ಇದ್ಯಾವುದೋ ಪೀಡೆ ಕೊರೋನಾ ವೈರಸ್ಸು ಅಮರಿಕೊಂಡು ಜಗತ್ತನ್ನೇ ಅಲ್ಲಾಡಿಸಿಬಿಟ್ಟಿದೆ. ಈ ಕೊವಿಡ್ ರೋಗಕ್ಕೆ ಇರುವವರು ಇಲ್ಲದವರು ಅನ್ನೋ ಬೇಧವೂ ಇಲ್ಲ. ಎಂಥಾ ದೊಡ್ಮನ್ಷರೂ ಹೊರಗೆ ಹೋಗದೆ ಮನೆಯೊಳಗಿದ್ದು ಜೀವ ಉಳಿಸಿಕೊಳ್ಳುವ ಸಂದರ್ಭ ಎದುರಾಗಿದೆ. ಕೊರೋನಾ ಶುರುವಾದಾಗ ಏಕಾಏಕಿ ಲಾಕ್ ಡೌನ್ ಅನೌನ್ಸ್ ಮಾಡಿದರಲ್ಲಾ ಆಗಂತೂ ಜನರಿಗೆ ಅಕ್ಷರಶಃ ರೆಕ್ಕೆಪುಕ್ಕ ಕಿತ್ತು ಕೂರಿಸಿದಂತಾ ಅನುಭವವಾಗಿತ್ತು. ಬೆಳಗಿನಿಂದ ರಾತ್ರಿತನಕ ಹೊರಗೆ ದುಡಿಮೆ, ಓಡಾಟ ಅಂತಿದ್ದವರು, ದಿನ, ವಾರ, ತಿಂಗಳುಗಳನ್ನು ಮೀರಿ ಮನೆಯೊಳಗೇ ಬಂಧಿಯಾಗಬೇಕು ಅಂದರೆ ಸಲೀಸಲ್ಲ.
ಈ ಸಂದರ್ಭದಲ್ಲಿ ಎಷ್ಟು ಅಂತಾ ಟೀವಿ ನೋಡಲು ಸಾಧ್ಯ? ಸೀರಿಯಲ್ಲುಗಳೂ ನಿಂತುಹೋದವು. ನ್ಯೂಸ್ ಚಾನೆಲ್ಲುಗಳ ಸುದ್ದಿಗಳಂತೂ ಕೊರೋನಾಗಿಂತಾ ಹೆಚ್ಚು ಭೀತಿ ಹುಟ್ಟಿಸುವಂತಿದ್ದವು. ಓಟಿಟಿ ಪ್ಲಾಟ್ ಫಾರ್ಮಿನ ಸಿನಿಮಾಗಳನ್ನೆಲ್ಲಾ ಬಳಿದು ನೋಡಿದ್ದಾಗಿತ್ತಲ್ಲಾ… ಅಂಥಾ ಸಂದರ್ಭದಲ್ಲಿ ಒಂದಿಷ್ಟು ಪ್ರತಿಭಾವಂತರು ನಿಜಕ್ಕೂ ಬೇಸರವನ್ನು ನೀಗಿಸಿದರು. ಚೌಕಾಬಾರ, ಅಳಗುಳಿ ಮನೆಯಂತೆಯೇ ಕಚಗುಳಿ ಇಟ್ಟು ಮಜಾ ಕೊಟ್ಟ ಕೆಲವರ ಕುರಿತ ಸಣ್ಣ ಟಿಪ್ಪಣಿ ಸರಣಿಯಲ್ಲಿ ಪ್ರಕಟಗೊಳ್ಳಲಿದೆ…
(CINIBUZZ.INನ ಫೇಸ್ ಬುಕ್ ಪೇಜ್ Cinibuzz Kannada ಹೆಸರಿನಲ್ಲಿದೆ. ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಅಪರೂಪದ ವಿಚಾರಗಳು ನಿಮಗಿಲ್ಲಿ ಸಿಗಲಿವೆ. ಹೊಸ ಓದುಗರು ಪೇಜ್ ಲೈಕ್ & ಫಾಲೋ ಮಾಡಿ…)
ಮೈಸೂರಿನ ಮಾಸ್ಟರ್ ಪೀಸು ಈಗ ಜಗತ್ತಿಗೇ ಫೇಮಸ್ಸು : ರೇಡಿಯೋ ಜಾಕಿಗಳ ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ. ತಮ್ಮ ಅದ್ಭುತ ಮಾತುಗಾರಿಕೆಯಿಂದ ಅಪಾರವಾದ ಜನಪ್ರಿಯತೆ ಪಡೆದಿರುತ್ತಾರೆ. ಆದರೆ, ಬಹಳಷ್ಟು ಪ್ರತಿಭಾವಂತರ ಮುಖಪರಿಚಯವೇ ಕೇಳುಗರಿಗೆ ಇರೋದಿಲ್ಲ. ಇವರು ಹೇಗಿದ್ದಾರೆ ಅನ್ನೋದರ ಬಗ್ಗೆಯೇ ಬಹುತೇಕರಿಗೆ ಕ್ಯೂರಿಯಾಸಿಟಿ ಇರುತ್ತದೆ. ಕಳೆದ ಆರೇಳು ವರ್ಷಗಳಿಂದ ಮೈಸೂರಿನ ರೆಡ್ ಎಫ್ ಎಂ 93.3ಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸುನಿಲ್ ಎನ್ನುವ ಯುವಕನ ಬಗ್ಗೆ ಕೂಡಾ ತುಂಬಾ ಜನರಿಗೆ ಕುತೂಹಲವಿತ್ತು.
ಕಲರ್ ಕಾಗೆ ಹೆಸರಿನ ಕಾರ್ಯಕ್ರಮ ಇವತ್ತು ಬರೀ ಮೈಸೂರು ಮಾತ್ರವಲ್ಲ ಜಗತ್ತಿನ ನಾನಾ ಮೂಲೆಯಲ್ಲಿರುವ ಕನ್ನಡಿಗರನ್ನು ರಂಜಿಸಿ ವರ್ಲ್ಡ್ ಫೇಮಸ್ಸಾಗಿದೆ. ಮೊದಲೆಲ್ಲಾ ಅದು ಬರೀ ಆಡಿಯೋ ರೂಪದಲ್ಲಿ ಮಾತ್ರ ಹರಿದಾಡುತ್ತಿತ್ತು. ದೂರದೂರಿಗೆ ಪ್ರಯಾಣ ಮಾಡುವಾಗ ಎಷ್ಟೋ ಜನ ಈ ಪ್ರೋಗ್ರಾಮಿನ ಕ್ಲಿಪ್ಪುಗಳನ್ನು ತಮ್ಮ ಪೆನ್ ಡ್ರೈವಿಗೆ ತುಂಬಿಸಿಕೊಂಡು, ಕೇಳುತ್ತಾ ಜಾಲಿಯಾಗಿ ಡ್ರೈವ್ ಮಾಡುತ್ತಿದ್ದದ್ದಿದೆ. ಆಗೆಲ್ಲಾ ”ಯಾರ್ರೀ ಈ ಹುಡುಗ… ಎಂಥವರನ್ನೂ ಯಾಮಾರಿಸಿ, ಮಾತಿಗೆಳೆದು, ಎಷ್ಟ್ ನಗಿಸ್ತಾನಪ್ಪಾ?” ಅಂದುಕೊಂಡು ಸುಮ್ಮನಾಗುತ್ತಿದ್ದರು. ಇತ್ತೀಚಿಗೆ ಸುನಿಲ್ ನಡೆಸಿಕೊಡುವ ಕಾಗೆ ಕಾರ್ಯಕ್ರಮ ವಿಡಿಯೋ ರೂಪದಲ್ಲಿಯೂ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ.
ಬದುಕಲ್ಲಿ ಕಷ್ಟ ಕಾಣದವರಿಂದ ಬಹುಶಃ ನಗಿಸಲು ಸಾಧ್ಯವೇ ಇಲ್ಲವೇನೋ… ಯಾಕೆಂದರೆ, ಸುನಿಲ್ ಬಗ್ಗೆ ತಿಳಿಯುವಾಗ ಈ ಹುಡುಗನ ಬದುಕಿನಲ್ಲೂ ಸಾಕಷ್ಟು ಸಂಕಟ, ನೋವು, ಬಿಕ್ಕಳಿಕೆಗಳಿದ್ದವು ಅನ್ನೋದು ಗೊತ್ತಾಗುತ್ತದೆ. ತಾನಿಷ್ಟಪಟ್ಟಂತೆ ಓದಿ, ಕ್ರಿಕೆಟ್ ಆಟದಲ್ಲಿ ಸಾಧನೆ ಮಾಡಬೇಕು ಅನ್ನೋದು ಸುನಿಲ್ ಕನಸಾಗಿತ್ತು. ಅಂದುಕೊಂಡಂತೇ ನಡೆಯಲು ತಾನೆ ಹೇಗೆ ಸಾಧ್ಯ? ಮನೆಯವರ ಸಮಾಧಾನಕ್ಕಾಗಿ ಎಸ್ಸೆಸ್ಸೆಲ್ಸಿ ಮುಗಿಸಿ ಐಟಿಐಗೆ ಸೇರಬೇಕಾಯಿತು. ಎಲೆಕ್ಟ್ರಿಕಲ್ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ ಸುನಿಲ್ ತಂದೆ ಅದೊಂದು ದಿನ ಉಸಿರು ನಿಲ್ಲಿಸಿ ಮಲಗಿಬಿಟ್ಟಿದ್ದರು. ಬದುಕಿಗಾಗಿ ಮತ್ಯಾವುದೋ ಕೆಲಸವನ್ನು ಅವಲಂಬಿಸಬೇಕಾಯಿತು.
ಚಿಕ್ಕ ಹುಡುಗನಿದ್ದಾಗಿಂದ ಸುನಿಲ್ ಮಿಮಿಕ್ರಿ ಮಾಡುತ್ತಾ ತಮ್ಮ ಸುತ್ತಲಿನವರನ್ನು ಖುಷಿ ಪಡಿಸುತ್ತಿದ್ದರು. ಬೀದಿಯಲ್ಲಿ ಗಣೇಶ ಕೂರಿಸಿದ್ದಾಗ, ಗೆಳೆಯರ ಒತ್ತಾಯಕ್ಕೆ ಒಪ್ಪಿ ಸುನಿ ಮೈಕು ಹಿಡಿದು ಎದುರಿಗಿದ್ದವರನ್ನೆಲ್ಲಾ ರಂಜಿಸಿದ್ದರು. ಅದನ್ನು ನೋಡಿದ ಮತ್ಯಾರೋ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಟ್ಟರಂತೆ. ಮಿಮಿಕ್ರಿ ಮಾಡೋ ಕಸುಬು ಕೊಡುತ್ತಾರೆ ಅಂತಾ ಬಯಸಿದ್ದ ಸುನಿಗೆ ಅಲ್ಲೂ ನಿರಾಸೆ ಎದುರಾಗಿತ್ತು. ಮಾತಾಡುವ ಹುಡುಗನನ್ನು ಕರೆದೊಯ್ದು ಪಿಯಾನೋ ಕೀಗಳ ಮೇಲೆ ಬೆರಳಾಡಿಸುವ ಕೆಲಸಕ್ಕೆ ನೇಮಿಸಿದ್ದರು. ಪುಡಿಗಾಸಿನ ಸಂಪಾದನೆಗಾಗಿ ಒಂದಷ್ಟು ದಿನ ಅದೇ ಕೆಲಸಕ್ಕೆ ಒರಗಬೇಕಾಗಿತ್ತು.
ಕಾಲ ಕಳೆದಂತೆ ನಟ ತಬಲಾ ನಾಣಿ ತಂಡದಲ್ಲಿ ಸುನಿಗೆ ಛಾನ್ಸು ಸಿಕ್ಕಿತ್ತು. ಆ ಸಂದರ್ಭದಲ್ಲೇ ಎಫ್ ಎಂ ಚಾನೆಲ್ಲಿನಲ್ಲಿ ರೇಡಿಯೋ ಜಾಕಿ ಕೆಲಸಕ್ಕೆ ಟ್ರೈ ಮಾಡಿದ ಸುನಿಲ್ ಸಾವಿರಾರು ಜನ ಆಕಾಂಕ್ಷಿಗಳು, ನೂರಾರು ಜನ ಅಭ್ಯರ್ಥಿಗಳ ನಡುವೆ ಸೆಲೆಕ್ಟ್ ಆಗುತ್ತಾರೆ. ಬೆಳಬೆಳಿಗ್ಗೆ ಎದ್ದುಬಂದು, ಮೈಕಿನ ಮುಂದೆ ನಿಂತು ಕಾರ್ಯಕ್ರಮ ನಡೆಸುತ್ತಾ ಮಲಗಿದ್ದವರನ್ನು ಎಬ್ಬಿಸುವುದು ಬಲು ಕಷ್ಟದ ಕೆಲಸ. ಸುನಿಲ್ ಗೆ ಆರಂಭದಲ್ಲೇ ವೇಕಪ್ ಕಾಲ್ ಪ್ರೋಗ್ರಾಮ್ ನೀಡಿದ್ದರು. ಅದು ಸುನಿಯ ಕ್ರಿಯೇಟಿವಿಟಿಯೊಂದಿಗೆ ಬೆಸೆದುಕೊಂಡು ಕಲರ್ ಕಾಗೆಯಾಗಿ ರೂಪಾಂತರಗೊಂಡಿತು.
ಇದ್ದಕ್ಕಿದ್ದಂತೆ ಒಬ್ಬರಿಗೆ ಕರೆ ಮಾಡಿ ಗೊತ್ತು ಗುರಿ ಇಲ್ಲದೆ ಮಾತು ಶುರು ಮಾಡೋದು, ಅವರನ್ನು ಗೊಂದಲಕ್ಕೆ ದೂಡಿ, ಸಾಕಷ್ಟು ಸಲ ಕೆಟ್ಟಾಕೊಳಕು ಬೈಸಿಕೊಂಡು, ಕೇಳುಗರನ್ನು ನಗಿಸುವುದಿದೆಯಲ್ಲಾ? ಅದು ಕೇಳಿ ಅಥವಾ ನೋಡಿ ನಗುವಷ್ಟು ಸುಲಭವಲ್ಲ. ಕ್ಷಣಕ್ಷಣಕ್ಕೂ ಬ್ರೈನಿಗೆ ಕೆಲಸ ಕೊಡುವ, ಸೆನ್ಸ್ ಆಫ್ ಹ್ಯೂಮರ್ ಹೊಂದಿರುವವರಿಂದ ಮಾತ್ರ ಈ ಥರದ ತಮಾಷೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮೈಸೂರಿನ ಸುನಿ ಗೆದ್ದಿದ್ದಾರೆ. ಕೆಲಸ ಮಾಡುವ ಸಂಸ್ಥೆಗೂ ಹೆಸರು ತಂದುಕೊಟ್ಟಿದ್ದಾರೆ.
ಲಾಕ್ ಡೌನ್ ಟೈಮಲ್ಲಂತೂ ತಮ್ಮ ಪ್ರಾಂಕ್ ಕಾಲ್ ಕಾರ್ಯಕ್ರಮದ ಮೂಲಕ ಸುನಿಲ್ ಸಾಕಷ್ಟು ಜನರ ಬೇಸರವನ್ನು ಕೊಂದಿದ್ದಾರೆ. ಎಂಥ ಸಿಂಡರಿಸಿಕೊಂಡವರ ಮುಖದಲ್ಲೂ ನಗು ಮೂಡಿಸುವ ಆರ್ ಜೆ ಸುನಿಲ್ ಬದುಕು ಸಂಪನ್ನವಾಗಲಿ….