ತೀರಾ ಎಳೇ ವಯಸ್ಸಿನಲ್ಲಿಯೇ ನಟಿಸಲು ಪ್ರಾರಂಭಿಸಿ, ಚಿತ್ರರಂಗಕ್ಕೆ ಬಂದು ಅದಾಗಲೇ ೨೫ ವರ್ಷಗಳನ್ನು ಪೂರೈಸಿರುವ ಮತ್ತು ಇವತ್ತಿಗೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿರುವ ನಟಿ ನಟಿ ರಮ್ಯಾ ಕೃಷ್ಣ. ನಾಯಕಿಯಾಗಿ ನಟನೆ ಆರಂಭಿಸಿ ತಾಯಿ, ವಿಲ್ಲನ್, ಅಕ್ಕ, ಅತ್ತಿಗೆ ಹೀಗೆ ಥರಹೇವಾರಿ ಪಾತ್ರಗಳಲ್ಲಿ ನಟಿಸಿ, ಸೈ ಎನ್ನಿಸಿಕೊಂಡ ಸಾಧಕಿ ಈಕೆ.

ಪಡೆಯಪ್ಪ ಚಿತ್ರದ ನೀಲಾಂಬರಿ ಪಾತ್ರದಲ್ಲಿ ರಜನೀಕಾಂತ್ರಂಥಾ ಸೂಪರ್ ಸ್ಟಾರ್ಗೇ ನಟನೆಯಲ್ಲಿ ಟಕ್ಕರ್ ಕೊಟ್ಟವರು ರಮ್ಯಾ. ಪುರುಷಾಧಿಪತ್ಯಕ್ಕೆ ಸೆಡ್ಡು ಹೊಡೆಯುವ ಬಾಹುಬಲಿಯ ಶಿವಗಾಮಿ ಪಾತ್ರ ರಮ್ಯಾ ಕೃಷ್ಣರ ನಟನೆಯ ತಾಕತ್ತಿಗೆ ಸಣ್ಣದೊಂದು ಮಾದರಿ. ಕನ್ನಡ ಚಿತ್ರರಂಗದಲ್ಲಿ ರಮ್ಯಾ ಕೃಷ್ಣ ಸೃಷ್ಟಿಸಿದ್ದ ಕ್ರೇಜ಼್ ಏನು ಕಮ್ಮಿಯಾ? ಕೃಷ್ಣ ರುಕ್ಮಿಣಿ, ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾನೇನ, ಬಾಬಾರೋ ರಸಿಕ, ಏಕಾಂಗಿ, ಸ್ನೇಹ, ರಕ್ತ ಕಣ್ಣೀರು, ಮಾಣಿಕ್ಯ ಮೊದಲಾದ ಸಿನಿಮಾಗಳ ಮೂಲಕ ಮೂರು ತಲೆಮಾರಿನ ಹೀರೋಗಳ ಜೊತೆ ನಟಿಸುತ್ತಾ ಬಂದ ಅಪರೂಪದ ನಟಿ ಈಕೆ.

೧೯೯೮ರಲ್ಲಿ ತೆರೆಕೆಂಡ ಚಂದ್ರಲೇಖ ಎಂಬ ತೆಲುಗು ಚಿತ್ರದಲ್ಲಿ ನಟಿಸುವ ಹೊತ್ತಿಗೇ ರಮ್ಯಾ ಕೃಷ್ಣಾಗೆ ಆ ಚಿತ್ರದ ನಿರ್ದೇಶಕ ಕೃಷ್ಣ ವಂಶಿಯೊಂದಿಗೆ ಪ್ರೇಮಾಂಕುರವಾಗಿತ್ತು. ಆ ಪ್ರೀತಿ ಮತ್ತಷ್ಟು ಗಟ್ಟಿಯಾಗಿದ್ದೇ, ೨೦೦೩ರಲ್ಲಿ ರಮ್ಯಕೃಷ್ಣ ಕೃಷ್ಣ ವಂಶಿಯನ್ನು ವಿವಾಹವಾದರು. ಈ ದಂಪತಿಗಳಿಗೆ ಒಬ್ಬ ಮಗ ಸಹ ಇದ್ದಾನೆ. ಸಾಮಾನ್ಯಕ್ಕೆ ಮದುವೆಯ ನಂತರ ಸಿನಿಮಾ ರಂಗಕ್ಕೆ ವಿದಾಯ ಹೇಳಬೇಕಾದ ಅನಿವಾರ್ಯ ಸೃಷ್ಟಿಯಾಗುವುದು ದಕ್ಷಿಣ ಭಾರತದ ನಟಿಯರಿಗೆ ಒಂದು ರೀತಿಯಲ್ಲಿ ಶಾಪ. ಆದರೆ ಮದುವೆಯ ನಂತರವೂ ಹಲವು ಚಿತ್ರಗಳಲ್ಲಿ ನಟಿಸುತ್ತಾ ಮತ್ತೊಮ್ಮೆ ಮಗದೊಮ್ಮೆ ಗೆದ್ದು ಬರುತ್ತಲೇ ಇರುವುದು ರಮ್ಯಾ ಕೃಷ್ಣ ಪಾಲಿನ ವರ!

೨೦೦೪ರಲ್ಲಿ ಕೃಷ್ಣ ವಂಶಿ ಅವರ ನಿರ್ದೇಶನದಲ್ಲಿತೆರೆ ಕಂಡ ಶ್ರೀ ಆಂಜನೇಯಮ್ ಎನ್ನುವ ತೆಲುಗು ಚಿತ್ರದಲ್ಲಿ ನಟಿಸಿದ ನಂತರ ಈ ನೀಲಾಂಬರಿ ಸುಮಾರು ೧೫ ವರ್ಷಗಳ ದೀರ್ಘಾವಧಿಯಲ್ಲಿ ತನ್ನ ಗಂಡನ ನಿರ್ದೇಶನದಲ್ಲಿ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ೧೫ ವರ್ಷಗಳ ನಂತರ ಪತಿ ಕೃಷ್ಣವಂಶಿಯ ನಿರ್ದೇಶನದ ವಂದೇ ಮಾತರಂ ಚಿತ್ರದಲ್ಲಿ ನಟಿಸಲಿದ್ದಾರಂತೆ ರಮ್ಯಾ ಕೃಷ್ಣ. ಪ್ರಕಾಶ್ ರೈ, ಅವಿಕಾ ಗೋರ್ ಇನ್ನಿತರರು ಈ ಚಿತ್ರದಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರಂತೆ.

ದಕ್ಷಿಣ ಭಾರತದ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಅಲ್ಲದೆ ಬಾಲಿವುಡ್‌ನಲ್ಲಿಯೂ ಸಹ ರಮ್ಯಾಕೃಷ್ಣ ಹೆಸರು ಮಾಡಿರುವ  ನಟಿ. ೧೯೮೮ರಲ್ಲಿ ತೆರೆಕೆಂಡ ಬಡೆ ಮಿಯಾಛೋಟೆ ಮಿಯಾ ಎಂಬ ಹಿಂದಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್‌ಜೊತೆ ನಟಿಸಿದ್ದ ರಮ್ಯಾ ೨೧ ವರ್ಷಗಳ ನಂತರ ಉಯರಂದ ಮನಿದನ್ ಎಂಬ ತಮಿಳು ಸಿನಿಮಾದಲ್ಲಿ ಬಚ್ಚನ್‌ಜೊತೆ ನಟಿಸಿಲಿದ್ದಾರೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಕಂ ನಟ ಎಸ್.ಜೆ. ಸೂರ್ಯ ನಿರ್ದೇಶಿಸುತ್ತಿದ್ದಾರೆ. ಇದೇ ಚಿತ್ರ ಹಿಂದಿ ಭಾಷೆಯಲ್ಲಿ ತೆರಾ ಯಾರ್ ಹೂನ್ ಮೈನ್ ಎಂಬ ಹೆಸರಿನಲ್ಲಿ ಡಬ್ ಆಗಲಿದೆ.  ಅಲ್ಲಿಗೆ ರಮ್ಯಾ ಕೃಷ್ಣ ಪಾಲಿಗೆ ಇದು ಎಷ್ಟನ್ನೇ ಇನ್ನಿಂಗ್ಸು ಅಂತಾ ಲೆಕ್ಕ ಹಾಕಬೇಕಿದೆ!

  • ಸುಮಾ ವೆಂಕಟೇಶ್
ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಹುಟ್ಟಿದ ಊರನು ಬಿಟ್ಟು ಬಂದವರ ಮಾತು…

Previous article

ಧನುಷ್ ಎಂಬ ಪ್ರತಿಭಾವಂತ ನಟನ ಕುರಿತು

Next article

You may also like

Comments

Leave a reply

Your email address will not be published. Required fields are marked *