ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರಿಗೂ ವಿವಾದಕ್ಕೂ ಆಗಾಗ ನಂಟು ಬೆಳೆಯೋದು ಮಾಮೂಲಿ. ಇದೀಗ ಅದೇ ನಾರಾಯಣ್ ತಮಿಳುನಾಡಿನ ಖದೀಮ ಜ್ಯೋತಿಷಿಯೊಬ್ಬನಿಂದ ನಲವತ್ತೈದು ಲಕ್ಷಕ್ಕೆ ನಾಮ ತೀಡಿಸಿಕೊಂಡ ಸಂಕಟದಿಂದ ಒದ್ದಾಡುತ್ತಿದ್ದಾರೆ.
ಕಲಾಸಾಮ್ರಾಟನನ್ನೇ ಯಾಮಾರಿಸಿ ನಲವತ್ತೈದು ಲಕ್ಷಕ್ಕೆ ನಾಮ ತೀಡಿದವನು ತಮಿಳು ನಾಡಿನ ಜ್ಯೋತಿಷಿ ಮಂದಾರಮೂರ್ತಿ. ಅತ್ತ ಕೋಟಿ ಕೋಟಿ ಸಾಲ ಸಿಗೋ ಆಸೆಯಿಂದ ನಲವತೈದು ಲಕ್ಷ ಕೊಟ್ಟು ಆ ಕಾಸೂ ಇಲ್ಲದೆ, ಸಾಲದ ಕಾಸೂ ಇಲ್ಲದೆ ಕಂಗಾಲಾದ ನಾಣಿ ಕಡೆಗೂ ಯಶವಂತಪುರ ಪೊಲೀಸ್ ಠಾಣೆಯಲ್ಲೊಂದು ದೂರು ದಾಖಲಿಸಿದ್ದಾರೆ.
ಅದ್ಯಾವ ದರ್ದೋ, ಅನಿವಾರ್ಯವೋ.. ಅಂತೂ ಎಸ್. ನಾರಾಯಣ್ ಭಾರೀ ಮೊತ್ತದ ಸಾಲವೊಕ್ಕಾಗಿ ಮಂದಾರಮೂರ್ತಿಯ ಸಂಪರ್ಕ ಬೆಳೆಸಿಕೊಂಡಿದ್ದಕ್ಕೆ ಅವರು ದಾಖಲಿಸಿರೋ ದೂರೇ ಸಾಕ್ಷಿಯಾಗುತ್ತದೆ. ಇದರ ಹಿಂದೆ ಭರ್ತಿ ಎಪ್ಪತ್ತು ಕೋಟಿ ಸಾಲ ಪಡೆಯೋ ಉದ್ದೇಶವಿತ್ತಂತೆ. ನಾರಾಯಣ್ ಅವರು ತಮಿಳುನಾಡಿನ ಈ ಕುಖ್ಯಾತ ಜ್ಯೋತಿಷಿಯನ್ನು ಸಂಪರ್ಕಿಸಿದ್ದು ಆತನ ಸಹಚರನೊಬ್ಬನ ಮೂಲಕ. ನಂತರ ಮಾತುಕತೆ ನಡೆದು ಪ್ರೊಸೆಸಿಂಗ್ ಫೀಸ್ ಆಗಿ ನಲವತ್ತೈದು ಲಕ್ಷ ಕೊಟ್ಟಿದ್ದರು. ಆದರೆ ಆ ನಂತರ ಮಂದಾರ ಮೂರ್ತಿಯಾಗಲಿ, ಶಿಷ್ಯನಾಗಲಿ ಕೈಗೆ ಸಿಗದೆ ಸತಾಯಿಸಲಾರಂಭಿಸಿದ್ದರು.
ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ಮಂದಾರಮೂರ್ತಿಯ ಸಹಚರನನ್ನು ಬಂಧಿಸಿದ್ದಾರೆ. ಆದರೆ ಕರ್ನಾಟಕ ಪೊಲೀಸರ ಪಾಲಿಗೆ ತಮಿಳುನಾಡಿನ ಕುಖ್ಯಾತ ಜ್ಯೋತಿಷಿ ಮಂದಾರನನ್ನು ಬಂಧಿಸೋದು ತುಸು ತಲೆ ನೋವಿನ ಕೆಲಸ. ಯಾಕೆಂದರೆ ಅಲ್ಲಿ ಆತ ದೊಡ್ಡ ಸಮುದಾಯವೊಂದರ ಮುಖಂಡ. ಜ್ಯೋತಿಷ್ಯದ ಮರೆಯಲ್ಲಿ ರಿಯಲ್ ಎಸ್ಟೇಟ್, ಬಡ್ಡಿ ಮಾಫಿಯಾ ನಡೆಸುತ್ತಾ ಕೋಟಿ ಕುಳವಾಗಿರೋ ಈತನಿಗೆ ದೊಡ್ಡ ಮಟ್ಟದಲ್ಲಿಯೇ ಪ್ರಭಾವವಿದೆಯಂತೆ. ಇದೆಲ್ಲ ಏನೇ ಇದ್ದರೂ ಇದೀಗ ನಾಣಿ ಕೋಟಿ ಸಾಲ ಸಿಗದಿದ್ದರೂ ಪರವಾಗಿಲ್ಲ, ಕೈಯಿಂದ ಕೊಟ್ಟ ನಲವತ್ತು ಲಕ್ಷ ವಾಪಾಸು ಸಿಕ್ಕರೆ ಸಾಕೆಂಬ ಸ್ಥಿತಿಯಲ್ಲಿದ್ದಾರೆ.
#
No Comment! Be the first one.