ಸಂಪತ್ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅದು ʻರವಿಕೆ ಪ್ರಸಂಗʼ. ಸಂತೋಷ್ ಕೊಂಡಕೇರಿ ನಿರ್ದೇಶನದ ಈ ಚಿತ್ರದ ಪೋಸ್ಟರು ಟೀಸರುಗಳೇ ಮಜಾ ಕೊಡುವಂತಿದೆ. ರವಿಕೆ ಮತ್ತು ಅದರ ಸುತ್ತ ಅರಳಿರುವ ಕತೆ ಇದರಲ್ಲಿದೆಯಂತೆ. ಗೀತಾ ಭಾರತಿ ಭಟ್ ಈ ಚಿತ್ರದ ಕೇಂದ್ರಬಿಂದು. ಸಂಪತ್ ಮೈತ್ರೇಯ ಇಲ್ಲಿ ಲೇಡೀಸ್ ಟೈಲರ್ ಪಾತ್ರದಲ್ಲಿ ನಟಿಸುವ ಮೂಲಕ ಕಾಮಿಡಿ ಕಲಾವಿದನೂ ಆಗಿದ್ದಾರೆ.
ಪೂರ್ಣಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ʻಸಿನಿಮಾ ಸಂಪರ್ಕಕ್ಕೆ ಹೋಗಬಾರದುʼ ಎನ್ನುವ ಅಘೋಷಿತ ನಿಯಮವನ್ನು ಪಾಲಿಸುತ್ತಾರೆ. ಹಾಗೆ ನಿರ್ಧರಿಸಿದವರಲ್ಲಿ ಬಹುತೇಕರು ನಾನಾ ಕಾರಣಗಳನ್ನೊಡ್ಡಿ ತಾವೇ ಹಾಕಿಕೊಂಡ ಚೌಕಟ್ಟನ್ನು ಮೀರುತ್ತಾರೆ; ಮೆಲ್ಲಮೆಲ್ಲಗೆ ಧಾರಾವಾಹಿಗಳಲ್ಲಿ ಆರಂಭಿಸಿ ಸಿನಿಮಾಗೂ ಕಾಲಿಡುತ್ತಾರೆ. ರಂಗಭೂಮಿಯ ಅನುಭವ ಇಲ್ಲಿ ಆ ಕಲಾವಿದರಿಗೆ ದೊಡ್ಡ ಮಟ್ಟದ ಗೆಲುವು, ಜನಪ್ರಿಯತೆ ಎಲ್ಲವನ್ನೂ ತಂದುಕೊಡುತ್ತದೆ. ಮಿನಿಮಮ್ ಬದುಕಿಗೂ ಕಷ್ಟಪಡುವ ಪರಿಸ್ಥಿತಿಯಲ್ಲಿದ್ದವರ ಕೈಗೆ ಏಕಾಏಕಿ ಮ್ಯಾಕ್ಸಿಮಮಂ ಸವಲತ್ತು, ಸಂಭಾವನೆ ಎಲ್ಲವೂ ದಕ್ಕುತ್ತದೆ. ಹಾಗೆ ರಂಗಭೂಮಿಯ ನೆಲದಿಂದ ಕಾಲೆತ್ತಿ ಆಚೆಗಿಟ್ಟವರ ಕಿವಿಗೆ ಇನ್ಯಾವತ್ತೂ ʻಥರ್ಡ್ ಬೆಲ್ʼ ಕೇಳಿಸೋದೇ ಇಲ್ಲ. ʻರಂಗಭೂಮಿ ಸೆಳೆಯುತ್ತಿದೆ… ಆದರೆ ಅಲ್ಲಿ ಕೆಲಸ ಮಾಡಲು ಆಗ್ತಾನೇ ಇಲ್ಲʼ ಅಂತಾ ನೆಪ ಹೇಳಿ ನಿಜವಾದ ನಾಟಕ ಶುರು ಮಾಡುತ್ತಾರೆ. ಸಿನಿಮಾದ ಸಂಪರ್ಕಕ್ಕೆ ಬಂದು ಕಲಾಕ್ಷೇತ್ರದ ನಂಟು ಬಿಟ್ಟ ಸಾಕಷ್ಟು ಜನ ಕನ್ನಡ ಚಿತ್ರರಂಗದಲ್ಲಿ ಕಾಣಸಿಗುತ್ತಾರೆ.
ಇಂಥ ಕಲಾಕಾರ್ಗಳ ಸ್ವಾಟೆಗೆ ತಿವಿಯುವ ಕೆಲವು ಪ್ರಾಮಾಣಿಕರೂ ಇಲ್ಲಿದ್ದಾರೆ. ಕಬಡ್ಡಿ ಖ್ಯಾತಿಯ ನಿರ್ದೇಶಕ ನರೇಂದ್ರಬಾಬು ಮತ್ತು ನಟ ಸಂಪತ್ ಸಿನಿಮಾದ ನಡುವೆಯೂ ಯಶಸ್ವೀ ನಾಟಕವೊಂದನ್ನು ರೂಪಿಸಿದ್ದಾರೆ.
ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಹೋರಾಟ ಗಾಥೆಯನ್ನು ಆಧರಿಸಿ ಖ್ಯಾತ ಸಾಹಿತಿ ನಟರಾಜ್ ಹುಳಿಯಾರ್ ಬರೆದ ʻಡೈರೆಕ್ಟ್ ಆಕ್ಷನ್ʼ ನಾಟಕವೀಗ ಯಶಸ್ವೀ ಪ್ರದರ್ಶನಗಳನ್ನು ಕಾಣುತ್ತಿದೆ. ಪ್ರೊ.ಎಂ.ಡಿ.ಎನ್ ಅವರ ಬಾಡಿ ಲಾಂಗ್ವೇಜು, ಮ್ಯಾನರಿಸಮ್ಮುಗಳನ್ನೆಲ್ಲಾ ಆವಾಹಿಸಿಕೊಂಡು ನಟಿಸಿರುವ ಸಂಪತ್ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಸಿನಿಮಾವಲಯದಲ್ಲಿ ಕನ್ನಡದ ನವಾಜುದ್ದೀನ್ ಸಿದ್ದಿಕಿ ಅಂತಲೇ ಫೇಮಸ್ಸಾಗಿರುವವರು ನಟ ಸಂಪತ್ ಮೈತ್ರೇಯ. ಎಂಥದ್ದೇ ಪಾತ್ರವನ್ನು ಸಲೀಸಾಗಿ ನಿಭಾಯಿಸುವ ಅದ್ಭುತ ಕಲಾವಿದ. ʻಕವಲು ದಾರಿʼಯ ರಾಜಕಾರಣಿಯಾಗಿ ವಯಸ್ಸಿಗೆ ಮೀರಿದ ಪಾತ್ರ ಮಾಡಿದವರು… ದಯಾಳ್ ಪದ್ಮನಾಭನ್ ಅವರ ಒಂಭತ್ತೇ ದಿಕ್ಕು ನೋಡಿದವರನ್ನು ಬೆಚ್ಚಿಬೀಳಿಸಿದವರು… ಕೆ.ಜಿ.ಎಫ್. ಸಿನಿಮಾದಲ್ಲಿ ಕರುಣೆ ಉಕ್ಕಿಸಿದವರು…
ಸದ್ಯ ಸುಧೀರ್ ಶಾನುಭೋಗ್ ನಿರ್ದೇಶನದ ಧರಣಿ, ಮೂರನೇ ಕೃಷ್ಣಪ್ಪ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಂಪತ್ ನಟಿಸುತ್ತಿದ್ದಾರೆ. ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೆರೆಬೇಟೆ ಕೂಡಾ ಬಿಡುಗಡೆಗೆ ತಯಾರಾಗುತ್ತಿದೆ.
ಈ ನಡುವೆ ಸಂಪತ್ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅದು ʻರವಿಕೆ ಪ್ರಸಂಗʼ. ಸಂತೋಷ್ ಕೊಂಡಕೇರಿ ನಿರ್ದೇಶನದ ಈ ಚಿತ್ರದ ಪೋಸ್ಟರು ಟೀಸರುಗಳೇ ಮಜಾ ಕೊಡುವಂತಿದೆ. ರವಿಕೆ ಮತ್ತು ಅದರ ಸುತ್ತ ಅರಳಿರುವ ಕತೆ ಇದರಲ್ಲಿದೆಯಂತೆ. ಗೀತಾ ಭಾರತಿ ಭಟ್ ಈ ಚಿತ್ರದ ಕೇಂದ್ರಬಿಂದು. ಸಂಪತ್ ಮೈತ್ರೇಯ ಇಲ್ಲಿ ಲೇಡೀಸ್ ಟೈಲರ್ ಪಾತ್ರದಲ್ಲಿ ನಟಿಸುವ ಮೂಲಕ ಕಾಮಿಡಿ ಕಲಾವಿದನೂ ಆಗಿದ್ದಾರೆ.
ತಮಿಳಿನಲ್ಲಿ ವಿಜಯ್ ಸೇತುಪತಿ ಥರದ ನಟರು ಯಾವುದೇ ಇಮೇಜಿಗೆ ಅಂಟಿಕೊಳ್ಳದೆ ಸಿಕ್ಕ ಪಾತ್ರಗಳಲ್ಲೆಲ್ಲಾ ಸ್ಕೋರು ಮಾಡಿಕೊಳ್ಳುತ್ತಾರೆ. ಸದ್ಯ ಕನ್ನಡದಲ್ಲಿ ಸಂಪತ್ ಕೂಡಾ ಅದೇ ಹಾದಿಯಲ್ಲಿದ್ದಂತಿದೆ. ಒಂದರ ಹಿಂದೆ ಒಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಅದರ ಜೊತೆಗೆ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದಾರೆ. ಸಂಪತ್ ಮೈತ್ರೇಯ ಅವರಿಗೆ ಒಳ್ಳೇದಾಗ್ಲಿ…
No Comment! Be the first one.