ಬರೋಬ್ಬರಿ ಎರಡು ದಶಕಕ್ಕೂ ಹೆಚ್ಚು ಕಾಲ ನಿರ್ದೇಶಕರಾಗಿ, ನಟನಾಗಿ ಚಿತ್ರರಂಗದಲ್ಲಿ ಆಳ್ವಿಕೆ ಮಾಡಿದವರು ಎಸ್. ನಾರಾಯಣ್. ಯಾವಾಗ ನಿರ್ಮಾಣಕ್ಕೆ ಅಂತಾ ಇಳಿದರೋ ನಾಣಿಯ ನಸೀಬೇ ಎಕ್ಕುಟ್ಟಿಹೋಯಿತು!


ಚೈತ್ರದ ಪ್ರೇಮಾಂಜಲಿ ಅನ್ನೋ ಮೆಘಾಹಿಟ್ ಮೂವಿಯ ಮುಖಾಂತರ ಸ್ಟಾರ್ ಮೇಕರ್ ಆಗಿ ಹೊರಹೊಮ್ಮಿದವರು ನಾರಾಯಣ್. ಡಾ. ರಾಜ್ ನಟನೆಯ ಕೊನೆಯ ಚಿತ್ರ ಶಬ್ದವೇದಿಯ ನಂತರವಂತೂ ನಾರಾಯಣ್ ವರ್ಚಸ್ಸು ಮತ್ತಷ್ಟು ಹೆಚ್ಚಿತ್ತು. ಆ ನಂತರ ವಿಷ್ಣುವರ್ಧನ್ ನಟನೆಯ ಎಷ್ಟೋ ಚಿತ್ರಗಳಿಗೆ ನಾರಾಯಣ್ ನಿರ್ದೇಶಕರಾದರು. ಚಂದ್ರಚಕೋರಿಯಂಥಾ ಸಿನಿಮಾವನ್ನು ನಿರ್ದೇಶಿಸಿ ಶ್ರೀಮುರಳಿಯಂತಾ ನಟನನ್ನು ಇಂಡಸ್ಟ್ರಿಗೆ ಪರಿಚಯಿಸಿದರು. ಶಿವರಾಜ್ ಕುಮಾರ್, ರವಿಚಂದ್ರನ್, ಸುದೀಪ್, ಪುನೀತ್, ಗಣೇಶ್, ದುನಿಯಾ ವಿಜಿ – ಹೀಗೆ ಸೂಪರ್ ಸ್ಟಾರ್’ಗಳಿಗಾಗಿ ನಾಣಿ ಸಾಲು ಸಾಲು ಸಿನಿಮಾಗಳನ್ನು ನಿರ್ದೇಶಿಸಿದರು. ಇವೆಲ್ಲದರ ಜೊತೆಗೆ ಕಾಮಿಡಿ ಹೀರೋ ಆಗಿಯೂ ಹೆಸರು ಮಾಡಿದರು.


ಹತ್ತಾರು ಜನ ಸ್ಟಾರ್’ಗಳಿಗೆ ಸಿನಿಮಾಗಳನ್ನು ಡೈರೆಕ್ಟ್ ಮಾಡಿದ, ಹೊಸ ಹೀರೋಗಳನ್ನು ಹುಟ್ಟುಹಾಕಿದ ನಾರಾಯಣ್ ಅವರಿಗೆ ತಮ್ಮ ಮಗನನ್ನು ಹೀರೋ ಆಗಿ ಚಿತ್ರರಂಗದಲ್ಲಿ ನಿಲ್ಲಿಸೋದು ಸಾಧ್ಯವೇ ಆಗಲಿಲ್ಲ. ಒಂದು ಸಲ ಜನ ಒಲ್ಲೆ ಅಂದಮೇಲೂ ತಮ್ಮ ಪುತ್ರ ಪಂಕಜ್’ಗಾಗಿ ಪದೇಪದೇ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರ ಮೇಲೆ ಒತ್ತಡ ತಂದರು. ಆದರೆ, ಯಾರೂ ಕ್ಯಾರೇ ಅನ್ನಲಿಲ್ಲ. ಮಗನಿಗಾಗಿ ಮಾಡಿದ ಸಿನಿಮಾಗಳಿಂದ ಭಯಂಕರ ನಷ್ಟಕ್ಕೀಡಾದರು. ಮಗನ ಸಿನಿಮಾಗಳಿಂದ ಕೈಬಿಟ್ಟ ಕಾಸೆಲ್ಲವನ್ನೂ ಒಂದೇ ಬೊಗಸೆಗೆ ವಾಪಾಸು ತೆಗೆಯೋ ಸ್ಕೆಚ್ಚು ಹಾಕಿದ ನಾಣಿ ಸಿಲುಕಿಕೊಂಡಿದ್ದು ಮಾತ್ರ ದೊಡ್ಡ ಯಡವಟ್ಟಿಗೆ. ಅದೇನೆಂದರೆ, ಆಗ ತಮಿಳಿನಲ್ಲಿ ವಿಜಯ್ ನಟಿಸಿದ್ದ ‘ಪುಲಿ’ ಅನ್ನೋ ಸಿನಿಮಾ ಭಾರೀ ಹವಾ ಸೃಷ್ಟಿಸಿತ್ತು. ಈ ಸಿನಿಮಾದಲ್ಲಿ ಕನ್ನಡದ ಕಿಚ್ಚ ಕೂಡಾ ಪ್ರಧಾನ ಪಾತ್ರವೊಂದನ್ನು ನಿಭಾಯಿಸಿದ್ದರು. ಈ ಚಿತ್ರದ ಹಂಚಿಕೆ ಹಕ್ಕನ್ನು ವಿಶಾಲ ಕರ್ನಾಟಕಕ್ಕೆ ನಾಣಿ ಬರೋಬ್ಬರಿ ಇಪ್ಪತ್ತೈದು ಕೋಟಿಗಳನ್ನು ಸುರಿದು ಖರೀದಿಸಿದರು.

ಈ ಸಿನಿಮಾ ಕುರಿತಾಗಿ ಇದ್ದ ಕ್ರೇಜ಼ು ನೋಡಿದರೆ ಒಂದು ವಾರಕ್ಕೆಲ್ಲಾ ಹಾಕಿದ ಬಂಡವಾಳ ವಾಪಾಸು ಬಂದು, ಎರಡನೇ ವಾರದ ಗಳಿಕೆ ನಾಣಿಯ ತಿಜೋರಿ ತುಂಬಿಸಬೇಕಿತ್ತು. ಆದರೆ, ಅದು ಹಾಗಾಗಲಿಲ್ಲ. ಒಂದೇ ಒಂದು ಶೋಗೆ ‘ಪುಲಿ’ ಪಾಚಿಕೊಂಡಿದ್ದು, ಮೇಲೇಳಲೇ ಇಲ್ಲ. ಅಲ್ಲಿಗೆ ‘ಪುಲಿ’ಯನ್ನು ನಂಬಿ ಕುಂತಿದ್ದ ನಾಣಿ ಪರದಾಡುವಂತಾಗಿಬಿಟ್ಟಿತು. ಸಿನಿಮಾ ಕೈ ಹಿಡಿಯಲಿಲ್ಲ. ಕೊಟ್ಟ ಕಾಸನ್ನು ಮರುಪಾವತಿ ಮಾಡಿ ಅಂತಾ ಚೆನ್ನೈಗೆ ಹೋಗಿ ‘ಪುಲಿ’ ನಿರ್ಮಾಪಕನ ಮನೆ ಮುಂದೆ ನಾಣಿ ಧರಣಿ ಕೂತರು. ನಾರಾಯಣಪ್ಪ ಏನೇ ತಿಪ್ಪರಲಾಗ ಹಾಕಿದರೂ ಕಳೆದುಕೊಂಡ ದುಡ್ಡು ಕೈಸೇರಲಿಲ್ಲ.


ಈ ನಡುವೆ ಹಳೇ ಲೆಕ್ಕ ಸರಿ ಹೋಗಲಿಲ್ಲ ಅಂತಾ ಗೋಲ್ಡನ್ ಸ್ಟಾರ್ ಗಣೇಶ್ ಹಾಕಿದ್ದ ಕೇಸು, ಸಾಲ ವಸೂಲಾತಿಗಾಗಿ ಕ್ಯೂ ನಿಂತ ಫೈನಾನ್ಶಿಯರುಗಳು, ಹೆಗಲೇರಿಕುಂತ ಬ್ಯಾಂಕುಗಳು… ಇವೆಲ್ಲದರಿಂದ ತಪ್ಪಿಸಿಕೊಳ್ಳಲು ‘ಕಾರಲ್ಲಿ ಇಟ್ಟಿದ್ದ ದುಡ್ಡು ಕಳೆದುಹೋಯ್ತು’ ಅಂತಾ ನಾಣಿ ಕಟ್ಟಿದ ನಾಟಕ, ಯಾವನೋ ಜ್ಯೋತಿಷಿಯನ್ನು ನಂಬಿ ಇದ್ದಿದ್ದನ್ನೂ ಕಳೆದುಕೊಂಡು ನಡೆಸಿದ ಒದ್ದಾಟ – ಒಂದಾ ಎರಡಾ? ನಾಣಿ ಪಾಡು ಅಕ್ಷರಶಃ ನಾಯಿನರಕವಾಯಿತು!


ಈ ನಡುವೆ ನಿರ್ದೇಶಿಸಿದ ಸಿನಿಮಾಗಳೂ ಬರಖತ್ತಾಗಲಿಲ್ಲ. ನಾಣಿ ಗೆಲ್ಲಲಿ, ಸೋಲಲಿ, ಕೈ ಹಿಡಿದು ಸಿನಿಮಾ ಕೊಡುತ್ತಿದ್ದ ರಾಕ್‌ಲೈನ್ ವೆಂಕಟೇಶ್ ‘ಮನಸು ಮಲ್ಲಿಗೆ’ಯ ನಂತರ ಮುಖ ತಿರುಗಿಸಿಬಿಟ್ಟರು. ಹೆಚ್.ಡಿ. ಕುಮಾರಸ್ವಾಮಿಯವರ ಬದುಕನ್ನು ಆಧರಿಸಿ, ಅರ್ಜುನ್ ಸರ್ಜಾರನ್ನು ನಾಯಕರನ್ನಾಗಿಸಿ ಭೂಮಿ ಪುತ್ರ ಅನ್ನೋ ಸಿನಿಮಾವನ್ನು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಆರಂಭಿಸಿದರು. ಶುರುವಾಗಿದ್ದಷ್ಟೇ ಆ ಚಿತ್ರ ಮುಂದುವರೆಯಲೇ ಇಲ್ಲ. ಆನಂತರ ಮತ್ತೊಂದು ಸಿನಿಮಾವನ್ನು ಮಗನಿಗಾಗಿಯೇ ಆರಂಭಿಸಿ ಹನುಮಂತನಗರದ ಆಂಜನೇಯನ ಸನ್ನಿಧಿಯಲ್ಲಿ ಮುಹೂರ್ತ ಮಾಡಿದರು. ಅದೂ ಮುಂದಡಿಯಿಡಲಿಲ್ಲ.


ನಾರಾಯಣ್ ಕುಮಾರಸ್ವಾಮಿಯವರ ಆಪ್ತನೆನಿಸಿಕೊಂಡಿದ್ದವರು. ಜೆ.ಡಿ.ಎಸ್.ನ ಸಾಂಸ್ಕೃತಿಕ ಕೆಲಸಗಳ ಸೂತ್ರದಾರರಾಗಿದ್ದವರು. ಒಂದು ಕಾಲಕ್ಕೆ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದ ನಾಣಿ ಇವತ್ತು ಕೇಳುವವರು ದಿಕ್ಕಿಲ್ಲದೆ ಕಂಗಾಲಾಗಿದ್ದಾರೆ. ಕುರುಬರಹಳ್ಳಿಯಲ್ಲಿದ್ದ ಹದಿನೆಂಟು ಮನೆಗಳನ್ನೂ ಸೇರಿಸಿ, ನೆಲಮಂಗಲದ ತೋಟದ ಮೇಲೆ ಬ್ಯಾಂಕ್ ಲೋನು ಪಡೆದರೂ ಹಳೇ ಸಾಲ ತೀರುವ ಲಕ್ಷಣ ಕಾಣಿಸುತ್ತಿಲ್ಲ. ಗಿಡದಕೋನೇನಹಳ್ಳಿಯಲ್ಲಿ ಶುರು ಮಾಡಿದ್ದ ನಾಲ್ಕಂತಸ್ತಿನ ಮನೆ ಅರ್ಧಕ್ಕೇ ನಿಂತು ಪಾಳುಬಿದ್ದಿದೆ. ಸಿನಿಮಾರಂಗದಲ್ಲಿ ನೆಲೆ ಕಂಡುಕೊಳ್ಳದ ನಾಣಿ ಪುತ್ರರು ನಾಗರಬಾವಿಯಲ್ಲಿ ಸೆಲೂನು ತೆರೆದಿದ್ದಾರೆ. ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿ ಸ್ಟಾರ್ ಡೈರೆಕ್ಟರ್ ಎನಿಸಿಕೊಂಡಿದ್ದ ನಾರಾಯಣ್ ಇಂದು ವಾಸಕ್ಕೊಂದು ಸ್ವಂತ ಮನೆ ಕೂಡಾ ಇಲ್ಲದೆ, ಅನ್ನಪೂರ್ಣೇಶ್ವರಿ ನಗರದಲ್ಲೊಂದು ಬಾಡಿಗೆ ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ.


ನಾರಾಯಣ್ ಕ್ರಿಯಾಶೀಲ ವ್ಯಕ್ತಿ, ಶಿಸ್ತಿನ ಮನುಷ್ಯ, ಕಸುಬುದಾರ ನಿರ್ದೇಶಕ ಅಂತೇನೇ ಹೆಸರು ಮಾಡಿದ್ದರೂ ಕೈ ನಡೆಯುತ್ತಿದ್ದ ಸಮಯದಲ್ಲಿ ಸಾಕಷ್ಟು ಜನರಿಗೆ ಅವಮಾನಿಸಿದ್ದರು ಅನ್ನೋ ಆರೋಪವಿದೆ. ವಾಸ್ತವ ಏನೆನ್ನೋದು ಗೊತ್ತಿಲ್ಲ. ಆದರೆ, ಹೆತ್ತ ತಾಯಿಯನ್ನು ನೆಟ್ಟಗೆ ನೋಡಿಕೊಳ್ಳಲಿಲ್ಲ ಅನ್ನೋ ಕೆಟ್ಟ ಅಪವಾದ ಕಲಾಸಾಮ್ರಾಟ್ ಮೇಲಿದೆ. ಚಿತ್ರರಂಗದಲ್ಲಿ ಬ್ಯುಸೀ ಡೈರೆಕ್ಟರಾಗಿದ್ದ ಸಂದರ್ಭದಲ್ಲೇ ಕಿರುತೆರೆಯಲ್ಲೂ ಯಶಸ್ವೀ ಧಾರಾವಾಹಿಗಳನ್ನು ಕೊಟ್ಟು ಛಾಪು ಮೂಡಿಸಿದ್ದವರು ನಾಣಿ. ನಟ ದರ್ಶನ್ ಕಷ್ಟದ ದಿನಗಳಲ್ಲಿದ್ದಾಗ ಮೊದಮೊದಲಿಗೆ ಮುಖ ತೋರಿಸಿದ್ದು ಇದೇ ಎಸ್ ನಾರಾಯಣ್ ನಿರ್ದೇಶನದ ಧಾರಾವಾಹಿಗಳಲ್ಲಿ. ನಾಣಿ ಡೈರೆಕ್ಟ್ ಮಾಡಿದ ಮಹಾ ಭಾರತ ಅನ್ನೋ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ಮೊಟ್ಟ ಮೊದಲ ಬಾರಿಗೆ ನಟಿಸಿದ್ದು. ಎಲ್ಲಾ ಅಂದುಂಕೊಂಡಂತೇ ಆಗಿದ್ದಿದ್ದರೆ ವೀರಪ್ಪ ನಾಯಕ ಸಿನಿಮಾದಲ್ಲಿ ದರ್ಶನ್ ವಿಷ್ಣು ಎದುರು ವಿಲನ್ ಆಗಿ ಅಬ್ಬರಿಸಬೇಕಿತ್ತು. ಆದರೆ ಕಡೇ ಘಳಿಗೆಯಲ್ಲಿ ಯಾರು ಕಡ್ಡಿ ಅಲ್ಲಾಡಿಸಿದರೋ ಗೊತ್ತಿಲ್ಲ. ನಾಳೆ ಬೆಳಿಗ್ಗೆ ಶೂಟಿಂಗು ಅನ್ನೋಹೊತ್ತಿಗೇ ದರ್ಶನ್ ಜಾಗದಲ್ಲಿ ಸೌರವ್ ಬಂದು ನಿಂತಿದ್ದ. ಅಂದು ನಾರಾಯಣ್ ಮತ್ತವರ ಸುತ್ತಲಿನವರು ಮಾಡಿದ ಅನಾಚಾರಗಳಿಂದ ನೊಂದಿದ್ದ ದರ್ಶನ್ ಇವತ್ತು ಇಡೀ ಕನ್ನಡ ಚಿತ್ರರಂಗವನ್ನು ಮುಂದಕ್ಕೆಳೆದುಕೊಂಡು ಹೋಗುವಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿ ಬೆಳೆದುನಿಂತಿದ್ದಾರೆ; ಅಗಣಿತ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ನಾರಾಯಣ್ ಬಗ್ಗೆ ದರ್ಶನ್ ಅವರಿಗೆ ಪರ್ಸನಲ್ಲಾಗಿ ಬೇಜಾರಿದೆಯೋ ಇಲ್ಲವೋ ಸ್ವತಃ ದರ್ಶನ್ ಅವರ ಒಳಮನಸ್ಸಿಗಷ್ಟೇ ಗೊತ್ತು. ಆದರೆ ನಾಣಿ ಕಷ್ಟದಲ್ಲಿದ್ದಾರೆ ಅನ್ನೋ ವಿಚಾರ ದರ್ಶನ್‌ಗೆ ಗೊತ್ತಿಲ್ಲದೇ ಏನಿಲ್ಲ. ನಾಣಿಯ ಬಗ್ಗೆ ಏನನ್ನೂ ಪ್ರತಿಕ್ರಿಯಿಸಿದ ದಾಸ ಇವತ್ತು ಅವರ ಮಗ ಪಂಕಜ್’ಗೆ ಒಡೆಯ ಸಿನಿಮಾದಲ್ಲಿ ಒಳ್ಳೆಯದೊಂದು ರೋಲು ಕೊಡಿಸಿದ್ದಾರೆ. ಬಹುಶಃ ಆರಂಭದ ದಿನಗಳಲ್ಲಿ ನಾರಾಯಣ್ ತಮ್ಮ ಸಿನಿಮಾ, ಧಾರಾವಾಹಿಗಳಲ್ಲಿ ಕೊಟ್ಟ ಅವಕಾಶದ ಋಣ ತೀರಿಸುವ ಮನಸ್ಥಿತಿ ‘ಯಜಮಾನ’ನದ್ದಾಗಿರಬಹುದು.


ಇವೆಲ್ಲಾ ಏನೇ ಆಗಲಿ, ಅರೆಘಳಿಗೆಯೂ ಸುಮ್ಮನೇ ಕೂರದೇ ಕಸುಬು ಮಾಡಿದ ಮನುಷ್ಯ ಸುಮ್ಮನೇ ಕೂರೋದೆಂದರೆ ಅದು ನರಕಯಾತನೆಯೇ ಸರಿ. ನಾರಾಯಣ್ ಕನ್ನಡ ಚಿತ್ರರಂಗ ಕಂಡ ಪ್ರೊಫೆಷನಲ್ ಡೈರೆಕ್ಟರ್. ಶಿಸ್ತಿನ ಮನುಷ್ಯ. ಸಮಯಪ್ರಜ್ಞೆಯನ್ನು ರೂಢಿಸಿಕೊಂಡವರು. ನಾಲ್ಕು ಜನಕ್ಕೆ ಮಾರ್ಗದರ್ಶನ ನೀಡಬಲ್ಲ ಶಕ್ತಿ ಉಳ್ಳವರು. ಇಂಥ ನಾಣಿಯ ಮುಂದಿನ ಬದುಕಾದರೂ ಬಂಗಾರವಾಗಲಿ…

CG ARUN

ಕಿಚ್ಚ ಕೊಟ್ಟ ಸಾಥ್ ಮತ್ತು ಕೃಷ್ಣ ಕನಸು!

Previous article

ಅವತಾರಪುರುಷ ಶ್ರೀನಗರ ಕಿಟ್ಟಿ ವಾಮಾಚಾರ ಮಾಡಿದರಂತೆ!

Next article

You may also like

Comments

Leave a reply

Your email address will not be published. Required fields are marked *