2023ರ ಡಿಸೆಂಬರ್ ತಿಂಗಳಲ್ಲಿ ಸಲಾರ್ ಚಿತ್ರ ತೆರೆಗೆ ಬಂದಿತ್ತು. ಕೆ.ಜಿ.ಎಫ್ ಚಿತ್ರದ ಬ್ರಹ್ಮಾಂಡ ಗೆಲುವಿನ ನಂತರ ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಿನಲ್ಲಿ ತಯಾರಾದ ಚಿತ್ರವಿದು. ಪ್ರಬಾಸ್ ಹೀರೋ ಆಗಿ ನಟಿಸಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ದೇಶಾದ್ಯಂತ ವಿಪರೀತ ಕ್ರೇಜ್ ಕ್ರಿಯೇಟ್ ಆಗಿತ್ತು. ಇಡೀ ಇಂಡಿಯಾ ಈ ಚಿತ್ರದತ್ತ ಕುತೂಹಲದ ಕಣ್ಣು ನೆಟ್ಟಿತ್ತು. ಚಿತ್ರ ಬಿಡುಗಡೆಯ ನಂತರ ಇದು ಉಗ್ರಂ ಚಿತ್ರದ್ದೇ ಮತ್ತೊಂದು ಅವತಾರ ಅನ್ನೋದು ರವೀಲ್ ಆಗಿತ್ತು. ಅತಿಯಾದ ನಿರೀಕ್ಷೆಯಿಂದಲೋ ಏನೋ ಜನ ಸಲಾರ್ ಚಿತ್ರವನ್ನು ಹೇಳಿಕೊಳ್ಳುವ ಮಟ್ಟಕ್ಕೆ ಸ್ವೀಕರಿಸಲಿಲ್ಲ. ಸಲಾರ್ ಭಾಗ ೨ (ಶೌರ್ಯಾಂಗ ಪರ್ವಂ ) ಬರುತ್ತದೆ ಅನ್ನೋದು ಮೊದಲ ಭಾಗ ತೆರೆಗೆ ಬರುವ ಮುಂಚೆಯೇ ಅನೌನ್ಸ್ ಆಗಿತ್ತು. ಕೆ.ಜಿ.ಎಫ್ ಹೇಗೆ ಮೊದಲ ಭಾಗಕ್ಕಿಂತಾ ದ್ವಿತೀಯ ಭಾಗ ಹೆಚ್ಚು ಕಲೆಕ್ಷನ್ ಮತ್ತು ಕ್ರೇಜ್ ಹುಟ್ಟುಹಾಕಿತ್ತೋ ಸಲಾರ್ ಕೂಡಾ ಹಾಗೆಯೇ ಆಗುತ್ತದೆ ಅನ್ನೋದು ನೀಲ್ ಮತ್ತು ಹೊಂಬಾಳೆ ಅಂದಾಜಾಗಿತ್ತು. ಇನ್ನೇನು ಸಲಾರ್ ಭಾಗ-೨ರ ಚಿತ್ರೀಕರಣ ಶುರುವಾಗುತ್ತದೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಈ ಚಿತ್ರಕ್ಕಾಗಿ ಸಕಲ ತಯ್ಯಾರಿಯೂ ನಡೆದಿತ್ತು. ಆದರೆ ಈಗ ಬಂದಿರುವ ಸುದ್ದಿಯ ಪ್ರಕಾರ ಸಲಾರ್-೨ನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ನಿಲ್ಲಿಸಿರುವುದು ಮಾತ್ರವಲ್ಲ, ಮತ್ತೆ ಆರಂಭಗೊಳ್ಳುವುದು ಕೂಡಾ ಕಷ್ಟವಂತೆ.
ಪ್ರಬಾಸ್ ಮಾಡಿದ ಸಿನಿಮಾಗಳೆಲ್ಲಾ ಒಂದರ ಹಿಂದೊಂದು ಕಾಲೆತ್ತಿಕೊಳ್ಳುತ್ತಿದೆ. ಜೊತೆಗೆ ಸಲಾರ್ ಮೊದಲ ಭಾಗದ ಶೂಟಿಂಗ್ ವೇಳೆಯಲ್ಲೇ ಪ್ರಬಾಸ್ ಮತ್ತು ನೀಲ್ ನಡುವೆ ಆಗಾಗ ಶೀತಲ ಸಮರವೇರ್ಪಡುತ್ತಿತ್ತಂತೆ. ತಮ್ಮಿಷ್ಟದಂತೆ ಶೂಟ್ ಮಾಡುವುದು, ಮತ್ತೆ ಅದನ್ನು ತೆಗೆದು ಬಿಸಾಕಿ, ರೀ ಶೂಟ್ ಮಾಡೋದು ಪ್ರಶಾಂತ್ ನೀಲ್ ಸ್ಟೈಲು. ಬಹುಶಃ ಇದು ಪ್ರಬಾಸ್ಗೆ ಕಿರಿಕಿರಿ ಆಗಿತ್ತೋ ಏನೋ? ಈ ಕಾರಣಕ್ಕೆ ಸ್ವತಃ ಪ್ರಬಾಸ್ ಈ ಪ್ರಾಜೆಕ್ಟಿಂದ ಹೊರಬರುವ ನಿರ್ಧಾರ ಮಾಡಿದರಾ? ಅಥವಾ ಇವನ ಜೊತೆ ನಾನೇಕೆ ಸಿನಿಮಾ ಮಾಡಬೇಕು ಅಂತಾ ಪ್ರಶಾಂತ್ ನೀಲ್ ಅವರೇ ಈಗೋಗೆ ಬಿದ್ದು ಹಿಂದೇಟು ಹಾಕಿದರಾ? ಇವರಿಬ್ಬರ ನಡುವೆ ಸಿಕ್ಕಿಕೊಂಡು ಯಾಕೆ ಒದ್ದಾಡಬೇಕು ಅಂತಾ ಹೊಂಬಾಳೆ ಸಂಸ್ಥೆಯೇ ತೀರ್ಮಾನಿಸಿತೋ ಗೊತ್ತಿಲ್ಲ. ಸದ್ಯಕ್ಕೆ ಸಲಾರ್-೨ ಕ್ಯಾನ್ಸಲ್ ಆಗಿರೋದಂತೂ ನಿಜ!
ರಾಜಕುಮಾರ, ಕೆ.ಜಿ.ಎಫ್. ಮತ್ತು ಕಾಂತಾರ ಚಿತ್ರಗಳ ಹೊರತಾಗಿ ಹೊಂಬಾಳೆ ಫಿಲ್ಮ್ಸ್ ಆಗಾಗ ತಪ್ಪು ಆಯ್ಕೆಗಳನ್ನು ಮಾಡುತ್ತಾ ಬಂದಿದೆ. ಹೊಂಬಾಳೆ ನಿರ್ಮಿಸಿದ ಆರಂಭದ ಸಿನಿಮಾಗಳಿಂದ ಹಿಡಿದು ನೆನ್ನೆ ಮೊನ್ನೆ ತೆರೆಗೆ ಬಂದ ಧೂಮಂ ಮತ್ತು ಯುವ ಕೂಡಾ ಅದಕ್ಕೆ ಸ್ಪಷ್ಟ ನಿದರ್ಶನ. ಮತ್ತೆ ಅಂಥದ್ದೇ ಯಡವಟ್ಟು ಮಾಡಿಕೊಳ್ಳಬಾರದು ಅಂತಾ ಕಿರಗಂದೂರು ನಿರ್ಧರಿಸಿರುವ ಸಾಧ್ಯತೆಯೂ ಇದೆ. ಹಾಗೆ ನೋಡಿದರೆ ವಿಜಯ್ ಕಿರಗಂದೂರ್ ಹೊಂಬಾಳೆ ಫಿಲ್ಮಸ್ ಶುರು ಮಾಡುವ ಮುಂಚೆಯೇ ದೊಡ್ಡ ಗೆಲುವು ಕಂಡಿದ್ದವರು. ತೂಗುದೀಪ ಪ್ರೊಡಕ್ಷನ್ ಜೊತೆ ಪಾಲುದಾರರಾಗಿ ಜೊತೆಜೊತೆಯಲಿ ಮತ್ತು ನವಗ್ರಹ ಎನ್ನುವ ಎರಡು ಚಿತ್ರಗಳನ್ನು ನಿರ್ಮಿಸಿದ್ದರು. ದಿನಕರ್ ತೂಗುದೀಪ ನಿರ್ದೇಶನದ ಈ ಎರಡೂ ಚಿತ್ರಗಳು ಕಿರಗಂದೂರರಿಗೆ ಅದ್ಭುತ ಯಶಸ್ಸು ನೀಡಿದ್ದವು. ಈ ನಡುವೆ ಅದೇನು ವೈಮನಸ್ಯ ಉಂಟಾಯಿತೋ? ಅದಕ್ಕೆ ಕಾರಣಗಳೇನೋ ಗೊತ್ತಿಲ್ಲ. ತಮ್ಮದೇ ಹೊಂಬಾಳೆ ಆರಂಭಿಸಿ ಸ್ವಂತ ಸಿನಿಮಾಗಳನ್ನು ನಿರ್ಮಿಸಲು ಶುರು ಮಾಡಿದರು. ಆರಂಭದಲ್ಲಿ ಸೋತು, ಆ ನಂತರ ಅತ್ಯದ್ಭುತ ಎನ್ನುವ ಗೆಲುವು ಕಂಡರು. ಹೊಂಬಾಳೆಯನ್ನು ಕರ್ನಾಟಕದ ಗಡಿ ದಾಟಿಸಿ ಭಾರತೀಯ ಚಿತ್ರರಂಗದಲ್ಲಿ ಮುಂಚೂಣಿಗೆ ತಂದರು. ಆದರೆ ಕಳೆದ ಒಂದೂವರೆ ವರ್ಷಗಳಲ್ಲಿ ಈ ಸಂಸ್ಥೆ ನಿರ್ಮಿಸಿರುವ ಚಿತ್ರಗಳು ನಿರೀಕ್ಷೆಗಳನ್ನು ಹುಸಿಯಾಗಿಸಿವೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಹುಶಃ ಹೊಂಬಾಳೆ ಮೈಕೊಡವಿ ನಿಲ್ಲುವ ತೀರ್ಮಾನಕ್ಕೆ ಬಂದಿದೆಯಾ? ಇದ್ದರೂ ಇರಬಹುದು. ಸದ್ಯಕ್ಕಂತೂ ಕಾಂತಾರ -೨ ಸಿನಿಮಾಗಾಗಿ ಕನ್ನಡ ಚಿತ್ರರಂಗದಲ್ಲಿ ಈ ವರೆಗೂ ಯಾರೂ ನಿರ್ಮಿಸದ ಸೆಟ್ಗಳನ್ನು ರೂಪಿಸಿ, ಚಿತ್ರೀಕರಣಕ್ಕೆ ತಯಾರಾಗುತ್ತಿದೆ.
No Comment! Be the first one.