ಹೈದ್ರಾಬಾದಿನ ಚಿನ್ಮಯಿ ಶ್ರೀಪಾದ ಎನ್ನುವ ಗಾಯಕಿ ರಾಕ್ ಸಿಂಗರ್ ರಘು ದೀಕ್ಷಿತ್ ವಿರುದ್ಧ ಬಾಂಬು ಸಿಡಿಸಿದ್ದಾಳೆ!
ಹೆಸರು ಹೇಳಲು ಇಚ್ಚಿಸದ ಬೇರೊಬ್ಬ ಗಾಯಕಿಯೊಬ್ಬರು ರಘು ದೀಕ್ಷಿತ್ ಮೇಲೆ ಮಾಡಿರುವ ಆರೋಪವನ್ನು ಗಾಯಕಿ ಚಿನ್ಮಯಿ ಟ್ವಿಟರಿನಲ್ಲಿ ಹಾಕಿಕೊಂಡಿದ್ದಾರೆ.
ಅದೊಂದು ದಿನ ಗಾಯಕಿಯನ್ನು ರೆಕಾರ್ಡಿಂಗಿಗೆಂದು ತಮ್ಮ ಸ್ಟುಡಿಯೋಗೆ ಕರೆಸಿಕೊಂಡ ರಘು ದೀಕ್ಷಿತ್ ‘ನನ್ನ ಹೆಂಡತಿಗೆ ಹುಷಾರಿಲ್ಲ, ಅದೂ ಇದೂ’ ಅಂತೆಲ್ಲಾ ಆಕೆಯ ಬಗ್ಗೆ ಕೆಟ್ಟದಾಗಿ ಮಾತು ಶುರು ಮಾಡಿದರಂತೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ರಘು ಪತ್ನಿ ಮಯೂರಿ ಚನ್ನಾಗೇ ಇದ್ದರಂತೆ. ಇದನ್ನು ನೋಡಿದ ಗಾಯಕಿಗೆ ‘ಯಾಕೆ ಈತ ನನ್ನ ಬಳಿ ಸುಳ್ಳು ಹೇಳಿದ. ಇಷ್ಟಕ್ಕೂ ನನ್ನ ಬಳಿ ಇದನ್ನೆಲ್ಲಾ ಯಾಕೆ ಹೇಳಬೇಕು’ ಎಂದುಕೊಂಡಿದ್ದರಂತೆ. ಇದೆಲ್ಲಾ ಆಗಿ ರೆಕಾರ್ಡಿಂಗು ಮುಗಿಸಿ ಚೆಕ್ಗೆ ಸಹಿ ಹಾಕುವಾಗ ಹತ್ತಿರಕ್ಕೆ ಎಳೆದುಕೊಂಡು ಕಿಸ್ಸು ಕೊಡುವಂತೆ ಹಠ ಮಾಡಿದನಂತೆ. ಆಕೆಯನ್ನು ಎತ್ತಿಕೊಳ್ಳುವ ಪ್ರಯತ್ನವನ್ನೂ ಮಾಡಿದನಂತೆ. ಇದರಿಂದ ಮನನೊಂದ ಗಾಯಕಿ ಅಳುತ್ತಾ ಸೀದಾ ಹೊರಗೆ ಹೊರಟಳಂತೆ. ರಘು ದೀಕ್ಷಿತ್ ನನ್ನೊಂದಿಗೆ ಮಾತ್ರವಲ್ಲ ಹಲವಾರು ಹೆಣ್ಮಕ್ಕಳ ಜೊತೆ ಇದೇ ರೀತಿ ಅಸಭ್ಯವಾಗಿ ವರ್ತಿಸುತ್ತಾನೆ ಅನ್ನೋದು ನನಗೆ ಗೊತ್ತು ಅಂತಲೂ ಆಕೆ ಹೇಳಿಕೊಂಡಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಘು ದೀಕ್ಷಿತ್ ‘ನಾನು ನನ್ನ ಪತ್ನಿಯೊಂದಿಗಿನ ಸಂಬಂಧದಿಂದ ಹೊರಬರುತ್ತಿದ್ದೀನಿ. ಆಗ ನನ್ನ ಮತ್ತು ನನ್ನ ಹೆಂಡತಿಯ ನಡುವಿನ ಸಂಬಂಧ ತೀರಾ ಹಳಸಿತ್ತು. ನನ್ನ ಪರ್ಸನಲ್ ಲೈಫಿನ ಬಗ್ಗೆ ಆ ಗಾಯಕಿಯ ಬಳಿ ಮಾತಾಡಿದ್ದು ನಿಜ. ಆಕೆಯನ್ನು ಅಪ್ಪಿಕೊಂಡು ಮುತ್ತು ಕೊಡಲು ಹೋಗಿದ್ದೂ ಹೌದು. ಇದಾದ ನಂತರ ನಿಮ್ಮ ಬಿಹೇವಿಯರ್ ಇಷ್ಟ ಆಗಲಿಲ್ಲ ಅಂತಾ ಮೆಸೇಜು ಕೂಡಾ ಕಳಿಸಿದ್ದರು. ನಾನು ಆ ಕೂಡಲೇ ಕ್ಷಮೆ ಕೇಳಿದ್ದೆ’ ಎಂದಿದ್ದಾರೆ.
ರಘು ದೀಕ್ಷಿತ್ ರಾಕ್ ಮ್ಯೂಸಿಕ್ ಕಾನ್ಸರ್ಟ್ ಹೆಸರಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಜಗತ್ತಿಡೀ ಅಲೆದಾಡುತ್ತಿರುತ್ತಾರೆ. ಕನ್ನಡದ ದಾಸರ, ಕೀರ್ತನೆಕಾರರ ಪದಗಳನ್ನು ಕನ್ನಡದ ಚೌಕಟ್ಟನ್ನು ಮೀರಿ ಹೊರಗಿನವರಿಗೆ ಪರಿಚಯಿಸಿದ ಕೀರ್ತಿ ರಘು ದೀಕ್ಷಿತ್ಗೆ ಸಲ್ಲಬೇಕು. ಅಸಲಿಗೆ ರಘು ದೀಕ್ಷಿತ್ ಬೇರೆಲ್ಲ ಹಾಡುಗಾರರಿಗಿಂತಾ ಭಿನ್ನವಾಗಿ ಕಾಣಲು, ಗಡಿದಾಟಿ ಹೋಗಲು ಪ್ರಮುಖ ಕಾರಣ ಅವರ ಪತ್ನಿ ಮಯೂರಿ. ಬಣ್ಣದ ಅಂಗಿ, ಅದಕ್ಕೆ ತದ್ವಿರುದ್ದ ಬಣ್ಣದ ಲುಂಗಿ, ಕಾಲಿಗೆ ಗೆಜ್ಜೆಯನ್ನು ತೊಟ್ಟು ವಿಚಿತ್ರ ಉಡುಗೆಯ ಮೂಲಕವೇ ಐಡೆಂಟಿಟಿ ಪಡೆದವರು ರಘು ದೀಕ್ಷಿತ್. ಇದನ್ನು ವಿನ್ಯಾಸ ಮಾಡಿದ್ದು ಕೂಡಾ ಮಯೂರಿಯೇ. ತನ್ನ ಯಶಸ್ಸಿಗೆ ಪ್ರಮುಖ ಕಾರಣವಾದ ಮಯೂರಿ ಜೊತೆಗೆ ರಘು ದೀಕ್ಷಿತ್ ಅದ್ಯಾಕೆ ಕಿತ್ತಾಡಿಕೊಂಡರೋ? ಸೈಕೋ ಸಿನಿಮಾದ ‘ನಿನ್ನ ಪೂಜೆಗೆ ಬಂದೇ ಮಾದೇಶ್ವರಾ’ ಹಾಡಿನ ಮೂಲಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ರಘು ದೀಕ್ಷಿತ್ ಲುಂಗಿ ಯಾಕೆ ಲೂಜಾಯ್ತೋ ಗೊತ್ತಿಲ್ಲ. ರೆಕಾರ್ಡಿಂಗ್ಗೆ ಅಂತಾ ಬಂದ ಹೆಣ್ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಈಗ ‘ಹಾಗಲ್ಲ ಹೀಗೆ’ ಅಂತಾ ತಿಪ್ಪೆ ಸಾರಿಸಿದರೆ ಯಾರು ತಾನೆ ನಂಬುತ್ತಾರೆ?
ಯಾರು ಗೊತ್ತಾ ರಘು ಪತ್ನಿ ಮಯೂರಿ?
ಸದ್ಯಕ್ಕೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳದ್ದೆ ಭರಾಟೆ. ಇವುಗಳ ತೀರ್ಪುಗಾರರಾಗಿ ಬರುವವರಿಗೂ ಅತೀವ ಮನ್ನಣೆ. ಇತ್ತೀಚಿನ ದಿನಗಳಲ್ಲಿ ಸಿನೆಮಾ ಸ್ಟಾರ್ಗಳಷ್ಟೇ ಖ್ಯಾತರಾಗಿದ್ದಾರೆ ಸ್ಯಾಂಡಲ್ವುಡ್ ಹೊರಗಿನ ತೀರ್ಪುಗಾರರು. ಅಂಥವರಲ್ಲಿ ಮಯೂರಿ ಉಪಾಧ್ಯ ಮುಖ್ಯವಾಗಿ ನಿಲ್ಲುತ್ತಾರೆ. ಮಯೂರಿ ಅವರಿಗೆ ಸ್ಯಾಂಡಲ್ವುಡ್ ಕನೆಕ್ಷನ್ ಇಲ್ಲವೇ ಇಲ್ಲ ಎಂದೇನಲ್ಲ. ಹಲವು ಕನ್ನಡ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ಬಿಗ್ ಬಜೆಟ್ ಸಿನೆಮಾ ಒಂದರ ಕೊರಿಯೋಗ್ರಫಿಗೆಂದು ಬಿ ಟೌನಿಗೂ ಹೋಗಿ ಬಂದಿದ್ದಾರೆ. ಈ ಎಲ್ಲದರ ಜೊತೆ ಮಯೂರಿ ಕಿರುತೆರೆಯ ನೋಡುಗರಿಗೂ ತಮ್ಮ ಮೋಹಕ ನಗುವಿನ ಮೋಡಿ ಮಾಡುತ್ತಿದ್ದಾರೆ.
ಮೈಸೂರಿನಲ್ಲಿ ಹುಟ್ಟಿ ಬೆಳೆದ ಮಯೂರಿ ಉಪಾಧ್ಯ ಆರನೆ ವಯಸ್ಸಿನಿಂದಲೇ ಶಾಸ್ತ್ರೀಯ ನೃತ್ಯ ಕಲಿಯತೊಡಗಿದರು. ಭರತನಾಟ್ಯ ಹಾಗೂ ಕಥಕ್ ಹಾಗೂ ಕಳರಿಪಯಟ್ಟುಗಳನ್ನು ಕರಗತ ಮಾಡಿಕೊಂಡು ಪಾಶ್ಚಾತ್ಯ ನೃತ್ಯವನ್ನೂ ಅಭ್ಯಾಸ ಮಾಡಿದರು. ಅನಂತರ ಫ್ಯೂಷನ್ ಶೈಲಿಯ ಪಟ್ಟುಗಳನ್ನು ಹಾಕುತ್ತಾ ತಾವೇ ನೃತ್ಯ ಸಂಯೋಜನೆ ಮಾಡತೊಡಗಿದರು. ಹೀಗೆ ಅವರು ಹುಟ್ಟುಹಾಕಿದ ನೃತ್ಯ ತಂಡ ’ನೃತರುತ್ಯ’. ಪತಿ ರಘು ದೀಕ್ಷಿತ್ ಹಾಡುಗಾರಿಕೆಯಲ್ಲಿ ನಾವೀನ್ಯ ಮೆರೆದರೆ, ಪತ್ನಿ ಮಯೂರಿ ಕೂಡ ನಾಟ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸತೊಡಗಿದರು. ಸತಿಪತಿ ಜೊತೆಯಾಗಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರವಿದೆ. ಅದೇನೆಂದರೆ, ರಘು ದೀಕ್ಷಿತ್ ತಮ್ಮ ರಾಕ್ ಬ್ಯಾಂಡ್ ಕಛೇರಿಗಳಲ್ಲಿ ತೊಡುವ ವಿಚಿತ್ರ ಮತ್ತು ವಿಶೇಷ ಉಡುಗೆಯ ಕಾನ್ಸೆಪ್ಟು ಮಯೂರಿ ಅವರದ್ದೇ. ಬ್ಯಾಂಡ್ ಕಾರ್ಯಕ್ರಮದಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯ ಕಾಸ್ಟೂಮ್ ತೊಡುತ್ತಿದ್ದ ಸಂದರ್ಭದಲ್ಲಿ ಭಾರತದ ದೇಸೀ ಉಡುಗೆಯಾದ ಪಂಚೆಯನ್ನು ಉಡಿಸಿ ಎಲ್ಲರನ್ನೂ ಆಕರ್ಷಿಸುವಂತೆ ಮಾಡಿದವರು ಮಯೂರಿ. ರಘು ದೀಕ್ಷಿತ್ಗೆ ಇವತ್ತು ಪಂಚೆ ಬ್ರಾಂಡ್ ಆಗಿದ್ದರೆ, ಅದರ ಸಂಪೂರ್ಣ ಕ್ರೆಡಿಟ್ಟು ಮಯೂರಿಗೇ ಸಲ್ಲುತ್ತದೆ.
ಪ್ರತ್ಯೇಕವಾಗಿ ಮಯೂರಿ ದೇಶ ವಿದೇಶಗಳಲ್ಲಿ ಒಟ್ಟು ಎರಡರಿಂದ ಮೂರು ಸಾವಿರದವರೆಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಮಿತಾಭ್ ಬಚ್ಚನ್ ಅವರ ಎಪ್ಪತ್ತನೇ ಹುಟ್ಟುಹಬ್ಬಕ್ಕೆ ಅವರ ತಂದೆಯವರ ’ಮಧುಶಾಲಾ’ ಕವಿತೆಗೆ ನೃತ್ಯ ಸಂಯೋಜಿಸಿ ಪ್ರದರ್ಶಿಸಿದ್ದ ಹೆಗ್ಗಳಿಕೆ ಮಯೂರಿಯದ್ದು. ಅದನ್ನು ಅಮಿತಾಭ್ ಬಹುವಾಗಿ ಮೆಚ್ಚಿದ್ದರಂತೆ. ರಾಣಿ ಮುಖರ್ಜಿಗಾಗಿ ’ಶಾಕುಂತಲ’ ಎಂಬ ನೃತ್ಯವನ್ನೂ ಮಯೂರಿ ಸಂಯೋಜಿಸಿದ್ದಾರೆ. ’ಮೇಕ್ ಇನ್ ಇಂಡಿಯಾ’ ಥೀಮ್ ಅಡಿಯಲ್ಲಿ ತಮ್ಮ ತಂಡದೊಂದಿಗೆ ಇತ್ತೀಚೆಗೆ ಜರ್ಮನಿಯಲ್ಲಿ ಒಂದು ಪ್ರದರ್ಶನ ನೀಡಿ ಬಂದಿದ್ದಾರೆ. ’ಸೋಲ್ ಇಂಟರ್ನ್ಯಾಷನಲ್ ಕೊರಿಯಾಗ್ರಫಿ ಸ್ಪರ್ಧೆ’ಯಲ್ಲಿ ಭಾರತವನ್ನು ಪ್ರತಿನಿಧಿಸಿ ಗೆದ್ದಿದ್ದಾರೆ. ಇವೆಲ್ಲದರ ಜೊತೆಗೆ ರಾಣಿ ಎಲಿಜಬೆತ್ ಎದುರು ಪ್ರದರ್ಶನ ನೀಡಿದ್ದ ಗರಿಮೆಯೂ ಮಯೂರಿಯ ಕಿರೀಟದಲ್ಲಿದೆ.
ಮಯೂರಿ ಅವರಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳೂ ಶಿಷ್ಯರೂ ಇದ್ದಾರೆ. ಈಕೆ ಸ್ಕೈಪ್ ಮೂಲಕ ಆನ್ಲೈನ್ನಲ್ಲೂ ನೃತ್ಯ ಕಲಿಸಿಕೊಡುತ್ತಾರೆ. ಇವರು ಸದ್ಯಕ್ಕೆ ಭಾರೀ ಬೇಡಿಕೆಯಲ್ಲಿರುವ ನೃತ್ಯಗುರು. ಸಧ್ಯಕ್ಕೆ ಮಯೂರಿ ತಮ್ಮ ಇತರ ಚಟುವಟಿಕೆಗಳ ಜೊತೆಗೆ ಕಲರ್ಸ್ ಕನ್ನಡದ ಡಾನ್ಸಿಂಗ್ ಸ್ಟಾರ್ ಎರಡನೇ ಸೀಸನ್ನಿನ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಮಾಡೆಲಿಂಗ್ನಲ್ಲೂ ಅನುಭವ ಇರುವ ಮಯೂರಿ ಎಲ್ಲವನ್ನೂ ನಗುನಗುತ್ತಲೇ ನಿಭಾಯಿಸುತ್ತ ತಮ್ಮ ಚಾರ್ಮ್ ಉಳಿಸಿಕೊಂಡು ಹೊಸಬರ ಪಾಲಿಗೆ ರೋಲ್ ಮಾಡೆಲ್ ಆಗಿದ್ದಾರೆ. ಆದರೆ ಪತಿ ರಘು ದೀಕ್ಷಿತ್ ಕೆಲಸಕ್ಕೆಂದು ಜೊತೆಗೆ ಬರುವ ಹೆಣ್ಮಕ್ಕಳನ್ನು ತಬ್ಬಿಕೊಂಡು, ಮುತ್ತು ಕೊಡುತ್ತಾ ಹೆಸರು ಕೆಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಆಗಬಾರದಿತ್ತು…
#
No Comment! Be the first one.