ಕೊರೋನಾ ವೈರಸ್ಸನ್ನು ಕೊಲ್ಲಲು ಬೇಕಿರುವ ಔಷಧಿಯಿಲ್ಲದೆ, ಜಗತ್ತಿಗೆ ಜಗತ್ತೇ ಬಾಗಿಲು ಬಡಿದುಕೊಂಡು ಮನೆಯೊಳಗೆ ಮುದುರಿಕೊಂಡಿದೆ. ಇಂಥ ಸಮಯದಲ್ಲಿ ಜನಕ್ಕೆ ಮನರಂಜನೆ ಇಲ್ಲದಿದ್ದರೆ ತಿಕ್ಕಲು ಹಿಡಿಯೋದು ಗ್ಯಾರೆಂಟಿ. ಅನೇಕ ಸಿನಿಮಾ ನಟರು ಕೊರೋನಾ ಬಗ್ಗೆ ಜಾಗೃತಿಯ ಸಂದೇಶಗಳನ್ನಷ್ಟೇ ಪೋಸ್ಟ್ ಮಾಡಿ ಸುಮ್ಮನಾಗುತ್ತಿದ್ದಾರೆ.
ನಟ ಪಯಣ ರವಿಶಂಕರ್ ಫೇಸ್ ಬುಕ್ಕಲ್ಲಿ ಪೋಸ್ಟ್ ಮಾಡುತ್ತಿರುವ ಬಗೆ ಬಗೆಯ ಪೋಸ್ಟುಗಳು ಸಾಕಷ್ಟು ಜನರ ಸಮಾಧಾನಕ್ಕೆ ಕಾರಣವಾಗಿದೆ. ರವಿಶಂಕರ್ ಗೌಡ್ರು ಹೆಸರು ಮಾಡಿದ್ದು ಸಿಲ್ಲಿಲಲ್ಲಿ ಅನ್ನೋ ಧಾರಾವಾಹಿಯ ಡಾ. ವಿಠಲ್ ರಾವ್ ಎನ್ನುವ ಪಾತ್ರದಿಂದ. ಹೀಗಾಗಿ ಜನ ‘ಕೊರೋನಾಗೆ ಮೆಡಿಸಿನ್ ಕಂಡುಹಿಡಿದ್ರಾ ಡಾಕ್ಟ್ರೇ?’ ಅಂತೆಲ್ಲಾ ತಮಾಷೆ ಮಾಡುತ್ತಿದ್ದಾರೆ. ಯಾವುದಕ್ಕೂ ಬೇಸರಿಸಿಕೊಳ್ಳದ ರವಿಶಂಕರ್ ಅಭಿಮಾನಿ, ಸ್ನೇಹಿತರ ಪ್ರಶ್ನೆಗಳಿಗೆ ಕಮೆಂಟು ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ರವಿಶಂಕರ್ ಸ್ವತಃ ಹಾಡುಗಾರರೂ ಆಗಿರುವುದರಿಂದ ಹಳೆಯ ಚಿತ್ರಗೀತೆಗಳನ್ನು ಹೊಸದಾಗಿ ಹಾಡಿ ಪೋಸ್ಟ್ ಮಾಡುತ್ತಿದ್ದಾರೆ.
ಜನರನ್ನು ರಂಜಿಸುತ್ತಲೇ, ಕೊರೋನಾ ಬಗೆಗೆ ಆತಂಕವನ್ನೂ ವ್ಯಕ್ತಪಡಿಸಿರುವ ರವಿ “ಕೆಲವು ಜನ ಅಂದ್ಕೊಬಹುದು ಯಾಕ್ಲ ಇವನು ಇಷ್ಟೊಂದು ಬರಿತಾನೆ ಅಂಥಾ.. ನನ್ನ ಕರುನಾಡಿನ ಜನರು ಕೊಟ್ಟ ಅನ್ನದಿಂದ ನಾನು ನನ್ನ ಕುಟುಂಬ ಜೀವಿಸುತ್ತಿದ್ದೇವೆ. ಬಡತನದ ಅನುಭವ ನನಗೂ ಇದೆ ಹಸಿವು ನನಗೂ ಅಭ್ಯಾಸವಿದೆ ಇದನ್ನು ಬರೆಯುವಾಗ ಅತ್ತುಕೊಂಡೆ ಬರೆದಿದ್ದೇನೆ ಸ್ವಲ್ಪ ದಿನ ಸಹಿಸಿಕೊಳ್ಳಿ. ನಾನು ಶೋಕಿಯ ನಟನಲ್ಲ… ಯಾರ್ಯಾರು ಬದುಕಿರುತ್ತೇವೋ ಗೊತ್ತಿಲ್ಲ ಆ ಋಣಕ್ಕಾದರೂ ನನ್ನ ಕನ್ನಡ ಜನತೆಯನ್ನ ಜೋಪಾನ ಮಾಡುವುದು ನನ್ನ ಜವಾಬ್ದಾರಿ. ನನ್ನೂರು ಮಂಡ್ಯ ಜನತೆಯನ್ನ ಸೇರಿಸಿ ಹೇಳುತ್ತಿದ್ದೇನೆ, ದಯಮಾಡಿ ಸ್ವಲ್ಪ ದಿನ ಮನೆ ಬಿಟ್ಟು ಹೊರಗೆ ಬರಬೇಡಿ ನಿಮ್ ದಮ್ಮಯ್ಯ.. ಎಂದು ವಿನಂತಿಸಿದ್ದಾರೆ.
No Comment! Be the first one.