ಸೂಪರ್ ಸ್ಟಾರ್ ರಜನೀಕಾಂತ್ ಮಾರುವೇಷದಲ್ಲಿ ಪ್ರಪಂಚದಾದ್ಯಂತ ಸಂಚರಿಸುತ್ತಿರುತ್ತಾರೆ ಅನ್ನೋ ವಿಚಾರ ಅನೇಕರಿಗೆ ಗೊತ್ತು.
ಯಾವುದೇ ಒಬ್ಬ ವ್ಯಕ್ತಿಗೆ ತಾನು ಹುಟ್ಟಿ, ಬೆಳೆದ ಸ್ವಾಭಾವಿಕ ಪರಿಸರ ಯಾವ ಬಗೆಯಲ್ಲಿ ಸೆಳೆಯುತ್ತದೆ? ಹೇಗೆಲ್ಲಾ ಕಾಡುತ್ತದೆ. ಎಷ್ಟೋ ಜನ ತಮ್ಮ ಕರುಳು ಬಳ್ಳಿಯಂಥ ಹುಟ್ಟೂರನ್ನು ಮರೆತು ತಮ್ಮದಲ್ಲದ ನೆಲದಲ್ಲಿ ಶುಷ್ಕವಾಗಿ ಬದುಕು ಸಾಗಿಸುತ್ತಿರುತ್ತಾರೆ. ರಜನೀಕಾಂತ್ ಇಡೀ ವಿಶ್ವಕ್ಕೆ ಗೊತ್ತಿರುವ ನಟ. ಚೆನ್ನೈ-ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ರಜನಿ ಒಡೆತನದ ಆಸ್ತಿಗಳಿವೆ. ಇಡೀ ಜನಗತ್ತಿನಲ್ಲಿ ರಜನಿಗೆ ಹೊಂದಿರುವ ಅಗಣಿತ ಆಸ್ತಿಯ ಬಗ್ಗೆ ಸ್ವತಃ ಅವರಿಗೇ ಲೆಕ್ಕ ಗೊತ್ತಿದೆಯೋ ಇಲ್ಲವೋ? ಆದರೆ ರಜನಿಯ ಮನಸ್ಸು ಮಾತ್ರ ಹುಟ್ಟೂರಿನ, ತಾನು ಓಡಾಡಿದ, ಕಷ್ಟದ ನಡುವೆಯೇ ನೆಮ್ಮದಿ ಕಂಡುಕೊಂಡಿದ್ದ ಜಾಗಗಳೆಡೆಗೇ ಜಾರುತ್ತಿರುತ್ತದೆ. ಇದರ ಜೊತೆಗೆ ರಜನಿ ಸೀದಾ ಹೋಗಿ ಅಡ್ಡಾಡಿಕೊಂಡುವ ಬರುವುದು ಹಿಮಾಲಯದ ಬೆಟ್ಟದ ಸಾಲುಗಳಲ್ಲಿ.
ನಿಜ… ರಜನಿಕಾಂತ್ ಬಿಡುವಿನ ಸಮಯದಲ್ಲಿ ಆ ದೇಶಕ್ಕೆ ಹೋಗಿದ್ದಾರೆ, ಈ ದೇಶದಲ್ಲಿ ರೆಸ್ಟ್ ಮಾಡುತ್ತಿದ್ದಾರೆ… ಎಂದೆಲ್ಲಾ ಸುದ್ದಿಯಾಗುತ್ತಿರುತ್ತದೆ. ಅಸಲಿಗೆ ರಜನಿ ಯಾವ ದೇಶಕ್ಕೂ ಹೋಗಿರೋದೇ ಇಲ್ಲ. ಒಂದೋ ಹಿಮಾಲಯದ ತಪ್ಪಲಿನಲ್ಲಿ ತೆಪ್ಪಗೆ ಅಡ್ಡಾಡಿಕೊಂಡಿರುತ್ತಾರೆ. ಅಥವಾ, ಬೆಂಗಳೂರಿನ ಹಳೇ ಏರಿಯಾ ಆದ ಹನುಮಂತನಗರ, ಶ್ರೀನಗರ, ಗವೀಪುರ, ಚಾಮರಾಜಪೇಟೆ, ಗಾಂಧಿಬಜಾರಿನ ರಸ್ತೆಗಳಲ್ಲಿ ಯಾವುದಾದರೂ ಸಾಧು, ಸನ್ಯಾಸಿಯ ಗೆಟಪ್ಪಿನಲ್ಲಿ ತಮ್ಮ ಪಾಡಿಗೆ ತಾವು ಓಡಾಡುತ್ತಾ, ತಮ್ಮ ಹಳೆಯ ದಿನಗಳನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಇಲ್ಲದಿದ್ದರೆ ಹಿಮಾಲಯಕ್ಕೆ ಹೋಗಿ ಧ್ಯಾನಕ್ಕೆ ಕೂರುತ್ತಾರೆ.
ಬಹುಶಃ ಬದುಕಿನಲ್ಲಿ ಯಶಸ್ಸಿನ ಉತ್ತುಂಗವನ್ನು ಕಂಡರೂ ಮತ್ತೆ ಆರಂಭದ ಶೂನ್ಯಕ್ಕೆ ಮರಳಿ ತಮ್ಮನ್ನು ತಾವು ಅವಲೋಕಿಸಿಕೊಳ್ಳುವವರು ಮಾತ್ರ ನಿಜಕ್ಕೂ ಜೀವನದ ಸಾರ್ಥಕತೆಯನ್ನು, ಬಾಳಿನ ಅಸಲೀ ರುಚಿಯನ್ನು ಅನುಭವಿಸುವುದು ಸಾಧ್ಯವೇನೋ!
ತಾವು ನಟಿಸುವ ಸಿನಿಮಾ ಚಿತ್ರೀಕರಣ ಮುಗಿದು ಮತ್ತೊಂದು ಸಿನಿಮಾ ಆರಂಭವಾಗುವ ಮಧ್ಯದ ಗ್ಯಾಪ್ನಲ್ಲಿ ತಲೈವಾ ಹಿಮಾಲಯ ಸುತ್ತಿಬರುತ್ತಾರೆ. ಆಗಾಗ ಅವರು ಹಿಮಾಲಯದಲ್ಲಿ ಅಡ್ಡಾಡುತ್ತಿರುವ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಸದ್ಯ ಮುರುಗದಾಸ್ ನಿರ್ದೇಶನದ ದರ್ಬಾರ್ ಸಿನಿಮ ಚಿತ್ರೀಕರಣ ಮುಗಿಸಿಕೊಂಡಿರುವ ತಲೈವಾ ಡಿಸೆಂಬರ್ಗೆ ಆರಂಭವಾಗಲಿರುವ ಶಿವಾ ನಿರ್ದೇಶನದ ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ಈ ನಡುವೆ ದೀರ್ಘ ಬಿಡುವು ಸಿಗುತ್ತಿದ್ದಂತೇ ಬದ್ರೀನಾಥ್, ಕೇದಾರನಾಥ್ ಸೇರಿದಂತೆ ಸುತ್ತಮುತ್ತಲಿನ ತೀರ್ಥಕ್ಷೇತ್ರಗಳಿಗೆ ವಿಸಿಟ್ ಕೊಟ್ಟು ಬಂದಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಗುರುತು ಹಿಡಿದು ತೆಗೆಸಿಕೊಂಡ ಫೋಟೋಗಳು ಈಗ ಎಲ್ಲೆಡೆ ಹರಿದಾಡುತ್ತಿವೆ.
ಮಹಾನ್ ಸಾಧಕನೊಬ್ಬ ಹೀಗೆ ಬರಿಗೈದಾಸನಂತೆ, ತನಗಿರುವ ಅಂತಸ್ತು, ಐಶ್ವರ್ಯಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಹೀಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕೋದರಲ್ಲೂ ಮಜಾ ಇರುತ್ತೆ ಅಲ್ವಾ? ಇಷ್ಕಕ್ಕೂ ಈ ರೀತಿ ಸಿಂಪಲ್ಲಾಗಿ ಲೈಫ್ ಲೀಡ್ ಮಾಡಿ ಅದನ್ನು ಎಂಜಾಯ್ ಮಾಡೋದು ರಜನಿ ಅವರನ್ನು ಬಿಟ್ಟರೆ ಬೇರೊಬ್ಬರಿಂದ ಕಷ್ಟಸಾಧ್ಯ… ಏನಂತೀರಿ?