(CINIBUZZ.INನ ಫೇಸ್ ಬುಕ್ ಪೇಜ್ Cinibuzz Kannada ಹೆಸರಿನಲ್ಲಿದೆ. ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಅಪರೂಪದ ವಿಚಾರಗಳು ನಿಮಗಿಲ್ಲಿ ಸಿಗಲಿವೆ. ಹೊಸ ಓದುಗರು ಪೇಜ್ ಲೈಕ್ & ಫಾಲೋ ಮಾಡಿ…)

ನಾಗಮಂಡಲ, ಜೋಡಿಹಕ್ಕಿ, ಸೂರ್ಯವಂಶ, ರಂಗಣ್ಣ, ಭೂಮಿ ತಾಯಿಯ ಚೊಚ್ಚಲ ಮಗ, ಸ್ವಸ್ತಿಕ್, ಹಬ್ಬ – ಅಬ್ಬಬ್ಬ… ಕನ್ನಡದ ಎಷ್ಟೊಂದು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ವರ್ಚಸ್ಸು ಪಡೆದ ನಟಿ ವಿಜಯಲಕ್ಷ್ಮಿ. ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ದಾಗಲೇ ತಮಿಳು ಚಿತ್ರರಂಗಕ್ಕೂ ಕಾಲಿಟ್ಟವಳು. ವಿಜಯ್ ಮತ್ತು ಸೂರ್ಯ ನಟನೆಯ ಫ್ರೆಂಡ್ಸ್ ಚಿತ್ರದಲ್ಲಿ ಈಕೆ ಹೀರೋಯಿನ್ನಾಗಿ ನಟಿಸಿದ ಮೇಲೆ ಅಲ್ಲಿಯೂ ಗೆದ್ದಳು. ಇಬ್ಬರು ಸ್ಟಾರ್‌ ನಟರ ಸಿನಿಮಾದಲ್ಲಿ ಛಾನ್ಸು ಪಡೆದು, ಆ ಸಿನಿಮಾ ಹಿಟ್ ಆಗಿ ಮೇಲಿಂದ ಮೇಲೆ ಅವಕಾಶಗಳು ಸಿಗಲಾರಂಭಿಸಿದವು. ಸಿನಿಮಾಗಳಲ್ಲಿ ಪಾತ್ರಗಳು ಕಡಿಮೆಯಾಗುತ್ತಿದ್ದಂತೆ, ತಮಿಳಿನ ಯಶಸ್ವೀ ಧಾರಾವಾಹಿಗಳಲ್ಲಿ ವಿಜಯಲಕ್ಷ್ಮಿ ಮಿಂಚಿದಳು. ಇವತ್ತು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಂತೇ ಹೀರೋಯಿನ್ನುಗಳು, ಕಾರು, ಫ್ಲಾಟು, ಬಂಗಲೆ ಎಲ್ಲವನ್ನೂ ಪಡೆದಿರುತ್ತಾರೆ. ಪಡೆದ ಸಂಭಾವನೆಗಿಂತಾ ಹತ್ತು ಪಟ್ಟು ಹೆಚ್ಚೇ ಸಂಪಾದಿಸಿರುತ್ತಾರೆ. ಅದು ಹೇಗೆ ಅನ್ನೋದು ಈ ವರೆಗೂ ಟಾಪ್‌ ಸೀಕ್ರೆಟ್‌ ಆಗಿಯೇ ಉಳಿದಿದೆ!

ಇಂಥವರ ನಡುವೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ, ಸರಿಸುಮಾರು ಎರಡು ದಶಕಗಳಷ್ಟು ಕಾಲ ಕೈ ತುಂಬಾ ಕೆಲಸ ಪಡೆದು, ಹಣ ಸಂಪಾದಿಸಿದ ವಿಜಯಲಕ್ಷ್ಮಿ ಯಾಕೆ ಬರ್ಬಾದಾದಳು? ಈಕೆ ದುಡಿದ ದುಡ್ಡೆಲ್ಲ ಏನಾಯಿತು? ತೀರಾ ಊಟಕ್ಕಿಲ್ಲ, ಬಟ್ಟೆಗಿಲ್ಲ, ಬಾಡಿಗೆ ಮನೆಯ ಅಡ್ವಾನ್ಸಿಗೂ ಹಣವಿಲ್ಲ ಎನ್ನುವಷ್ಟರ ಮಟ್ಟಿಗೆ ವಿಜಯಲಕ್ಷ್ಮಿ ತಲುಪಿದ್ದಾದರೂ ಯಾಕೆ? – ಇಂಥ ಹತ್ತು ಹಲವು ಪ್ರಶ್ನೆಗಳು ಎಂಥವರನ್ನಾದರೂ ಕಾಡುತ್ತವೆ.

ಸದ್ಯ ವಿಜಯಲಕ್ಷ್ಮಿ ತಮಿಳಿನ ಮಾಜಿ ನಟ, ನಿರ್ದೇಶಕ ಹಾಲಿ ರಾಜಕಾರಣಿ ಸೀಮನ್‌ ವಿರುದ್ಧ ಸಮರ ಸಾರಿದ್ದಾಳೆ. ಒಂದು ಕಾಲದಲ್ಲಿ ಸೀಮನ್‌ ನಟನಾಗಿ, ನಿರ್ದೇಶಕನಾಗಿ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದವನು. ನಟ ಶಿವಾಜಿ ಪ್ರಭು ಮತ್ತು ಮಾಧವನ್ ಗಾಗಿ ತಲಾ ಮೂರ್ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದ ಸೀಮನ್‌ ಅದಕ್ಕೂ ಮುಂಚೆ ನಟನಾಗಿಯೂ ಹೆಸರು ಮಾಡಿದ್ದ. ಕಳೆದ ಕೆಲವಾರು ವರ್ಷಗಳಿಂದ ತಮಿಳು ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಾ, ಶ್ರೀಲಂಕಾ ತಮಿಳಿಗರ ಪರವಾದ ಹೋರಾಟಗಳಲ್ಲಿ ಸೀಮನ್‌ ಸಕ್ರಿಯವಾಗಿದ್ದಾನೆ. ನಾನ್‌ ಮಕ್ಕಳ್‌ ಕಟ್ಚಿ ಎನ್ನುವ ರಾಜಕೀಯ ಪಕ್ಷದ ಮುಂದಾಳುವಾಗಿದ್ದಾನೆ. ಇಂಥ ಸೀಮನ್‌ ವಿಜಯಲಕ್ಷ್ಮಿ ಜೊತೆ ಸಂಬಂಧ ಹೊಂದಿದ್ದನಂತೆ. ವಿಜಯಲಕ್ಷ್ಮಿ ಇವತ್ತು ಏನೇನೂ ಇಲ್ಲದಂತಾಗಲು ಈತನೇ ಕಾರಣವಂತೆ. ಮೈಮೇಲೊಂದು ಶರ್ಟು ಕೂಡಾ ಇಲ್ಲದೇ ಸೀಮನ್ ತನ್ನ ಮನೆಯಲ್ಲಿರುವ ವಿಡಿಯೋವನ್ನು ವಿಜಯಲಕ್ಷ್ಮಿ ಫೇಸ್‌ ಬುಕ್‌ನಲ್ಲಿ ಅಪ್‌ ಲೋಡ್‌ ಮಾಡಿದ್ದಾಳೆ ಮತ್ತೊಂದು ವಿಡಿಯೋದಲ್ಲಿ ʻಪೊಂಡಾಟಿ ಮಾಮ ನಲ್ಲವರ್‌ ನೆನಕ್ಯಾದೆ ʼ (ಹೆಂಡ್ತೀ… ಮಾವ ಒಳ್ಳೇವ್ನು ಅಂದುಕೊಳ್ಳಬೇಡ) ಎಂದು ನಾಟಕೀಯವಾಗಿ ಹೇಳುವ ಡೈಲಾಗಿನ ವಿಡಿಯೋವನ್ನು ಕೂಡಾ ಫೇಸ್‌ಬುಕ್‌ಗೆ ಹಾಕಿದ್ದಾಳೆ. ʻʻನನಗೆ ಯಾರೆಲ್ಲಾ ಸಹಾಯ ಮಾಡುತ್ತೇವೆ ಅಂದರೋ ಅವರೆಲ್ಲಾ ಸೀಮನ್‌ ಏನಂದುಕೊಳ್ಳುತ್ತಾನೋ ಅಂತಾ ಸುಮ್ಮನಾಗಿಬಿಟ್ಟರು. ಸೀಮನ್‌ ಬೆಂಬಲಿಗರು ನನ್ನನ್ನು ಸೂಳೆ (ತೇವಡಿಯಾ) ಎಂದು ನಿಂದಿಸುತ್ತಿದ್ದಾರೆ. ನಾನು ಸೂಳೆ ಆದರೆ, ಸೀಮನ್‌ ಸೂಳೆ ಮಗ. ಒಂದು ಕಾಲದಲ್ಲಿ ಊಟಕ್ಕೂ, ಆಟಕ್ಕೂ ನನ್ನ ಹತ್ತಿರ ಬರುತ್ತಿದ್ದವನು ಈಗ ನನ್ನ ಬದುಕನ್ನೇ ಹಾಳು ಮಾಡುತ್ತಿದ್ದಾನೆ. ಇವರೆಲ್ಲಾ ಹೇಳುತ್ತಿರುವಂತೆ ನಾನು ಸಿಕ್ಕವರ ಜೊತೆಯಲ್ಲೆಲ್ಲಾ ಮಲಗಿ ಬಂದಿದ್ದರೆ ನನಗಿಂದು ಇಂಥಾ ಕೆಟ್ಟ ‍ಸ್ಥಿತಿ ಬರುತ್ತಿರಲಿಲ್ಲʼʼ ಎಂದು ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾಳೆ. ವಿಜಯಲಕ್ಷ್ಮಿ ಹೀಗೆ ದಿನಕ್ಕೆ ನಾಲ್ಕಾರು ವಿಡಿಯೋಗಳನ್ನು ಬಿಡುತ್ತಾ ಒದ್ದಾಡುತ್ತಿರುವುದನ್ನು ಕಂಡರೆ ಎಂಥವರಾದರೂ ಮರುಗುವುದು ಸಹಜ. ಆದರೆ, ವಿಜಯಲಕ್ಷ್ಮಿ ನಡೆದುಕೊಂಡುಬರುತ್ತಿರುವ ರೀತಿಯನ್ನು ನೋಡಿದರೆ ಗೊಂದಲಗಳೂ ಮೂಡುತ್ತವೆ.

ಕರ್ನಾಟಕಕ್ಕೆ ಕಾಲಿಡಲ್ಲ ಅಂದಳು! : ತಮಿಳುನಾಡಿಗೆ ಸೇರಿಕೊಂಡಮೇಲೆ ಕರ್ನಾಟಕದ ಕಡೆ ಸುಳಿಯದೇ ಇದ್ದ ಈಕೆ 2019ರಲ್ಲಿ ದಿಢೀರಂತಾ ಪ್ರತ್ಯಕ್ಷವಾಗಿದ್ದಳು. ಅದೂ ದೈನೇಸಿ ಸ್ಥಿತಿಯಲ್ಲಿ. ಬಾಡಿಗೆ ಮನೆ ಕೂಡಾ ಇಲ್ಲ. ಅನಾರೋಗ್ಯದ ಖರ್ಚಿಗೂ ಕಾಸಿಲ್ಲ ಅಂತಾ ಕಣ್ಣೀರಿಡುತ್ತಾ ಕಾಣಿಸಿಕೊಂಡ ವಿಜಯಲಕ್ಷ್ಮಿಯನ್ನು ಕಂಡು ನಮ್ಮ ಜನ ಮಮ್ಮಲ ಮರುಗಿದ್ದರು. ಸುದೀಪ್ ಸೇರಿದಂತೆ ಒಂದಷ್ಟು ಮಂದಿ ಕೈಲಾದ ಸಹಾಯ ಮಾಡಿದ್ದರು. ಹೀಗೆಯೇ ಕೈಯೆಲ್ಲ ಬರಿದಾಗಿಸಿಕೊಂಡು ಹಾಸಿಗೆ ಹಿಡಿದ ವಿಜಯಲಕ್ಷ್ಮಿಯ ಸ್ಥಿತಿ ಕಂಡು ಮರುಗಿ ಸಹಾಯ ಮಾಡಿದ್ದವರು ರಮ್ಯ ಚೈತ್ರಕಾಲ ಚಿತ್ರದ ನಾಯಕನಾಗಿದ್ದ ರವಿಪ್ರಕಾಶ್ (ರಾಮ್). ಹಾಗೆ ಸಹಾಯ ಮಾಡಿಕೊಂಡಿದ್ದ ವಿಜಯಲಕ್ಷ್ಮಿ ಮತ್ತಾಕೆಯ ಅಕ್ಕ ಉಷಾ ದೇವಿ ಉಲ್ಟಾ ಹೊಡೆದ ಪರಿ ಕಂಡು ರವಿಪ್ರಕಾಶ್ ಧ್ವನಿಯೆಲ್ಲ ಉಡುಗಿಹೋಗುವಷ್ಟರ ಮಟ್ಟಿಗೆ ಕಂಗಾಲಾಗಿ ಹೋಗಿದ್ದರು.
ಅದೊಂದು ದಿನ ಇದ್ದಕ್ಕಿದ್ದಂತೆ ಕೆಲ ವಾಹಿನಿಗಳಲ್ಲಿ ರಮ್ಯಚೈತ್ರ ಕಾಲ ಹೀರೋ ರವಿಪ್ರಕಾಶ್ ವಿರುದ್ಧ ಲೈಂಗಿಕ ಕಿರುಕುಳದಂಥಾ ಗುರುತರ ಆರೋಪದ ವರದಿಗಳು ಪ್ರಸಾರವಾಗಿದ್ದವು. ರವಿಪ್ರಕಾಶ್ ವಿರುದ್ಧ ಇಂಥಾದ್ದೊಂದು ಆರೋಪ ಕೇಳಿ ಬಂದಿದ್ದು ಆಪ್ತ ವಲಯವೂ ಶಾಕ್‌ಗೆ ಒಳಗಾಗಿತ್ತು. ಹಾಗಾದರೆ, ನಿಜಕ್ಕೂ ನಡೆದದ್ದೇನೆಂಬ ಬಗ್ಗೆ ತಲಾಶಿಗಿಳಿದರೆ, ವಿಜಯ ಲಕ್ಷ್ಮಿಯ ಒಂದಿಡೀ ಫ್ಯಾಮಿಲಿಗೇ ಮಳ್ಳು ಹಿಡಿದಿದೆಯಾ? ಅವರೆಲ್ಲರೂ ಸೈಕೋಗಳಾಗಿಬಿಟ್ಟಿದ್ದಾರಾ? ಎಂಬ ಅನುಮಾನ ಮೂಡುವಂಥಾ, ಒಟ್ಟಾರೆ ಆಸ್ಪತ್ರೆ ಎಪಿಸೋಡುಗಳೇ ಡ್ರಾಮಾ ಇದ್ದಿರಬಹುದಾ ಎಂಬ ಅನುಮಾನ ಮೂಡುವಂತಹ ಸರಣಿ ಸನ್ನಿವೇಶಗಳೇ ಬಿಚ್ಚಿಕೊಳ್ಳಲಾರಂಭಿಸಿದವು.

ಒಂದು ಕಾಲಕ್ಕೆ ನಟಿಯಾಗಿ ಮೆರೆದಿದ್ದ ವಿಜಯಲಕ್ಷ್ಮಿ ಇಂಥಾ ಸ್ಥಿತಿ ತಲುಪಿದ್ದಾರೆಂದರೆ ಯಾರಿಗೆ ತಾನೇ ಬೇಸರವಾಗದಿರಲು ಸಾಧ್ಯ? ಇದನ್ನು ಕಂಡು ಬೇಸರಗೊಂಡ ಕಿಚ್ಚಾ ಸುದೀಪ್ ಕೂಡಾ ಒಂದು ಲಕ್ಷ ರೂಪಾಯಿಯಷ್ಟು ಸಹಾಯ ಮಾಡಿದ್ದರು. ಇದನ್ನು ಕಂಡು ತಮ್ಮ ಸಮಕಾಲೀನ ನಟಿಗೆ ತಾವೂ ಒಂದು ಲಕ್ಷ ಸಹಾಯ ಮಾಡಿದವರು ರವಿಪ್ರಕಾಶ್. ಹಾಗೆ ವಿಜಯಲಕ್ಷ್ಮಿಯ ಕಣ್ಣೀರಿಗೆ ಮಿಡಿದು ಒಂದು ಲಕ್ಷ ಕೊಟ್ಟ ಘಳಿಗೆಯಲ್ಲಿಯೇ ತಮ್ಮ ನಸೀಬೂ ಖರಾಬಾಗಿ ಬಿಡುತ್ತದೆ ಎಂಬ ಸಣ್ಣ ಕಲ್ಪನೆಯೂ ರವಿಪ್ರಕಾಶ್ ಗೆ ಇರಲಿಲ್ಲ. ಅಷ್ಟಕ್ಕೂ ಸಹಾಯ ಮಾಡಿಸಿಕೊಂಡು ಉಲ್ಟಾ ಹೊಡೆಯೋ ಈ ಥರದ ದುಷ್ಟತನವನ್ನು ಯಾರಾದರೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮಾದ್ಯಮಗಳು ಹೇಳುತ್ತಿರುವಂತೆ ಯಾವ ಲೈಂಗಿಕ ಕಿರುಕುಳವೂ ನಡೆದಿಲ್ಲ. ಅಷ್ಟಕ್ಕೂ ವಿಜಯಲಕ್ಷ್ಮಿ ನಡೆದುಕೊಂಡಿದ್ದ ರೀತಿಯೇ ಎಲ್ಲರಿಗೂ ಗುಮಾನಿ ಹುಟ್ಟಿಸಿತ್ತು. ಈಕೆಗೆ ಯಾವ ಕಾಯಿಲೆ ಇದೆ ಅಂತಲೂ ಸ್ಪಷ್ಟವಿಲ್ಲ. ಒಂದು ಮೂಲದ ಪ್ರಕಾರ ಈಕೆಗೆ ಸರ್ವೈಕಲ್ ಸ್ಯಾಂಡಿಲೈಸಿಸ್ ಅನ್ನೋ ಸಮಸ್ಯೆ ಇದೆ. ಅದೇನೂ ತೀರಾ ಗಂಭೀರವಾದುದಲ್ಲ.

ರಜನಿಯೂ ಕೈ ಬಿಟ್ಟರು : ನಾನು ಕಳೆದ ವರ್ಷ ಬೆಂಗಳೂರಿನಿಂದ ಬಂದಮೇಲೆ ಹೇಳಿದಂತೆ ನಾನು ಇನ್ಯಾವತ್ತೂ ಕರ್ನಾಟಕಕ್ಕೆ ಹೋಗೋದಿಲ್ಲ. ನಾನು ಬದುಕಿದರೂ ಸತ್ತರೂ ಅದು ನನ್ನ ನಲ್ಮೆಯ ತಮಿಳು ಜನರ ನಡುವೆ ಅಷ್ಟೇ. ನಾನು ಸಮಸ್ಯೆಯಲ್ಲಿದ್ದಾಗ ಬೆಂಗಳೂರಿನಲ್ಲಿ ಕೆಲವು ಅಭಿಮಾನಿಗಳು ಬಿಟ್ಟರೆ ಯಾವೊಬ್ಬ ಸಿನಿಮಾದವರೂ ಸಪೋರ್ಟ್‌ ಮಾಡಲಿಲ್ಲ. ನಾನು ಸಮಸ್ಯೆಯಲ್ಲಿದ್ದೀನಿ ಅಂತಾ ಗೊತ್ತಾದ ತಕ್ಷಣ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕರೆಸಿ ಮಾತಾಡಿ, ಸಹಾಯ ನೀಡುವ ಭರವಸೆ ನೀಡಿದರು. ತಮ್ಮ ಸಹಾಯಕ ರಿಯಾಜ್‌ ಮೂಲಕ ವ್ಯವಸ್ಥೆ ಮಾಡಿಸುತ್ತೇನೆ ಅಂತಾ ಹೇಳಿಕಳಿಸಿದರು. ಮತ್ತೆ ರಿಯಾಜ್‌ ಆಗಲಿ ರಜನಿ ಅವರಾಗಲಿ ನನ್ನ ಸಂಪರ್ಕಕ್ಕೇ ಸಿಕ್ಕಿಲ್ಲ… ಎಂದಿದ್ದಾಳೆ. ವಿಜಯಲಕ್ಷ್ಮಿ ಪ್ರಾಬ್ಲಮ್ಮಲ್ಲಿದ್ದಾಳೆ ಅಂದ ತಕ್ಷಣ ಮೊದಲಿಗೆ ಒಂದು ಲಕ್ಷ ರುಪಾಯಿ ಕೊಟ್ಟು ಸಾಂತ್ವನ ಹೇಳಿದ್ದು ಕಿಚ್ಚ ಸುದೀಪ. ಕಿಚ್ಚ ಕೊಟ್ಟಿದ್ದನ್ನು ಮರೆತಿರುವ ವಿಜಿ ನನಗೆ ಯಾರೂ ಸಹಾಯ ಮಾಡಲಿಲ್ಲ ಅಂತಾ ಚೆನ್ನೈನಲ್ಲಿ ಕುಂತು ಪುಂಗುತ್ತಿದ್ದಾಳೆ. ಕನ್ನಡ ಚಿತ್ರರಂಗದವರು ಏನೂ ಸಹಾಯ ಮಾಡಲಿಲ್ಲ ಅನ್ನುತ್ತಿದ್ದಾಳಲ್ಲಾ ವಿಜಿ? ನಿರ್ದೇಶಕ ನೂತನ್‌ ಉಮೇಶ್‌ ಅವರ ಫೈಟರ್‌ ಸಿನಿಮಾದಲ್ಲಿ ಕರೆದು ಅವಕಾಶ ಕೊಟ್ಟು ಅರವತ್ತು ಸಾವಿರ ಅಡ್ವಾನ್ಸೂ ಕೊಟ್ಟಿದ್ದರು. ಹೇಳಿದ ದಿನ ಶೂಟಿಂಗಿಗೆ ಹೋಗದೇ ಕೈಕೊಟ್ಟು, ಅಡ್ವಾನ್ಸ್‌ ದುಡ್ಡನ್ನೂ ವಾಪಾಸು ಕೊಡಲಿಲ್ಲ. ರಾಧಿಕಾ ಕುಮಾರಸ್ವಾಮಿ ಅವರ ಸಿನಿಮಾದಲ್ಲಿ ಪಾತ್ರ ನೀಡಿ, ಇರಲಿಕ್ಕೆ ಮನೆಯನ್ನೂ ಮಾಡಿಕೊಟ್ಟರೆ, ಅವರಿಗೂ ಆಟ್ಟಾಡಿಸಿಬಿಟ್ಟಳು.

ಈಗ ಸೀಮನ್‌ನ ಒಂದೊಂದೇ ವಿಡಿಯೋ ಬಿಡ್ತೀನಿ, ನನಗೆ ಅನ್ಯಾಯ ಮಾಡಿದವರ ವಿವರಗಳನ್ನು ಬಯಲು ಮಾಡುತ್ತೀನಿ ಅಂತಾ ಥೇಟು ಆಂಧ್ರದ ಶ್ರೀರೆಡ್ಡಿ ಥರಾ ಬ್ಲಾಕ್‌ಮೇಲ್‌ ತಂತ್ರ ಅನುಸರಿಸುತ್ತಿದ್ದಾಳೆ. ಮಾತಾಡುವಾಗಲೂ ಮತ್ತೆ ಮತ್ತೆ ಹೇಳಿದ್ದನ್ನೇ ಹೇಳುತ್ತಾಳೆ. ನಿಜಕ್ಕೂ ವಿಜಯಲಕ್ಷ್ಮಿ ಮತ್ತಾಕೆಯ ಕುಟುಂಬಕ್ಕೆ ಅನ್ಯಾಯವಾಗಿದ್ದರೆ, ಬೇರೆಯದ್ದೇ ರೀತಿಯಲ್ಲಿ ಹೋರಾಡಬಹುದಿತ್ತು. ಆದರೆ ಇಲ್ಲಿ ವಿಜಿ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಪೂರ್ತಿ ಗೋಜಲು ಗೋಜಲಾಗಿ ಕಾಣುತ್ತಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಶೀತಲ್‌ ಶೆಟ್ಟಿ ವಿಂಡೋ ಸೀಟ್‌ನಲ್ಲಿ ಕುಳಿತರು ನಿರೂಪ್‌ ಭಂಡಾರಿ

Previous article

ಮೈಸೂರಿನ ಮಾಸ್ಟರ್ ಪೀಸು ಈಗ ಜಗತ್ತಿಗೇ ಫೇಮಸ್ಸು!

Next article

You may also like

Comments

Leave a reply

Your email address will not be published. Required fields are marked *