ಕಣ್ಣೆದುರೇ ಕುಸಿದು ಹೋದ ಕೊಡಗಿನ ಜನರ ಬವಣೆಗಳ ಬಗ್ಗೆ ಎಂಥವರಿಗಾದರೂ ಮರುಕ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ರವಿಚಂದ್ರ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ರವಿಚಂದ್ರನ್ ಅವರೂ ಕೂಡಾ ಈ ದುರಂತದ ಬಗ್ಗೆ ಸವಿಸ್ತಾರವಾಗಿ ಮಾತಾಡಿದ್ದಾರೆ. ಒಂದು ಮಹಾ ಪ್ರಾಕೃತಿಕ ದುರಂತದಿಂದ ಎಲ್ಲವನ್ನೂ ಕಳೆದುಕೊಂಡು ನಿಂತಿರುವ ಕೊಡಗಿನ ಜನರತ್ತ ದೂರದೃಷ್ಟಿಯ ನೋಟವನ್ನೂ ಬೀರಿದ್ದಾರೆ.
ಇದು ನಡೆಯಬಾರದಿತ್ತು. ಆದರೆ ಪ್ರಕೃತಿಯ ಪಲ್ಲಟಗಳನ್ನು ತಡೆಯಲು ಹೇಗೆ ಸಾಧ್ಯ? ಏಕಾಏಕಿ ಮನೆ ಮಠ, ಜಮೀನು ಕಳೆದುಕೊಂಡು ಬೀದಿಗೆ ಬಂದ ಜನರನ್ನು ನೋಡಿದರೆ ಮರುಕ ಹುಟ್ಟುತ್ತೆ. ಅಂತವರಿಗೆ ಆಹಾರ, ಅವಶ್ಯಕ ವಸ್ತುಗಳ ಪೂರೈಕೆಯೂ ಆಗುತ್ತಿದೆ. ಆದರೆ ಇದೆಲ್ಲ ಈ ಕ್ಷಣದ ಸ್ಪಂದನೆಯಷ್ಟೇ. ಆದರಿದು ಇಡೀ ಕೊಡಗನ್ನು ಮತ್ತೆ ಮೊದಲಿನಂತೆ ಕಟ್ಟಿನಿಲ್ಲಿಸಲು ಮುಂದಾಗ ಬೇಕಾದ ಕಾಲ… ಇಂಥಾದ್ದೊಂದು ನಿಖರವಾದ ಚಿಂತನೆಯೊಂದಿಗೇ ಮಾತಿಗಿಳಿದವರು ಕ್ರೇಜ಼ಿಸ್ಟಾರ್ ರವಿಚಂದ್ರನ್. ಅವರ ಮಾತಿನ ಲಹರಿ ಕೊಡಗನ್ನು ಮತ್ತೆ ಕಟ್ಟುವ ಮಾಸ್ಟರ್ ಪ್ಲ್ಯಾನಿನಂತಿರೋದು ಸುಳ್ಳಲ್ಲ!
ಈ ಪ್ರಾಕೃತಿಕ ವಿಕೋಪದಿಂದ ಇಡೀ ಕೊಡಗೇ ನಾಮಾವಶೇಷ ಹೊಂದಿದೆ. ಜೀವ ಹೋಗೋದು ಬೇರೆ. ಆದರೆ ಕೊಡಗಿನ ಬಹುತೇಕ ಜನ ಜೀವನವನ್ನೇ ಕಳೆದುಕೊಂಡಿದ್ದಾರೆ. ತಾವೇ ಮಾಡಿಕೊಂಡ ಜಾಗ, ಅದರಲ್ಲಿ ಕಟ್ಟಿದ ಮನೆ ಮತ್ತು ಪ್ರೀತಿಯಿಂದ ಬೆಳೆಸಿದ ತೋಟ… ಇದೆಲ್ಲವೂ ಕಣ್ಣ ಮುಂದೆಯೇ ಕೊಚ್ಚಿಕೊಂಡು ಹೋದಾಗ, ಭೂಮಿಯೊಳಗೆ ಲೀನವಾದಾಗ ಅದನ್ನು ಭರಿಸಿಕೊಳ್ಳೋದು ಕಷ್ಟ. ಹೀಗೆ ಬೀದಿಗೆ ಬಿದ್ದವರು ಮತ್ತೆ ಎದ್ದು ನಿಲ್ಲೋದೂ ತುಸು ಕಷ್ಟ. ಇದೀಗ ಆಹಾರ ಮುಂತಾದವನ್ನು ಸರಬರಾಜು ಮಾಡೋ ಒಂದು ಹಂತ ಮುಗಿದಿದೆ. ಇನ್ನೂ ಅದನ್ನೇ ಮಾಡುತ್ತಾ ಕೂತರೆ ಅದೂ ಕೂಡಾ ಬೀದಿ ಪಾಲಾಗೋ ಅಪಾಯವಿದೆ. ಈಗ ಎದ್ದು ನಿಂತು ಮತ್ತೆ ಬದುಕು ಕಟ್ಟಿಕೊಳ್ಳಲು ಕೊಡವರಿಗೆ ನೆರವಾಗಬೇಕಿರೋ ಕಾಲ.
ಇನ್ನೇನು ವಾರದೊಪ್ಪತ್ತಿನಲ್ಲಿ ಮಳೆ ಕಡಿಮೆಯಾಗಬಹುದು. ಹಾಗಾದ ಕ್ಷಣದಿಂದಲೇ ಅಲ್ಲಿ ಸೂರು ಕಳಕೊಂಡವರಿಗೆಲ್ಲ ಮನೆ ನಿರ್ಮಿಸಿ ಕೊಡುವಲ್ಲಿಂದ ಕೊಡಗನ್ನು ಮತ್ತೆ ಕಟ್ಟೋ ಕೆಲಸ ಆರಂಭವಾಗಬೇಕಿದೆ. ಇದಕ್ಕೆ ಲಕ್ಷ ಕೋಟಿ ದಾನ ಮಾಡೋದು ಮುಖ್ಯವಲ್ಲ. ಲೆಕ್ಕ ಹಾಕದೆ ಎಲ್ಲೆಡೆ ಕಾಸು ಕಲೆಕ್ಷನ್ ಮಾಡಿ ಅದು ಒಂದು ಕಡೆ ಕ್ರೋಢೀಕರಣವಾಗುವಂತೆ ನೋಡಿಕೊಂಡು, ಇಡೀ ಕೊಡಗಿನಲ್ಲಿ ಆಗಬೇಕಾದ ಸೂರುಗಳನ್ನು ಅಂದಾಜಿಸಿ ಅದನ್ನು ಕಟ್ಟಿಕೊಡುವ ಕಾರ್ಯವಾಗಬೇಕಿದೆ. ಅಲ್ಲಿ ಮನೆ ಮಾರಿನ ಜೊತೆ ಭೂಮಿಯ ಹಕ್ಕು ಪತ್ರ, ದಾಖಲೆಗಳೂ ಕೊಚ್ಚಿ ಹೋಗಿವೆಯಂತೆ. ಆದ್ದರಿಂದ ಈಗ ಅದು ನನ್ನದೆಂಬ ಅಹಮ್ಮಿಗೆ ಆಸ್ಪದವೇ ಇಲ್ಲ. ಎಲ್ಲರಿಗೂ ಕೃಷಿ ಭೂಮಿ ಹಂಚಿ ಅದರಲ್ಲಿ ಮನೆ ಕಟ್ಟಿ ಕೊಡುವ ಯಾಗಕ್ಕೆ ಚಾಲನೆ ನೀಡಬೇಕಿದೆ. ಪ್ರವಾಹದಿಂದ ಕೊಡವರನ್ನು ರಕ್ಷಿಸಲು ಯೋಧರಂತೆಯೇ ಕೆಲಸ ಮಾಡಿದ ಸಹಸ್ರಾರು ಮಂದಿ ಮನೆ ಕಟ್ಟಿಕೊಟ್ಟು ಬದುಕಿಗೆ ನೆರವಾಗಲೂ ಮನಸು ಮಾಡಿದರೆ ಕೊಡಗನ್ನು ಮತ್ತೆ ಕಟ್ಟುವ ಕೆಲಸ ಸಲೀಸಾಗುತ್ತೆ.
ಇದಕ್ಕೆ ಚಿತ್ರರಂಗದ ಕಡೆಯಿಂದಲೂ ಖಂಡಿತಾ ಹಣದ ಕ್ರೋಢೀಕರಣವಾಗೇ ಆಗುತ್ತದೆ. ಬೇರೆ ಬೇರೆ ಕ್ಷೇತ್ರಗಳಿಂದಲೂ ಅದು ಆಗುತ್ತದೆ. ಆದರೆ ಈಗ ಬೇಕಿರೋದು ಕೊಡಗನ್ನು ಮತ್ತೆ ಕಟ್ಟುವ ಪ್ಲ್ಯಾನಿಂಗು. ನಿಜ, ಕೊಚ್ಚಿ ಹೋದ ಒಂದೂರನ್ನು ಮತ್ತೆ ಕಟ್ಟೋದು ಅಸಾಧ್ಯ. ಇದನ್ನು ಮಾಡಿಕೊಳ್ಳಲು ಅಲ್ಲಿನ ಜನ ಅಶಕ್ತರಾಗಿದ್ದಾರೆ. ಅವರಿಗೆ ನೆರವಾಗೋದು ಎಲ್ಲರ ಕರ್ತವ್ಯ. ಬರೀ ಅನುಕಂಪ ತೋರಿಸಿ ಬ್ರೆಡ್ಡು ಬನ್ನು ಕಳಿಸಿಕೊಟ್ಟರೆ ಅವರ ಹೊಟ್ಟೆ ತುಂಬಬಹುದಷ್ಟೇ. ಆದರೆ ಬದುಕು ಕಟ್ಟಿ ಕೊಡೋದು ಈಗಿನ ತುರ್ತು ಅಂದ ರವಿಚಂದ್ರನ್ ಅವರ ಮಾತುಗಳಲ್ಲಿ ಕೊಡಗಿನ ಬಗ್ಗೆ ಭಾವುಕತೆಯಾಚೆಯ ಪ್ರ್ಯಾಕ್ಟಿಕಲ್ ಆದ ಕಾಳಜಿ ಎದ್ದು ಕಾಣುತ್ತಿತ್ತು. ಸರ್ಕಾರ ಈ ಬಗ್ಗೆ ಗಮನ ಹರಿಸಬಹುದೇ?
#
Leave a Reply
You must be logged in to post a comment.