ಸಿನಿಮಾರಂಗದ ಗಂಧ ಗಾಳಿ ಗೊತ್ತಿಲ್ಲದವರು, ನಿರ್ಮಾಪಕರೆನಿಸಿಕೊಳ್ಳುವ ಶೋಕಿಗೆ ಬಿದ್ದವರು, ತಮ್ಮ ತೆವಲಿಗಾಗಿ ಮತ್ಯಾರನ್ನೋ ಬಲಿ ಕೊಡುವವರು ಇತ್ತೀಚೆಗೆ ಚಿತ್ರರಂಗದಲ್ಲಿ ಹೆಚ್ಚಾಗಿದ್ದಾರೆ. ಅಂಥವರ ಪಟ್ಟಿಗೆ ಹೊಸದಾಗಿ ಸೇರಿಕೊಂಡಿರುವ ಐನಾತಿಯ ಹೆಸರು ಬಿ. ಮಂಜುನಾಥ.
ವರ್ಷಕ್ಕೆ ಮುಂಚೆ ಶೀತಲ್ ಶೆಟ್ಟಿ ಅಭಿನಯದ ಪತಿ ಬೇಕು ಡಾಟ್ ಕಾಮ್ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತಲ್ಲಾ? ಆ ಚಿತ್ರದ ಮೂವರು ನಿರ್ಮಾಪಕರ ಪೈಕಿ ಮಂಜುನಾಥ ಕೂಡಾ ಒಬ್ಬ. ಈ ಚಿತ್ರವನ್ನು ನಿರ್ದೇಶಿಸಿದ್ದು ತರ್ಲೆ ನನ್ ಮಕ್ಳು ಸಿನಿಮಾವನ್ನು ನಿರ್ದೇಶಿಸಿದ್ದ ರಾಕೇಶ್. ನಿರ್ದೇಶಕರಾಗಿ ಎರಡು ಸಿನಿಮಾಗಳನ್ನು ಮಾಡಿದ್ದರೂ ರಾಕೇಶ್ಗೂ ಚಿತ್ರರಂಗದಲ್ಲೂ ಹಳೇ ನಂಟಿದೆ. ಇಂಥ ರಾಕೇಶ್ ಅದ್ಯಾವ ಘಳಿಗೆಯಲ್ಲಿ ಮಸಲತ್ತು ವೀರ ಮಂಜುನಾಥನನ್ನು ನಂಬಿ, ತಮ್ಮ ಚಿತ್ರಕ್ಕೆ ಪಾಲುದಾರನನ್ನಾಗಿಸಿಕೊಂಡರೋ? ಕೊಟ್ಟ ಹಣ ಬರೀ ಹದಿನೈದು ಲಕ್ಷವಾದರೂ ‘ಪತಿ ಬೇಕು ಚಿತ್ರದ ಹೆಸರಲ್ಲಿ ಮಂಜುನಾಥ ಊರಿಡೀ ಕಾಸೆತ್ತಿ, ತಿಂದು, ನೆಕ್ಕಿ ಕಡೆಗೆ ಅದನ್ನು ನಿರ್ದೇಶಕ ರಾಕೇಶ್ ತಲೆಗೆ ಕಟ್ಟುವ ಖತರ್ನಾಕ ಐಡಿಯಾ ಮಾಡಿದ್ದಾನೆ.
ಪತಿ ಬೇಕು ಡಾಟ್ ಕಾಮ್ ಚಿತ್ರಕ್ಕೆ ನಿರ್ದೇಶಕ ರಾಕೇಶ್ ಸೇರಿದಂತೆ ಮೂವರು ಪಾಲುದಾರರು, ಅದರಲ್ಲಿ ಶ್ರೀನಿವಾಸ್ ಎನ್ನುವವರು ಕೂಡಾ ಸೇರಿದ್ದಾರೆ. ಸಿನಿಮಾ ಬಿಡುಗಡೆಯಾಗಿ, ಅತ್ಯುತ್ತಮ ವಿಮರ್ಶೆ, ನೋಡಿದವರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾದರೂ ಬಾಕ್ಸಾಫೀಸಿನಲ್ಲಿ ಹೇಳಿಕೊಳ್ಳುವಂತಾ ಕಲೆಕ್ಷನ್ನು ಮಾಡಲಿಲ್ಲ. ಚಿತ್ರ ಮಹಿಳಾಪ್ರಧಾನವಾಗಿದ್ದರಿಂದ ಯಥೇಚ್ಚವಾಗಿ ಜನ ಬಂದು ನೋಡಲಿಲ್ಲ. ಇದರ ಪ್ರತಿಫಲವಾಗಿ ಹಣ ಹೂಡಿದವರಿಗೆ ಸಹಜವಾಗಿಯೇ ಲುಕ್ಸಾನಾಯಿತು.
ನಿರ್ದೇಶಕ ರಾಕೇಶ್ ಸಿನಿಮಾ ದಿಗ್ಗಜರುಗಳ ಗರಡಿಯಿಂದ ಪಳಗಿ ಬಂದವರಲ್ಲವಾ? ಮುಂದೆ ಏನಾದರೂ ಹೆಚ್ಚು ಕಮ್ಮಿ ಆದರೆ ಅನ್ನೋ ಕಾರಣಕ್ಕೆ ಮೂವರು ಪಾಲುದಾರರ ವಿಚಾರದಲ್ಲಾಗಲಿ, ತಂತ್ರಜ್ಞರ ವಿಚಾರದಲ್ಲಾಗಲೀ ಪ್ರತಿಯೊಂದಕ್ಕೂ ಮೊದಲೇ ಅಗ್ರಿಮೆಂಟು ಮಾಡಿಸಿ, ಸಹಿ ಮಾಡಿಸಿಕೊಂಡೇ ಮುಂದಡಿ ಇಟ್ಟಿದ್ದರು. ಆ ಪ್ರಕಾರವಾಗಿ ಶ್ರೀನಿವಾಸ್ ಮತ್ತು ಮಂಜುನಾಥ್ ಬಳಿಯೂ ‘ಸಿನಿಮಾದಲ್ಲಿ ನಷ್ಟವೇನೇ ಇದ್ದರೂ ಅದಕ್ಕೆ ಸ್ವತಃ ನಾವೇ ಹೊಣೆಗಾರರು. ಲಾಭದಲ್ಲೂ ಸಮಾನ ಹಂಚಿಕೆಯಿರುತ್ತದೆ ಎಂಬುದಾಗಿ ಅಗ್ರಿಮೆಂಟು ಮಾಡಿಸಿದ್ದರು. ಆದರೆ ಮಂಜುನಾಥ ಮಾತ್ರ ಯಾವ ನಿಬಂಧನೆಗಳನ್ನು ನಿಯಮವಾಗಿ ಪಾಲಿಸಲೇ ಇಲ್ಲ. ಸಿನಿಮಾ ಬಿಡುಗಡೆಯಾಗಿ ನಷ್ಟವಾಗುತ್ತಿದ್ದಂತೇ ಮಂಜುನಾಥ ಸಿನಿಮಾದ ರೈಟ್ಸುಗಳನ್ನು ಬರೆದುಕೊಡಿ ಅಂತಾ ಕುಂತ. ಹಾಕಿದ ಹಣವನ್ನೂ ವಾಪಾಸು ಕೇಳಿದ. ರಾಕೇಶ್ ಅದೆಲ್ಲಿಂದ ದುಡ್ಡು ಹೊಂಚಿಕೊಂಡು ಬಂದರೋ ಗೊತ್ತಿಲ್ಲ. ಹತ್ತು ಲಕ್ಷ ರುಪಾಯಿಗಳನ್ನು ಮಂಜುನಾಥನ ಮಡಿಲಿಗೆ ಸುರಿದರು. ಇಷ್ಟಕ್ಕೂ ಸುಮ್ಮನಾಗದ ಮಂಜುನಾಥ ನಂತರದ ದಿನಗಳಲ್ಲಿ ಆಡಿದ ಆಟ, ಕಟ್ಟಿದ ನಾಟಕ ಒಂದಾ ಎರಡಾ?
ಕೊಟ್ಟ ದುಡ್ಡು ಹದಿನೈದು ಲಕ್ಷಕ್ಕೆ ಪ್ರತಿಯಾಗಿ ಸಬ್ಸಿಡಿ, ಟೀವಿ, ಡಿಜಿಟಲ್ಲು ಸೇರಿದೊಂದ ಸಕಲ ಹಕ್ಕನ್ನೂ ತನ್ನ ಹೆಸರಿಗೆ ಬರೆಸಿಕೊಂಡು, ಹತ್ತು ಲಕ್ಷ ಅಮೌಂಟನ್ನೂ ಪೀಕಿದ್ದಲ್ಲದೆ ಇನ್ನೂ ದುಡ್ಡು ಬೇಕು ಅಂತಾ ಕೂತ. ಇಷ್ಟೆಲ್ಲಾ ಆಗಿ ಏಳು ತಿಂಗಳ ನಂತರ ಯಾರೋ ರೌಡಿಗಳನ್ನು ಛೂ ಬಿಟ್ಟು ರಾಕೇಶ್ ಮನೆ ಬಳಿಯೇ ಕಳಿಸಿದ. ಫೋನು ಮಾಡಿ ಧಮ್ಕಿ ಹಾಕಿಸಿದ. ಯಾವುದಕ್ಕೂ ರಾಕೇಶ್ ಜಗ್ಗಲಿಲ್ಲ. ಇಲ್ಲದ ದುಡ್ಡನ್ನು ಎಲ್ಲಿಂದ ಕೊಡೋದು ಮತ್ತು ಯಾಕಾಗಿ ಕೊಡಬೇಕು ಅನ್ನೋದು ರಾಕೇಶ್ ನಿಲುವಾಗಿತ್ತು.
ಯಾವಾಗ ರೌಡಿಗಳ ಎಪಿಸೋಡು ವರ್ಕೌಟ್ ಆಗಲಿಲ್ಲವೋ ಮಂಜುನಾಥ ಮತ್ತೊಂದು ಹಂತಕ್ಕೆ ಮುಂದೆ ಹೋದ. ಚಂದ್ರ ಲೇಔಟ್ ಠಾಣೆಗೆ ಹೋಗಿ ಮೌಕಿಖವಾಗಿ ದೂರು ನೀಡಿ ‘ನನಗೆ ಎಪ್ಪತ್ತೈದು ಲಕ್ಷ ರುಪಾಯಿ ದುಡ್ಡು ಬರಬೇಕು ಅಂದಿದ್ದ. ಇನ್ಸ್ಪೆಕ್ಟರ್ ಕಲ್ಲಪ್ಪನವರು ರಾಕೇಶ್ ಅವರನ್ನು ಕರೆಸಿ ವಿಚಾರಿಸಿದ್ದರು. ಆ ಸಂದರ್ಭದಲ್ಲಿ ರಾಕೇಶ್ ತಮ್ಮ ಬಳಿ ಇದ್ದ ಪ್ರತಿಯೊಂದು ವಿವರ, ದಾಖಲಾತಿಗಳನ್ನೂ ಠಾಣೆಗೆ ಸಲ್ಲಿಸಿದರು. ಅದನ್ನೆಲ್ಲಾ ಕೂಲಂಕಷವಾಗಿ ಪರಾಮರ್ಷಿಸಿದ ಕಲ್ಲಪ್ಪನವರು ಮಂಜುನಾಥನನ್ನು ಕರೆದು ‘ಅಲ್ಲಯ್ಯಾ ನೀನು ಎಪ್ಪತ್ತೈದು ಲಕ್ಷ ಕೊಟ್ಟಿದ್ದೀನಿ. ಅಂತೀಯ.. ಇಲ್ಲಿ ಅದರ ಕಾಲು ಭಾಗವೂ ದಾಖಲಾತಿ ಇಲ್ಲವಲ್ಲಾ? ಮೊದಲು ನೀನು ಹಣ ನೀಡಿದ್ದಕ್ಕೆ ಏನಾದರೂ ಸಾಕ್ಷಿ ಇದ್ದರೆ ತೆಗೆದುಕೊಂಡು ಬಾ ಹೋಗು ಅಂತಿದ್ದರು. ಆಯ್ತು ಅಂತಾ ಎದ್ದು ಹೋದ ಮಂಜ ಮತ್ತೆ ಹಿಡಿದುಕೊಂಡು ಬಂದಿದ್ದು ಬಸ್ ಟಿಕೇಟು, ಕಾಫಿ ಬಿಲ್ಲು, ಟಾಯ್ಲೆಟ್ ಪೇಪರುಗಳನ್ನೆಲ್ಲಾ ಜೋಡಿಸಿಕೊಂಡು ಬಂದು ಠಾಣಾಧಿಕಾರಿ ಕಲ್ಲಪ್ಪನವರ ಕೈಗಿಟ್ಟಿದ್ದ. ಅದನ್ನು ನೋಡಿ ಅವನ ಮುಖಕ್ಕೆಸೆದ ಕಲ್ಲಪ್ಪ ಸಾಹೇಬರು ‘ಇಂಥಾ ಆಟ ಎಲ್ಲಾ ನನ್ನ ಬಳಿ ಕಟ್ಟಬೇಡ. ನ್ಯಾಯ ನೀತಿ ಇದ್ದರೆ ಬಾ ಅಂತಾ ಹೇಳಿ ಮಕ್ಕುಗಿದು ಕಳಿಸಿದ್ದರು.
ಕಡೆಗೆ ಮಂಜುನಾಥನ ಕಾಟ ತಡೆಯಲಾರದ ರಾಕೇಶ್ ಸ್ವತಃ ತಾವೇ ವಿಜಯನಗರ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಿಸಿದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಮಂಜುನಾಥ ಜಾಮೀನು ಪಡೆದು ಬಚಾವಾದ.
ಮಂಜುನಾಥನೆಂಬ ಮಹಾನುಭಾವ ಆಟ ಇಲ್ಲಿಗೇ ಮುಗಿತಾ? ಉಹುಂ… ಇನ್ನು ಲೀಗಲ್ಲಾಗಿ ಏನೂ ಕಿಸಿಯಲಾಗುವುದಿಲ್ಲ ಅಂತಾ ಗೊತ್ತಾಗಿದ್ದೇ ಅನಾಹುತಕಾರಿ ಪ್ಲಾನೊಂದನ್ನು ಮಾಡಿಬಿಟ್ಟ. ಅದೇನೆಂದರೆ ನೆಲಮಂಗಲ ಟೌನ್ ಪೊಲೀಸರನ್ನು ಬುಟ್ಟಿಗೆ ಹಾಕಿಕೊಂಡು, ಅವರಿಗೊಂದಿಷ್ಟು ಆಮಿಷ ತೋರಿದ. ರಾಕೇಶ್ ವ್ಯವಹಾರದಲ್ಲಿ ಪಕ್ಕಾ ಇದ್ದಾರೆ. ನಡೆಸಿದ ವಹಿವಾಟಿಗೆ ಪ್ರತಿಯೊಂದಕ್ಕೂ ದಾಖಲೆ, ಅಗ್ರಿಮೆಂಟು ಮೇಂಟೇನ್ ಮಾಡಿದ್ದಾರೆ ಅನ್ನೋದು ನೆಲಮಂಗಲ ಪೊಲೀಸರಿಗೆ ಗೊತ್ತಿರಲಿಲ್ಲ. ಬೇಕಾಬಿಟ್ಟಿ ಮಂಜುನಾಥನ ಮಾತು ನಂಬಿ ಒಂದು ಯಡವಟ್ಟು ಮಾಡಿಕೊಂಡುಬಿಟ್ಟರು.
ನೆಲಮಂಗಲ ಟೌನ್ ಠಾಣೆಯಿಂದ ಹೊರಟ ಕ್ರೈಂ ಪಿಸಿ ಕೇಶವ ಮತ್ತು ಮೂವರು ಐ ಟ್ವೆಂಟಿ ಕಾರಿನಲ್ಲಿ ಸೀದಾ ಬಂದು ನಿಂತಿದ್ದು ವಿಜಯನಗರದಲ್ಲಿರುವ ರಾಕೇಶ್ ಮನೆ ರಸ್ತೆಗೆ. ಇನ್ನೇನು ರಾಕೇಶ್ ತಮ್ಮ ಬೈಕು ಏರಿ ಹೊರಡಬೇಕು ಅನ್ನೋ ಹೊತ್ತಿಗೆ ಅಟ್ಯಾಕ್ ಮಾಡಿದ ಪೊಲೀಸರ ತಂಡ ಏಕಾ ಏಕಿ ಅವರನ್ನು ಎತ್ತಾಕೊಂಡಿದ್ದಾರೆ. ಜೊತೆಗೆ ರಾಕೇಶ್ ಬೈಕಿನಲ್ಲಿದ್ದ ಚೆಕ್ ಬುಕ್ಕು ಸೇರಿದಂತೆ ಒಂದಿಷ್ಟು ಡಾಕ್ಯುಮೆಂಟುಗಳನ್ನೂ ಕಸಿದುಕೊಳ್ಳುತ್ತಾರೆ. ‘ನೀವು ಯಾಕೆ ನನ್ನನ್ನು ಹೀಗೆ ಕರೆದೊಯ್ಯುತ್ತಿದ್ದೀರಿ. ಈಗಾಗಲೇ ನಾನು ಮಂಜುನಾಥನ ವಿರುದ್ಧ ದೂರು ನೀಡಿದ್ದೇನೆ. ಕೇಸು ಕೋರ್ಟಿನಲ್ಲಿದೆ.. ಎಂದೆಲ್ಲಾ ರಾಕಿ ಹೆಳುವ ಪ್ರಯತ್ನ ಮಾಡುತ್ತಾರೆ. ಆದರೆ, ಅದ್ಯಾವುದನ್ನೂ ಕೇಳುವ ಗೋಜಿಗೇ ಹೋಗದ ಕೇಶವ ಅಂಡ್ ಟೀಮು ಮೊದಲಿಗೆ ರಾಕೇಶ್ ಮೊಬೈಲು ಕಿತ್ತುಕೊಂಡು ಸ್ವಿಚ್ ಆಫ್ ಮಾಡುತ್ತದೆ. ಇದನ್ನು ಮೀರಿ ರಾಕಿ ಕೂಡಾ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ ತಲುಪುತ್ತಾರೆ.
ರಾಕೇಶ್ ಅವರನ್ನು ಸೀದಾ ನೆಲಮಂಗಳ ಟೌನ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿಕೊಳ್ಳುತ್ತಾರೆ. ಅಲ್ಲಿ ಶುರುವಾಗುತ್ತದೆ ನವರಂಗೀ ನಾಟಕ. ಪಿ.ಸಿ. ಕೇಶವ ‘ನಾವು ಹೇಳಿದ ಹಾಗೆ ಸೆಟಲ್ಮೆಂಟು ಮಾಡಿಕೊಳ್ಳದಿದ್ದರೆ ನಿನ್ನನ್ನ ಹಂಗ್ ಮಾಡ್ತೀವಿ ಅಂತಾ ಬೆದರಿಸಲು ಶುರು ಮಾಡುತ್ತಾನೆ. ಯಾವುದಕ್ಕೂ ರಾಕಿ ಜಗ್ಗದೇ ಕುಳಿತಾಗ ಅವರ ಸಹೋದರ ರಘು ಅವರ ಮೊಬೈಲಿಗೆ ಕರೆ ಮಾಡಿ ನಿನ್ನ ತಮ್ಮನನ್ನು ಕರೆದುಕೊಂಡು ಬಂದಿದ್ದೀವಿ ನೆಲಮಂಗಲ ಟೌನ್ ಸ್ಟೇಷನ್ನಿಗೆ ಬಾ ಅನ್ನುತ್ತಾರೆ. ಗಾಬರಿಗೆ ಒಳಗಾದ ರಘು ಸೀದಾ ಚಂದ್ರಾ ಲೇಔಟ್ ಠಾಣೆಗೆ ವಿಷಯ ಮುಟ್ಟಿಸುತ್ತಾರೆ. ನಿಜವಾ ಅಂತಾ ಪರಿಶೀಲಿಸಲು ಖುದ್ದು ಚಂದ್ರಲೇಔಟ್ ಠಾಣೆಯ ಪೊಲೀಸರು ನೆಲಮಂಗಲ ಠಾಣೆಗೆ ಕರೆ ಮಾಡಿ ವಿಚಾರಿಸಿದರೆ ‘ನಾವು ಯಾರನ್ನೂ ಕರೆದುಕೊಂಡುಬಂದಿಲ್ಲ ಅನ್ನೋ ಉತ್ತರ ದೊರೆಯುತ್ತದೆ. ‘ರಾಕೇಶ್ ನಂಬರ್ ಬೆಳಗಿನಿಂದ ಸ್ವಿಚಾಫ್ ಬರ್ತಿದೆ. ನಾವೀಗ ಮಿಸ್ಸಿಂಗ್ ಕಂಪ್ಲೇಂಟ್ ಫೈಲ್ ಮಾಡ್ತೀವಿ ಅಂದಾಗಲೂ ‘ಇಲ್ಲ ಅಂತಲೇ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಇವೆಲ್ಲಾ ನಡೆಯುವಾಗ ರಾಕೇಶ್ ಅದೇ ಠಾಣೆಯಲ್ಲೇ ಸಾಕ್ಷಿಯಾಗಿ ಕೂತಿರುತ್ತಾರೆ. ಕಡೆಗೆ ವಿಚಾರ ಬೇರೆ ದಿಕ್ಕಿಗೆ ತಿರುಗುವ ಲಕ್ಷಣವನ್ನರಿತ ಕೇಶವ ರಾಕಿಯ ಮೊಬೈಲನ್ನೇ ಆನ್ ಮಾಡಿ ಅವರ ಅಣ್ಣ ರಘು ಅವರನ್ನು ಸೆಟಲ್ ಮೆಂಟಿಗೆ ಆಹ್ವಾನಿಸುತ್ತಾನೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಸಂಜೆ ೭ ಗಂಟೆ ಆಗಿರುತ್ತದೆ. ರಘು ಮತ್ತು ಅವರ ಸ್ನೇಹಿತರೆಲ್ಲಾ ಬಂದು ಕೂತಾಗ ಮತ್ತದೇ ‘ಇವನನ್ನು ಒಳಗೆ ಕಳಿಸಿಬಿಡ್ತೀವಿ ಅಂತಾ ಬೆದರಿಕೆಯ ತಂತ್ರವನ್ನೇ ಪ್ರಯೋಗಿಸುತ್ತಾರೆ. ರಾತ್ರಿ ಹತ್ತು ಗಂಟೆಯ ಹೊತ್ತಿಗೇ ಆ ಠಾಣೆ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಎನ್ನುವ ಮತ್ತೊಂದು ಕ್ಯಾರೆಕ್ಟರ್ರು ಎಂಟ್ರಿ ಕೊಡುತ್ತದೆ. ಥೇಟು ಸಿನಿಮಾ ಶೈಲಿಯಲ್ಲಿ ಅಬ್ಬರಿಸಲು ಶುರು ಮಾಡುವ ಮಂಜುನಾಥ ಸಾಹೇಬರು ‘ನಾನು ಹೇಳಿದಂತೆ ಬರೆದು ಸೈನು ಮಾಡಿಕೊಟ್ರೆ ಸರಿ. ಇಲ್ಲದಿದ್ರೆ ನಿನ್ನನ್ನ ರೌಡಿ ಶೀಟರ್ ಮಾಡ್ತೀನಿ… ಎನ್ಕೌಂಟರ್ ಮಾಡಿ ಮುಗಿಸಿಬಿಡ್ತೀನಿ.. ಅಂತಾ ಬಾಯಿಗೆ ಬಂದಗೆಲ್ಲಾ ಅಬ್ಬರಿಸುತ್ತಾರೆ. ಮಂಜುನಾಥನ ಅವಾಜ಼ುಗಳಿಗೆ ಕ್ಯಾರೇ ಅನ್ನದ ರಘು ಮತ್ತವರ ತಂಡ ‘ನಾವು ಕಾನೂ ಪ್ರಕಾರವೇ ಮುಂದಡಿ ಇಡುತ್ತೇವೆ. ನಿಮ್ಮ ಯಾವ ಸೆಟಲ್ ಮೆಂಟು ಟೆಕ್ನಿಕ್ಕುಗಳೂ ನಮಗೆ ಬೇಡ ಅಂತಾ ಎದ್ದುನಡೆಯುತ್ತಾರೆ. ಆಗಲೂ ಸಹ ರಾಕಿಯನ್ನು ಬಿಡೋ ಮನಸ್ಸು ಮಾಡುವುದಿಲ್ಲ. ಈ ಎಲ್ಲದರ ನಡುವೆ ಯಾರೋ ಟೀವಿ ರಿಪೋರ್ಟರೊಬ್ಬ ಕೂಡಾ ಆಗಾಗ ಇಣುಕಿ ಹಾಕಿ ನಿನ್ನ ಬಗ್ಗೆ ನಮ್ ನ್ಯೂಸ್ ಚಾನೆಲ್ಲಲ್ಲಿ ಹಾಕಿಸಿಬಿಡ್ತೀನಿ ಅಂದಾ ಸಾಧುಕೋಕಿಲನ ಥರಾ ಡೈಲಾಗು ಉದುರಿಸಿ ಹೋಗುತ್ತಿರುತ್ತಾನೆ.
ಎಲ್ಲರೂ ಹೊರಟ ನಂತರ ಕಾನೂನು ಬಾಹಿರವಾಗಿ ರಾಕೇಶ್ಗೆ ಹಿಂಸಿಸುತ್ತಾರೆ. ಕೊಡಬಾರದ ಟಾರ್ಚರ್ ನೀಡುತ್ತಾರೆ. ಕಡೆಗೆ ಒಂದೂವರೆ ರಾತ್ರಿಯ ತನಕ ಮಾಡಬಾರದ್ದನ್ನೆಲ್ಲಾ ಮಾಡಿ ಒತ್ತಾಯಪೂರ್ವಕವಾಗಿ ಬರೆಸಿ, ಸ್ಕೂಟರ್ ಡಿಕ್ಕಿಯಿಂದ ಕಸಿದು ತಂದಿದ್ದ ಚೆಕ್ಕುಗಳಿಗೆ ಸಹಿ ಮಾಡಿಸಿಕೊಂಡು ನಡುರಾತ್ರಿ ಎರಡು ಗಂಟೆಗೆ ರಾಕೇಶ್ ಅವರನ್ನು ಠಾಣೆಯಿಂದ ಹೊರ ಕಳಿಸುತ್ತಾರೆ…
ಇವಿಷ್ಟೂ ಪ್ರಕರಣದ ಹಿನ್ನೆಲೆ ಮತ್ತು ವಿವರ. ಇಷ್ಟೆಲ್ಲಾ ಮಾಡಿ ಮಂಜುನಾಥನಾಗಲಿ, ನೆಲಮಂಗಲದ ಲಜ್ಜೆಗೆಟ್ಟ ಪೊಲೀಸರಾಗಲಿ ಸಾಧಿಸಿದ್ದು ಏನೂ ಇಲ್ಲ. ಯಾಕೆಂದರೆ ರಾಕೇಶ್ ಪ್ರತಿಯೊಂದನ್ನೂ ಕಾನೂನಿನ ಪರಿಧಿಯಲ್ಲೇ ನಿಭಾಯಿಸಿದ್ದಾರೆ. ಇಲ್ಲಿ ಅನಾಚಾರ ಮಾಡಿದ್ದು ಪೊಲೀಸರು ಮತ್ತು ವಂಚಕ ಮಂಜ.
ತುಕಾಲಿ ಮಂಜನನ್ನು ನಂಬಿ ಡೀಲು ಕುದುರಿಸಲು ಹೋದ ತಪ್ಪಿಗೆ ಇಂದು ಸಬ್ ಇನ್ಸ್ ಪೆಕ್ಟರ್ ಮಂಜುನಾಥ, ಪಿಸಿ ಕೇಶವನ ಕೆಲಸಕ್ಕೇ ಕುತ್ತು ಬರೋ ಸಂದರ್ಭ ಒದಗಿಬಂದಿದೆ. ಯಾಕೆಂದರೆ, ಅಕ್ಟೋಬರ್ ೨೧ರ ರಾತ್ರಿ ಪೊಲೀಸರಿಂದ ಯಾತನೆ ಅನುಭಸಿ, ಹೊರಬಂದ ರಾಕೇಶ್ ೨೨ರ ಬೆಳಿಗ್ಗೆ ಮಾಡುವ ಮೊದಲ ಕೆಲಸ ನ್ಯಾಯದೇವತೆಗೆ ಕೈಮುಗಿದು, ಕಂಪ್ಲೇಂಟು ಕಾಪಿ ರೆಡಿ ಮಾಡಿಕೊಂಡು ಎಸ್ಪಿ ರವಿ ಚನ್ನಣ್ಣನವರ್, ಐಜಿಪಿ, ಡಿಜಿಪಿ, ಮಾನವ ಹಕ್ಕು ಆಯೋಗ, ಲೋಕಾಯುಕ್ತ ಸೇರಿದಂತೆ ಎಲ್ಲರಿಗೂ ಈ ಪ್ರಕರಣದ ಕುರಿತು ಸಮಗ್ರವಾದ ಪತ್ರ ಪರೆದು ನ್ಯಾಯ ದೊರಕಿಸಿಕೊಡಬೇಕಾಗಿ ಮನವಿ ಮಾಡುತ್ತಾರೆ.
ಇಷ್ಟೆಲ್ಲಾ ಆಗುವ ಹೊತ್ತಿಗೆ ನೆಲಮಂಗಲ ಪೊಲೀಸರ ತೊಡೆ ನಡುಗಲು ಶುರುವಾಗುತ್ತದೆ. ಕಾಮಿಡಿ ರಿಪೋರ್ಟರ್ ಮೂಲಕ ಸುದ್ದಿವಾಹಿನಿಯೊಂದರಲ್ಲಿ ‘ರಾಕೇಶ್ ವಂಚಕ ಅನ್ನೋ ರೀತಿಯಲ್ಲಿ ಸುಳ್ಳು ಸುಳ್ಳೇ ಸುದ್ದಿ ಮಾಡಿಸುತ್ತಾರೆ.
ತಮ್ಮ ಗೊಡ್ಡು ಬೆದರಿಕೆಗಳಿಗೆ ಬಗ್ಗಿ ಹಿಂದೇಟು ಹಾಕುತ್ತಾರೆ ಅನ್ನೋದು ನೆಲಮಂಗಲ ಟೌನ್ ಪೊಲೀಸರ ಲೆಕ್ಕಾಚಾರವಾಗಿತ್ತೋ ಏನೋ? ಆದರೆ ಅವೆಲ್ಲಾ ಈಗ ತಲೆಕೆಳಗಾಗಿದೆ. ತಾವು ತೋಡಿದ ಹಳ್ಳದಲ್ಲಿ ತಾವೇ ಬಿದ್ದು ಒದ್ದಾಡುವಂತಾಗಿದೆ. ನ್ಯಾಯವನ್ನು ಕಾಪಾಡಬೇಕಿರುವ ಪೊಲೀಸ್ ಠಾಣೆಯಲ್ಲಿ ಇಷ್ಟೆಲ್ಲಾ ಅನಾಚಾರಗಳು, ದಬ್ಬಾಳಿಕೆ ನಡೆಯೋ ಹೊತ್ತಿಗೆ ಠಾಣೆಯ ವೃತ್ತ ನಿರೀಕ್ಷಕರು ಎಲ್ಲಿ ಹೋಗಿದ್ದರು ಅನ್ನೋ ಪ್ರಶ್ನೆ ಮೂಡಬಹುದು. ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಮತ್ತು ಪಿಸಿ ಕೇಶವ ಅದಕ್ಕೂ ಬ್ರಿಲಿಯಂಟ್ ಐಡಿಯಾವನ್ನೇ ಮಾಡಿದ್ದರು. ಅದೇನೆಂದರೆ, ಅಲ್ಲೀತನಕ ಆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಅನಿಲ್ ಅವರು ವರ್ಗಾವಣೆಯಾಗಿದ್ದರು. ಮತ್ತು ಅಕ್ಟೋಬರ್ ೨೧ರಂದು ಹೊಸ ಅಧಿಕಾರಿ ಇನ್ನೂ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಿರಲಿಲ್ಲ. ಠಾಣೆಯಲ್ಲಿ ಯಾರೂ ಹಿರಿಯ ಅಧಿಕಾರಿ ಇಲ್ಲದ ದಿನವನ್ನೇ ನೋಡಿಕೊಂಡು ಈ ಡೀಲಿಗೆ ಮುಹೂರ್ತ ನಿಗಧಿ ಮಾಡಿದ್ದರು.
ಈಗ ರಾಕೇಶ್ ತಮ್ಮ ಸಿನಿಮಾ ಪಾಲುದಾರ ಮಂಜುನಾಥ ಸೇರಿದಂತೆ ಪೊಲೀಸರ ವಿರುದ್ಧವೂ ಕಾನೂನು ಸಮರ ಸಾರಿದ್ದಾರೆ. ಪೊಲೀಸರು ಮಾಡಿದ್ದು ತಪ್ಪು ಅನ್ನೋದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಸಾಲದ್ದೆನ್ನುವಂತೆ ಠಾಣೆಯಲ್ಲಿನ ಸಿಸಿ ಟಿವಿ ಕ್ಯಾಮೆರಾದ ಫುಟೇಜುಗಳು ಇಡೀ ಪ್ರಕರಣಕ್ಕೆ ಅಮೂಲ್ಯವಾದ ಸಾಕ್ಷಿಗಳನ್ನು ಒದಗಿಸುತ್ತವೆ.
ಯಾರಿವನು ಡೀಲ್ ಮಂಜ?
ಸಿನಿಮಾ ನಿರ್ಮಿಸಲು ಹಣ ಹಾಕುತ್ತೀನಿ ಅಂತಾ ಬಂದು, ರೌಡಿ, ಪೊಲೀಸು, ಡೀಲು ಅಂತೆಲ್ಲಾ ವ್ಯವಹಾರ ಕುದುರಿಸಲು ಹೋಗಿ ಸಕಲರನ್ನೂ ಸಂಕಷ್ಟಕ್ಕೆ ಸಿಲುಕಿಸಿರುವ ಮಂಜುನಾಥ್ ಬಿ. ಆಲಿಯಾಸ್ ಡೀಲ್ ಮಂಜನ ಹಿನ್ನೆಲೆ ಮುನ್ನೆಲೆಗಳನ್ನು ಕೆದಕುತ್ತಾ ಹೋದರೆ ಈತ ಹುಟ್ಟಾ ಫ್ರಾಡು ಅನ್ನೋದು ಗೊತ್ತಾಗುತ್ತದೆ.
ಶಾಂತಿನಗರದ ಬಿ.ಎಂ.ಟಿ.ಸಿ ಬಸ್ ಡಿಪೋದಲ್ಲಿ ರೂಟ್ ಮ್ಯಾಪಿಂಗ್ ಮಾಡುವ ಕೆಲಸ ಈತನದ್ದು. ಸರ್ಕಾರಿ ಕೆಲಸದಲ್ಲಿದ್ದುಕೊಂಡು, ಬರೋ ಇಪ್ಪತ್ತೈದು ಮೂವತ್ತು ಸಾವಿರ ಸಂಬಳ ಈತನ ಶೋಕಿಗೆ ಸಾಲಬೇಕಲ್ಲಾ? ಇವತ್ತು ಪತಿ ಬೇಕು ಡಾಟ್ ಕಾಮ್ ಚಿತ್ರಕ್ಕೆ ಎಪ್ಪತ್ತೈದು ಲಕ್ಷ ಹೂಡಿಕೆ ಮಾಡಿದ್ದೀನಿ ಅಂತಾ ಬೊಗಳೆ ಬಿಡುತ್ತಿದ್ದಾನಲ್ಲಾ? ಬರೋ ಸರ್ಕಾರಿ ಸಂಬಳದಲ್ಲಿ ಇಷ್ಟು ದೊಡ್ಡ ಅಮೌಂಟು ತಾನೆ ಈತನಿಗೆ ಎಲ್ಲಿಂದ ಬಂತು? ಅಸಲಿಗೆ ಈ ಸಿನಿಮಾಗೆ ಖರ್ಚಾಗಿರೋ ಬಜೆಟ್ಟೇ ನಲವತ್ತೈದು ಲಕ್ಷ. ಆದರೆ ಮಂಜುನಾಥನೊಬ್ಬನ ಪಾಲು ಹೇಗೆ ಎಪ್ಪತ್ತಾಗಲು ಸಾಧ್ಯ?
ಮಂಜುನಾಥ ಎಂಥಾ ಫ್ರಾಡು, ಸುಳ್ಳುಬುರುಕ ಅನ್ನೋದಕ್ಕೆ ಇವೆಲ್ಲಾ ಸಾಕ್ಷಿ ಒದಗಿಸುತ್ತಿವೆ. ಇನ್ನೂ ಮಂಜುನಾಥನ ವಂಚನಾ ಜಾಲ ದೊಡ್ಡದಿದೆ. ಸಿಕ್ಕ ಸಿಕ್ಕವರಿಗೆ ಮುಂಡಾ ಇಟ್ಟಿರುವ ಈತ ಅದಕ್ಕೆಲ್ಲಾ ಇದೊಂದು ಸಿನಿಮಾವನ್ನೇ ಹೊಣೆ ಮಾಡುತ್ತಿದ್ದಾನೆ. ಬರೀ ದುಡ್ಡಿನ ವಿಚಾರದಲ್ಲಿ ಮಾತ್ರವಲ್ಲದೆ, ಯಾವುದರಲ್ಲೂ ಈತ ನೇರ್ಪಾಗಿಲ್ಲ ಅನ್ನೋದಕ್ಕೂ ಸಾಕಷ್ಟು ಪುರಾವೆಗಳಿವೆ. ಅವನ್ನೆಲ್ಲಾ ವಿವರಿಸುತ್ತಾ ಹೋದರೆ ಶ್ರೀ ಮಂಜುನಾಥ ಚರಿತೆಯೇ ಸೃಷ್ಟಿಯಾಗುತ್ತದೆ!!
ಒಟ್ಟಾರೆ ನೋಡಿದರೆ ಇದು ನಿಷ್ಟಾವಂತ ಅಧಿಕಾರಿ, ಇಡೀ ದೇಶಕ್ಕೇ ಮಾದರಿಯಾಗಿರುವ ರವಿ ಡಿ. ಚನ್ನಣ್ಣನವರ್ ಮನಸ್ಸು ಮಾಡಿದರೆ ಮಾತ್ರ ನಿರ್ದೇಶಕ ರಾಕೇಶ್ ಗೆ ನ್ಯಾಯ ಸಿಗಲು ಸಾಧ್ಯ. ಕಾನೂನಿನ ಮೇಲೆ ಅಪಾರ ನಂಬಿಕೆ ಇಟ್ಟಿರುವ ರಾಕಿ ಇಂದು ಕೇಡುಗರ ತಂತ್ರದಲ್ಲಿ ಸಿಲುಕಿದ್ದಾರೆ. ಒಬ್ಬ ಕ್ರಿಯಾಶೀಲ ನಿರ್ದೇಶಕನ ಭವಿಷ್ಯವನ್ನು ಉಜ್ವಲವಾಗಿಸುವುದು ಚನ್ನಣ್ಣನವರ್ ಸಾಹೇಬರ ಕೈಲಿದೆ. ಅದು ಸಾಧ್ಯವಾಗುತ್ತದೆ ಅಂತಲೇ ನಂಬೋಣ!
No Comment! Be the first one.