ಪ್ರಯೋಗಾತ್ಮಕ ಸಿನಿಮಾಗಳನ್ನು ಪ್ರೇಕ್ಷಕರ ಎದುರು ತಂದು ನಿಲ್ಲಿಸುವ ನಿರ್ದೇಶಕ ಸಾಲಿನಲ್ಲಿ ಪ್ರಮುಖರು ಹೇಮಂತ್ ಎಂ ರಾವ್. ಮನು ಸುರಭಿ ಹಾಗೂ ಪ್ರಿಯಾಳ ಪ್ರೇಮಕಥೆ ಹೇಳಿ ಗೆದಿದ್ದ ಸಪ್ತ ಸಾಗರದಾಚೆ ಎಲ್ಲೋ ಸಾರಥಿ ಹೇಮಂತ್ ಈಗ ಹ್ಯಾಟ್ರಿಕ್ ಹೀರೋ ಜೊತೆ ಕೈ ಜೋಡಿಸಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’ ಈಗ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಹೊಸ ಅಲೆ ಸೃಷ್ಟಿಸಿರುವ ಹೊಸ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.
ಶಿವಣ್ಣನಿಗೆ ಹೇಮಂತ್ ರಾವ್ ಆಕ್ಷನ್ ಕಟ್ ಹೇಳ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡ್ತಿತ್ತು. ಈ ಬಗ್ಗೆ ಇದೀಗ ಚಿತ್ರತಂಡವೇ ಅಧಿಕೃತ ಮುದ್ರೆ ಒತ್ತಿದೆ. ದೊಡ್ಮನೆ ದೊರೆಗೆ ಹೇಮಂತ್ ರಾವ್ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ವೈಶಾಕ್ ಗೌಡ ಈ ಸಿನಿಮಾಗೆ ಹಣ ಹಾಕುತ್ತಿದ್ದಾರೆ. ತಮ್ಮದೇ ವೈಶಾಕ್ ಜೆ ಫಿಲಂಸ್ ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಈ ಪ್ರಾಜೆಕ್ಟ್ ಬಗ್ಗೆ ಶಿವಣ್ಣ ಜೊತೆ ಚರ್ಚೆ ನಡೆಸಲಾಗುತ್ತಿದ್ದು, ಇದೀಗ ಹ್ಯಾಟ್ರಿಕ್ ಹೀರೋ ಹೇಮಂತ್ ರಾವ್ ನಿರ್ದೇಶನದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಹೇಮಂತ್ ರಾವ್ ನಿರ್ದೇಶನದ ಸಿನಿಮಾಗಳ ಪೈಕಿ ಈ ಪ್ರಾಜೆಕ್ಟ್ ಬಹಳ ವಿಭಿನ್ನವಾಗಿದ್ದು, ಹಿಂದೆಂದೂ ನೋಡದ ಶಿವಣ್ಣ ಅವರನ್ನು ಈ ಚಿತ್ರದ ಮೂಲಕ ತೋರಿಸಲು ಅವರು ಸಜ್ಜಾಗಿದ್ದಾರೆ. ಶಿವಣ್ಣನ ಅಪ್ಪಟ ಅಭಿಮಾನಿಯಾಗಿರುವ ನಿರ್ಮಾಪಕ ವೈಶಾಕ್ ತಮ್ಮ ಸಿನಿಮಾ ಜರ್ನಿಯನ್ನು ಶಿವಣ್ಣ ಅವರ ಜೊತೆ ಆರಂಭ ಮಾಡುತ್ತಿರುವ ಖುಷಿಯಲ್ಲಿದ್ದಾರೆ. ಶೀಘ್ರದಲ್ಲೇ ಸ್ಟಾರ್ ಕಾಸ್ಟ್ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
No Comment! Be the first one.