ರತ್ನಮಂಜರಿ ಕುರಿತು ನಿರ್ಮಾಪಕ ಸಂದೀಪ್ ಏನಂದರು ಗೊತ್ತಾ?

ವಿದೇಶಿ ಕನ್ನಡಿಗರುಗಳಾದ ಸಂದೀಪ್ ಕುಮಾರ್, ನಟರಾಜ್ ಹಾಗೂ ಇತರರು ಎಸ್ ಎನ್ ಎಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ತಯಾರಿಸಿರುವ ಚಿತ್ರ `ರತ್ನಮಂಜರಿ’. ಈಗ ಪ್ರೇಕ್ಷಕ ವಲಯವನ್ನು ಹಾಡುಗಳಿಂದಲೇ ಸೆಳೆದಿರುವ ಸಿನಿಮಾ ಇದು. ಪ್ರಸಿದ್ಧ್ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಮೂವರು ಸಮಾನ ಮನಸ್ಕ ಎನ್ ಆರ್ ಐಗಳು ಸೇರಿ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಎಸ್ ಸಂದೀಪ್ ಕುಮಾರ್ ಕೂಡಾ ಒಬ್ಬರು. ಐಟಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರೋ ಅವರು ಎರಡು ಸಾಫ್ಟ್ ವೇರ್ ಕಂಪೆನಿಗಳ ಮಾಲೀಕರು. ಆದರೂ ಕನ್ನಡತನ ಮತ್ತು ಸಿನಿಮಾ ವ್ಯಾಮೋಹವೆಂಬುದು ರತ್ನಮಂಜರಿಯನ್ನು ನಿರ್ಮಾಣ ಮಾಡಲು ಕಾರಣವಾಗಿದೆ.

ರತ್ನಮಂಜರಿ ಚಿತ್ರದ ನಿರ್ಮಾಪಕರಾದ ಎಸ್ ಸಂದೀಪ್ ವಿದೇಶಗಳಲ್ಲಿ ಎರಡು ಸಾಫ್ಟ್ ವೇರ್ ಕಂಪೆನಿಗಳನ್ನು ನಡೆಸುತ್ತಿದ್ದಾರೆ. ಹೊರ ದೇಶಗಳಲ್ಲಿ ಜೀವಿಸುವ ಬಹುತೇಕ ಕನ್ನಡಿಗರಂತೆ ಸದಾ  ಜನ್ಮಭೂಮಿಯ ಧ್ಯಾನ ಹೊಂದಿರೋ ಅವರ ಪಾಲಿಗೆ ಆರಂಭದಿಂದಲೂ ಕೂಡಾ ಚಿತ್ರರಂಗದ ಸೆಳೆತವಿತ್ತು. ಕನ್ನಡ ನೆಲದ ಜನರೊಂದಿಗೆ ಮುಖಾಮುಖಿಯಾಗಲು ಸಿನಿಮಾ ಪರಿಣಾಮಕಾರಿ ಕ್ಷೇತ್ರ ಎನ್ನುವುದು ಅವರ ಅನಿಸಿಕೆಯಾಗಿತ್ತು. ಇದರ ಪರಿಣಾಮವಾಗಿ ಎನ್ ಆರ್ ಐಗಳ ಕೂಟದಿಂದಲೇ ಅವರ ಕನಸು ನನಸಾಗಿದೆ. ಆ ಮೂಲಕ ಸಂದೀಪ್ ನಿರ್ಮಾಪಕರಲ್ಲೊಬ್ಬರಾಗಿರೋ ರತ್ನ ಮಂಜರಿ ತೆರೆ ಕಾಣಲು ರೆಡಿಯಾಗಿದೆ.

ಐಟಿ ವಲಯದಲ್ಲಿಯೇ ಇರುವ ನಟರಾಜ್ ಹಳೇಬೀಡು, ಡಾ. ನವೀನ್ ಜೊತೆ ಸೇರಿ ಸಂದೀಪ್ ಅವರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರೆಲ್ಲರೂ ನಿರ್ದೇಶಕ ಪ್ರಸಿದ್ಧ್ ಅವರ ಸಂಪರ್ಕಕ್ಕೆ ಬಂದ ನಂತರ ರತ್ನಮಂಜರಿ ಎಂಬ ಕಥೆ ಸೃಷ್ಟಿಯಾಗಿದ್ದೇ ಮಜಬೂತಾದ ಸಂಗತಿ.

ಅಮೆರಿಕದಲ್ಲಿ ದಶಕಗಳ ಹಿಂದೆ ನಡೆದೊಂದು ಕಥೆಯ ಬೇಸಿನಲ್ಲಿ ರತ್ನಮಂಜರಿ ಚಿತ್ರದ ಕಥೆ ರೂಪುಗೊಂಡಿದೆ. ಅದು ಸಂದೀಪ್ ಸೇರಿದಂತೆ ನಿರ್ಮಾಪಕರೆಲ್ಲರ ಇಷಾರೆಯೊಂದಿಗೇ ರೆಡಿಯಾಗಿರೋ ಕಥೆ. ನಂತರ ಈ ಚಿತ್ರದ ಐವತ್ತರಷ್ಟು ಭಾಗದ ಕಥೆಯನ್ನು ಯುಎಸ್ ನಲ್ಲಿ ಮತ್ತುಳಿದ ಅರ್ಧ ಭಾಗವನ್ನು ಮಡಿಕೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆಯೇ ಇಡೀ ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಾಗಿದೆ. ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಹೊಸತನವೇ ತುಂಬಿಕೊಳ್ಳಬೇಕೆಂಬುದು ಸಂದೀಪ್ ಅವರ ಇರಾದೆಯಾಗಿತ್ತು. ತಮ್ಮಂತೆಯೇ ಕಲೆಯ ಗುಂಗು ಹೊಂದಿದ್ದ ಹೊರನಾಡ ಕನ್ನಡಿಗರಿಗೂ ಅವಕಾಶ ಮಾಡಿಕೊಡಬೇಕೆಂಬ ಆಲೋಚನೆಯೂ ಅವರಲ್ಲಿತ್ತು. ಆದ್ದರಿಂದಲೇ ಈ ಚಿತ್ರದ ಪಾತ್ರಕ್ಕಾಗಿ ವಿದೇಶದಲ್ಲಿ ಆಡಿಷನ್ ಕರೆದಾಗ ಸಾವಿರಕ್ಕೂ ಹೆಚ್ಚು ಆಸಕ್ತರು ಮುಂದೆ ಬಂದಿದ್ದರು. ಕಡೆಗೂ ಅವರಲ್ಲಿ ಹತ್ತು ಮಂದಿಯನ್ನು ಆಯ್ಕೆ ಮಾಡಿ ನಟಿಸಲು ಅವಕಾಶ ಮಾಡಿ ಕೊಡಲಾಗಿದೆ. ಅವರೆಲ್ಲರೂ ವಿದೇಶದಲ್ಲಿಯೇ ರಂಗಭೂಮಿಯ ಸಖ್ಯ ಹೊಂದಿದ್ದವರು. ಕಳೆದ ಆಗಸ್ಟ್ ತಿಂಗಳಲ್ಲಿಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಾಡಿದ್ದ ಹಾಡೊಂದು ಅಕ್ಕ ಸಮ್ಮೇಳನದಲ್ಲಿ ಬಿಡುಗಡೆಯಾಗಿತ್ತು. ಈ ಮೂಲಕ ವಿದೇಶದಲ್ಲಿ ಆಡಿಯೋ ಲಾಂಛ್ ಮಾಡಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ ರತ್ನಮಂಜರಿ ಪಾತ್ರವಾಗಿದೆ.

ಇನ್ನು ಮಡಿಕೇರಿಯ ತಲಕಾವೇರಿಯಲ್ಲಿ ಚಿತ್ರೀಕರಣ ಮಾಡಿದ ಕಡೇಯ ಚಿತ್ರವಾಗಿಯೂ ರತ್ನಮಂಜರಿ ದಾಖಲಾಗಿದೆ. ಯಾಕೆಂದರೆ ಈ ಚಿತ್ರದ ಚಿತ್ರೀಕರಣವಾದ ಎರಡು ದಿನಗಳಲ್ಲಿಯೇ ರಾಜ್ಯ ಸರ್ಕಾರ ಇನ್ನು ಮುಂದೆ ಅಲ್ಲಿ ಯಾವ ಚಿತ್ರೀಕರಣವೂ ನಡೆಸುವಂತಿಲ್ಲ ಎಂಬ ಆದೇಶ ನೀಡಿತ್ತು! ಹೀಗೆ ಚಿತ್ರೀಕರಣವೂ ಸೇರಿದಂತೆ ಎಲ್ಲದರಲ್ಲಿಯೂ ಅಚ್ಚರಿಗಳನ್ನು ಬಚ್ಚಿಟ್ಟುಕೊಂಡಿರೋ ಈ ಚಿತ್ರವನ್ನು ಎನ್ ಆರ್ ಐಗಳೇ ಸೇರಿ ನಿರ್ಮಾಣ ಮಾಡಿರೋದರಿಂದ ಆ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳಿವೆ. ಅದಕ್ಕೆ ತಕ್ಕುದಾಗಿಯೇ ಚಿತ್ರ ಮೂಡಿ ಬರ ಬೇಕೆಂಬ ಕಾರಣದಿಂದ ಸಂದೀಪ್ ಅವರ ಸಾರಥ್ಯದಲ್ಲಿ ತಾಂತ್ರಿಕವಾಗಿಯೂ ಈ ಚಿತ್ರ ಶ್ರೀಮಂತಿಕೆಯಿಂದ ಕೂಡಿದೆ. ವಿದೇಶದಲ್ಲಿಯೇ ಇದರ ಸಿಜಿ ಸೇರಿದಂತೆ ಅನೇಕ ಕಾರ್ಯಗಳು ನಡೆದಿವೆ. ಅದಕ್ಕೆ ಹಾಲಿವುಡ್ ಚಿತ್ರಗಳ ತಂತ್ರಜ್ಞರೇ ಕಾರ್ಯ ನಿರ್ವಹಿಸಿದ್ದಾರೆ. ಆದ್ದರಿಂದಲೇ ರೊಮ್ಯಾಂಟಿಕ್ ಥ್ರಿಲ್ಲರ್ ಕಥಾನಕ ಹೊಂದಿರೋ ರತ್ನಮಂಜರಿ ಹಾಲಿವುಡ್ ಚಿತ್ರಗಳಿಗೇ ಸೆಡ್ಡು ಹೊಡೆಯುವಂತೆ ಮೂಡಿ ಬಂದಿದೆಯಂತೆ.

ಹೀಗೆ ಸಂದೀಪ್ ಅವರು ಸಾಲು ಸಾಲಾಗಿ ರತ್ನಮಂಜರಿಯ ವಿಶೇಷತೆಗಳನ್ನು ದಾಖಲಿಸುತ್ತಾರೆ. ಬೇರೆ ದೇಶದಲ್ಲಿ ಸಾಫ್ಟ್ ವೇರ್ ಜಗತ್ತಿನಲ್ಲಿ ದಿಗ್ಗಜರಾಗಿ ಗುರುತಿಸಿಕೊಂಡಿದ್ದರೂ ಅವರ ಪಾಲಿಗೆ ಸಿನಿಮಾ ಎಂಬುದು ದೈವೀಕ ಸೆಳೆತ. ಅವರೊಳಗೆ ಲಾಭ ನಷ್ಟದ ವ್ಯಾಪಾರಿ ಮನೋಭಾವ ಮೀರಿದೊಂದು ಸಿನಿಮಾ ಪ್ರೀತಿಯಿದೆ. ಇಂಥಾ ಮನಸ್ಥಿತಿಯಿಂದಲೇ ರೂಪುಗೊಂಡಿರೋ ರತ್ನಮಂಜರಿ ಇದೇ ಮೇ ತಿಂಗಳ 17ರಂದು ತೆರೆ ಕಾಣಲಿದೆ.


Posted

in

by

Tags:

Comments

Leave a Reply