ತಮಿಳಿನಲ್ಲಿ ಬಹುದೊಡ್ಡ ಹೆಸರು ಮಾಡಿರುವ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್. ೧೯೮೨ರಿಂದ ಚಿತ್ರ ನಿಮಾಣದಲ್ಲಿ ತೊಡಗಿಕೊಂಡು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಟಿ.ಜಿ. ತ್ಯಾಗರಾಜನ್, ಸೆಂಥಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ಈ ಸಂಸ್ಥೆಯ ರೂವಾರಿಗಳು. ಇತ್ತೀಚೆಗೆ ತಮಿಳಿನಲ್ಲಿ ನಿರ್ಮಾಣಗೊಂಡು ದೊಡ್ಡ ಗೆಲುವು ಕಂಡಿದ್ದ ಅಜಿತ್ ಅಭಿನಯದ ವಿವೇಗಂ, ವಿಶ್ವಾಸಂ ಮತ್ತು ಧನುಷ್ ಅಭಿನಯದ ಪಟಾಸ್ ಸಿನಿಮಾಗಳನ್ನು ನಿರ್ಮಿಸಿದ್ದೂ ಇದೇ ಸಂಸ್ಥೆ. ೧೯೮೬ರಲ್ಲಿ ತೆರೆಕಂಡಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಸುಮಲತಾ ಅಭಿನಯದ ಸತ್ಯಜ್ಯೋತಿ ಚಿತ್ರವನ್ನು ಕೂಡಾ ತ್ಯಾಗರಾಜನ್ ಅವರೇ ನಿರ್ಮಿಸಿದ್ದರು. ಅದಾದ ನಂತರ ಸತ್ಯಜ್ಯೋತಿ ಫಿಲ್ಮ್ ಈಗ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾರ್ಯಾರಂಭ ಮಾಡಿದೆ.
ತಮಿಳಿನಲ್ಲಿ ಈಟಿ ಎನ್ನುವ ಹಿಟ್ ಸಿನಿಮಾವನ್ನು ನೀಡಿ, ಇನ್ನೇನು ತೆರೆಗೆ ಬರಲಿರುವ ಅಯಂಗರನ್ ಚಿತ್ರವನ್ನೂ ನಿರ್ದೇಶಿಸಿರುವ ರವಿ ಅರಸು ನಿರ್ದೇಶನದಲ್ಲಿ ಆರ್ ಡಿ ಎಕ್ಸ್ ಹೆಸರಿನ ಸಿನಿಮಾ ಆರಂಭಗೊಳ್ಳುತ್ತಿದೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಮಫ್ತಿ, ಟಗರು ಮುಂತಾದ ಚಿತ್ರಗಳನ್ನು ನೋಡಿದ ನಂತರ ನಿರ್ದೇಶಕ ರವಿ ಅರಸು ಅವರಿಗೆ ತಾವು ಬರೆದ ಕತೆಗೆ ಶಿವಣ್ಣ ಅವರೇ ಸೂಕ್ತ ಅನ್ನಿಸಿತ್ತಂತೆ. ಹೀಗಾಗಿ ಶಿವರಾಜ್ ಕುಮಾರ್ ಅವರಿಗೆ ಕತೆ ಹೇಳಿದಾಗ ಅವರೂ ಕೂಡಾ ಅತ್ಯಂತ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇದರ ಪ್ರತಿಫಲವಾಗಿ ಆರ್ ಡಿ ಎಕ್ಸ್ ಬರುವ ಫೆಬ್ರವರಿ ೧೯ರಂದು ಆರಂಭಗೊಳ್ಳುತ್ತಿದೆ. ಶಿವಣ್ಣನ ಮೊದಲ ಸಿನಿಮಾ ಆನಂದ್ ಕೂಡಾ ಫೆಬ್ರವರಿ ೧೯ರಂದೇ ಮುಹೂರ್ತ ಆಚರಿಸಿತ್ತು. ಕಾಕತಾಳೀಯವೆನ್ನುವಂತೆ ಮತ್ತೆ ಅದೇ ದಿನ ಆರ್ ಡಿ ಎಕ್ಸ್ ಆರಂಭಗೊಳ್ಳುತ್ತಿರುವುದು ನಿರ್ಮಾಪಕರಿಗೆ ಮೊದಲ ಹೆಜ್ಜೆಯಲ್ಲೇ ಒಂದು ಬಗೆಯಲ್ಲಿ ಪಾಸಿಟೀವ್ ಫೀಲ್ ತಂದುಕೊಟ್ಟಿದೆ.
ಬಹುವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿರುವ ಸತ್ಯಜ್ಯೋತಿ ಫಿಲ್ಮ್ಸ್ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸುವ ಪ್ಲಾನು ಹೊಂದಿದೆ. ಅದರ ಆರಂಭವೆನ್ನುವಂತೆ ಆರ್ ಡಿ ಎಕ್ಸ್ ಶುರುವಾಗುತ್ತಿದೆ. ಈ ಸಂದರ್ಭದಲ್ಲಿ ಸತ್ಯಜ್ಯೋತಿ ಫಿಲ್ಮ್ಸ್ ಕನ್ನಡ ಚಿತ್ರಪ್ರೇಕ್ಷಕರ ಆಶೀರ್ವಾದ ಮತ್ತು ಚಿತ್ರರಂಗದವರ ಸಹಕಾರವನ್ನು ಬೇಡುತ್ತಿದೆ.
No Comment! Be the first one.