಕಾಲ ಮಾಡದ ತಪ್ಪಿಗಾಗಿ ಸೆರೆವಾಸ ಅನುಭವಿಸಿ ಬಂದಿದ್ದರು ಕುಮಾರ್. ಸದ್ಯ ಪ್ರಕರಣ ನ್ಯಾಯಾಲಯದ ವ್ಯಾಪ್ತಿಯಲ್ಲಿದೆ. ಅದು ಇತ್ಯರ್ಥಗೊಳ್ಳುವ ಮೊದಲೇ ಪ್ರೇಮಾ ಕುಮಾರಿ ಕುಮಾರ್ ಮತ್ತು ಅವರ ಪತ್ನಿ ಸ್ವಾತಿ ಮೇಲೆ ಜ್ಞಾನ ಭಾರತಿ ಮತ್ತು ಅನ್ನಪೂರ್ಣೇಶ್ವರಿ ನಗರ ಠಾಣೆಗಳಲ್ಲಿ ದೂರು ಕೊಡುತ್ತಲೇ ಇದ್ದಾಳೆ.
ಜಾತಿ ನಿಂದನೆ ಮಾಡಿದ ನೀಚ ಬುದ್ದಿಯ ಪ್ರೇಮಿ!
ಒಂದು ಕಡೆ ಕುಮಾರ್ ಜೊತೆ ಹಣಕಾಸಿನ ವ್ಯವಹಾರ ಮಾಡಿ, ಅವರ ಮೇಲೇ ಕಣ್ಣಿಟ್ಟಿದ್ದ ಪ್ರೇಮಾ ಕುಮಾರಿ ತೀರಾ ಈ ಮಟ್ಟಿಗಿನ ವರಸೆ ಆರಂಭಿಸಬಾರದಿತ್ತು. ಕಳೆದ ಏಳೆಂಟು ತಿಂಗಳ ಅವಧಿಯಲ್ಲಿ ಸ್ವಾತಿ ಮೊಬೈಲಿಗೆ ಪ್ರೇಮಾ ಕಳಿಸಿರುವ ಸಂದೇಶಗಳು ನಿಜಕ್ಕೂ ಅಮಾನವೀಯ. ʻನನ್ನ ಜಾತಿ ಮೇಲು. ನಿನ್ನ ಜಾತಿ ಸರಿ ಇಲ್ಲʼ ಎನ್ನುವಂಥಾ ಮೆಸೇಜು ಕಳಿಸಿ ತನ್ನ ದುಷ್ಟತನವನ್ನು ಮೆರೆದಿದ್ದವಳು ಪ್ರೇಮಾ. ತೀರಾ ಇತ್ತೀಚೆಗೆ ಸ್ವಾತಿ ಉಲ್ಲಾಳು ಸಿಗ್ನಲ್ ಬಳಿ ನಿಂತಿದ್ದಾಗ, ತನ್ನ ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದ ಲೇಡಿ ಡಾನ್ ಪ್ರೇಮಾ ಕುಮಾರಿ ತೀರಾ ತುಚ್ಛವಾದ ಮಾತಾಡಿ ಜಾತಿ ನಿಂದನೆ ಮಾಡಿದ್ದಾಳೆ.
ಸದ್ಯ ಜ್ಞಾನಭಾರತಿ ಠಾಣೆಯಲ್ಲಿರುವ ಖಡಕ್ ಅಧಿಕಾರಿ ರವಿ ಮತ್ತವರ ತಂಡ ಸರ್ಕಲ್ಲಿನ ಸಿಸಿ ಕ್ಯಾಮೆರಾಗಳನ್ನು ತೆಗೆಸಿದರೆ, ಪ್ರೇಮಾ ಕುಮಾರಿ ಆಧಾರ ಸಮೇತ ಸಿಕ್ಕಿ ಬೀಳೋದು ಖಚಿತ. ಅದಕ್ಕೆ ಎಸಿಪಿ ಪರಮೇಶ್ವರ್ ಅವರು ಸಾಥ್ ಕೊಡಬೇಕು ಅಷ್ಟೇ.
ವ್ಯವಹಾರ, ಸಂಬಂಧಗಳು ಏನೇ ಇರಲಿ, ಹೆಣ್ಣುಮಗಳೊಬ್ಬಳನ್ನು ಜಾತಿಯ ಹೆಸರು ಹೇಳಿ ನಿಂದಿಸುವುದು ಶಿಕ್ಷಾರ್ಹ. ತುಂಬು ಗರ್ಭಿಣಿ ಸ್ವಾತಿ ಪ್ರೇಮಾ ಕುಮಾರಿಯ ನಿಂದನೆಯಿಂದ ವಿಪರೀತ ಮನನೊಂದಿದ್ದಾರೆ. ಒಂದು ವೇಳೆ ಪ್ರೇಮಾ ಕುಮಾರಿ ತನ್ನ ಪ್ರಭಾವಳಿಗಳನ್ನು ಬಳಸಿ, ಕಾನೂನಿನ ಇಕ್ಕಳದಿಂದ ಬಚಾವಾಗಬಹುದು. ಆದರೆ, ಆ ಹೆಣ್ಣುಮಗಳ ಕಣ್ಣೀರು ಈಕೆಯನ್ನು ಸುಮ್ಮನೇ ಬಿಡುತ್ತಾ?
ಜಾತಿನಿಂದನೆ ಮಾಡಿವರಿಗೆ ಶಿಕ್ಷೆ ಇಲ್ಲವೇ?
ಪ್ರೇಮಾ ಕುಮಾರಿಯಿಂದ ತಮಗಾಗಿರುವ ಅವಮಾನಕ್ಕೆ ಪ್ರತಿಯಾಗಿ ನ್ಯಾಯ ಒದಗಿಸುವಂತೆ ದಲಿತ ಸಂಘಟನೆಗಳ ಮೂಲಕ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಈ ವರೆಗೆ ಯಾರೂ ಯಾವ ಕ್ರಮವನ್ನೂ ಕೈಗೊಂಡಿರುವ ಮಾಹಿತಿ ಲಭ್ಯವಿಲ್ಲ. ಸ್ವಾತಿ, ಕುಮಾರ್ ಮತ್ತು ಪ್ರೇಮಾ ನಡುವಿನ ಹಣಕಾಸಿನ ವ್ಯವಹಾರಗಳು ಏನೇ ಇರಲಿ, ಮತ್ತೊಂದು ಪ್ರಕರಣ ಕೂಡಾ ಈಗ ನ್ಯಾಯಾಲಯದ ವ್ಯಾಪ್ತಿಯಲ್ಲಿದೆ. ಆದರೆ ಸ್ವಾತಿ ಎನ್ನುವ ಗರ್ಭಿಣಿ ಮಹಿಳೆಗೆ ಜಾತಿನಿಂದನೆ ಮಾಡಿರುವುದಕ್ಕೆ ಎಲ್ಲ ಸಾಕ್ಷಿಗಳಿದ್ದರೂ ಯಾಕೆ ನ್ಯಾಯ ಸಿಗುತ್ತಿಲ್ಲ? ಅಮಾನವೀಯ ಮತ್ತು ಹೀನ ಮನಸ್ಥಿತಿಯ ಜನ ಇನ್ನು ಯಾವಾಗ ತಾನೆ ಬುದ್ದಿ ಕಲಿಯಲು ಸಾಧ್ಯ?
No Comment! Be the first one.