ಹಾವುಗಳಿಗೂ ಸಿನಿಮಾಗೂ ಎಲ್ಲಿಲ್ಲದ ನಂಟು. ಅದರಲ್ಲೂ ಕನ್ನಡ ಸಿನಿಮಾಗಳಲ್ಲಿ ಹಾವುಗಳನ್ನು ಕೇಂದ್ರೀಕರಿಸಿ ಅನೇಕ ಸಿನಿಮಾಗಳು ಬಂದಿವೆ. ಹಾವನ್ನು ದೇವರಾಗಿ, ವಿಷ ಕನ್ಯೆಯಾಗಿ, ಸೇಡು ತೀರಿಸಿಕೊಳ್ಳುವ ಪಾತ್ರಗಳಿಗೆ ತಳುಕು ಹಾಕಿ ಚಿತ್ರಿಸಿದ್ದಾರೆ.
ನಾಗರಹಾವು, ನಾಗದೇವತೆ, ನಾಗಿಣಿ, ನಾಗ ಕನ್ನಿಕೆ, ನಾಗ ಕನ್ಯೆ, ನಾಗ ಮಂಡಲ ಹೀಗೆ ಅನೇಕ ಚಿತ್ರಗಳು ಉದಾಹರಣೆಯಾಗಿವೆ. ಸಾಹಸ ಸಿಂಹ ವಿಷ್ಣುವರ್ಧನ್ ಪ್ರವರ್ಧಮಾನಕ್ಕೆ ಬಂದಿದ್ದೇ ನಾಗರಹಾವು ಚಿತ್ರದ ಪಾತ್ರದಿಂದ. ನಾಗರಹಾವು ಹೆಸರಿನಲ್ಲಿ ಕನ್ನಡದಲ್ಲಿ ಮೂರು ಪ್ರತ್ಯೇಕ ಸಿನಿಮಾ ನಿರ್ಮಾಣವಾಗಿರೋದು ದಾಖಲೆ. ಟಿ.ಎಸ್. ನಾಗಾಭರಣ ನಿರ್ದೇಶನದ, ಗಿರೀಶ್ ಕಾರ್ನಾಡ್ ಬರೆದಿದ್ದ ಕೃತಿಯನ್ನು ಆಧರಿಸಿ ರೂಪಿಸಿ ನಾಗಮಂಡಲ ಕನ್ನಡ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳಲ್ಲೊಂದು. ಅಶೋಕ್ ಮತ್ತು ಲೋಕೇಶ್ ಅಭಿನಯದ ಹುಣ್ಣಿಮೆಯ ರಾತ್ರಿಯಲಿ, ಬೇಬಿ ಶ್ಯಾಮಿಲಿಯ ದಾಕ್ಷಾಯಿಣಿ, ಅನಂತ್ ನಾಗ್, ಶಂಕ್ರಣ್ಣ ಅಭಿನಯದ ನಾಗಿಣಿ, ಶ್ರೀನಾಥ್, ಪ್ರಭಾಕರ್ ಒಟ್ಟಿಗೇ ಕಾಣಿಸಿಕೊಂಡಿದ್ದ ಗರುಡರೇಖೆ, ಅರ್ಜುನ್ ಸರ್ಜಾ, ಮಾಲಾಶ್ತೀ ಕಾಂಬಿನೇಷನ್ನಿನಲ್ಲಿ ಬಂದಿದ್ದ ಶಿವನಾಗ, ಸೌಂದರ್ಯ, ಪ್ರೇಮ ನಟನೆಯ ನಾಗದೇವತೆ, ಅಮ್ಮ ನಾಗಮ್ಮ, ಬೆಳ್ಳಿ ನಾಗ… ಹೀಗೆ ಹತ್ತು ಹಲವು ಸಿನಿಮಾಗಳಲ್ಲಿ ಹಾವುಗಳು ಪ್ರಾಮುಖ್ಯತೆ ಪಡೆದಿದ್ದವು. ಜಾಗತಿಕ ಸಿನಿಮಾಗಳಲ್ಲೂ ಸ್ನೇಕ್ ಸಿನಿಮಾಗಳು ಸಾಕಷ್ಟು ರೂಪುಗೊಂಡಿವೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಇತ್ತೀಚೆಗೆ ಧಾರಾವಾಹಿಗಳಲ್ಲೂ ಹಾವು ಪ್ರಧಾನ ಪಾತ್ರ ನಿರ್ವಹಿಸುತ್ತಿವೆ.
ಹಾವು ಮತ್ತು ಸಿನಿಮಾಗಳ ಬಗ್ಗೆ ಇಷ್ಟೆಲ್ಲಾ ಹೇಳಲೂ ಕಾರಣವಿದೆ. ಅದೇನೆಂದರೆ, ಸದ್ಯ ಕನ್ನಡದಲ್ಲಿ ʻಸರ್ಪಿಣಿʼ ಹೆಸರಿನ ಸಿನಿಮಾವೊಂದು ತಯಾರಾಗುತ್ತಿದೆ. ಅಸ್ಟ್ರಲ್ ಮೂವಿ ನೆಟ್ ವರ್ಕ್ ನಿರ್ಮಾಣದ ಈ ಚಿತ್ರವನ್ನು ವಿನಯ್ ನಿರ್ದೇಶಿಸುತ್ತಿದ್ದಾರೆ. ರಾಘವ್ ಮತ್ತು ನಯನಾ ಈ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವ ʻಸರ್ಪಿಣಿʼ ಮಿಕ್ಕ ಭಾಗದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ.
ಈ ಚಿತ್ರಕ್ಕಾಗಿ ಹಾಲಿವುಡ್ ಮಾದರಿಯಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಪರದೆ ಮೇಲೆ ಹಾವು ಹರಿದು ಬಂತಾ ಅನ್ನುವಷ್ಟರ ಮಟ್ಟಿಗೆ ನೈಜವಾಗಿ ಗ್ರಾಫಿಕ್ಸ್ ವಿನ್ಯಾಸ ಮಾಡಲಾಗುತ್ತಿದೆ. ಇದಕ್ಕಾಗಿ ನೂರಾರು ಜನ ಡಿಜಿಟಲ್ ಕಲಾವಿದರು ಕಂಪ್ಯೂಟರಿನ ಮುಂದೆ ಕೂತು ಶ್ರಮಿಸುತ್ತಿದ್ದಾರೆ. ಇಷ್ಟರಲ್ಲೇ ಸರ್ಪಿಣಿ ಚಿತ್ರದ ಫಸ್ಟ್ ಲುಕ್ ಹೊರಬರಲಿದೆ.
No Comment! Be the first one.