ಸಿನಿಮಾ ಅಂದರೆ ಮನರಂಜನೆ ಅನ್ನೋದು ಸಿದ್ಧಸೂತ್ರ. ಆದರೆ ಯಾವ ವಿಚಾರವನ್ನಾದರೂ ಸಲೀಸಾಗಿ ಜನರಿಗೆ ನಾಟುವಂತೆ ಮಾಡ ಬಲ್ಲ ಶಕ್ತಿಯಿರೋ ಸಿನಿಮಾವನ್ನು ಕೇವಲ ಮನರಂಜನೆಗೆ ಮಾತ್ರವೇ ಸೀಮಿತವಾಗಿಸೋದು ಸರಿಯಾ ಎಂಬ ಚರ್ಚೆ ಈ ಕ್ಷಣಕ್ಕೂ ಚಾಲ್ತಿಯಲ್ಲಿದೆ. ಆದರೆ ಹೇಳೋದನ್ನ ಹೇಳುವ ರೀತಿಯಲ್ಲಿ ಹೇಳಿದರೆ ಸಿನಿಮಾ ಕೂಡಾ ಮನರಂಜನೆಯ ಜೊತೆಗೇ ಹೋರಾಟದ ಕಿಚ್ಚನ್ನೂ ಹತ್ತಿಸಬಲ್ಲದೆಂಬುದಕ್ಕೆ ಒಂದಷ್ಟು ಉದಾಹರಣೆಗಳಿವೆ. ಆ ಸಾಲಿನಲ್ಲಿರುವ ಚಿತ್ರ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ- ರಾಮಣ್ಣ ರೈ!
ಈ ಚಿತ್ರದ ಉದ್ದೇಶ ಹೋರಾಟದ ಕಿಚ್ಚು ಹತ್ತಿಸೋದಾ? ಜ್ವಲಂತ ಸಮಸ್ಯೆಯನ್ನು ಮುಖ್ಯವಾಹಿನಿಯ ಜನರಿಗೆ ಮನವರಿಕೆ ಮಾಡಿಸೋದಾ? ಸರ್ಕಾರಿ ಶಾಲೆಗಳ ಅವಸಾನದ ಬಗ್ಗೆ ಬೆಳಕು ಚೆಲ್ಲೋದಾ? ಪ್ರಶ್ನೆಗಳಿವೆ. ಅವುಗಳೆಗೆಲ್ಲ ಇದೇ ತಿಂಗಳ ಇಪ್ಪತ್ಮೂರರಂದು ಉತ್ತರವೂ ಸಿಗಲಿದೆ!
ಇದೊಂಥರಾ ಜೂನಿಯರ್ ಕಿರಿಕ್ ಪಾರ್ಟಿ ಥರದ ಸಿನಿಮಾ. ಇದಮಿತಂ ಎಂಬಂತೆ ಯಾವ ಚೌಕಟ್ಟನ್ನೂ ಹಾಕಲಾರದಂತೆ ರಿಷಬ್ ಶೆಟ್ಟಿ ಈ ಚಿತ್ರವನ್ನು ರೂಪಿಸಿದ್ದಾರೆ. ಹಾಗೊಂದು ವೇಳೆ ಪ್ರೇಕ್ಷಕರು ಈ ಚಿತ್ರಕ್ಕೆ ಯಾವ ಚೌಕಟ್ಟನ್ನು ಹಾಕಿದರೂ ಅಲ್ಲೊಂದು ಹೊಸತನ ಮಿರುಗುವಂತೆಯೂ ರಿಷಬ್ ಎಚ್ಚರ ವಹಿಸಿದ್ದಾರೆ. ಒಟ್ಟಾರೆ ಚಿತ್ರದ ತಾಜಾತನ, ಹೊಸತನ ಎಂಥಾದ್ದಿದೆ ಎಂಬುದನ್ನು ಹಾಡುಗಳೇ ಜಾಹೀರು ಮಾಡಿವೆ. ಕಮರ್ಷಿಯಲ್ ಚಿತ್ರಗಳನ್ನೂ ಡಲ್ಲು ಹೊಡೆಸುವಂತಾ ಈ ಸಿನಿಮಾದ ಟ್ರೇಲರ್ ಯೂಟ್ಯೂಬಿನಲ್ಲಿ ಹವಾ ಎಬ್ಬಿಸಿದೆ.
ಮಕ್ಕಳ ಚಿತ್ರಗಳೆಂದರೆ ಅದ್ಯಾವುದೋ ಅವಾರ್ಡು ಸಿಕ್ಕಾಗ ಮಾತ್ರ ಕಾಣ ಸಿಗೋ ಐಟಮ್ಮೆಂಬಂಥಾ ವಾತಾವರಣ ಕನ್ನಡದಲ್ಲಿದೆ. ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರು ಮೆಚ್ಚಿ ನಾಲಕ್ಕು ಮಾತಾಡಿದರೆ ಇಡೀ ಚಿತ್ರ ಸಾರ್ಥಕವಾಯ್ತೆಂಬ ಮನೋಭಾವ ಅಂಥಾ ಚಿತ್ರ ನಿರ್ಮಾತೃಗಳಲ್ಲಿದೆ. ಆದರೆ ಅದೇ ಪ್ರಾಕಾರವನ್ನೇ ಭಿನ್ನ ಬಗೆಯಲ್ಲಿ ಪಳಗಿಸಿಕೊಂಡಿರೋ ಈ ಚಿತ್ರ ಪಕ್ಕಾ ಕಮರ್ಷಿಯಲ್ ಸಿನಿಮಾ ಅನ್ನೋದರಲ್ಲಿ ಡೌಟಿಲ್ಲ. ಸದ್ಯ ಟ್ರೆಂಡಿಂಗ್ ನಲ್ಲಿರುವ ಸರ್ಕಾರಿ ಶಾಲೆಯ ಹಾಡುಗಳು, ಟ್ರೇಲರು ನೋಡಿದರೆ ಎಲ್ಲ ಥರದಲ್ಲಿಯೂ ದಾಖಲೆ ಸೃಷ್ಟಿಸುವ ಹಾದಿಯಲ್ಲಿದೆ. ಜೊತೆಗೆ ಇದರ ಅಸಲೀ ಮರ್ಮ ಏನೆಂಬುದು ವಾರದೊಪ್ಪತ್ತಿನಲ್ಲಿಯೇ ಬಯಲಾಗಲಿದೆ!
#
Comments